Nepal Floods | ನೋಡುಗರನ್ನೇ ಬೆಚ್ಚಿ ಬೀಳಿಸುತ್ತಿದೆ ನೇಪಾಳದ ಈ ಉಪಗ್ರಹ ಚಿತ್ರ (Planet Labs via Reuters) 
ವಿದೇಶ

ಅಂದು ಸುಂದರ ನಿಸರ್ಗ, ಇಂದು ಬರಿ ನಾಶದ ಕುರುಹು!: ನೋಡುಗರನ್ನೇ ಬೆಚ್ಚಿ ಬೀಳಿಸುತ್ತಿದೆ ನೇಪಾಳದ ಈ ಉಪಗ್ರಹ ಚಿತ್ರ | Nepal Floods

ನೇಪಾಳದ ಟಿಬೆಟ್ ಗಡಿ ಭಾಗದಲ್ಲಿ ಬುಧವಾರ ಸಂಭವಿಸಿದ ಭೀಕರ ದಿಢೀರ್ ಪ್ರವಾಹಕ್ಕೆ ಭಾರಿ ಸಾವು-ನೋವು ಸಂಭವಿಸಿದ್ದು, ಮೂಲಸೌಕರ್ಯಗಳು ಸಂಪೂರ್ಣವಾಗಿ ಧ್ವಂಸಗೊಂಡಿವೆ. ಟಿಬೆಟ್ ಗಡಿಗೆ ಹೊಂದಿಕೊಂಡಂತಿರುವ ಭೋಟಿ ಕೋಶಿ ನದಿ ತೀರದ ರಸುವಾ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಪ್ರವಾಹದ ಅಬ್ಬರ ಹೆಚ್ಚಾಗಿದ್ದು, ಮನೆಗಳು, ರಸ್ತೆಗಳು, ಸೇತುವೆಗಳು ಹಾಗೂ ಜಲವಿದ್ಯುತ್ ಯೋಜನೆಗಳು ಕೊಚ್ಚಿಹೋಗಿವೆ.

ವರದಿಗಳ ಪ್ರಕಾರ, ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ 160ಕ್ಕೆ ಏರಿಕೆಯಾಗಿದ್ದು, 750ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ಹವಾಮಾನ ವೈಪರೀತ್ಯ ಹಾಗೂ ಸಂಪರ್ಕ ವ್ಯವಸ್ಥೆ ಸಂಪೂರ್ಣವಾಗಿ ಕಡಿತಗೊಂಡಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ತೀವ್ರ ಅಡಚಣೆ ಉಂಟಾಗಿದೆ. ಸಂಕಷ್ಟದಲ್ಲಿರುವ ಪ್ರದೇಶಗಳನ್ನು ತಲುಪಲು ಅಧಿಕಾರಿಗಳು ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ.

ಉಪಗ್ರಹದ ಚಿತ್ರಗಳಲ್ಲಿ ಭೀಕರತೆ ಬಯಲು

ಪ್ಲಾನೆಟ್ ಲ್ಯಾಬ್ಸ್ ಬಿಡುಗಡೆ ಮಾಡಿರುವ ಉಪಗ್ರಹ ಚಿತ್ರಗಳು ಪ್ರವಾಹಕ್ಕೂ ಮುನ್ನ ಮತ್ತು ಪ್ರವಾಹದ ನಂತರದ ಭೀಕರ ವ್ಯತ್ಯಾಸವನ್ನು ಎದ್ದು ಕಾಣುವಂತೆ ಮಾಡಿವೆ. ಆಗಸ್ಟ್ 23 ರಂದು ಸುಂದರವಾಗಿದ್ದ ಮನಕಾಮನಾ ಗ್ರಾಮದ ಕಣಿವೆಗಳು ಹಾಗೂ ಖಡ್ಗ ಭಂಜ್ಯಾಂಗ್ ಗ್ರಾಮಗಳು, ಆಗಸ್ಟ್ 26ರ ವೇಳೆಗೆ ಪ್ರವಾಹದ ಅಬ್ಬರಕ್ಕೆ ಸಂಪೂರ್ಣವಾಗಿ ನಾಶವಾಗಿರುವುದು ಉಪಗ್ರಹ ಚಿತ್ರಗಳಲ್ಲಿ ಕಂಡುಬಂದಿದೆ. ಈ ದುರಂತದಲ್ಲಿ ಸುಮಾರು 750ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದು, ಅವರಲ್ಲಿ ಕನಿಷ್ಠ 300 ಭಾರತೀಯರು ಹಾಗೂ 37 ಅನಿವಾಸಿ ಭಾರತೀಯರು ಸೇರಿದ್ದಾರೆ ಎನ್ನಲಾಗಿದೆ.

ನೇಪಾಳಕ್ಕೆ ಪ್ರಧಾನಿ ನರೇಂದ್ರ ಮೋದಿ ನೆರವಿನ ಅಭಯ

ನೇಪಾಳದಲ್ಲಿ ಸಂಭವಿಸಿದ ಭೀಕರ ದುರಂತದ ಹಿನ್ನೆಲೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ನೇಪಾಳದ ಪ್ರಧಾನಿ ಬಾಲೇಂದ್ರ ಶಾ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಸಂತಾಪ ಸೂಚಿಸಿದ್ದಾರೆ. ಅಲ್ಲದೆ, ಭಾರತ ಸರ್ಕಾರದಿಂದ ಬೇಕಾದ ಎಲ್ಲಾ ರೀತಿಯ ಮಾನವೀಯ ನೆರವು ಮತ್ತು ಸಂಪೂರ್ಣ ಬೆಂಬಲ ನೀಡುವ ಅಭಯ ನೀಡಿದ್ದಾರೆ. ನೇಪಾಳದ ಪ್ರಧಾನಿ ಬಾಲೇಂದ್ರ ಶಾ ಅವರೊಂದಿಗೆ ಮಾತನಾಡಿ, ಪ್ರವಾಹದಿಂದ ಮೃತರಾದವರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದೇನೆ. ಈ ಕಷ್ಟದ ಸಮಯದಲ್ಲಿ ಭಾರತದ ಜನತೆ ನೇಪಾಳದ ಸಹೋದರ-ಸಹೋದರಿಯರೊಂದಿಗೆ ಗಟ್ಟಿಯಾಗಿ ನಿಲ್ಲಲಿದ್ದಾರೆ. ರಕ್ಷಣೆ ಹಾಗೂ ಪರಿಹಾರ ಕಾರ್ಯಗಳಲ್ಲಿ ಭಾರತ ನಿಕಟವಾಗಿ ಸಮನ್ವಯ ಸಾಧಿಸುತ್ತಿದೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಬೆಂಬಲ ಘೋಷಣೆಗೆ ಮತ್ತು ದೇಶಕ್ಕೆ ನೀಡಿದ ಮಾನವೀಯ ಸಹಾಯಕ್ಕಾಗಿ ನೇಪಾಳ ಪ್ರಧಾನಿ ಧನ್ಯವಾದಗಳನ್ನು ತಿಳಿಸಿದರು. ಪ್ರಧಾನಿ ಮೋದಿ ಅವರ ಕರುಣೆಯ ಕರೆ ಹಾಗೂ ತೀವ್ರ ಸಂತಾಪಗಳಿಗೆ ಕೃತಜ್ಞತೆ ಸಲ್ಲಿಸಿದ ಬಲೇಂದ್ರ ಶಾ, ಈ ಕಷ್ಟದ ಗಳಿಗೆಯಲ್ಲಿ ನೇಪಾಳಕ್ಕೆ ನೀಡಿದ ಬೆಂಬಲದ ಮಾತುಗಳನ್ನು ಮತ್ತು ಉದಾರ ಸಹಾಯದ ಕೊಡುಗೆಯನ್ನು ನಾವು ಮನಸ್ಸಾರೆ ಮೆಚ್ಚುತ್ತೇವೆ. ಈ ಬೆಂಬಲದ ನಡೆಯು ನಮ್ಮೆರಡು ದೇಶಗಳ ನಡುವಿನ ಶಾಶ್ವತ ಸ್ನೇಹದ ಬಾಂಧವ್ಯದ ಸಂಕೇತವಾಗಿದೆ, ಇದನ್ನು ನಾವು ಗೌರವಿಸುತ್ತೇವೆ ಎಂದು ಹೇಳಿದ್ದಾರೆ(ಏಜೆನ್ಸೀಸ್).