ಘಟನೆಯ ಸ್ಥಳ 
ವಿದೇಶ

ಉಕ್ರೇನ್​ನ ಜನನಿಬಿಡ ಶಾಪಿಂಗ್ ಸೆಂಟರ್ ಮೇಲೆ ರಷ್ಯಾ ಭೀಕರ ಡ್ರೋನ್ ದಾಳಿ; 16 ಮಂದಿ ಸಾವು | Russia drone attack

ಕೈವ್: ರಷ್ಯಾ-ಉಕ್ರೇನ್ ಸಂಘರ್ಷ ಮುಂದುವೆರೆದಿದ್ದು, ಶುಕ್ರವಾರ(ಆ. 21) ಪೂರ್ವ ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರ ತವರು ನಗರವಾಗಿರುವ ಕ್ರಿವಿಯ್ ರಿಗ್​ನ ಜನನಿಬಿಡ ಶಾಪಿಂಗ್ ಸೆಂಟರ್ ಒಂದರ ಮೇಲೆ ರಷ್ಯಾ ಭೀಕರ ಡ್ರೋನ್ ದಾಳಿ(Russia drone attack) ನಡೆಸಿದ್ದು, ಘಟನೆಯಲ್ಲಿ 16 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಹಾಗೆಯೇ ದಕ್ಷಿಣದ ಮೈಕೊಲೈವ್ ಪ್ರದೇಶದಲ್ಲಿ ನಡೆದ ಮತ್ತೊಂದು ದಾಳಿಯಲ್ಲಿ ಮೂವರು ಅಪ್ರಾಪ್ತರು ಸೇರಿದಂತೆ ಇನ್ನೂ ನಾಲ್ವರು ಮೃತಪಟ್ಟಿದ್ದಾರೆ ಎಂದು ಗೃಹ ಸಚಿವ ಇವಾನ್ ವೈಗಿವ್ಸ್ಕಿ ಟೆಲಿಗ್ರಾಮ್‌ನಲ್ಲಿ ತಿಳಿಸಿದ್ದಾರೆ.
ದಾಳಿಯನ್ನು ಖಂಡಿಸಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು, ಸಾಮಾನ್ಯ ಶಾಪಿಂಗ್ ಸೆಂಟರ್ ಒಂದರ ಮೇಲೆ ರಷ್ಯನ್ನರು ನಡೆಸಿದ ಅತ್ಯಂತ ಕ್ರೂರ ಮತ್ತು ಹೇಯ ಎಂದು ಕರೆದಿದ್ದಾರೆ. ಮತ್ತು ತುರ್ತು ಸೇವಾ ಸಿಬ್ಬಂದಿಯನ್ನೇ ಗುರಿಯಾಗಿಸಿಕೊಂಡು ನಡೆಸಿದ ದಾಳಿಯಾಗಿದೆ ಎಂದಿದ್ದಾರೆ.
ಯುದ್ಧದ ಮುಂಚೂಣಿಯಿಂದ ಸುಮಾರು 60 ಕಿಲೋಮೀಟರ್ ದೂರದಲ್ಲಿರುವ ಝೆಲೆನ್ಸ್ಕಿ ಅವರ ತವರು ಮತ್ತು ಕೈಗಾರಿಕಾ ನಗರವಾದ ಕ್ರಿವಿಯ್ ರಿಗ್, ಯುದ್ಧದುದ್ದಕ್ಕೂ ರಷ್ಯಾದ ಪದೇ-ಪದೇ ದಾಳಿಗಳಿಗೆ ತುತ್ತಾಗಿದೆ.
ಇನ್ನೂ ಯುರೋಪಿಯನ್ ಒಕ್ಕೂಟದ ಉನ್ನತ ರಾಜತಾಂತ್ರಿಕರು ಈ ದಾಳಿಯನ್ನು ಯೋಜಿತ ಭಯೋತ್ಪಾದನೆ ಎಂದು ಖಂಡಿಸಿದ್ದಾರೆ. ಮತ್ತು ಯುದ್ಧದ ಆರಂಭದ ನಂತರ ರಷ್ಯಾ ವಿರುದ್ಧ ಅತ್ಯಂತ ವ್ಯಾಪಕವಾದ ನಿರ್ಬಂಧಗಳನ್ನು ವಿಧಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ (ಏಜೆನ್ಸೀಸ್).