ವಿದೇಶ

ಡಿ.16ಕ್ಕೆ ಢಾಕಾಕ್ಕೆ ಶೇಖ್ ಹಸೀನಾ ಎಂಟ್ರಿ?; ಬಾಂಗ್ಲಾದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ!..Sheikh Hasina

  • ಭಾರತದಲ್ಲಿ ಎರಡು ವರ್ಷಗಳಿಗೂ ಹೆಚ್ಚು ಕಾಲ ಆಶ್ರಯ ಪಡೆದಿರುವ ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ.

  • 1971ರ ವಿಮೋಚನಾ ಯುದ್ಧದ ವಾರ್ಷಿಕೋತ್ಸವದ ದಿನವಾದ ಡಿಸೆಂಬರ್ 16ರಂದು ಬಾಂಗ್ಲಾಗೆ ವಾಪಸ್?.

  • ಹೊಸ ಪಾಸ್‌ಪೋರ್ಟ್ ಮತ್ತು ಇತರ ದಾಖಲೆಗಳಿಗಾಗಿ ಮನವಿ ಸಲ್ಲಿಸಿದ್ದ ಶೇಖ್​ ಹಸೀನಾ, ಬಾಂಗ್ಲಾದೇಶದಲ್ಲಿ ಹಿಂಸಾಚಾರದ ಕಿಚ್ಚು ಹೆಚ್ಚು.

2024ರಲ್ಲಿ ಬಾಂಗ್ಲಾದಲ್ಲಿ ನಡೆದ ದಂಗೆಯ ನಂತರ ಅಧಿಕಾರ ಕಳೆದುಕೊಂಡು ಭಾರತದಲ್ಲಿ ಆಶ್ರಯ ಪಡೆದಿದ್ದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರು ತಮ್ಮ ತವರಿಗೆ ಮರಳಲು ದಿನಾಂಕ ನಿಗದಿಪಡಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.

ಹೌದು, ಅವಾಮಿ ಲೀಗ್ ನಾಯಕಿ ಶೇಖ್ ಹಸೀನಾ ಅವರು, 1971ರ ಪಾಕಿಸ್ತಾನದ ವಿರುದ್ಧದ ಬಾಂಗ್ಲಾದೇಶ ವಿಮೋಚನಾ ಯುದ್ಧ ಅಂತ್ಯಗೊಂಡ ವಾರ್ಷಿಕೋತ್ಸವದದಿನವಾದ ಡಿಸೆಂಬರ್ 16ರಂದು ಬಾಂಗ್ಲಾದೇಶಕ್ಕೆ ವಾಪಸಾಗಲಿದ್ದಾರೆ ಎನ್ನುವ ಮಾಹಿತಿಯನ್ನು ಕೆಲವು ಖಾಸಗಿ ಮಾಧ್ಯಮಗಳು ಹಂಚಿಕೊಂಡಿವೆ.

ತಾವು ಅಂತಿಮವಾಗಿ ತವರಿಗೆ ಮರಳುವುದಾಗಿ ಈ ಹಿಂದೆ ಸುಳಿವು ನೀಡಿದ್ದ ಹಸೀನಾ, ಇದೇ ಮೊದಲ ಬಾರಿಗೆ ನಿರ್ದಿಷ್ಟ ದಿನಾಂಕವನ್ನು ಘೋಷಿಸಿದ್ದಾರೆ. ತನ್ನ ಪಕ್ಷವನ್ನು ನಿಷೇಧಿಸಲಾಗಿರುವ ದಕ್ಷಿಣ ಏಷ್ಯಾದ ದೇಶದಲ್ಲಿ ರಾಜಕೀಯ ಮತ್ತು ಕಾನೂನು ಉದ್ವಿಗ್ನತೆಯನ್ನು ಹೆಚ್ಚಿಸುವ ಸಾಧ್ಯತೆಯಿದೆ.

ವಿಮಾನ ವ್ಯವಸ್ಥೆಗೆ ಆಗ್ರಹ

'2024ರ ಆಗಸ್ಟ್ 5ರಂದು ಶೇಖ್ ಹಸೀನಾ ಅವರನ್ನು ಬಾಂಗ್ಲಾದೇಶದ ವಿಮಾನದಲ್ಲೇ ಭಾರತಕ್ಕೆ ಕರೆತರಲಾಗಿತ್ತು. ಹೀಗಾಗಿ, ಈಗ ಅವರನ್ನು ದೆಹಲಿಯಿಂದ ಢಾಕಾಕ್ಕೆ ವಾಪಸ್ ಕರೆತರಲು ಬಾಂಗ್ಲಾದೇಶ ಸರ್ಕಾರವೇ ವಿಮಾನ ಸಾರಿಗೆ ವ್ಯವಸ್ಥೆ ಮಾಡಬೇಕು', ಎಂದು ಹಸೀನಾ ಅವರ ವಕ್ತಾರ ಸೈಯದ್ ಮೊಜಮ್ಮೆಲ್ ಅಲಿ ಒತ್ತಾಯಿಸಿದ್ದಾರೆ ಎಂದು ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.

'ಸಂವಿಧಾನಕ್ಕೆ ವಿರುದ್ಧವಾಗಿ ಅವರನ್ನು ದೇಶದಿಂದ ಹೊರಹಾಕಿರುವುದರಿಂದ, ಡಿಸೆಂಬರ್ 16ರ ವಿಜಯ ದಿವಸದಂದು ಅವರು ಬಾಂಗ್ಲಾದೇಶಕ್ಕೆ ಮರಳುವುದನ್ನು ಸಾಧ್ಯವಾಗಿಸುವುದು ಈಗ ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಹಸೀನಾ ಅವರ ವಕ್ತಾರ ಸೈಯದ್ ಮೊಜಮ್ಮೆಲ್ ಅಲಿ ಮಾತನಾಡಿದ್ದಾರೆ ಎನ್ನಲಾಗಿದೆ.

ಮರಳಿದರೆ ಬಂಧನ ಖಚಿತ ಎನ್ನುವ ಎಚ್ಚರಿಕೆ

ಶೇಖ್​ ಹಸೀನಾ ಅವರು ಬಾಂಗ್ಲಾಕ್ಕೆ ಮತ್ತೆ ತೆರಳಲು ಹೊಸ ಪಾಸ್​ಪೋರ್ಟ್​​ ಮತ್ತು ಗುರಿತಿನ ಚೀಟಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಬಾಂಗ್ಲಾ ಸರ್ಕಾರ ಇದನ್ನು ಈಗಾಗಲೇ ತಿರಸ್ಕರಿಸಿದೆ. ಈ ಬಗ್ಗೆ ರಾಯಿಟರ್ಸ್ ಜೊತೆ ಮಾತನಾಡಿದ್ದ ಬಾಂಗ್ಲಾದೇಶದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಶಾಮಾ ಒಬೇದ್ ಇಸ್ಲಾಂ ಹಸೀನಾ ಅವರು ಬಾಂಗ್ಲಾ ಪ್ರವೇಶಿಲು ಯತ್ನಿಸಿದ ತಕ್ಷಣ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗುತ್ತದೆ. ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ. ಅಸ್ತಿತ್ವದಲ್ಲಿರುವ ಗಡಿಪಾರು ಒಪ್ಪಂದವನ್ನು ಭಾರತ ಗೌರವಿಸಿ, ಹಸೀನಾ ಅವರನ್ನು ಭಾರತವು ಬಾಂಗ್ಲಾಕ್ಕೆ ಹಸ್ತಾಂತರಿಸಬೇಕು ಎಂದು ಹೇಳಿದ್ದರು. ಅಲ್ಲದೆ, ಅವರನ್ನು ವಾಪಸ್ ಕರೆತರಲು ವಿಮಾನ ಕಳುಹಿಸುವ ಕುರಿತು ಭಾರತದೊಂದಿಗೆ ಯಾವುದೇ ಅಧಿಕೃತ ಚರ್ಚೆ ನಡೆದಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ಏನಿದು ಘಟನೆ?

ಶೇಖ್ ಹಸೀನಾ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ ಅಶಾಂತಿಯ ಸಮಯದಲ್ಲಿ ಸುಮಾರು 1,400 ಜನರು ಸಾವನ್ನಪ್ಪಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ. ವಿದ್ಯಾರ್ಥಿಗಳ ನೇತೃತ್ವದ ದಂಗೆಯನ್ನು ಹತ್ತಿಕ್ಕಲು ಮಾರಣಾಂತಿಕ ಕ್ರಮಕ್ಕೆ ಆದೇಶಿಸಿದ ಆರೋಪದ ಮೇಲೆ, ಬಾಂಗ್ಲಾದೇಶದ ಯುದ್ಧ ಅಪರಾಧಗಳ ನ್ಯಾಯಾಲಯವು ಕಳೆದ ವರ್ಷ ನವೆಂಬರ್‌ನಲ್ಲಿ ಅವರ ಅನುಪಸ್ಥಿತಿಯಲ್ಲೇ ಮರಣದಂಡನೆ ಶಿಕ್ಷೆ ವಿಧಿಸಿದೆ. ಆದರೆ, ಹಸೀನಾ ಅವರು ಈ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ, (ಏಜೆನ್ಸೀಸ್).