Russia 
ವಿದೇಶ

ಪ್ರಯಾಣಿಕರಿಂದ ತುಂಬಿದ್ದ ರೈಲಿನ ಮೇಲೆ ರಷ್ಯಾ ದಾಳಿ, 12 ಜನ ಸಾವು.. Russia

ಉಕ್ರೇನ್​​ : ( Russia) ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವು ದಿನದಿಂದ ದಿನಕ್ಕೆ ಭೀಕರ ಸ್ವರೂಪ ಪಡೆಯುತ್ತಿದ್ದು, ಇಂದು ರಷ್ಯಾ ಪಡೆಗಳು ಉಕ್ರೇನ್‌ನ ಪ್ರಯಾಣಿಕರ ರೈಲೊಂದನ್ನು ಗುರಿಯಾಗಿಸಿಕೊಂಡು ಮಾರಣಾಂತಿಕ ಡ್ರೋನ್ ದಾಳಿ ನಡೆಸಿವೆ. ರಷ್ಯಾ ನಡೆಸಿದ ಈ ದಾಳಿಗಳಲ್ಲಿ ಕನಿಷ್ಠ 12 ಜನರು ಸಾವನ್ನಪ್ಪಿದ್ದಾರೆ.
ದಾಳಿಯ ಸಮಯದಲ್ಲಿ ರೈಲಿನಲ್ಲಿ ನೂರಾರು ಪ್ರಯಾಣಿಕರಿದ್ದರು. ಪ್ರಾಥಮಿಕ ವರದಿಗಳ ಪ್ರಕಾರ, ಹಲವು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಭೀತಿ ಇದೆ ಎಂದು ಉಕ್ರೇನ್ ಅಧಿಕಾರಿಗಳು ತಿಳಿಸಿದ್ದಾರೆ.
ನಡೆದಿದ್ದೇನು?:
ಹಂಗೇರಿ ಮತ್ತು ಸ್ಲೋವಾಕಿಯಾದೊಂದಿಗಿನ ಉಕ್ರೇನ್‌ನ ಪಶ್ಚಿಮ ಗಡಿಗಳ ಸಮೀಪವಿರುವ ಚಾಪ್‌ನಿಂದ ಬಾರ್ವಿಂಕೋವ್ ಪಟ್ಟಣಕ್ಕೆ ಸಾಗುತ್ತಿದ್ದ ಸುಮಾರು 200 ಜನರಿದ್ದ ನಾಗರಿಕ ರೈಲಿನ ಮೇಲೆ ರಾತ್ರಿ ದಾಳಿ ನಡೆಸಿದ್ದು,ರಷ್ಯಾದ ಡ್ರೋನ್‌ ರೈಲಿಗೆ ಡಿಕ್ಕಿಯಾದ ಪರಿಣಾಮ ರೈಲಿನಲ್ಲಿದ್ದ 12 ಪ್ರಯಾಣಿಕರು ಸಾವನ್ನಪ್ಪಿದ್ದಾರೆ.
ರಷ್ಯಾ-ಉಕ್ರೇನ್‌ ನಡುವಿನ ಸುಧೀರ್ಘ ಯುದ್ದಕ್ಕೆ ಅಂತ್ಯಹಾಡಲು ಅಮೆರಿಕ ಮಧ್ಯಸ್ಥಿಕೆಯಲ್ಲಿ ಒಂದೆಡೆ ಮಾತುಕತೆ ನಡೆಸಲಾಗುತ್ತಿದೆ. ಆದರೆ, ಇತ್ತ ದೇಶದಲ್ಲಿ ಯುದ್ದದ ಕಾರ್ಮೋಡ ಹಾಗೆ ಉಳಿದಿದ್ದು, ರಷ್ಯಾ ಮತ್ತೆ ಉಕ್ರೇನ್‌ ನಾಗರಿಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವುದನ್ನು ಮುಂದುವರೆಸಿದೆ.
ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ ರೈಲು ದಾಳಿಯ ವೀಡಿಯೊವನ್ನು ಹಂಚಿಕೊಂಡಿದ್ದಾರೆ. "ರಷ್ಯಾ ಖಾರ್ಕಿವ್ ಪ್ರದೇಶದಲ್ಲಿ ಪ್ರಯಾಣಿಕ ರೈಲಿನ ಮೇಲೆ ದಾಳಿ ಡ್ರೋನ್ ಮೂಲಕ ದಾಳಿ ಮಾಡಿದೆ. ಯಾವುದೇ ದೇಶದಲ್ಲಿ, ನಾಗರಿಕ ರೈಲಿನ ಮೇಲೆ ಡ್ರೋನ್ ದಾಳಿಯನ್ನು ಭಯೋತ್ಪಾದನೆ ಎಂದು ಪರಿಗಣಿಸಲಾಗುತ್ತದೆ. ರೈಲು ಬೋಗಿಯಲ್ಲಿ ನಾಗರಿಕರನ್ನು ಕೊಲ್ಲಲು ಯಾವುದೇ ಮಿಲಿಟರಿ ಕಾರಣವಿರುವುದಿಲ್ಲ. ರೈಲಿನಲ್ಲಿ 200 ಕ್ಕೂ ಹೆಚ್ಚು ಜನರಿದ್ದರು ಮತ್ತು ರಷ್ಯಾದ ಡ್ರೋನ್ ದಾಳಿ ಮಾಡಿದ ಬೋಗಿಯಲ್ಲಿ 18 ಜನರು ಇದ್ದರು" ಎಂದು ಹೇಳಿದರು.