ಟ್ರಂಪ್ ಹೇಳಿಕೆಗೆ ರಷ್ಯಾ ತಿರುಗೇಟು; ಭಾರತ ತೈಲ ಖರೀದಿ ನಿಲ್ಲಿಸಲ್ಲ: ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಸ್ಪಷ್ಟನೆ
ಮಾಸ್ಕೋ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರ ಇತ್ತೀಚಿನ ಹೇಳಿಕೆಯನ್ನು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್(Sergey Lavrov) ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. ಭಾರತವು ರಷ್ಯಾದಿಂದ ಕಚ್ಚಾ ತೈಲ ಖರೀದಿಯನ್ನು ನಿಲ್ಲಿಸಲಿದೆ ಎಂದು ಟ್ರಂಪ್ ಹೊರತುಪಡಿಸಿ ಬೇರೆ ಯಾರೂ ಹೇಳಿಲ್ಲ ಎಂದು ಲಾವ್ರೊವ್ ಬುಧವಾರ (ಫೆ.11) ರಷ್ಯಾದ ಸಂಸತ್ತಿನಲ್ಲಿ ಗುಡುಗಿದ್ದಾರೆ.
ಟ್ರಂಪ್ ಹೇಳಿಕೆ ಮತ್ತು ರಷ್ಯಾದ ಆಕ್ಷೇಪ
ಕಳೆದ ವಾರ ಭಾರತದೊಂದಿಗೆ ವ್ಯಾಪಾರ ಒಪ್ಪಂದ ಘೋಷಿಸುವ ಸಂದರ್ಭದಲ್ಲಿ ಡೊನಾಲ್ಡ್ ಟ್ರಂಪ್, ಭಾರತವು ಇನ್ನು ಮುಂದೆ ರಷ್ಯಾದಿಂದ ತೈಲ ಖರೀದಿಸುವುದಿಲ್ಲ ಎಂದು ಒಪ್ಪಿಕೊಂಡಿದೆ ಎಂದು ಪ್ರತಿಪಾದಿಸಿದ್ದರು. ಇದಕ್ಕಾಗಿಯೇ ಭಾರತದ ಮೇಲೆ ವಿಧಿಸಲಾಗಿದ್ದ ಹೆಚ್ಚುವರಿ ಶೇ. 25ರಷ್ಟು ಸುಂಕವನ್ನು ಹಿಂತೆಗೆದುಕೊಳ್ಳುವುದಾಗಿ ಅವರು ಘೋಷಿಸಿದ್ದರು.
ಆದರೆ ಈ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಲಾವ್ರೊವ್, ಪ್ರಧಾನಿ ನರೇಂದ್ರ ಮೋದಿ ಅವರಾಗಲಿ ಅಥವಾ ಭಾರತದ ಯಾವುದೇ ನಾಯಕರಾಗಲಿ ಇಂತಹ ಹೇಳಿಕೆಯನ್ನು ನೀಡಿಲ್ಲ. ರಷ್ಯಾ ಮತ್ತು ಭಾರತದ ನಡುವಿನ ದ್ವಿಪಕ್ಷೀಯ ಒಪ್ಪಂದಗಳು ಅಪಾಯದಲ್ಲಿವೆ ಎಂದು ನಂಬಲು ಯಾವುದೇ ಆಧಾರಗಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಭಾರತದ BRICS ಅಧ್ಯಕ್ಷತೆಗೆ ಬೆಂಬಲ
2026ನೇ ಸಾಲಿನಲ್ಲಿ ಭಾರತವು BRICS ಒಕ್ಕೂಟದ ಅಧ್ಯಕ್ಷತೆಯನ್ನು ವಹಿಸಿಕೊಂಡಿದೆ. ಈ ಬಗ್ಗೆ ಮಾತನಾಡಿದ ಲಾವ್ರೊವ್, ಭಾರತದ ಕಾರ್ಯಸೂಚಿಯು ಅತ್ಯಂತ ಪ್ರಸ್ತುತವಾಗಿದ್ದು, ಭಯೋತ್ಪಾದನೆ ನಿಗ್ರಹ ಮತ್ತು ಇಂಧನ ಭದ್ರತೆಗೆ ಭಾರತ ನೀಡುತ್ತಿರುವ ಆದ್ಯತೆಯನ್ನು ರಷ್ಯಾ ಸಂಪೂರ್ಣವಾಗಿ ಬೆಂಬಲಿಸುತ್ತದೆ ಎಂದು ಹೇಳಿದ್ದಾರೆ.
ಜಾಗತಿಕ ರಾಜಕೀಯದಲ್ಲಿ ಭಾರತ, ಚೀನಾ ಮತ್ತು ಬ್ರೆಜಿಲ್‌ನಂತಹ ದೇಶಗಳ ಪ್ರಭಾವ ಹೆಚ್ಚುತ್ತಿದೆ ಎಂದು ಲಾವ್ರೊವ್ ಶ್ಲಾಘಿಸಿದ್ದಾರೆ.
ಭಾರತದ ನಿಲುವು ಮತ್ತು ಬ್ರಿಕ್ಸ್ (BRICS) ಶೃಂಗಸಭೆ
2025ರ ಡಿಸೆಂಬರ್‌ನಲ್ಲಿ ಅಧ್ಯಕ್ಷ ಪುಟಿನ್ ಅವರು ನಡೆಸಿದ ಭಾರತ ಭೇಟಿಯು ಉಭಯ ದೇಶಗಳ ನಡುವಿನ ವಿಶೇಷ ಮತ್ತು ಸವಲತ್ತು ಹೊಂದಿರುವ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಿದೆ ಎಂದು ರಷ್ಯಾ ಹೇಳಿದೆ. ಈ ವರ್ಷ ಭಾರತದ ಅಧ್ಯಕ್ಷತೆಯಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಯು ಈ ನಿಟ್ಟಿನಲ್ಲಿ ನಿರ್ಣಾಯಕವಾಗಲಿದ್ದು, ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಪುಟಿನ್ ನಡುವೆ ಮತ್ತೊಂದು ಮಹತ್ವದ ಭೇಟಿ ನಡೆಯುವ ನಿರೀಕ್ಷೆಯಿದೆ.
ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ಸಹ ಸೋಮವಾರ ಮಾತನಾಡಿ, ರಾಷ್ಟ್ರೀಯ ಹಿತಾಸಕ್ತಿಯೇ ನಮ್ಮ ತೈಲ ಖರೀದಿಯ ಮಾರ್ಗದರ್ಶಿ ಸೂತ್ರ. ಸರಬರಾಜು ಸರಪಳಿಯಲ್ಲಿ ಸ್ಥಿರತೆ ಕಾಪಾಡಲು ಭಾರತವು ವಿವಿಧ ಮೂಲಗಳಿಂದ ತೈಲ ಖರೀದಿಯನ್ನು ಮುಂದುವರಿಸಲಿದೆ ಎಂದು ಹೇಳುವ ಮೂಲಕ ಭಾರತದ ಸ್ವತಂತ್ರ ವಿದೇಶಾಂಗ ನೀತಿಯನ್ನು ಎತ್ತಿ ಹಿಡಿದಿದ್ದಾರೆ.
ಮುಕ್ತ ಆಕಾಶವೇ ಮಿತಿ
ರಷ್ಯಾವು ಭಾರತದೊಂದಿಗೆ ಸಂಬಂಧವನ್ನು ವೃದ್ಧಿಸಲು ಯಾವುದೇ ಮಿತಿಯನ್ನು ಹಾಕಿಕೊಂಡಿಲ್ಲ. ಭಾರತವು ಎಲ್ಲಿಯವರೆಗೆ ಬಯಸುತ್ತದೆಯೋ ಅಲ್ಲಿಯವರೆಗೆ ನಾವು ಸಂಬಂಧವನ್ನು ಕೊಂಡೊಯ್ಯಲು ಸಿದ್ಧರಿದ್ದೇವೆ. ನಮಗೆ ಆಕಾಶವೇ ಮಿತಿ ಎಂದು ಲಾವ್ರೊವ್ ಭಾರತದೊಂದಿಗಿನ ಸ್ನೇಹದ ಆಳವನ್ನು ಬಣ್ಣಿಸಿದ್ದಾರೆ,(ಏಜೆನ್ಸೀಸ್).