ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ​ವೊಲೊಡಿಮಿರ್ ಝೆಲೆನ್ಸ್ಕಿ 
ವಿದೇಶ

ರಷ್ಯಾ-ಉಕ್ರೇನ್ ಕದನ ವಿರಾಮ ಸನ್ನಿಹಿತ; ಪುಟಿನ್ ಜೊತೆ ಮಾತುಕತೆ ಬಳಿಕ ಝೆಲೆನ್ಸ್ಕಿ ಜೊತೆ ಡೊನಾಲ್ಡ್ ಟ್ರಂಪ್ ಮಾತುಕತೆ | Donald Trump

ವಾಷಿಂಗ್ಟನ್: ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ  ಭಾನುವಾರ(ಡಿ. 28) ನಿರ್ಣಯಕ ಮಾತುಕತೆ ನಡೆಸುವ ಸಲುವಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಉಕ್ರೇನ್ ಅಧ್ಯಕ್ಷ ​ವೊಲೊಡಿಮಿರ್ ಝೆಲೆನ್ಸ್ಕಿಯನ್ನು ಅವರನ್ನು ತಮ್ಮ ಫ್ಲೋರಿಡಾ ಎಸ್ಟೇಟ್‌ನಲ್ಲಿ ಸ್ವಾಗತಿಸಿದ್ದು, ಇಬ್ಬರು ನಾಯಕರು ಚರ್ಚೆ ನಡೆಸಿದ್ದಾರೆ. ಇದಕ್ಕೂ ಮೊದಲು ಟ್ರಂಪ್ ರಷ್ಯಾ ಅಧ್ಯಕ್ಷ ಪುಟಿನ್ ಜೊತೆ ದೂರವಾಣಿ ಮೂಲಕ ಮಾತನಾಡಿದ್ದರು.
ಟ್ರಂಪ್ ಮತ್ತು ಝೆಲೆನ್ಸ್ಕಿ ಪಾಮ್ ಬೀಚ್‌ನಲ್ಲಿರುವ ಟ್ರಂಪ್ ಅವರ ಖಾಸಗಿ ಕ್ಲಬ್ ಮಾರ್-ಎ-ಲಾಗೊದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಅಲ್ಲಿ ಟ್ರಂಪ್ ರಜಾ ದಿನಗಳನ್ನು ಕಳೆಯುತ್ತಾರೆ ಎನ್ನಲಾಗಿದೆ.
ಝೆಲೆನ್ಸ್ಕಿ ಜೊತೆ ಮಾತುಕತೆ ಬಳಿಕ ಜಂಟಿ ಸುದ್ದಿಗೋಷ್ಠಿ ನಡೆಸಿದ ಟ್ರಂಪ್, ಉಕ್ರೇನ್ ಯುದ್ಧವನ್ನು ಕೊನೆಗೊಳಿಸುವ ರಾಜತಾಂತ್ರಿಕ ಪ್ರಯತ್ನಗಳು ಅಂತಿಮ ಹಂತಗಳಲ್ಲಿ ಇವೆ. ಕದನ ವಿರಾಮ ನಡೆಯಬಹುದು. ಆದರೆ ಅದಕ್ಕೆ ಯಾವುದೇ ಗಡುವನ್ನು ನೀಡಿಲ್ಲ. ಇದು ಮುಂದುವರೆಯುತ್ತದೆ ಎಂದು ಹೇಳಿದ್ದಾರೆ.
ಜೊತೆಗೆ ಝೆಲೆನ್ಸ್ಕಿಯೊಂದಿಗಿನ ಭೇಟಿಗೆ ಕೆಲವೇ ಗಂಟೆಗಳ ಮೊದಲು ರಷ್ಯಾದ ನಾಯಕ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಫಲದಾಯಕ ಮಾತುಕತೆ ನಡೆಸಿದ್ದೇನೆ. ಪುಟಿನ್ ಸಹ ಶಾಂತಿ ಮಾತುಕತೆ ಬಗ್ಗೆ ಗಂಭೀರವಾಗಿದ್ದಾರೆ. ಉಕ್ರೇನ್‌ನ ಭದ್ರತೆಯನ್ನು ಖಾತರಿಪಡಿಸಲು ಯುರೋಪಿಯನ್ ರಾಷ್ಟ್ರಗಳನ್ನು ಒಳಗೊಂಡ ಬಲವಾದ ಒಪ್ಪಂದ ಇರುತ್ತದೆ ಎಂದು ತಿಳಿಸಿದ್ದಾರೆ.
ಇನ್ನೂ ಕದನ ವಿರಾಮಕ್ಕೆ ಸಂಬಂಧಿಸಿದಂತೆ ರಷ್ಯಾ ಅಧ್ಯಕ್ಷ ಪುಟಿನ್, ತನ್ನ ಪಡೆಗಳು ವಶಪಡಿಸಿಕೊಂಡಿರುವ ನಾಲ್ಕು ಪ್ರಮುಖ ಪ್ರದೇಶಗಳಲ್ಲಿನ ಎಲ್ಲಾ ಪ್ರದೇಶಗಳನ್ನು ಹಾಗೂ 2014ರಲ್ಲಿ ಅಕ್ರಮವಾಗಿ ಸ್ವಾಧೀನಪಡಿಸಿಕೊಂಡ ಕ್ರಿಮಿಯನ್ ಪರ್ಯಾಯ ದ್ವೀಪವನ್ನು ರಷ್ಯಾದ ಪ್ರದೇಶವೆಂದು ಗುರುತಿಸಬೇಕು. ಪೂರ್ವ ಉಕ್ರೇನ್‌ನ ಕೆಲವು ಪ್ರದೇಶಗಳಿಂದ ಉಕ್ರೇನ್ ಹಿಂದೆ ಸರಿಯಬೇಕೆಂಬ ಒತ್ತಾಯಗಳನ್ನು ಉಕ್ರೇನ್ ತಿರಸ್ಕರಿಸಿದೆ (ಏಜೆನ್ಸೀಸ್).