ಡೊನಾಲ್ಡ್ ಟ್ರಂಪ್ ಮತ್ತು ಮೊಹ್ಸೆನ್ ರೆಝಾಯಿ
ಟೆಹ್ರಾನ್: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷವನ್ನು ಕೊನೆಗಾಣಿಸುವ ಮಾತುಕತೆಗೆ ಇರಾನ್(Iran), ಕತಾರ್ ಮೂಲಕ ಅಮೆರಿಕಾಗೆ ಏಳು ಷರತ್ತುಗಳನ್ನು ವಿಧಿಸಿದ್ದು, ಅದ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಷರತ್ತುಗಳನ್ನು ತಿರಸ್ಕರಿಸಿದ್ರೆ ನಿರ್ಣಯಕ ಯುದ್ಧಕ್ಕೂ ಸೈ ಎಂದು ಎಚ್ಚರಿಕೆ ನೀಡಿದೆ.
ಅಲ್ ಜಜೀರಾ ಸಂದರ್ಶನದಲ್ಲಿ ಮಾತನಾಡಿರುವ ಇರಾನ್ನ ಸುಪ್ರೀಂ ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯದರ್ಶಿ ಮೊಹ್ಸೆನ್ ರೆಝಾಯಿ, ಯುದ್ಧವನ್ನು ಕೊನೆಗೊಳಿಸುವ ಉದ್ದೇಶದಿಂದ ವಾಷಿಂಗ್ಟನ್ಗೆ ಕತಾರ್ ಮೂಲಕ ನಮ್ಮ ಷರತ್ತುಗಳನ್ನು ತಿಳಿಸಿದ್ದೇವೆ. ಮತ್ತು ಅವರ ಸಂಪರ್ಕದಲ್ಲಿದ್ದೇವೆ. ಅಧ್ಯಕ್ಷ ಟ್ರಂಪ್ ಅವರ ಪ್ರತಿಕ್ರಿಯೆಗಾಗಿ ನಾವು ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ.
ನಮ್ಮ ಷರತ್ತುಗಳು ಎಲ್ಲಾ ರಂಗಗಳಲ್ಲಿನ ಯುದ್ಧವನ್ನು ಕೊನೆಗೊಳಿಸುವುದು, ನಮ್ಮ ಸ್ಥಗಿತಗೊಳಿಸಿದ ನಿಧಿಗಳನ್ನು ಬಿಡುಗಡೆ ಮಾಡುವುದು ಹಾಗೂ ನೌಕಾ ದಿಗ್ಬಂಧನವನ್ನು ಕೊನೆಗೊಳಿಸುವುದು ಸೇರಿದಂತೆ ಒಟ್ಟು ಏಳು ಷರತ್ತುಗಳನ್ನು ತಿಳಿಸಲಾಗಿದೆ ಎಂದಿದ್ದಾರೆ.
ನಿರ್ಣಾಯಕ ಯುದ್ಧಕ್ಕೆ ಸಿದ್ಧ
ಮುಂದುವರೆದು ಮಾತನಾಡಿರುವ ರೆಜಾಯಿ, ಈ ಷರತ್ತುಗಳನ್ನು ಒಪ್ಪಿಕೊಳ್ಳುವುದು ವಾಷಿಂಗ್ಟನ್ನ ಹಿತಾಸಕ್ತಿಯಲ್ಲಿದೆ. ಟ್ರಂಪ್ ಅವರ ಬೆದರಿಕೆಗಳಿಂದ ಯಾವುದೇ ಫಲಿತಾಂಶ ಸಿಗುವುದಿಲ್ಲ. ನಾವು ನಿರ್ಣಾಯಕ ಯುದ್ಧವೊಂದಕ್ಕೆ ಸಿದ್ಧರಿದ್ದೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇರಾನ್ನ ಮಿಲಿಟರಿ ನೆಲೆಗಳ ಮೇಲೆ ಅಮೆರಿಕ ದಾಳಿ ನಡೆಸುವ ಸಾಧ್ಯತೆಯಿದೆ ಎಂದಿರುವ ಅವರು, ಅಂತಹ ಸನ್ನಿವೇಶವನ್ನು ಎದುರಿಸಲು ಟೆಹ್ರಾನ್ ಸಿದ್ಧವಾಗಿದೆ ಮತ್ತು ಈ ಹಿಂದೆ ನಡೆದ ಎರಡು ಸುತ್ತಿನ ಸಂಘರ್ಷಗಳ ನಂತರ ತನ್ನ ಮಿಲಿಟರಿ ಯೋಜನೆಗಳನ್ನು ಪರಿಷ್ಕರಿಸಿದೆ ಎಂದು ತಿಳಿಸಿದ್ದಾರೆ.
ಇರಾನ್ನ ಪ್ರಸ್ತುತ ಮಿಲಿಟರಿ ಯೋಜನೆಯು ಕೊಲ್ಲಿಯಿಂದ ಓಮನ್ ಕೊಲ್ಲಿ ಮೂಲಕ ಮತ್ತು ಅರೇಬಿಯನ್ ಸಮುದ್ರಕ್ಕೆ ನಿಯೋಜಿಸಲಾದ ಯುಎಸ್ ನೌಕಾ ಸ್ವತ್ತುಗಳ ಮೇಲೆ ಕೇಂದ್ರೀಕೃತವಾಗಿದೆ. ಇರಾನ್ ಇತ್ತೀಚೆಗೆ ಅಮೆರಿಕದ ಹಡಗು ಅಥವಾ ವಿಮಾನವಾಹಕ ನೌಕೆಯ ಬಳಿ ಬಹು-ವಾರ್ಹೆಡ್ ಹಡಗು ವಿರೋಧಿ ಕ್ಷಿಪಣಿಯನ್ನು ಪರೀಕ್ಷಿಸಿದೆ ಎಂದು ಹೇಳಿದ್ದಾರೆ.
ಭವಿಷ್ಯದ ಯಾವುದೇ ಇರಾನಿನ ಪ್ರತಿಕ್ರಿಯೆಯು ಇನ್ನೂ ವ್ಯಾಪಕವಾಗಿರಬಹುದು. ಯುಎಸ್ ಮಿಲಿಟರಿ ನೆಲೆಗಳನ್ನು ಹಾಗೂ ಅಮೆರಿಕದ ವಾಣಿಜ್ಯ ಹಿತಾಸಕ್ತಿಗಳು ಮತ್ತು ಸ್ಥಳೀಯವಾಗಿ ಕಾರ್ಯನಿರ್ವಹಿಸುತ್ತಿರುವ ಕಂಪನಿಗಳನ್ನು ಗುರಿಯಾಗಿಸಬಹುದು. ಪ್ರಾಯೋಗಿಕವಾಗಿ ಯುದ್ಧ ಇನ್ನೂ ನಡೆಯುತ್ತಿದೆ. ಆದರೆ ನಾವು ಸಾಧ್ಯವಾದಷ್ಟು ಬೇಗ ಸಂಘರ್ಷವನ್ನು ಕೊನೆಗೊಳಿಸುವ ಗುರಿಯನ್ನು ಹೊಂದಿರುವ ತಂತ್ರವನ್ನು ಅನುಸರಿಸುತ್ತಿದ್ದೇವೆ ಎಂದಿದ್ದಾರೆ.
ಇನ್ನೂ ವರದಿಯ ಪ್ರಕಾರ, ಕಳೆದ ತಿಂಗಳು ಒಪ್ಪಂದದ ಅವಧಿ ಮುಗಿದ ನಂತರ ಇರಾನ್ ಮತ್ತು ಅಮೆರಿಕ ನಡುವಿನ ಮಾತುಕತೆಗಳನ್ನು ಪುನರಾರಂಭಿಸಲು ಕತಾರ್ ಮತ್ತು ಪಾಕಿಸ್ತಾನ ಪ್ರಯತ್ನಿಸುತ್ತಿವೆ. ಫೆಬ್ರವರಿ ಅಂತ್ಯದಲ್ಲಿ ಅಮೆರಿಕ ಮತ್ತು ಇಸ್ರೇಲ್ ಇರಾನ್ ವಿರುದ್ಧ ದಾಳಿ ನಡೆಸಿದ ನಂತರ ಆರಂಭವಾದ ಈ ಸಂಘರ್ಷವನ್ನು ಕೊನೆಗೊಳಿಸಲು ಇತರೆ ದೇಶಗಳು ಕೂಡ ಒತ್ತಾಯಿಸುತ್ತಿವೆ (ಏಜೆನ್ಸೀಸ್).