Osman Hadi death 
ವಿದೇಶ

ಬಾಂಗ್ಲಾದಲ್ಲಿ ಬುಗಿಲೆದ್ದ ಹಿಂಸಾಚಾರ; ಭಾರತೀಯ ರಾಜತಾಂತ್ರಿಕ ಕಚೇರಿಗಳಲ್ಲಿ ಭದ್ರತೆ ಹೆಚ್ಚಳ | Osman Hadi death

Osman Hadi death: ಬಾಂಗ್ಲಾದೇಶಿ ಕಾರ್ಯಕರ್ತ ಷರೀಫ್ ಉಸ್ಮಾನ್ ಹಾದಿ ನಿಧನಕ್ಕೆ ಸಂಬಂಧಿಸಿದಂತೆ ಅಶಾಂತಿ ಬುಗಿಲೆದ್ದ ಬಳಿಕ ಸಿಲ್ಹೆಟ್ ನಗರದಲ್ಲಿನ ಭಾರತೀಯ ರಾಜತಾಂತ್ರಿಕ ಕಚೇರಿಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.
ಭಾರತೀಯ ಸಹಾಯಕ ಹೈಕಮಿಷನ್ ಕಚೇರಿ, ಸಹಾಯಕ ಹೈಕಮಿಷನರ್ ಅವರ ಅಧಿಕೃತ ನಿವಾಸ ಮತ್ತು ವೀಸಾ ಅರ್ಜಿ ಕೇಂದ್ರದಲ್ಲಿ ಯಾವುದೇ ತೊಂದರೆ ಉಂಟಾಗದಂತೆ ಹೆಚ್ಚುವರಿ ಪೊಲೀಸ್ ಮತ್ತು ಭದ್ರತಾ ಪಡೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಮುನ್ನೆಚ್ಚರಿಕೆಯಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯಾವುದೇ ಮೂರನೇ ವ್ಯಕ್ತಿ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಖಚಿತಪಡಿಸಿಕೊಳ್ಳುವ ಗುರಿಯನ್ನು ಈ ಕ್ರಮಗಳು ಹೊಂದಿವೆ ಎಂದು ಸಿಲ್ಹೆಟ್ ಮೆಟ್ರೋಪಾಲಿಟನ್ ಪೊಲೀಸರ ಹೆಚ್ಚುವರಿ ಉಪ ಆಯುಕ್ತ (ಮಾಧ್ಯಮ) ಸೈಫುಲ್ ಇಸ್ಲಾಂ ತಿಳಿಸಿದ್ದು, ಭದ್ರತಾ ಸಿಬ್ಬಂದಿ ರಾತ್ರಿಯಿಡೀ ಕರ್ತವ್ಯದಲ್ಲಿದ್ದರು ಎನ್ನಲಾಗಿದೆ. ಇಂಕಿಲಾಬ್ ಮಂಚದ ವಕ್ತಾರರಾಗಿದ್ದ ಹಾದಿ ಮರಣದ ಬಳಿಕ ಸಹಾಯಕ ಹೈಕಮಿಷನ್ ಕಚೇರಿಯನ್ನು ಸುತ್ತುವರಿಯಲು ರಾಜಕೀಯ ಗುಂಪು ಗಾನೋ ಓಧಿಕಾರ್ ಪರಿಷತ್ ಕರೆ ನೀಡಿದ ನಂತರ ಕಟ್ಟೆಚ್ಚರವನ್ನು ಹೆಚ್ಚಿಸಲಾಗಿದೆ. ಸಿಲ್ಹೆಟ್ ಸೆಂಟ್ರಲ್ ಶಹೀದ್ ಮಿನಾರ್ ಬಳಿ ಇಂಕಿಲಾಬ್ ಮಂಚ ಕಾರ್ಯಕರ್ತರು ಧರಣಿ ನಡೆಸಿದರು.
ಕಳೆದ ವರ್ಷ ಮಾಜಿ ಪ್ರಧಾನಿ ಶೇಖ್ ಹಸೀನಾರ ಅವಾಮಿ ಲೀಗ್ ಸರ್ಕಾರವನ್ನು ಪದಚ್ಯುತಗೊಳಿಸಲು ಕಾರಣವಾದ ವಿದ್ಯಾರ್ಥಿಗಳ ನೇತೃತ್ವದ ಪ್ರತಿಭಟನೆಯಲ್ಲಿ ಹಾದಿ ಪ್ರಮುಖ ಪಾತ್ರ ವಹಿಸಿದ್ದರು. ಫೆಬ್ರವರಿ 12 ರಂದು ನಿಗದಿಯಾಗಿದ್ದ ಸಾರ್ವತ್ರಿಕ ಚುನಾವಣೆಯಲ್ಲೂ ಸ್ಪರ್ಧಿಸಲು ಅಣಿಯಾಗಿದ್ದರು ಎನ್ನಲಾಗಿದೆ.

ಹಾದಿ ಹತ್ಯೆ ಮತ್ತು ಪ್ರತಿಭಟನೆಗಳು

ಡಿಸೆಂಬರ್ 12 ರಂದು ಢಾಕಾದ ಬಿಜೋಯ್‌ನಗರ ಪ್ರದೇಶದಲ್ಲಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಅಪರಿಚಿತ ಬಂದೂಕುಧಾರಿಗಳು 32 ವರ್ಷದ ಹಾದಿ ತಲೆಗೆ ಗುಂಡು ಹಾರಿಸಿದ್ದರು. ನಂತರ ಅವರನ್ನು ಸಿಂಗಾಪುರ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಕೊನೆಯುಸಿರೆಳೆದಿದ್ದಾರೆ.
ಹಾದಿ ನಿಧನದ ಬಳಿಕ ಬಾಂಗ್ಲಾದೇಶದ ಹಲವಾರು ಭಾಗಗಳಲ್ಲಿ ಹಿಂಸಾಚಾರ ಮತ್ತು ವಿಧ್ವಂಸಕ ಕೃತ್ಯಗಳು ನಡೆದಿದ್ದು, ಗುರುವಾರ ಚಟ್ಟೋಗ್ರಾಮ್‌ನಲ್ಲಿ ಭಾರತೀಯ ಸಹಾಯಕ ಹೈಕಮಿಷನರ್ ನಿವಾಸದ ಮೇಲೆ ಕಲ್ಲು ಎಸೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಾದಿಯನ್ನು ಶನಿವಾರ ಢಾಕಾ ವಿಶ್ವವಿದ್ಯಾಲಯದ ಮಸೀದಿಯ ಬಳಿ, ರಾಷ್ಟ್ರೀಯ ಕವಿ ಕಾಜಿ ನಜ್ರುಲ್ ಇಸ್ಲಾಂ ಸಮಾಧಿಯ ಪಕ್ಕದಲ್ಲಿ ಅಂತ್ಯಕ್ರಿಯೆ ನಡೆಸಲಾಗಿದೆ(ಏಜೆನ್ಸೀಸ್​).