ಸಾಂದರ್ಭಿಕ ಚಿತ್ರ 
ವಿದೇಶ

ಹೂತಿಗಳ ದಾಳಿಗೆ ತತ್ತರಿಸಿದ ಸೌದಿ!

ಹೂತಿ ಬಂಡುಕೋರರು ಸೌದಿ ಅರೇಬಿಯಾದ ತೈಲ ಸ್ಥಾವರಗಳು ಮತ್ತು ವಿಮಾನ ನಿಲ್ದಾಣಗಳ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿದ್ದಾರೆ. ಸೌದಿಯ ವಾಯು ರಕ್ಷಣಾ ವ್ಯವಸ್ಥೆಯು ಹೂತಿಗಳ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳನ್ನು ಸಂಪೂರ್ಣವಾಗಿ ತಡೆಯಲು ವಿಫಲವಾಗುತ್ತಿದೆ. ಅಲ್ಲದೆ, ಈ ಸರಣಿ ದಾಳಿಗಳಿಂದ ಸೌದಿಗೆ ಹಲವು ರಂಗಗಳಲ್ಲಿ ಹಿನ್ನಡೆಯಾಗಿದ್ದು, ಈಗ ಇರಾನ್ ಅನ್ನು ಮುಂದಿರಿಸಿಕೊಂಡು ಕದನವಿರಾಮಕ್ಕೆ ಪ್ರಯತ್ನ ನಡೆಯುತ್ತಿದೆ. ಈ ಎಲ್ಲ ಬೆಳವಣಿಗೆ ಕುರಿತಾದ ಅವಲೋಕನ ಇಲ್ಲಿದೆ.

ಸೌದಿ ಅರೇಬಿಯಾ ಮತ್ತು ಹೂತಿ ಬಂಡುಕೋರರ ನಡುವೆ ಕಳೆದ ಮೂರು ತಿಂಗಳುಗಳಿಂದ ಸಂಘರ್ಷ ನಡೆಯುತ್ತಿದೆ. ಹೂತಿ ಬಂಡುಕೋರರು ಸೌದಿಯ ಹಲವು ತೈಲ ನೆಲೆಗಳು ಹಾಗೂ ವಿಮಾನ ನಿಲ್ದಾಣಗಳ ಮೇಲೆ ದಾಳಿ ನಡೆಸಿದ್ದಾರೆ. ಈಗ ಇದನ್ನು ಕೊನೆಗೊಳಿಸಲು ಸೌದಿ ಅರೇಬಿಯಾ ಹೂತಿ ಬಂಡುಕೋರರಿಗೆ ಹಣಕಾಸಿನ ನೆರವು ನೀಡುವ ಪ್ರಸ್ತಾಪವನ್ನು ಮುಂದಿಟ್ಟಿರುವುದು ಅಚ್ಚರಿಯಾದರೂ, ಸೌದಿಯ ಅನಿವಾರ್ಯ ನಡೆಗೆ ಸಾಕ್ಷಿಯಾಗಿದೆ. ಇಸ್ರೇಲಿ ಪತ್ರಿಕೆ ‘ಹಾಯೋಮ್ ಪ್ರಕಾರ, ಸೌದಿ ಅರೇಬಿಯಾವು ಹೂತಿ ಬಂಡುಕೋರರಿಗೆ 1 ಶತಕೋಟಿ ಡಾಲರ್ (ಸುಮಾರು 9,500 ಕೋಟಿ ರೂಪಾಯಿ) ನೀಡಲು ಒಪ್ಪಿಕೊಂಡಿದೆ. ಈ ಒಪ್ಪಂದಕ್ಕೆ ಇರಾನ್ ಮಧ್ಯಸ್ಥಿಕೆ ವಹಿಸಿದೆ. ವರದಿಗಳ ಪ್ರಕಾರ, ಸೌದಿ ರಕ್ಷಣಾ ಸಚಿವ ಪ್ರಿನ್ಸ್ ಖಾಲಿದ್ ಬಿನ್ ಸಲ್ಮಾನ್ ಈ ಕುರಿತು ಮಾತುಕತೆ ನಡೆಸಲು ಸೋಮವಾರ ಟೆಹ್ರಾನ್​ಗೆ ತೆರಳಿದ್ದರು.

ಈ ಮಾತುಕತೆಯಲ್ಲಿ ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್, ಟರ್ಕಿಯ ಗುಪ್ತಚರ ಸಂಸ್ಥೆಯ ಮುಖ್ಯಸ್ಥ ಇಬ್ರಾಹಿಂ ಕಾಲಿನ್ ಮತ್ತು ಇರಾನ್ ಪರವಾಗಿ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಕೂಡ ಭಾಗವಹಿಸಿದ್ದರು. ಮೆಕ್ಕಾ ಜಂಟಿ ರಕ್ಷಣಾ ಮೈತ್ರಿಕೂಟದ ಪ್ರತಿನಿಧಿಗಳು ಹಾಗೂ ಇರಾನ್ ನಾಯಕರ ನಡುವೆ ನಡೆದ ಮೊದಲ ಅಧಿಕೃತ ಸಭೆ ಇದಾಗಿದೆ. ಪ್ರಾದೇಶಿಕ ಉದ್ವಿಗ್ನತೆಯನ್ನು ಕಡಿಮೆ ಮಾಡುವುದು ಮತ್ತು ರಾಜತಾಂತ್ರಿಕ ಪರಿಹಾರವನ್ನು ಕಂಡುಕೊಳ್ಳುವುದು ಈ ಭೇಟಿಯ ಮುಖ್ಯ ಉದ್ದೇಶ ಎಂದು ಸೌದಿ ವಿದೇಶಾಂಗ ಸಚಿವಾಲಯ ತಿಳಿಸಿದೆ.

‘ಯಾವುದೇ ಮಿಲಿಟರಿ ಒತ್ತಡಕ್ಕೆ ಮಣಿದು ಹೊಸ ಕದನ ವಿರಾಮ ಒಪ್ಪಂದ ಮಾಡಿಕೊಳ್ಳುವುದಿಲ್ಲ’ ಎಂದು ಸೌದಿ ಅರೇಬಿಯಾ ಹೇಳಿದೆ. ಹೂತಿಗಳು ಸೌದಿ ಬೆಂಬಲಿತ ಯೆಮೆನ್ ಸರ್ಕಾರದಿಂದ ವಶಪಡಿಸಿಕೊಂಡ ಪ್ರದೇಶಗಳನ್ನು ಮೊದಲು ಬಿಟ್ಟುಕೊಡಬೇಕೆಂದು ಸೌದಿ ಆಗ್ರಹಿಸಿದೆ. ಹೂತಿಗಳ ದಾಳಿಯಿಂದ ಸೌದಿ ಅರೇಬಿಯಾದ ವಿಮಾನ ನಿಲ್ದಾಣಗಳು ಮತ್ತು ತೈಲ ನೆಲೆಗಳಿಗೆ ಭಾರಿ ಹಾನಿಯಾಗಿದೆ. ಇದರಿಂದ ದೇಶದ ಆರ್ಥಿಕತೆಯ ಮೇಲೂ ಕೆಟ್ಟ ಪರಿಣಾಮ ಬೀರಿದೆ. ಮತ್ತೊಂದೆಡೆ, ಬಾಬ್ ಅಲ್-ಮಂದೇಬ್ ಜಲಸಂಧಿಯ ಬಳಿಯೂ ಹೂತಿಗಳ ನಿಯಂತ್ರಣ ಇರುವುದರಿಂದ ಸೌದಿಯ ತೈಲ ರಫ್ತಿಗೆ ಅಡ್ಡಿಯುಂಟಾಗಿದೆ.

ಹಿಂದೆಯೂ ನಡೆದಿತ್ತು ಒಪ್ಪಂದ

ಇಸ್ರೇಲಿ ಮಾಧ್ಯಮಗಳ ಪ್ರಕಾರ, ಮೂರು ವರ್ಷಗಳ ಹಿಂದೆ ಮಾಡಿಕೊಂಡಿದ್ದ ಒಪ್ಪಂದವನ್ನು ಪಾಲಿಸದಿರುವುದೂ ಸೌದಿ ಅರೇಬಿಯಾ ಮತ್ತು ಹೂತಿಗಳ ನಡುವಿನ ಇತ್ತೀಚಿನ ವಿವಾದಕ್ಕೆ ಪ್ರಮುಖ ಕಾರಣವಾಗಿದೆ. ಆ ಒಪ್ಪಂದದ ಪ್ರಕಾರ, ಸೌದಿ ಅರೇಬಿಯಾವು ಹೂತಿಗಳ ಹಿಡಿತದಲ್ಲಿರುವ ಪ್ರದೇಶಗಳಲ್ಲಿನ ಸರ್ಕಾರಿ ನೌಕರರ ವೇತನವನ್ನು ಭರಿಸಲು ಮತ್ತು ಸಾರ್ವಜನಿಕರಿಗೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಪುನರ್ನಿರ್ವಿುಸಲು ಆರ್ಥಿಕ ನೆರವು ನೀಡಬೇಕಿತ್ತು. ಇದಕ್ಕೆ ಪ್ರತಿಯಾಗಿ ಹೂತಿ ಬಂಡುಕೋರರು ಕದನ ವಿರಾಮವನ್ನು ಕಾಯ್ದುಕೊಳ್ಳಲು ಮತ್ತು ಸೌದಿ ಅರೇಬಿಯಾದ ಮೇಲಿನ ದಾಳಿಗಳನ್ನು ನಿಲ್ಲಿಸಲು ನಿರೀಕ್ಷಿಸಲಾಗಿತ್ತು. ಆದರೆ ಇತ್ತೀಚೆಗೆ ಹೂತಿಗಳು, ಸೌದಿ ಅರೇಬಿಯಾವು ಹಳೆಯ ಒಪ್ಪಂದವನ್ನು ಪಾಲಿಸಿಲ್ಲ ಎಂದು ಆರೋಪಿಸಿದ್ದಾರೆ. ಇದೇ ಆಧಾರದ ಮೇಲೆ ಅವರು ತಮ್ಮ ಇತ್ತೀಚಿನ ದಾಳಿಗಳನ್ನು ಸಮರ್ಥಿಸಿಕೊಂಡಿದ್ದಾರೆ.

ಪ್ರಮುಖ ಪರಿಣಾಮಗಳು

1. ಸೇನಾ ಕಾರ್ಯಾಚರಣೆಯೊಂದರಿಂದಲೇ ಹೂತಿಗಳನ್ನು ಮಣಿಸಲು ಸಾಧ್ಯವಿಲ್ಲ ಎಂಬುದನ್ನು ಅರಿತ ಸೌದಿ, ಯೆಮೆನ್ ಬಿಕ್ಕಟ್ಟಿನಿಂದ ಹೊರಬರಲು ಶಾಂತಿ ಮಾತುಕತೆಗಳು ಹಾಗೂ ಕದನವಿರಾಮಕ್ಕೆ ಆದ್ಯತೆ ನೀಡುವ ಅನಿವಾರ್ಯತೆಗೆ ಸಿಲುಕಿದೆ. ಹೂತಿಗಳಿಗೆ ಬೆಂಬಲ ನೀಡುತ್ತಿರುವ ಇರಾನ್ ಜತೆಗಿನ ದ್ವಿಪಕ್ಷೀಯ ಬಾಂಧವ್ಯವನ್ನು ಪುನಃ ಸ್ಥಾಪಿಸಲು ಚೀನಾದ ಮಧ್ಯಸ್ಥಿಕೆಯಲ್ಲಿ ಮಾತುಕತೆ ನಡೆಸಿದೆ.

2. ಅತ್ಯಾಧುನಿಕ ರೇಡಾರ್ ಮತ್ತು ರಕ್ಷಣಾ ವ್ಯವಸ್ಥೆಗಳನ್ನು ಹೊಂದಿದ್ದರೂ, ಕಡಿಮೆ ಎತ್ತರದಲ್ಲಿ ಹಾರುವ ಡ್ರೋನ್​ಗಳು ಮತ್ತು ಕ್ರೂಸ್ ಕ್ಷಿಪಣಿಗಳನ್ನು ತಡೆಯುವಲ್ಲಿ ಸೌದಿಯ ವಾಯು ರಕ್ಷಣಾ ವ್ಯವಸ್ಥೆ ಸವಾಲುಗಳನ್ನು ಎದುರಿಸಬೇಕಾಯಿತು. ದಾಳಿಗಳು ನಡೆದ ತಕ್ಷಣವೇ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗುವುದು ಮತ್ತು ಪೂರೈಕೆ ಸರಪಳಿ ಅಸ್ತವ್ಯಸ್ತಗೊಳ್ಳುವುದು ಮುಂದುವರಿದಿದೆ.

3. ಕೆಂಪು ಸಮುದ್ರದ ಜಲಮಾರ್ಗಗಳಲ್ಲಿ ಹಡಗುಗಳ ಮೇಲಿನ ದಾಳಿಗಳು ಹೆಚ್ಚಾಗಿರುವುದು ಸೌದಿಯ ಬಂದರು ವ್ಯಾಪಾರ ಮತ್ತು ಇಡೀ ಮಧ್ಯಪ್ರಾಚ್ಯದ ಭೌಗೋಳಿಕ ರಾಜಕೀಯ ಸ್ಥಿರತೆಗೆ ಸವಾಲಾಗಿ ಪರಿಣಮಿಸಿದೆ. ಈ ದಾಳಿಗಳು ಸೌದಿ ಅರೇಬಿಯಾಕ್ಕೆ ಆರ್ಥಿಕ ಮತ್ತು ಮೂಲಸೌಕರ್ಯದ ನಷ್ಟವನ್ನು ಉಂಟುಮಾಡಿದ್ದಲ್ಲದೆ, ತನ್ನ ಆರ್ಥಿಕ ವೈವಿಧಿ್ಯಕರಣ ಹಾಗೂ ಭದ್ರತಾ ಆದ್ಯತೆಗಳನ್ನು ಮರುಪರಿಶೀಲಿಸುವಂತೆ ಮಾಡಿದೆ.

ಹಲವು ಸಂಕಷ್ಟಗಳು

  • ಯೆಮೆನ್ ಮೂಲದ ಹೂತಿ ಬಂಡುಕೋರರು ಸೌದಿ ಅರೇಬಿಯಾದ ಮೇಲೆ ನಡೆಸುತ್ತಿರುವ ಡ್ರೋನ್ ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಗಳು ದೇಶದ ಆರ್ಥಿಕ, ನಾಗರಿಕ ಮತ್ತು ರಕ್ಷಣಾ ವ್ಯವಸ್ಥೆಗೆ ತೀವ್ರ ಹೊಡೆತ ನೀಡಿವೆ. ರಾಜಧಾನಿ ರಿಯಾದ್​ನ ಕಿಂಗ್ ಖಾಲಿದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಜಿದ್ದಾ, ಅಬ್ಹಾ ಮತ್ತು ದಮ್ಮಾಮ್ ವಿಮಾನ ನಿಲ್ದಾಣಗಳನ್ನು ಗುರಿಯಾಗಿಸಿ ದಾಳಿಗಳು ನಡೆದಿವೆ. ಸಾವಿರಾರು ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನ ಹಾರಾಟಗಳು ರದ್ದಾಗಿದ್ದು, ವಿಮಾನಯಾನ ಸಂಸ್ಥೆಗಳು ಸೌದಿ ಆಕಾಶ ಮಾರ್ಗವನ್ನು ಬಳಸಲು ಹಿಂಜರಿಯುವಂತಾಗಿದೆ. ವಿಮಾನ ನಿಲ್ದಾಣಗಳ ಮೂಲಸೌಕರ್ಯ, ಟರ್ವಿುನಲ್​ಗಳು ಹಾಗೂ ಪ್ರಯಾಣಿಕರ ಲೌಂಜ್​ಗಳಿಗೆ ಹಾನಿಯಾಗಿದೆ.

  • ಸೌದಿ ಅರೇಬಿಯಾದ ಜೀವನಾಡಿಯಾಗಿರುವ ಸೌದಿ ಅರಾಮ್ಕೊ ತೈಲ ಸಂಸ್ಕರಣಾಗಾರಗಳು, ಸಂಗ್ರಹಣಾ ಟ್ಯಾಂಕ್​ಗಳು (ಉದಾಹರಣೆಗೆ, ಅಬ್ಕೈಕ್, ಖುರೈಸ್, ಜಿದ್ದಾ) ಮತ್ತು ತೈಲ ಪೈಪ್​ಲೈನ್​ಗಳ ಮೇಲೆ ಡ್ರೋನ್ ದಾಳಿಗಳು ನಡೆದಿವೆ. ಇದರಿಂದಾಗಿ ತಾತ್ಕಾಲಿಕವಾಗಿ ಕಚ್ಚಾ ತೈಲ ಉತ್ಪಾದನೆ ಸ್ಥಗಿತಗೊಂಡು, ಜಾಗತಿಕ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ.

  • ಸೌದಿಯ ಮಹತ್ವಾಕಾಂಕ್ಷೆಯ ‘ವಿಷನ್ 2030’ ಭಾಗವಾಗಿ ಆಯೋಜಿಸಲಾಗುವ ಜಾಗತಿಕ ಹೂಡಿಕೆ ಸಮ್ಮೇಳನಗಳು, ವ್ಯಾಪಾರ ಒಪ್ಪಂದಗಳು ಮತ್ತು ಸಭೆಗಳು ಭದ್ರತಾ ಭೀತಿಯಿಂದ ಮುಂದೂಡಲ್ಪಟ್ಟಿವೆ ಅಥವಾ ರದ್ದಾಗಿವೆ. ವಿದೇಶಿ ನೇರ ಹೂಡಿಕೆದಾರರಲ್ಲಿ ಸೌದಿಯ ಭದ್ರತೆಯ ಬಗ್ಗೆ ಅನುಮಾನಗಳು ಮೂಡಿವೆ.

  • ಕೇವಲ ತೈಲದ ಮೇಲೆಯೇ ಅವಲಂಬಿತವಾಗದೆ ಪ್ರವಾಸೋದ್ಯಮವನ್ನು ಬೆಳೆಸಲು ಸೌದಿ ರೂಪಿಸಿದ್ದ ಯೋಜನೆಗಳಿಗೆ ಹಿನ್ನಡೆಯಾಗಿದೆ. ಜಾಗತಿಕ ಕಾರ್ಯಕ್ರಮಗಳು, ಮನರಂಜನಾ ಉತ್ಸವಗಳು ಮತ್ತು ಕ್ರೀಡಾಕೂಟಗಳ ಮೇಲೆಯೂ ಇದು ಕರಿನೆರಳು ಚೆಲ್ಲಿದೆ.

  • ಯೆಮೆನ್ ಗಡಿಗೆ ಹೊಂದಿಕೊಂಡಿರುವ ಜಿಜಾನ್, ನಜ್ರಾನ್, ಅಸೀರ್ ಮುಂತಾದ ದಕ್ಷಿಣ ಪ್ರಾಂತ್ಯಗಳಲ್ಲಿ ನಾಗರಿಕ ಮನೆಗಳು, ವಿದ್ಯುತ್ ಗ್ರಿಡ್​ಗಳು ಮತ್ತು ನೀರು ಶುದ್ಧೀಕರಣ ಘಟಕಗಳಿಗೆ ಹಾನಿಯಾಗಿದೆ. ಅನೇಕ ಮುಗ್ಧ ನಾಗರಿಕರು ಮತ್ತು ವಲಸಿಗ ಕಾರ್ವಿುಕರು ಪ್ರಾಣ ಕಳೆದುಕೊಂಡಿದ್ದಾರೆ ಅಥವಾ ಗಾಯಗೊಂಡಿದ್ದಾರೆ.

ಗುಡ್ಡಗಾಡು ಪ್ರದೇಶವೂ ದೊಡ್ಡ ಸವಾಲು

ಯೆಮೆನ್​ನ ಬಹುತೇಕ ಭಾಗವು ಗುಡ್ಡಗಾಡುಗಳಿಂದ ಕೂಡಿದೆ. ಇಂತಹ ಪ್ರದೇಶಗಳಲ್ಲಿ ಹೂತಿ ಬಂಡುಕೋರರ ನೆಲೆಗಳನ್ನು ಪತ್ತೆಹಚ್ಚುವುದು ಮತ್ತು ಅವರನ್ನು ಸಂಪೂರ್ಣವಾಗಿ ನಾಶಮಾಡುವುದು ಸುಲಭವಲ್ಲ. ವಾಯುದಾಳಿಗಳ ಮೂಲಕ ನಿರ್ದಿಷ್ಟ ನೆಲೆಗಳಿಗೆ ಹಾನಿ ಮಾಡಬಹುದು, ಆದರೆ ಇದರಿಂದ ಸಂಪೂರ್ಣ ಪ್ರದೇಶದ ಮೇಲೆ ನಿಯಂತ್ರಣ ಸಾಧಿಸಲು ಸಾಧ್ಯವಿಲ್ಲ. ಹೂತಿ ಬಂಡುಕೋರರು ದೀರ್ಘಕಾಲದಿಂದ ಯೆಮೆನ್​ನಲ್ಲಿ ಸಕ್ರಿಯವಾಗಿದ್ದಾರೆ ಮತ್ತು ಅಲ್ಲಿ ಅವರು ಬಲವಾದ ಹಿಡಿತವನ್ನು ಹೊಂದಿದ್ದಾರೆ. ಅವರನ್ನು ಸಂಪೂರ್ಣವಾಗಿ ಅಲ್ಲಿಂದ ತೆರವುಗೊಳಿಸಲು ಸೌದಿ ಅರೇಬಿಯಾ ದೊಡ್ಡ ಪ್ರಮಾಣದ ಭೂಸೇನಾ ಕಾರ್ಯಾಚರಣೆ ನಡೆಸಬೇಕಾಗಬಹುದು. ಇದರಲ್ಲಿ ಸೈನಿಕರು ಪ್ರಾಣ ಕಳೆದುಕೊಳ್ಳುವ ಮತ್ತು ಯುದ್ಧವು ದೀರ್ಘಕಾಲ ಮುಂದುವರಿಯುವ ಭಾರಿ ಅಪಾಯವಿದೆ.

ಹೂತಿಗಳನ್ನು ಸೋಲಿಸಲು ಏಕೆ ಸಾಧ್ಯವಾಗುತ್ತಿಲ್ಲ?

ಸೌದಿ ಅರೇಬಿಯಾದ ಬಳಿ ಅತ್ಯಾಧುನಿಕ ಯುದ್ಧ ವಿಮಾನಗಳು ಮತ್ತು ಕ್ಷಿಪಣಿಗಳಿವೆ. ಅಮೆರಿಕ ಕೂಡ ಅದಕ್ಕೆ ಶಸ್ತ್ರಾಸ್ತ್ರಗಳನ್ನು ಮತ್ತು ಗುಪ್ತಚರ ಮಾಹಿತಿಯನ್ನು ಒದಗಿಸುತ್ತ ಬಂದಿದೆ. ಆದಾಗ್ಯೂ, 2015ರಿಂದ ಹೂತಿ ಬಂಡುಕೋರರ ವಿರುದ್ಧ ನಡೆಯುತ್ತಿರುವ ಯುದ್ಧದಲ್ಲಿ ಅದಕ್ಕೆ ಜಯ ಸಾಧಿಸಲು ಸಾಧ್ಯವಾಗಿಲ್ಲ. 10 ವರ್ಷಗಳಿಗೂ ಹೆಚ್ಚು ಸಮಯ ಕಳೆದರೂ ಹೂತಿ ಬಂಡುಕೋರರು ಯೆಮೆನ್​ನ ಬಹುದೊಡ್ಡ ಭಾಗವನ್ನು ತಮ್ಮ ನಿಯಂತ್ರಣದಲ್ಲೇ ಇರಿಸಿಕೊಂಡಿದ್ದಾರೆ ಮತ್ತು ಸೌದಿ ಅರೇಬಿಯಾದ ಮೇಲೆ ಡ್ರೋನ್ ಹಾಗೂ ಕ್ಷಿಪಣಿ ದಾಳಿಗಳನ್ನು ನಡೆಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಇದಕ್ಕೆ ಪ್ರಮುಖ ಕಾರಣವೆಂದರೆ ದಾಳಿ ಮತ್ತು ರಕ್ಷಣೆಗೆ ತಗಲುವ ವೆಚ್ಚ. ಹೂತಿಗಳು ಕಡಿಮೆ ಬೆಲೆಯ ಡ್ರೋನ್​ಗಳು ಮತ್ತು ಕ್ಷಿಪಣಿಗಳಿಂದ ದಾಳಿ ನಡೆಸಿದ್ದಾರೆ/ನಡೆಸುತ್ತಿದ್ದಾರೆ. ಆದರೆ ಅವುಗಳನ್ನು ತಡೆಯಲು ಸೌದಿ ಅರೇಬಿಯಾ ಅತ್ಯಂತ ದುಬಾರಿ ಇಂಟರ್​ಸೆಪ್ಟರ್ ಕ್ಷಿಪಣಿಗಳನ್ನು ಹಾರಿಸಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಹೂತಿಗಳ ದಾಳಿಯನ್ನು ತಡೆಯಲು ಸೌದಿ ಅರೇಬಿಯಾಕ್ಕೆ ತಗಲುವ ವೆಚ್ಚವು ಎಷ್ಟೋ ಪಟ್ಟು ಹೆಚ್ಚಾಗುತ್ತದೆ, ಇದರಿಂದಾಗಿ ದೀರ್ಘಕಾಲದವರೆಗೆ ಯುದ್ಧವನ್ನು ಮುಂದುವರಿಸುವುದು ಆರ್ಥಿಕವಾಗಿ ಭಾರಿ ಹೊರೆಯಾಗುತ್ತದೆ.