ಒಂದೇ ಕುಟುಂಬದ ನಾಲ್ವರನ್ನು ಬಲಿಪಡೆದ ಯಮರೂಪಿ ಕಾಡಾನೆ
- ಆನೆಯ ದಾಳಿಗೆ ಒಂದೇ ಕುಟುಂಬದ ನಾಲ್ವರು ಬಲಿ
- ಊರು ಬಿಟ್ಟು ದೂರ ಸೇರಿದರೂ ಬೆನ್ನತ್ತಿ ಇನ್ನಿಬ್ಬರನ್ನು ಕೊಂದ ಕಾಡಾನೆ
- 14 ವರ್ಷಗಳ ಹಿಂದೆ ತಮ್ಮ ಕುಟುಂಬವನ್ನು ಅಟ್ಟಾಡಿಸಿ, ಭೀಕರವಾಗಿ ಕೊಂದಿದ್ದ ಆನೆ
ಕಠ್ಮಂಡು: ಹಾವಿನ ದ್ವೇಷ ಹನ್ನೆರೆಡು ವರ್ಷ ಎಂಬ ಮಾತು ನಮ್ಮಲ್ಲಿ ನಾಗರಹಾವುಗಳನ್ನು ಕಂಡಾಗ ಒಂದು ನಿಮಿಷ ದಿಢೀರ್ ನೆನಪಿಗೆ ಬರುತ್ತೆ. ಈಗಲೂ ಅದೆಷ್ಟೋ ಮಂದಿ ಸರ್ಪಗಳಿಗೆ ತೊಂದರೆ ಕೊಟ್ಟರೆ, ಅವುಗಳು 12 ವರ್ಷವಾದರೂ ಬಿಡದೆ ನಿಮ್ಮನ್ನು ಸೇಡು ತೀರಿಸಿಕೊಳ್ಳಲು ಹುಡುಕಿ ಬರುತ್ತೆ ಎನ್ನುತ್ತಾರೆ. ಆದರೆ, ಇದು ಹಾವಿಗೆ ಮಾತ್ರವಲ್ಲ, ದೈತ್ಯಕಾರ ಆನೆಗೂ ಅನ್ವಯಿಸುತ್ತೆ ಅನ್ನೋದಕ್ಕೆ ಈ ವರದಿಯೇ ಜ್ವಲಂತ ಸಾಕ್ಷಿ.
ಕೆಲವರ ಹಣೆಬರಹ ಎಷ್ಟು ಕ್ರೂರ, ಸಾವಿನಿಂದ ತಪ್ಪಿಸಿಕೊಳ್ಳುವ ಪ್ರಯತ್ನ ವ್ಯರ್ಥ ಎಂಬುದಕ್ಕೆ ನೆರೆರಾಷ್ಟ್ರ ನೇಪಾಳದಲ್ಲಿ ಆನೆಯಿಂದ ನಡೆದ ಭೀಕರ ಘಟನೆಯೇ ಸ್ಪಷ್ಟ ಉದಾಹರಣೆ. 14 ವರ್ಷಗಳ ಹಿಂದೆ ತಮ್ಮ ಕುಟುಂಬವನ್ನು ಅಟ್ಟಾಡಿಸಿ, ಭೀಕರವಾಗಿ ಕೊಂದಿದ್ದ ಆನೆಯಿಂದ ಪ್ರಾಣ ಉಳಿಸಿಕೊಳ್ಳಲು ಊರು ಬಿಟ್ಟು ಮೈಲಿಗಳಷ್ಟು ದೂರ ಹೋಗಿ ನೆಲೆಸಿದ್ದ ಒಂದೇ ಕುಟುಂಬದ ನಾಲ್ವರು ಇದೀಗ ಅದೇ 'ಧುರ್ಬೆ' ಎಂಬ ಕಾಡಾನೆಯ ಅಟ್ಟಹಾಸಕ್ಕೆ ಬಲಿಯಾಗಿರುವುದು ನಿಜಕ್ಕೂ ದುರಂತ.
2012ರಲ್ಲಿ ಮೊದಲ ದುರಂತ
ಕಠ್ಮಂಡು ಪೋಸ್ಟ್ ವರದಿಯ ಪ್ರಕಾರ, ಶನಿಚರ ಬೋಟೆ ಎಂಬುವವರ ಕುಟುಂಬಕ್ಕೆ ಈ ದುಸ್ವಪ್ನ ಕಾಡಲಾರಂಭಿಸಿದ್ದು ಡಿಸೆಂಬರ್ 2012ರಲ್ಲಿ. ನೇಪಾಳದ ಚಿತ್ವಾನ್ ರಾಷ್ಟ್ರೀಯ ಉದ್ಯಾನವನದ ಬಳಿಯ ಮಾದಿ ಎಂಬ ಪಟ್ಟಣದಲ್ಲಿ ಧುರ್ಬೆ ಎಂಬ ಕಾಡಾನೆ, ಶನಿಚರ ಅವರ ತಂದೆ ಮತ್ತು ತಾಯಿಯನ್ನು ಕಾಲಿನಿಂದ ತುಳಿದು ಭೀಕರವಾಗಿ ಕೊಂದಿತು. ಈ ಘಟನೆ ಬೆನ್ನಲ್ಲೇ ಆನೆಯಿಂದ ಪ್ರಾಣ ಉಳಿಸಿಕೊಳ್ಳಲು ಊರು ಬಿಟ್ಟ ವ್ಯಕ್ತಿ, ಇನ್ನಾದರೂ ನೆಮ್ಮದಿಯಲ್ಲಿ ಬದುಕೋಣ ಎಂದು ಕಂಡ ಆಸೆ ಈಗ ಅಕ್ಷರಶಃ ಕಮರಿ ಹೋಗಿದೆ.
ಜೀವ ಉಳಿಸಿಕೊಳ್ಳಲು ನದಿ ದಾಟಿ ಹೋಗಿದ್ದ ಕುಟುಂಬ
ಕಣ್ಣೆದುರೇ ಹೆತ್ತವರನ್ನು ಕಳೆದುಕೊಂಡು ಕಂಗಾಲಾಗಿದ್ದ ಶನಿಚರ ಬೋಟೆ, ಕಾಡಾನೆ ಭಯದಿಂದ ಸುಮಾರು 9 ಮೈಲಿಗಳಷ್ಟು ದೂರದಲ್ಲಿದ್ದ, ರಪ್ತಿ ಎಂಬ ದೊಡ್ಡ ನದಿಯನ್ನು ದಾಟಿ ಜಗತ್ಪುರ ಎಂಬ ಊರಿನಲ್ಲಿ ಹೊಸದಾಗಿ ಜೀವನ ಕಟ್ಟಿಕೊಂಡಿದ್ದರು. ಅವರ ಬಲವಾದ ನಂಬಿಕೆ ಏನೆಂದರೆ, ಇಷ್ಟು ದೊಡ್ಡ ನದಿ ದಾಟಿ ಆನೆ ಬರಲು ಸಾಧ್ಯವಿಲ್ಲ. ನಾವಿನ್ನು ಸುರಕ್ಷಿತ ಎಂದು ಭಾವಿಸಿದ್ದರು. ಆದ್ರೆ, ವಿಧಿಯಾಟ ಬೇರೆಯೇ ಇತ್ತು.
14 ವರ್ಷಗಳ ಬಳಿಕ ನುಗ್ಗಿದ ಯಮರೂಪಿ
ಜಗತ್ಪುರದಲ್ಲಿ ಕುಟುಂಬದ ಜತೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದ ಶನಿಚರ ಮನೆಯನ್ನು 14 ವರ್ಷಗಳ ಬಳಿಕ ಮತ್ತೆ ಹುಡುಕಿಕೊಂಡು ಬಂದ ಅದೇ ಆನೆ, ಮಧ್ಯರಾತ್ರಿಯಲ್ಲಿ ಮನೆಗೆ ನುಗ್ಗಿ, ಶನಿಚರ ಅವರ ಸೊಸೆ ಆಶಿಕಾ ಬೋಟೆ (25) ಮತ್ತು 4 ವರ್ಷದ ಮೊಮ್ಮಗ ಭರತ್ನನ್ನು ಕ್ರೂರವಾಗಿ ತುಳಿದು ಸಾಯಿಸಿದೆ. ಇದರಿಂದ ಕಂಗಾಲಾದ ಅವರು, ಇನ್ನು ನಾವು ಓಡಿಹೋಗಲು ಸಾಧ್ಯವಿಲ್ಲ. ಜಗತ್ತಿನಲ್ಲಿ ಎಲ್ಲೇ ಹೋದರೂ ಉಳಿಗಾಲವಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ.
25 ಜೀವ ಬಲಿಪಡೆದ ಮೋಸ್ಟ್ ವಾಂಟೆಡ್ ಕಾಡಾನೆ
ಚಿತ್ವಾನ್ ರಾಷ್ಟ್ರೀಯ ಉದ್ಯಾನವನದ ಅಧಿಕಾರಿಗಳ ಪ್ರಕಾರ, 'ಧುರ್ಬೆ' ನೇಪಾಳದ ಇತಿಹಾಸದಲ್ಲೇ ಅತ್ಯಂತ ಅಪಾಯಕಾರಿ ಮತ್ತು ಕುಖ್ಯಾತ ನರಹಂತಕ ಆನೆ ಎನ್ನಲಾಗಿದೆ. 2010ರಿಂದ ಇಲ್ಲಿಯವರೆಗೆ ಇದೊಂದೇ ಕಾಡಾನೆ ಬರೋಬ್ಬರಿ 25 ಜನರ ಪ್ರಾಣವನ್ನು ಕಸಿದುಕೊಂಡಿದೆ ಎಂದು ವರದಿಯಾಗಿದೆ.
ರೇಡಿಯೋ ಕಾಲರ್ ಅಳವಡಿಕೆಯೂ ಪ್ರಯೋಜನವಿಲ್ಲ. ಈ ಆನೆಯ ಚಲನವಲನದ ಮೇಲೆ ನಿಗಾವಿಡಲು ವನ್ಯಜೀವಿ ಇಲಾಖೆಯು 2016ರಲ್ಲಿ ಇದಕ್ಕೆ ಟ್ರ್ಯಾಕಿಂಗ್ ಕಾಲರ್ ಅಳವಡಿಸಿತ್ತು. ಅದು ಕೆಟ್ಟುಹೋದಾಗ 2020ರಲ್ಲಿ ಮತ್ತೊಂದು ಹಾಗೂ ಇತ್ತೀಚೆಗೆ 2023ರಲ್ಲಿ ಹೊಸ ರೇಡಿಯೋ ಕಾಲರ್ ಅಳವಡಿಸಿ ನಿರಂತರವಾಗಿ ಕಣ್ಣಿಟ್ಟಿತ್ತು. ಇಷ್ಟಾದರೂ ಈ ಭೀಕರ ದುರಂತವನ್ನು ತಪ್ಪಿಸಲು ಅಧಿಕಾರಿಗಳು ವಿಫಲವಾಗಿದ್ದಾರೆ,(ಏಜೆನ್ಸೀಸ್).