ಮಧ್ಯಪ್ರಾಚ್ಯದ ಯುದ್ಧಕ್ಕೆ ರಷ್ಯಾ-ಚೀನಾ ರಹಸ್ಯ ಎಂಟ್ರಿ: ರಣರಂಗದಲ್ಲಿ ಅಮೆರಿಕ ಪಡೆಗಳ ಮೇಲೆ ಡೆಡ್ಲಿ ಪ್ಲ್ಯಾನ್ ಹಾಕಿದೆಯೇ ಇರಾನ್..!
ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಇರಾನ್ ವಿರುದ್ಧ ಅಮೆರಿಕ ಮತ್ತು ಇಸ್ರೇಲ್ ನಡೆಸುತ್ತಿರುವ ಯುದ್ಧವು ಇಂದು ಏಳನೇ ದಿನಕ್ಕೆ ಕಾಲಿಟ್ಟಿದೆ. ಇಡೀ ಜಗತ್ತನ್ನು ಆತಂಕಕ್ಕೆ ತಳ್ಳಿರುವ ಈ ಸಂಘರ್ಷದ ನಡುವೆ ಈಗ ಅಚ್ಚರಿಯ ಬೆಳವಣಿಗೆಯೊಂದು ನಡೆದಿದೆ. ಅಮೆರಿಕದ ಪ್ರಬಲ ವಿರೋಧಿಗಳಾದ ರಷ್ಯಾ ಮತ್ತು ಚೀನಾ(Russia-China Alliance) ಈಗ ಇರಾನ್ ಬೆನ್ನಿಗೆ ನಿಂತಿವೆ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ.
ಸಿಎನ್‌ಎನ್ ವರದಿಯ ಪ್ರಕಾರ, ಇರಾನ್‌ಗೆ ಆರ್ಥಿಕ ನೆರವು, ಕ್ಷಿಪಣಿ ಬಿಡಿಭಾಗಗಳು ಮತ್ತು ಅತಿ ಮುಖ್ಯವಾಗಿ ಅಮೆರಿಕದ ಸೇನಾ ನೆಲೆಗಳ ರಿಯಲ್ ಟೈಮ್ ಮಾಹಿತಿಯನ್ನು ಒದಗಿಸಲು ಈ ರಾಷ್ಟ್ರಗಳು ಮುಂದಾಗಿವೆ ಎನ್ನಲಾಗಿದೆ.
ಅಮೆರಿಕದ ಯುದ್ಧನೌಕೆಗಳ ಮೇಲೆ ರಷ್ಯಾ ಕಣ್ಣು..?
ಮೂಲಗಳ ಪ್ರಕಾರ, ರಷ್ಯಾದ ಗುಪ್ತಚರ ಸಂಸ್ಥೆಗಳು ಮಧ್ಯಪ್ರಾಚ್ಯದಲ್ಲಿ ನಿಯೋಜಿಸಲಾದ ಅಮೆರಿಕದ ವಿಮಾನವಾಹಕ ನೌಕೆಗಳು ಮತ್ತು ಯುದ್ಧ ವಿಮಾನಗಳ ನಿಖರವಾದ ಸ್ಥಳದ ಮಾಹಿತಿಯನ್ನು ಇರಾನ್‌ಗೆ ರವಾನಿಸುತ್ತಿವೆ. ಈ ಮಾಹಿತಿಯು ಅಮೆರಿಕದ ಪಡೆಗಳ ಮೇಲೆ ಇರಾನ್ ನಿಖರವಾಗಿ ದಾಳಿ ಮಾಡಲು ಸಹಾಯ ಮಾಡುತ್ತದೆ. ಯುಕ್ರೇನ್ ಯುದ್ಧದಲ್ಲಿ ರಷ್ಯಾಕ್ಕೆ ಇರಾನ್ ಡ್ರೋನ್ ಮತ್ತು ಶಸ್ತ್ರಾಸ್ತ್ರಗಳನ್ನು ನೀಡಿ ಸಹಾಯ ಮಾಡಿದ್ದಕ್ಕೆ ಪ್ರತಿಯಾಗಿ ರಷ್ಯಾ ಈಗ ಈ ಉಪಕಾರ ಮಾಡುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಚೀನಾದ ಚಾಣಾಕ್ಷ ನಡೆ: ಹಣ ಮತ್ತು ಬಿಡಿಭಾಗಗಳ ಆಮಿಷ
ಇನ್ನೊಂದೆಡೆ, ಚೀನಾ ಕೂಡ ಇರಾನ್‌ಗೆ ಆರ್ಥಿಕ ಸಹಾಯ ಮತ್ತು ಕ್ಷಿಪಣಿ ತಯಾರಿಕೆಗೆ ಬೇಕಾದ ಅತ್ಯಾಧುನಿಕ ಬಿಡಿಭಾಗಗಳನ್ನು ಪೂರೈಸಲು ಚಿಂತನೆ ನಡೆಸುತ್ತಿದೆ. ಆದರೆ, ಚೀನಾ ಈ ವಿಚಾರದಲ್ಲಿ ಸ್ವಲ್ಪ ಎಚ್ಚರಿಕೆಯ ಹೆಜ್ಜೆ ಇಡುತ್ತಿದೆ. ಕಾರಣ, ಈ ಯುದ್ಧ ದೀರ್ಘಕಾಲ ಮುಂದುವರಿದರೆ ಚೀನಾಕ್ಕೆ ಆಗುವ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಬಹುದು ಎಂಬ ಭೀತಿ ಬೀಜಿಂಗ್‌ಗೆ ಇದೆ.
ಅಮೆರಿಕದ ಭೀಕರ ಮಿಲಿಟರಿ ಶಕ್ತಿ: ಯುದ್ಧದ 7ನೇ ದಿನ
ಅಮೆರಿಕದ ಸೆಂಟ್ರಲ್ ಕಮಾಂಡ್ ಅಧಿಕಾರಿ ಬ್ರಾಡ್ ಕೂಪರ್ ನೀಡಿರುವ ಮಾಹಿತಿಯ ಪ್ರಕಾರ, ಇರಾನ್ ವಿರುದ್ಧದ ಕಾರ್ಯಾಚರಣೆಯಲ್ಲಿ ಅಮೆರಿಕವು ಬರೋಬ್ಬರಿ 50,000 ಸೈನಿಕರು, 200ಕ್ಕೂ ಹೆಚ್ಚು ಯುದ್ಧ ವಿಮಾನಗಳು ಮತ್ತು ಎರಡು ಬೃಹತ್ ವಿಮಾನವಾಹಕ ನೌಕೆಗಳನ್ನು ಬಳಸುತ್ತಿದೆ.
ಯುದ್ಧದ ಇಂದಿನ ಸ್ಥಿತಿಗತಿ:
ಇರಾನ್ ದಾಳಿಯಲ್ಲಿ ಇಳಿಕೆ: ಇರಾನ್‌ನ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ಶೇ. 90 ರಷ್ಟು ಮತ್ತು ಡ್ರೋನ್ ದಾಳಿ ಶೇ. 83 ರಷ್ಟು ಕಡಿಮೆಯಾಗಿದೆ ಎಂದು ಅಮೆರಿಕ ಹೇಳಿದೆ.
ಹೆಚ್ಚಿದ ಸಾವು-ನೋವು: ಲೆಬನಾನ್ ಮತ್ತು ಇರಾನ್ ಮಾಧ್ಯಮಗಳ ಪ್ರಕಾರ, ಕಳೆದ ಒಂದು ವಾರದಲ್ಲಿ 1,320ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.
ಬೈರುಟ್‌ನಲ್ಲಿ ಭೀತಿ: ದಕ್ಷಿಣ ಬೈರುಟ್ ಮತ್ತು ಟೆಹ್ರಾನ್ ಮೇಲೆ ಇಸ್ರೇಲ್ ಸರಣಿ ಬಾಂಬ್ ದಾಳಿ ನಡೆಸುತ್ತಿದ್ದು, ಜನರಲ್ಲಿ ತೀವ್ರ ಆತಂಕ ಸೃಷ್ಟಿಯಾಗಿದೆ.
ಬದಲಾಗುತ್ತಿರುವ ಜಾಗತಿಕ ಸಮೀಕರಣಗಳು
ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಅವರು ರಷ್ಯಾ ಮತ್ತು ಚೀನಾದ ಪಾತ್ರವನ್ನು ಸದ್ಯಕ್ಕೆ ಅಲ್ಲಗಳೆದಿದ್ದರೂ, ಶತ್ರು ರಾಷ್ಟ್ರಗಳ ನಡುವಿನ ಈ ಹೊಸ ಮೈತ್ರಿ ಅಮೆರಿಕಕ್ಕೆ ತಲೆನೋವಾಗಿ ಪರಿಣಮಿಸಿದೆ. ಯುಕ್ರೇನ್ ಯುದ್ಧದಲ್ಲಿ ಅಮೆರಿಕವು ಯುಕ್ರೇನ್‌ಗೆ ಶಸ್ತ್ರಾಸ್ತ್ರ ನೀಡಿದ್ದರೆ, ಈಗ ಇರಾನ್ ಯುದ್ಧದಲ್ಲಿ ರಷ್ಯಾ ಮತ್ತು ಚೀನಾ ಇರಾನ್‌ಗೆ ನೆರವಾಗುವ ಮೂಲಕ ಅಮೆರಿಕಕ್ಕೆ ಪರೋಕ್ಷ ಸವಾಲು ಹಾಕುತ್ತಿವೆ.
ಟ್ರಂಪ್ ಆಡಳಿತವು ಈ ಯುದ್ಧವು ಶೀಘ್ರದಲ್ಲೇ ಮತ್ತಷ್ಟು ಭೀಕರ ಸ್ವರೂಪ ಪಡೆಯಬಹುದು ಎಂದು ಎಚ್ಚರಿಸಿದೆ. ನ್ಯಾಟೋ ರಾಷ್ಟ್ರಗಳು ಕೂಡ ಇಷ್ಟವಿಲ್ಲದಿದ್ದರೂ ಈ ಸಂಘರ್ಷದ ಸುಳಿಗೆ ಸಿಲುಕುವ ಸಾಧ್ಯತೆ ದಟ್ಟವಾಗಿದೆ,(ಏಜೆನ್ಸೀಸ್).