ರಕ್ತಸಿಕ್ತವಾಯಿತು ಶಾಲಾ ಅಂಗಳ: ರಕ್ಕಸನ ಗುಂಡಿಗೆ ದಾಳಿಗೆ 22 ಕಂದಮ್ಮಗಳು ಸೇರಿ 34 ಅಮಾಯಕರು ಬಲಿ
ಬ್ಯಾಂಕಾಕ್: ಇಡೀ ಜಗತ್ತೇ ತಲೆತಗ್ಗಿಸುವಂತಹ ಭೀಕರ ಗುಂಡಿನ ದಾಳಿಯೊಂದು ದಕ್ಷಿಣ ಥೈಲ್ಯಾಂಡ್‌ನ(Thailand Tragedy) ಸೋಂಗ್ಖ್ಲಾ ಪ್ರಾಂತ್ಯದಲ್ಲಿ ನಡೆದಿದೆ. ಶಾಲೆಯೊಂದರ ಮೇಲೆ ನಡೆದ ಈ ಕ್ರೂರ ದಾಳಿಯಲ್ಲಿ 22 ಪುಟ್ಟ ಮಕ್ಕಳು ಸೇರಿದಂತೆ ಒಟ್ಟು 34 ಅಮಾಯಕರು ಬಲಿಯಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಥೈಲ್ಯಾಂಡ್ ಇತಿಹಾಸದಲ್ಲೇ ಇದು ಅತ್ಯಂತ ಭೀಕರ ಮತ್ತು ರಕ್ತಸಿಕ್ತ ದಿನ ಎಂದು ಬಣ್ಣಿಸಲಾಗಿದೆ.
ನಡೆದಿದ್ದೇನು..? ರಣರಂಗವಾದ ಶಾಲಾ ಆವರಣ
ಪ್ರಾಂತೀಯ ಆಡಳಿತದ ಮಾಹಿತಿ ಪ್ರಕಾರ, ಮುಂಜಾನೆ ಶಾಲಾ ಚಟುವಟಿಕೆಗಳು ಸುಗಮವಾಗಿ ನಡೆಯುತ್ತಿದ್ದ ಸಮಯದಲ್ಲಿ ಶಸ್ತ್ರಸಜ್ಜಿತ ಬಂದೂಕುಧಾರಿಯೊಬ್ಬ ಏಕಾಏಕಿ ಶಾಲೆಯೊಳಗೆ ನುಗ್ಗಿದ್ದಾನೆ. ಒಳ ನುಗ್ಗುತ್ತಿದ್ದಂತೆಯೇ ಅಡ್ಡಬಂದವರ ಮೇಲೆ ಮನಬಂದಂತೆ ಗುಂಡಿನ ಮಳೆಗರೆದಿದ್ದಾನೆ. ರಕ್ತಪಿಪಾಸು ರಾಕ್ಷಸನಂತೆ ವರ್ತಿಸಿದ ಈತ, ನಂತರ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದಾನೆ.
ಗುಂಡಿನ ಸದ್ದಿನಿಂದ ಬೆಚ್ಚಿಬಿದ್ದ ನೂರಾರು ವಿದ್ಯಾರ್ಥಿಗಳು ಪ್ರಾಣಭಯದಿಂದ ಕಿರುಚುತ್ತಾ ಶಾಲೆಯಿಂದ ಹೊರಬಂದು ರಸ್ತೆಗಳತ್ತ ಓಡಿದ್ದಾರೆ. ಆ ಕ್ಷಣದಲ್ಲಿ ಶಾಲೆಯ ಆವರಣವೆಲ್ಲಾ ಮಕ್ಕಳ ಆರ್ತನಾದ ಮತ್ತು ರಕ್ತದ ಮಡುವಿನಿಂದ ತುಂಬಿ ಹೋಗಿತ್ತು.
ಸೇನೆಯನ್ನು ನೆನಪಿಸಿದ ಪೊಲೀಸ್ ಕಾರ್ಯಾಚರಣೆ
ಘಟನೆಯ ಮಾಹಿತಿ ಸಿಗುತ್ತಿದ್ದಂತೆಯೇ ಹ್ಯಾಟ್ ಯಾಯ್ ಜಿಲ್ಲೆಯ ಶಸ್ತ್ರಸಜ್ಜಿತ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಇಡೀ ಶಾಲೆಯನ್ನು ಸುತ್ತುವರಿದ ಭದ್ರತಾ ಪಡೆಗಳು ತೀವ್ರ ಕಟ್ಟೆಚ್ಚರ ವಹಿಸಿವೆ. ಬಂದೂಕುಧಾರಿಯೊಂದಿಗೆ ಮಾತುಕತೆ ನಡೆಸಿ ಒತ್ತೆಯಾಳುಗಳನ್ನು ಬಿಡಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಆದರೆ, ಒಳಗೆ ಎಷ್ಟು ಮಕ್ಕಳು ಸಿಲುಕಿಕೊಂಡಿದ್ದಾರೆ ಮತ್ತು ಎಷ್ಟು ಜನರಿಗೆ ಗಾಯಗಳಾಗಿವೆ ಎಂಬ ನಿಖರ ಮಾಹಿತಿ ಇನ್ನೂ ಲಭ್ಯವಾಗಿಲ್ಲ.
ಪ್ರತ್ಯಕ್ಷದರ್ಶಿಯ ಭೀಕರ ವಿವರಣೆ
ಬಂದೂಕುಧಾರಿಯ ದಾಳಿಯಿಂದ ತಪ್ಪಿಸಿಕೊಂಡು ಬಂದ ಭದ್ರತಾ ಸಿಬ್ಬಂದಿಯೊಬ್ಬರು ಘಟನೆಯ ಭೀಕರತೆಯನ್ನು ವಿವರಿಸಿದ್ದಾರೆ. ಆತ ಒಳಗೆ ನುಗ್ಗುತ್ತಲೇ ಶಾಲೆಯ ಪ್ರಾಂಶುಪಾಲರನ್ನು ಗುಂಡಿಟ್ಟು ಕೊಂದಿದ್ದಾನೆ. ನನಗೂ ಹೊಟ್ಟೆಯ ಭಾಗಕ್ಕೆ ಗುಂಡು ತಗುಲಿದೆ, ಆದರೆ ಹೇಗೋ ತಪ್ಪಿಸಿಕೊಂಡು ಬಂದೆ. ಶಾಲೆಯ ಒಳಗೆ ಇನ್ನೂ ಅನೇಕ ಮಕ್ಕಳು ಸಿಲುಕಿದ್ದಾರೆ, ಅವರ ಪರಿಸ್ಥಿತಿ ಏನಾಗಿದೆಯೋ ತಿಳಿಯುತ್ತಿಲ್ಲ ಎಂದು ಕಣ್ಣೀರು ಹಾಕಿದ್ದಾರೆ.
ಈ ದಾಳಿಯು ಇಡೀ ಏಷ್ಯಾದಲ್ಲೇ ಭೀತಿ ಹುಟ್ಟಿಸಿದ್ದು, ಅಂತಾರಾಷ್ಟ್ರೀಯ ಮಟ್ಟದ ನಾಯಕರು ಈ ಕ್ರೂರ ಘಟನೆಯನ್ನು ಖಂಡಿಸಿದ್ದಾರೆ. ಥೈಲ್ಯಾಂಡ್ ಸರ್ಕಾರವು ದೇಶಾದ್ಯಂತ ಹೈ-ಅಲರ್ಟ್ ಘೋಷಿಸಿದೆ,(ಏಜೆನ್ಸೀಸ್).