ರಷ್ಯಾ-ಯುಕ್ರೇನ್ ಸಮರ; ಜಪೋರಿಜ್ಜಿಯಾ ಅಣು ಸ್ಥಾವರದ ಮೇಲೆ ಡ್ರೋನ್ ದಾಳಿ! ಬೆಂಕಿಯೊಂದಿಗೆ ಆಟವಾಡಬೇಡಿ ಎಂದ ವಿಶ್ವಸಂಸ್ಥೆ: IAEA ನೀಡಿದ ಭೀಕರ ವಾರ್ನಿಂಗ್ ಏನು?
ಮಾಸ್ಕೋ: ಯುಕ್ರೇನ್ ಮತ್ತು ರಷ್ಯಾ ನಡುವಿನ ಭೀಕರ ಯುದ್ಧ ಈಗ ಇಡೀ ಜಗತ್ತನ್ನೇ ವಿನಾಶದ ಪ್ರಪಾತಕ್ಕೆ ತಳ್ಳುವ ಹಂತಕ್ಕೆ ತಲುಪಿದೆ. ದಕ್ಷಿಣ ಯುಕ್ರೇನ್‌ನಲ್ಲಿರುವ, ಪ್ರಸ್ತುತ ರಷ್ಯಾ ಸೇನೆಯ ಕಠಿಣ ನಿಯಂತ್ರಣದಲ್ಲಿರುವ ಯುರೋಪಿನ ಅತಿ ದೊಡ್ಡ ಜಪೋರಿಜ್ಜಿಯಾ ಪರಮಾಣು ವಿದ್ಯುತ್ ಸ್ಥಾವರದ(Zaporizhzhia Nuclear Plant Attack) ಮೇಲೆ ಡ್ರೋನ್ ದಾಳಿ ನಡೆದಿದೆ ಎಂದು ರಷ್ಯಾ ಗಂಭೀರವಾಗಿ ಆರೋಪಿಸಿದೆ. ಈ ರಹಸ್ಯ ದಾಳಿಯು ಇಡೀ ವಿಶ್ವದಾದ್ಯಂತ ತಲ್ಲಣ ಸೃಷ್ಟಿಸಿದ್ದು, ಇಂಟರ್ನ್ಯಾಷನಲ್ ಅಟಾಮಿಕ್ ಎನರ್ಜಿ ಏಜೆನ್ಸಿ (IAEA) ಮುಖ್ಯಸ್ಥರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಪರಮಾಣು ಸ್ಥಾವರದ ಗೋಡೆಗೆ ತೂತು ಬಿದ್ದಿರುವುದು ಜಾಗತಿಕ ಮಟ್ಟದಲ್ಲಿ ಹಿರೋಷಿಮಾ-ನಾಗಾಸಾಕಿ ಮಾದರಿಯ ಭೀಕರ ವಿಕಿರಣ ದುರಂತದ ಭೀತಿಯನ್ನು ಮತ್ತೊಮ್ಮೆ ಜಾಗೃತಗೊಳಿಸಿದೆ.
ಡ್ರೋನ್ ದಾಳಿಗೆ ತೂತಾದ ಟರ್ಬೈನ್ ಕಟ್ಟಡ; ಆಕಾಶದಲ್ಲೇ ಹಾರಿದ ವಿಕಿರಣ ಭೀತಿ?
ವಿಶ್ವಸಂಸ್ಥೆಯ ಅಣು ನಿಗಾ ಸಂಸ್ಥೆಯಾದ ‘IAEA’ ತನ್ನ ಅಧಿಕೃತ ಎಕ್ಸ್ನಲ್ಲಿ ಬಿಡುಗಡೆ ಮಾಡಿರುವ ಸ್ಫೋಟಕ ಹೇಳಿಕೆಯ ಪ್ರಕಾರ, ಏಪ್ರಿಲ್ ೨೦೨೪ ರ ನಂತರ ಜಪೋರಿಜ್ಜಿಯಾ ಪರಮಾಣು ಸ್ಥಾವರದ ಆವರಣದೊಳಗೆ ನಡೆದ ಮೊದಲ ಡ್ರೋನ್ ದಾಳಿ ಇದಾಗಿದೆ. ರಷ್ಯಾ ಪಡೆಗಳು ನೀಡಿರುವ ಇನ್ಸೈಡ್ ಮಾಹಿತಿಯ ಅನ್ವಯ, ಯುಕ್ರೇನ್ ಗಡಿಯಿಂದ ನುಗ್ಗಿ ಬಂದ ಆತ್ಮಹತ್ಯಾ ಡ್ರೋನ್ ಸ್ಥಾವರದ ಅತ್ಯಂತ ಸೂಕ್ಷ್ಮ ಪ್ರದೇಶವಾದ ಟರ್ಬೈನ್ ಕಟ್ಟಡಕ್ಕೆ ನೇರವಾಗಿ ಅಪ್ಪಳಿಸಿದೆ. ದಾಳಿಯ ತೀವ್ರತೆಗೆ ಕಟ್ಟಡದ ಬೃಹತ್ ಗೋಡೆಯೊಂದಕ್ಕೆ ದೊಡ್ಡ ತೂತು ಬಿದ್ದಿದೆ ಎಂದು ವರದಿಯಾಗಿದೆ.
ಈ ಘಟನೆಯ ಬೆನ್ನಲ್ಲೇ ತೀವ್ರ ಆತಂಕ ಹೊರಹಾಕಿರುವ IAEA ಮಹಾನಿರ್ದೇಶಕ ರಾಫೆಲ್ ಗ್ರೊಸ್ಸಿ, ಪರಮಾಣು ನೆಲೆಗಳ ಮೇಲೆ ದಾಳಿ ಮಾಡುವುದು ಅಕ್ಷರಶಃ ಉರಿಯುವ ಬೆಂಕಿಯೊಂದಿಗೆ ಸರಸವಾಡಿದಂತೆ ಎಂದಿದ್ದಾರೆ. ಅಲ್ಲದೆ, ಈ ದಾಳಿಯು ಯುದ್ಧದ ಸಮಯದಲ್ಲಿ ಪರಮಾಣು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ವಿಧಿಸಲಾದ 7 ಅತ್ಯಗತ್ಯ ಸ್ತಂಭಗಳು ಮತ್ತು ಸ್ಥಾವರವನ್ನು ರಕ್ಷಿಸುವ 5 ತತ್ವಗಳನ್ನು ಸಂಪೂರ್ಣವಾಗಿ ಉಲ್ಲೇಖಿಸಿದೆ. ಸ್ಥಾವರದ ಮೇಲೆ ಅಥವಾ ಒಳಗಿನಿಂದ ಯಾವುದೇ ರೀತಿಯ ದಾಳಿಗಳು ನಡೆಯಬಾರದು ಎಂಬ ನಿಯಮವನ್ನು ಇಲ್ಲಿ ಧೂಳೀಪಟ ಮಾಡಲಾಗಿದೆ ಎಂದು ಕಠಿಣ ಎಚ್ಚರಿಕೆ ನೀಡಿದ್ದಾರೆ. ಗಾಯಗೊಂಡ ಟರ್ಬೈನ್ ಕಟ್ಟಡವನ್ನು ಖುದ್ದಾಗಿ ಪರೀಕ್ಷಿಸಲು ತಮಗೆ ತುರ್ತು ಪ್ರವೇಶ ನೀಡಬೇಕೆಂದು ಗ್ರೊಸ್ಸಿ ರಷ್ಯಾವನ್ನು ಒತ್ತಾಯಿಸಿದ್ದಾರೆ.
ಇದು ರಷ್ಯಾದ ಪರಮಾಣು ಬ್ಲ್ಯಾಕ್‌ಮೇಲ್ ಮತ್ತು ಭಯೋತ್ಪಾದನೆ!ಯುಕ್ರೇನ್ ಕೌಂಟರ್
ರಷ್ಯಾದ ಎಲ್ಲಾ ಆರೋಪಗಳನ್ನು ಯುಕ್ರೇನ್‌ನ ದಕ್ಷಿಣ ರಕ್ಷಣಾ ಪಡೆಗಳು ಕಟುವಾಗಿ ತಳ್ಳಿಹಾಕಿದ್ದು, ಮಾಸ್ಕೋ ವಿರುದ್ಧವೇ ಪರಮಾಣು ಭಯೋತ್ಪಾದನೆಯ ಗಂಭೀರ ಪ್ರತ್ಯಾರೋಪ ಹೊರಿಸಿವೆ. ಯುಕ್ರೇನ್ ವಿದೇಶಾಂಗ ಸಚಿವಾಲಯವು ರಷ್ಯಾದ ವರದಿಗಳನ್ನು ಆಧಾರರಹಿತ ಅಪವಾದಗಳು ಎಂದು ಕರೆದಿದೆ.
ಯುಕ್ರೇನ್ ಮಿಲಿಟರಿ ಬಿಡುಗಡೆ ಮಾಡಿರುವ ಅಧಿಕೃತ ಜಂಟಿ ಹೇಳಿಕೆಯಲ್ಲಿ, ರಷ್ಯಾ ಒಕ್ಕೂಟವು ಜಪೋರಿಜ್ಜಿಯಾ ಪರಮಾಣು ಸ್ಥಾವರವನ್ನು ಜಾಗತಿಕವಾಗಿ ಪರಮಾಣು ಬ್ಲ್ಯಾಕ್‌ಮೇಲ್ ಮಾಡಲು ಮತ್ತು ಸುಳ್ಳು ಮಾಹಿತಿ ಪ್ರೊಪಗಾಂಡಾ ಹರಡಲು ಒಂದು ಆಯುಧವಾಗಿ ಬಳಸಿಕೊಳ್ಳುತ್ತಿದೆ. ಯುಕ್ರೇನ್ ಪಡೆಗಳು ದಾಳಿ ಮಾಡಿವೆ ಎಂಬ ವರದಿಗಳು ಕೇವಲ ಇಂಟರ್ನ್ಯಾಷನಲ್ ಮಟ್ಟದಲ್ಲಿ ನಮ್ಮನ್ನು ಬದಿಗೆ ತಳ್ಳಲು ಮತ್ತು ರಷ್ಯಾದ ಸ್ವಂತ ಕ್ರಿಮಿನಲ್ ಕೃತ್ಯಗಳನ್ನು ಮುಚ್ಚಿಹಾಕಲು ನಡೆಸುತ್ತಿರುವ ಹತಾಶ ಪ್ರಯತ್ನವಾಗಿದೆ ಎಂದು ಗುಡುಗಿದೆ. ಯುಕ್ರೇನ್ ಸೈನಿಕರು ಅಂತಾರಾಷ್ಟ್ರೀಯ ಮಾನವೀಯ ಕಾನೂನಿನ ಚೌಕಟ್ಟಿನೊಳಗೆ ಕೆಲಸ ಮಾಡುತ್ತಾರೆ ಮತ್ತು ಪರಮಾಣು ವಿನಾಶದ ಭೀಕರ ಪರಿಣಾಮಗಳ ಅರಿವು ನಮಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
5 ಕಿಲೋಮೀಟರ್ ವ್ಯಾಪ್ತಿಯಲ್ಲಿ ರಷ್ಯಾ ಸೇನಾ ನೆಲೆ; ಮಾನವಕುಲಕ್ಕೆ ಕುತ್ತು?
ಮಾರ್ಚ್ ೨೦೨೨ ರಿಂದಲೇ ರಷ್ಯಾ ಈ ನಾಗರಿಕ ಪರಮಾಣು ನೆಲೆಯನ್ನು ಕಾನೂನುಬಾಹಿರವಾಗಿ ಆಕ್ರಮಿಸಿಕೊಂಡು, ಅದನ್ನು ತನ್ನ ಮಿಲಿಟರಿ ಮೂಲಸೌಕರ್ಯವನ್ನಾಗಿ ಪರಿವರ್ತಿಸಿದೆ ಎಂದು ಯುಕ್ರೇನ್ ದೂರಿದೆ. ಸ್ಥಾವರದ ಸುತ್ತಲಿನ 5 ಕಿಲೋಮೀಟರ್ ನಿಷೇಧಿತ ವಲಯದಲ್ಲಿ ರಷ್ಯಾ ತನ್ನ ಎಲೆಕ್ಟ್ರಾನಿಕ್ ವಾರ್‌ಫೇರ್ ಸಿಸ್ಟಮ್‌ಗಳು, ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ಭಾರೀ ಮಿಲಿಟರಿ ಉಪಕರಣಗಳು ಮತ್ತು ನೂರಾರು ಸೈನಿಕರನ್ನು ನಿಯೋಜಿಸಿ ನಿಯಮಗಳನ್ನು ಉಲ್ಲಂಘಿಸಿದೆ.
ಈ ದಾಳಿಯ ಯಾವುದೇ ಗುಣಮಟ್ಟದ ಫೋಟೋ ಅಥವಾ ವಿಡಿಯೋ ಪುರಾವೆಗಳನ್ನು ರಷ್ಯಾ ಬಿಡುಗಡೆ ಮಾಡಿಲ್ಲ ಮತ್ತು ಅಂತಹ ಭಾರಿ ಹಾನಿ ಉಂಟುಮಾಡುವ ಡ್ರೋನ್‌ಗಳು ನಮ್ಮ ಬಳಿ ಇಲ್ಲ ಎಂದು ಉಕ್ರೇನ್ ಪ್ರತಿಪಾದಿಸಿದೆ. ಅಲ್ಲದೆ, ಕೇವಲ ೩೦ ಮೈಲುಗಳ ದೂರದಲ್ಲಿರುವ ಈ ಪರಮಾಣು ಸ್ಥಾವರಕ್ಕೆ ಏನಾದರೂ ಹಾನಿಯಾದರೆ ಇಡೀ ಯುರೋಪ್ ಖಂಡವೇ ವಿಕಿರಣ ಸೂಸುವಿಕೆಯಿಂದ ಬಂಜರು ಭೂಮಿಯಾಗುವ ಭೀತಿ ಎದುರಾಗಿದೆ.
ಯುರೋಪಿನ ಅತಿ ದೊಡ್ಡ ಅಣು ವಿದ್ಯುತ್ ಸ್ಥಾವರದ ಮೇಲಿನ ಈ ರಹಸ್ಯ ದಾಳಿಯು ಮುಂಬರುವ ದಿನಗಳಲ್ಲಿ ರಷ್ಯಾ-ಯುಕ್ರೇನ್ ಯುದ್ಧವನ್ನು ಪರಮಾಣು ಯುದ್ಧವನ್ನಾಗಿ ಪರಿವರ್ತಿಸಿ, ಜಾಗತಿಕವಾಗಿ ತೃತೀಯ ಮಹಾಯುದ್ಧದ ಮುನ್ಸೂಚನೆ ನೀಡುತ್ತಿರುವುದು ಸುಳ್ಳಲ್ಲ,(ಏಜೆನ್ಸೀಸ್).