ಪಾಕಿಸ್ತಾನಕ್ಕೆ ಅವಮಾನ: ವಿಶ್ವಕಪ್‌ ಸನಿಹದಲ್ಲಿದ್ದರೂ ದುರ್ಬಲ ತಂಡ ಕಳುಹಿಸಿದ ಆಸೀಸ್‌; ಕೆರಳಿದ ಪಾಕ್​ ಅಭಿಮಾನಿಗಳು 
ವಿದೇಶ

ಪಾಕಿಸ್ತಾನಕ್ಕೆ ಅವಮಾನ: ವಿಶ್ವಕಪ್‌ ಸನಿಹದಲ್ಲಿದ್ದರೂ ದುರ್ಬಲ ತಂಡ ಕಳುಹಿಸಿದ ಆಸೀಸ್‌; ಕೆರಳಿದ ಪಾಕ್​ ಅಭಿಮಾನಿಗಳು | Pakistan Cricket

ಇಸ್ಲಾಮಾಬಾದ್: ಫೆಬ್ರವರಿ 7 ರಿಂದ ಆರಂಭವಾಗಲಿರುವ ಟಿ20 ವಿಶ್ವಕಪ್‌ಗೆ ಕೆಲವೇ ದಿನಗಳು ಬಾಕಿ ಇರುವಾಗ, ಪಾಕಿಸ್ತಾನದ(Pakistan Cricket) ನೆಲದಲ್ಲಿ ನಡೆಯುತ್ತಿರುವ ದ್ವಿಪಕ್ಷೀಯ ಸರಣಿಯು ಈಗ ದೊಡ್ಡ ವಿವಾದಕ್ಕೆ ನಾಂದಿ ಹಾಡಿದೆ. ಪಾಕ್​ಗೆ ಪ್ರವಾಸ ಕೈಗೊಂಡಿರುವ ಆಸ್ಟ್ರೇಲಿಯಾವು ತನ್ನ ಪ್ರಮುಖ ಆಟಗಾರರನ್ನು ಕೈಬಿಟ್ಟು, ಬಿ ದರ್ಜೆಯ ತಂಡವನ್ನು ಕಣಕ್ಕಿಳಿಸಿರುವುದು ಪಾಕಿಸ್ತಾನದ ಮಾಜಿ ಕ್ರಿಕೆಟಿಗರು ಮತ್ತು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ಸ್ಟಾರ್ ಆಟಗಾರರ ಗೈರು: ಆಸೀಸ್ ಗೇಲಿ ಮಾಡುತ್ತಿದೆಯೇ..?

ಆಸ್ಟ್ರೇಲಿಯಾವು ತನ್ನ ಪ್ರಮುಖ ಆಟಗಾರರಾದ ಪ್ಯಾಟ್ ಕಮ್ಮಿನ್ಸ್, ಜೋಶ್ ಹ್ಯಾಜಲ್‌ವುಡ್, ಗ್ಲೆನ್ ಮ್ಯಾಕ್ಸ್‌ವೆಲ್, ಟಿಮ್ ಡೇವಿಡ್ ಮತ್ತು ನಾಥನ್ ಎಲ್ಲಿಸ್ ಅವರಿಗೆ ವಿಶ್ರಾಂತಿ ನೀಡಿದೆ. ಗಾಯದ ಸಮಸ್ಯೆಯ ನೆಪವೊಡ್ಡಿ ಈ ಆಟಗಾರರನ್ನು ವಿಶ್ವಕಪ್‌ಗಾಗಿ ಕಾಯ್ದಿರಿಸಲಾಗಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಸಮರ್ಥಿಸಿಕೊಂಡಿದೆ.
ಆದರೆ, ಗುರುವಾರ ನಡೆದ ಮೊದಲ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾವು ಮೂವರು ಹೊಸಬರಿಗೆ ಅವಕಾಶ ನೀಡಿದ್ದು, ಮಿಚೆಲ್ ಮಾರ್ಷ್ ಮತ್ತು ಮಾರ್ಕಸ್ ಸ್ಟೊಯಿನಿಸ್ ಅವರಂತಹ ಅನುಭವಿಗಳನ್ನೂ ಆಡುವ ಬಳಗದಿಂದ ಹೊರಗಿಟ್ಟಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ಇದು ಪಾಕಿಸ್ತಾನಿ ಅಭಿಮಾನಿಗಳಿಗೆ ಮಾಡಿದ ಅಪಮಾನ

ಈ ಕುರಿತು ತೀವ್ರವಾಗಿ ಪ್ರತಿಕ್ರಿಯಿಸಿರುವ ಕ್ರಿಕೆಟ್ ವಿಶ್ಲೇಷಕ ಓಮೈರ್ ಅಲವಿ, ಪ್ರಮುಖ ಆಟಗಾರರಿಲ್ಲದೆ ಇಲ್ಲಿಗೆ ಬರುವುದು ಒಂದು ಎತ್ತರವಾದರೆ, ಪ್ರವಾಸದಲ್ಲಿರುವ ಲಭ್ಯವಿರುವ ಶ್ರೇಷ್ಠ ಆಟಗಾರರನ್ನೂ ಆಡಿಸದಿರುವುದು ಪಾಕಿಸ್ತಾನಿ ಅಭಿಮಾನಿಗಳಿಗೆ ಮಾಡುತ್ತಿರುವ ಅಪಮಾನ ಎಂದು ಕಿಡಿಕಾರಿದ್ದಾರೆ.
ಮಾಜಿ ನಾಯಕ ಮೊಯಿನ್ ಖಾನ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಂಡಗಳು ಪಾಕ್​ಗೆ ಕೇವಲ ಔಪಚಾರಿಕತೆಗಾಗಿ ಬರುತ್ತಿವೆ. ಅವರು ಸರಣಿಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ, ಇದು ಪಾಕಿಸ್ತಾನ ಕ್ರಿಕೆಟ್‌ನ ವರ್ಚಸ್ಸಿಗೆ ಧಕ್ಕೆ ತರುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಪಿಸಿಬಿ ಮೌನಕ್ಕೆ ಆಶ್ಚರ್ಯ

ವಿಶ್ವಕಪ್‌ನಂತಹ ದೊಡ್ಡ ಟೂರ್ನಿಗೂ ಮುನ್ನ ಸಮಾನ ಹವಾಮಾನವಿರುವ ಪಾಕಿಸ್ತಾನದಲ್ಲಿ ಶ್ರೇಷ್ಠ ತಂಡದ ವಿರುದ್ಧ ಆಡುವುದು ಎರಡೂ ತಂಡಗಳಿಗೆ ಲಾಭದಾಯಕವಾಗಿತ್ತು. ಆದರೆ ಆಸ್ಟ್ರೇಲಿಯಾದ ಈ ನಿರ್ಧಾರವು ವರ್ಕ್‌ಲೋಡ್ ಮ್ಯಾನೇಜ್‌ಮೆಂಟ್ ಹೆಸರಿನಲ್ಲಿ ಪಾಕಿಸ್ತಾನವನ್ನು ಕಡೆಗಣಿಸಿದಂತಿದೆ ಎಂದು ಹಾರೂನ್ ರಶೀದ್ ಅಭಿಪ್ರಾಯಪಟ್ಟಿದ್ದಾರೆ. ಇಷ್ಟೆಲ್ಲಾ ವಿವಾದಗಳ ನಡುವೆಯೂ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಮಾತ್ರ ಒಪ್ಪಂದದಂತೆ ಪಂದ್ಯಗಳು ನಡೆಯುತ್ತಿರುವುದೇ ನಮಗೆ ಮುಖ್ಯ ಎಂದು ಜಾರಿಕೊಂಡಿರುವುದು ಅಭಿಮಾನಿಗಳ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿದೆ,(ಏಜೆನ್ಸೀಸ್).