ಅಟ್ಲಾಂಟಾ/ಜಾರ್ಜಿಯಾ ನಿಯೋಗವು ಕರ್ನಾಟಕಕ್ಕೆ ಭೇಟಿ ನೀಡಿ, ರಾಜ್ಯದ ಜೈವಿಕ ಇಂಧನ ಹಾಗೂ ಪರಿಸರ ಸಂರಕ್ಷಣೆ ಪೂರಕ ವ್ಯವಸ್ಥೆಯನ್ನು ವೀಕ್ಷಿಸುವಂತೆ ಆಹ್ವಾನಿಸಿದರು.
ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಸ್.ಈ.ಸುಧೀಂದ್ರ ನೇತೃತ್ವದ ಉನ್ನತ ಮಟ್ಟದ ನಿಯೋಗವು ಕರ್ನಾಟಕ ಹಾಗೂ ಜಾರ್ಜಿಯಾ ರಾಜ್ಯಗಳ ನಡುವೆ ಜೈವಿಕ ಇಂಧನ, ಸ್ವಚ್ಛ ಇಂಧನ ಹಾಗೂ ಸುಸ್ಥಿರ ಇಂಧನ ಪರಿಹಾರಗಳ ಕುರಿತು ಅಟ್ಲಾಂಟಾದಲ್ಲಿರುವ ಅಮೆರಿಕದ ಕಾನ್ಸುಲೇಟ್ ಜನರಲ್ ಅವರೊಂದಿಗೆ ಸುಧೀರ್ಘವಾಗಿ ಚರ್ಚೆ ನಡೆಸಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ಅನುಷ್ಠಾನಗೊಳ್ಳುತ್ತಿರುವ ವಿವಿಧ ಕಚ್ಚಾ ವಸ್ತುಗಳ ಆಧಾರಿತ ವಿಕೇಂದ್ರೀಕೃತ ಜೈವಿಕ ಇಂಧನ ಮಾದರಿಯನ್ನು ಕಾನ್ಸುಲೇಟ್ ಜನರಲ್ ಅವರಿಗೆ ಪರಿಚಯ ಮಾಡಿಕೊಟ್ಟರು.
ಈ ಮಾದರಿಯು ಸಮುದಾಯದ ಸಹಭಾಗಿತ್ವ, ಜೈವಿಕ ಸಂಪನ್ಮೂಲಗಳ ಸುಸ್ಥಿರ ಬಳಕೆ ಹಾಗೂ ಪರಿಣಾಮಕಾರಿ ಜೈವಿಕ ಇಂಧನ ಉತ್ಪಾದನೆಗೆ ಅಗತ್ಯವಿರುವ ಪೂರೈಕೆ ಸರಪಳಿ ಅಭಿವೃದ್ಧಿಗೆ ಆದ್ಯತೆ ನೀಡಿದ್ದು, ಈ ರೀತಿಯ ಮಾದರಿಗಳು ಅಂತರರಾಷ್ಟ್ರೀಯ ತಾಂತ್ರಿಕ ಸಹಕಾರದ ಮೂಲಕ ಪರಸ್ಪರ ಒಡಂಬಡಿಕೆಗಾಗಿ ನಾಂದಿಯಾಗಲಿವೆ ಎಂದು ತಿಳಿಸಿಕೊಟ್ಟರು.
ಅಟ್ಲಾಂಟಾ ಪ್ರದೇಶದಲ್ಲಿ ನಡೆಯುತ್ತಿರುವ ವಿವಿಧ ಸ್ವಚ್ಛ ಇಂಧನ ಕಾರ್ಯಯೋಜನೆಗಳ ಕುರಿತು ಈ ಸಭೆಯಲ್ಲಿ ಚರ್ಚಿಸಲಾಯಿತು. ಕರ್ನಾಟಕ ಜಾರ್ಜಿಯಾ ನಡುವಿನ ಸ್ವಚ್ಛ ಇಂಧನ ಮತ್ತು ಜೈವಿಕ ಇಂಧನ ಕ್ಷೇತ್ರದ ಸಹಕಾರವನ್ನು ಬಲಪಡಿಸುವ ಪ್ರಸ್ತಾವನೆಯನ್ನು ಕಾನ್ಸುಲೇಟ್ ಜನರಲ್ ಸ್ವಾಗತಿಸಿ ಮುಂದಿನ ದಿನಗಳಲ್ಲಿ ತಾಂತ್ರಿಕ ವಿನಿಮಯ, ಅರಣ್ಯ ತ್ಯಾಜ್ಯದಿಂದ ಇಂಧನ ಉತ್ಪಾದನೆ ಹಾಗೂ ಕಾರ್ಬನ್ ಕ್ರೆಡಿಟ್ ತಂತ್ರಜ್ಞಾನಗ ಕ್ಷೇತ್ರದಲ್ಲಿ ಜಂಟಿಯಾಗಿ ಮುಂದುವರಿಯುವ ಇಚ್ಚೆಯನ್ನು ವ್ಯಕ್ತಪಡಿಸಿದರು.
ಕೋಸ್ಟರಿಕಾದ ನಿಕೋಯಾ ಪೆನಿನ್ಸುಲಾ ಪ್ರದೇಶಕ್ಕೆ ಸಂಬಂಧಿಸಿದ ಬ್ಲೂ ಝೋನ್ ಪರಿಕಲ್ಪನೆಯ ಕುರಿತು ಡಾ.ಸುಮಿತ್ ಸೇಠ್ ಅವರು ಅಮೆರಿಕದಲ್ಲಿ ಕೃಷಿ ಉತ್ಪನ್ನಗಳು ಹಾಗೂ ಇತರ ಉತ್ಪನ್ನಗಳಿಗೆ ಅನ್ವಯಿಸುವ ಪರೀಕ್ಷಾ ಮತ್ತು ಗುಣಮಟ್ಟದ ಮಾನದಂಡಗಳ ಕುರಿತು ವಿವರಿಸಿದರು. ಭಾರತದಲ್ಲಿ ಹೊಸ ಹಾಗೂ ನವೀಕರಿಸಬಹುದಾದ ಇಂಧನ ಕ್ಷೇತ್ರದ ಅಭಿವೃದ್ಧಿಗೆ ರಾಜೀವ್ ಗಾಂಧಿ ಅಡಿಪಾಯವನ್ನು ಹಾಕಿದ್ದು ಅವರ ಜನ್ಮದಿನವಾದ ಆಗಸ್ಟ್ 20ರಂದು ಅಕ್ಷಯ ಊರ್ಜಾ ದಿವಸ್ ಆಚರಿಸಲಾಗುತ್ತಿರುವುದು ಎಂದು ಹೇಳಿದ ಅವರು’ಭಾರತ ಅಮೆರಿಕ ಸಂಬಂಧಗಳನ್ನು ಬಲಪಡಿಸುವಲ್ಲಿ ಡಾ. ಮನಮೋಹನ್ ಸಿಂಗ್ ಅವರು ನೀಡಿದ ಮಹತ್ವದ ಕೊಡುಗೆಯನ್ನೂ ಸಹ ಸ್ಮರಿಸಿದರು.
ಅಟ್ಲಾಂಟಾ/ಜಾರ್ಜಿಯಾ ನಿಯೋಗವು ಕರ್ನಾಟಕಕ್ಕೆ ಭೇಟಿ ನೀಡಿ, ರಾಜ್ಯದ ಜೈವಿಕ ಇಂಧನ ಹಾಗೂ ಪರಿಸರ ಸಂರಕ್ಷಣೆ ಪೂರಕ ವ್ಯವಸ್ಥೆಯನ್ನು ವೀಕ್ಷಿಸುವಂತೆ ಆಹ್ವಾನಿಸಿದರು. ಈ ಸಭೆಯಲ್ಲಿ ಅಧ್ಯಕ್ಷರ ಸಲಹೆಗಾರರಾದ ಡಾ. ಶಿಜು ಸೆಬಾಸ್ಟಿಯನ್, ಅಲ್ಕೇಶ್ ಕನ್ಯಾ ಲಾಲ್ ಪಟೇಲ್; ವಿನೋದ್ ಈಶ್ವರ ಭಾಯಿ ಪಟೇಲ್; ಭಿಖಾ ಭಾಯಿ ಪಟೇಲ್; ಸರ್ಬ್ಜಿತ್ ಸಿಂಗ್; ಪ್ರಶಾಂತ್ ಹಾಗೂ ಅಧ್ಯಕ್ಷರ ಖಾಸಗಿ ಕಾರ್ಯದರ್ಶಿ ಬಿ.ಕೆ. ಲೋಕೇಶ್ ಗೌಡ ಉಪಸ್ಥಿತರಿದ್ದರು.