ಪಾಕ್ ಸೇನಾ ಮುಖ್ಯಸ್ಥ ಮನೀರ್ ವಿರುದ್ಧ ಸಿಡಿದಿದ್ದ ಶಿಯಾ ಪಂಗಡ? ನೀವೇ ಮೊದಲು ದೇಶ ಬಿಟ್ಟು ತೊಲಗಿ ಎಂದು ಗುಡುಗಿದ್ದೇಕೆ!
ಇಸ್ಲಾಮಾಬಾದ್: ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಆಸಿಮ್ ಮುನೀರ್ನ(Asim Munir) ಶಿಯಾ ಮುಸ್ಲಿಂ ಸಮುದಾಯದ ವಿರುದ್ಧ ನೀಡಿರುವ ವಿವಾದಾತ್ಮಕ ಹೇಳಿಕೆಯು ಪಾಕ್ನಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಬಗ್ಗೆ ರಾವಲ್ಪಿಂಡಿಯಲ್ಲಿ ನಡೆದ ಇಫ್ತಾರ್ ಕೂಟವೊಂದರಲ್ಲಿ ಶಿಯಾ ಧರ್ಮಗುರುಗಳೊಂದಿಗೆ ಮಾತನಾಡುತ್ತಾ, ನಿಮಗೆ ಇರಾನ್ ಮೇಲೆ ಅಷ್ಟು ಸಹಾನುಭೂತಿ ಇದ್ದರೆ ಅಲ್ಲಿಗೇ ಹೋಗಿ ಎಂದು ಹೇಳಿರುವುದು ಈಗ ಪಾಕಿಸ್ತಾನವನ್ನು ಆಂತರಿಕ ಕಲಹದತ್ತ ನೂಕಿದೆ.
ನಾವೇನು ಹೊರಗಿನವರೇ?: ಮುನೀರ್‌ಗೆ ಶಿಯಾ ನಾಯಕರ ತಪರಾಕಿ
ಮುನೀರ್ ಅವರ ಈ ಹೇಳಿಕೆಯನ್ನು ಅವಮಾನಕಾರಿ ಮತ್ತು ಪ್ರಚೋದನಾಕಾರಿ ಎಂದು ಖಂಡಿಸಿರುವ ಶಿಯಾ ಉಲೆಮಾ ಕೌನ್ಸಿಲ್, ಪಾಕಿಸ್ತಾನದ ನಿರ್ಮಾಣದಲ್ಲಿ ಶಿಯಾ ಸಮುದಾಯದ ಪಾತ್ರವನ್ನೇ ಪ್ರಶ್ನಿಸುವ ಮೂಲಕ ಸೇನಾ ಮುಖ್ಯಸ್ಥರು ದೊಡ್ಡ ತಪ್ಪು ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ. ಶಿಯಾ ಉಲೆಮಾ ಕೌನ್ಸಿಲ್‌ನ ಕೇಂದ್ರ ಉಪಾಧ್ಯಕ್ಷ ಅಲ್ಲಾಮಾ ಸೈಯದ್ ಸಿಬ್ಟೈನ್ ಹೈದರ್ ಸಬ್ಜ್ವಾರಿ ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಶಿಯಾಗಳು ಈ ದೇಶದ ಅವಿಭಾಜ್ಯ ಅಂಗ. ನಮ್ಮನ್ನು ಹೋಗು ಎಂದು ಹೇಳಲು ನೀವ್ಯಾರು ಎಂದು ಪ್ರಶ್ನಿಸಿದ್ದಾರೆ. ಬದಲಾಗಿ, ಅಮೆರಿಕ ಮತ್ತು ಇಸ್ರೇಲ್ ಕೈಗೊಂಬೆಯಂತೆ ವರ್ತಿಸುತ್ತಿರುವ ನೀವೇ ಪಾಕಿಸ್ತಾನ ಬಿಟ್ಟು ತೊಲಗಬೇಕು ಎಂದು ಗುಡುಗಿದ್ದಾರೆ.
ಅಮೆರಿಕ-ಇಸ್ರೇಲ್ ಏಜೆಂಟ್ ಎಂಬ ಆರೋಪ!
ಪಾಕಿಸ್ತಾನದಾದ್ಯಂತ ಈಗ ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿವೆ. ಇರಾನ್‌ನ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯ ನಂತರ ಶಿಯಾ ಸಮುದಾಯದ ಪ್ರತಿಭಟನೆ ತೀವ್ರಗೊಂಡಿದೆ. ಈ ಸಂದರ್ಭದಲ್ಲಿ ಇರಾನ್ ಪರ ಮಾತನಾಡುವವರನ್ನು ದೇಶ ಬಿಟ್ಟು ಹೋಗಿ ಎಂದು ಹೇಳಿರುವ ಮುನೀರ್, ಅಮೆರಿಕ ಮತ್ತು ಇಸ್ರೇಲ್ ಒಲೈಕೆ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಪಾಕ್ ಸೇನಾಪಡೆ ನಡೆಸಿದ ಪ್ರತಿಭಟನಾ ಹತ್ತಿಕ್ಕುವ ಕಾರ್ಯಾಚರಣೆಯಲ್ಲಿ ಈಗಾಗಲೇ ಹಲವು ಶಿಯಾ ಪ್ರತಿಭಟನಾಕಾರರು ಬಲಿಯಾಗಿದ್ದಾರೆ.
ಖಮೇನಿ ಹತ್ಯೆ ಮತ್ತು ಧಾರ್ಮಿಕ ಭಾವನೆಗಳ ಘರ್ಷಣೆ
ಶಿಯಾ ಮುಸ್ಲಿಮರಿಗೆ ಅಯತೊಲ್ಲಾ ಅಲಿ ಖಮೇನಿ ಕೇವಲ ಒಬ್ಬ ರಾಜಕೀಯ ನಾಯಕರಲ್ಲ, ಬದಲಾಗಿ ಅವರು ಮರ್ಜಾ-ಎ-ತಕ್ಲಿದ್ ಆಗಿದ್ದರು. ಅವರ ಹತ್ಯೆಯು ಇಡೀ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಪೆಟ್ಟು ನೀಡಿದೆ. ಪಾಕಿಸ್ತಾನವು ಸುನ್ನಿ ಬಹುಸಂಖ್ಯಾತ ರಾಷ್ಟ್ರವಾಗಿದ್ದರೂ, ಇಲ್ಲಿನ ಶಿಯಾ ಸಮುದಾಯವು ಪ್ರಭಾವಶಾಲಿಯಾಗಿದೆ. ಸೇನಾ ಮುಖ್ಯಸ್ಥರ ಈ ಹೇಳಿಕೆ ದೇಶದಲ್ಲಿ ಕೋಮು ಸಂಘರ್ಷಕ್ಕೆ ನಾಂದಿ ಹಾಡುವ ಅಪಾಯವಿದೆ ಎಂದು ವಿಶ್ಲೇಷಕರು ಎಚ್ಚರಿಸಿದ್ದಾರೆ.
ಜಾಗತಿಕ ರಾಜಕೀಯದ ಚದುರಂಗದಾಟ: ಟ್ರಂಪ್ ಮತ್ತು ಇರಾನ್
ಒಂದೆಡೆ ಪಾಕಿಸ್ತಾನದಲ್ಲಿ ಆಂತರಿಕ ಅಶಾಂತಿ ಉಂಟಾಗಿದ್ದರೆ, ಮತ್ತೊಂದೆಡೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅನಿರೀಕ್ಷಿತವಾಗಿ ಇರಾನ್ ಜೊತೆಗಿನ ಮಾತುಕತೆ ಯಶಸ್ವಿಯಾಗಿದೆ ಎಂದು ಘೋಷಿಸಿದ್ದಾರೆ. ಇರಾನ್‌ನ ಇಂಧನ ಕೇಂದ್ರಗಳ ಮೇಲೆ ದಾಳಿ ಮಾಡದಂತೆ ಅಮೆರಿಕ ಸೇನೆಗೆ ಸೂಚನೆ ನೀಡಿರುವ ಟ್ರಂಪ್, ಹಾರ್ಮುಜ್ ಜಲಸಂಧಿ ವಿಚಾರದಲ್ಲಿ ಸಂಧಾನಕ್ಕೆ ಒತ್ತು ನೀಡುತ್ತಿದ್ದಾರೆ. ಆದರೆ, ಅಮೆರಿಕದ ಮಿತ್ರ ರಾಷ್ಟ್ರ ಎನಿಸಿಕೊಂಡಿರುವ ಪಾಕಿಸ್ತಾನದ ಸೇನಾ ಮುಖ್ಯಸ್ಥ ಮಾತ್ರ ಇರಾನ್ ವಿರೋಧಿ ನಿಲುವು ತಳೆದಿರುವುದು ಅಚ್ಚರಿ ಮೂಡಿಸಿದೆ.
ಈ ಬೆಳವಣಿಗೆಯು ಪಾಕಿಸ್ತಾನದ ರಾಜಕೀಯ ಸ್ಥಿರತೆಯನ್ನು ಬುಡಮೇಲು ಮಾಡುವ ಸಾಧ್ಯತೆಯಿದೆ. ಸೇನಾ ಮುಖ್ಯಸ್ಥರ ವಿರುದ್ಧ ಧರ್ಮಗುರುಗಳು ಬಹಿರಂಗವಾಗಿ ತಿರುಗಿಬಿದ್ದಿರುವುದು ಪಾಕ್ ಸೇನೆಯ ಇತಿಹಾಸದಲ್ಲೇ ವಿರಳವಾಗಿದೆ,(ಏಜೆನ್ಸೀಸ್).