ಟೆಹ್ರಾನ್: ಇರಾನ್ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ(Mojtaba Khamenei) ಅವರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಅಥವಾ ಅವರು ಬದುಕಿಲ್ಲವೇ? ಎಂದು ಇಸ್ರೇಲಿ ಮಾಧ್ಯಮಗಳು ವರದಿ ಮಾಡಿದ ಕೆಲವು ದಿನಗಳ ಬಳಿಕ, ಇರಾನ್ ಇಂದು(ಆ. 09) ತಮ್ಮ ನಾಯಕ ಆರೋಗ್ಯವಾಗಿದ್ದಾರೆ ಎಂದು ತೋರಿಸುವ ವಿಡಿಯೋವನ್ನು ಬಿಡುಗಡೆ ಮಾಡಿದೆ.
ಎಲ್ಲಾ ಊಹಾಪೋಹಗಳಿಗೆ ಅಂತ್ಯವಾಡಿರುವ ಸರ್ಕಾರದೊಂದಿಗೆ ಸಂಪರ್ಕ ಹೊಂದಿರುವ ಇರಾನ್‌ನ ಅರೆ-ಅಧಿಕೃತ ಮೆಹರ್ ಸುದ್ದಿ ಸಂಸ್ಥೆ, ಇದೇ ಮೊದಲ ಬಾರಿಗೆ ಮೊಜ್ತಬಾ ಖಮೇನಿ ಅವರು ಆರೋಗ್ಯವಾಗಿದ್ದಾರೆಂದು ತೋರಿಸುವ ದಿನಾಂಕವಿಲ್ಲದ ವೀಡಿಯೊವನ್ನು ಬಿಡುಗಡೆ ಮಾಡಿದೆ.
ಕಳೆದ ಎರಡು ದಿನಗಳಿಂದ ಇಸ್ರೇಲಿ ಮಾಧ್ಯಮಗಳು, ಖಮೇನಿ ಅವರ ಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ವರದಿ ಮಾಡಿದ್ದವು. ಇದು ಅವರ ಆರೋಗ್ಯ ಮತ್ತು ಇರುವ ಸ್ಥಳದ ಬಗ್ಗೆ ಊಹಾಪೋಹಗಳಿಗೆ ಕಾರಣವಾಗಿದ್ದವು.
ಫೆಬ್ರವರಿ 28ರಂದು ಅಮೆರಿಕ-ಇಸ್ರೇಲಿ ಜಂಟಿ ಮಿಲಿಟರಿ ದಾಳಿಯಲ್ಲಿ ಅಯತೊಲ್ಲಾ ಅಲಿ ಖಮೇನಿ ಕೊಲ್ಲಲ್ಪಟ್ಟ ಬಳಿಕ ಅವರ ಪುತ್ರನಾದ ಮೊಜ್ತಬಾ ಖಮೇನಿ ವಹಿಸಿಕೊಂಡಿದ್ದರು. ಅವರು ಅಧಿಕಾರ ವಹಿಸಿಕೊಂಡಾಗಿನಿಂದ ಇಲ್ಲಿಯವರೆಗೆ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಂಡಿಲ್ಲ ಮತ್ತು ಪತ್ರಿಕಾ ಹೇಳಿಕೆಗಳ ಮೂಲಕ ಮಾತ್ರ ಸಂವಹನ ನಡೆಸಿದ್ದಾರೆ.
ದಾಳಿಯಲ್ಲಿ ಅವರು ಸಹ ಗಂಭೀರವಾಗಿ ಗಾಯಗೊಂಡಿದ್ದು, ಮತ್ತು ಅಂದಿನಿಂದ ಹಿರಿಯ ಇರಾನಿನ ಅಧಿಕಾರಿಗಳೊಂದಿಗೆ ಸಂವಹನ ನಡೆಸಲು ಮಧ್ಯವರ್ತಿಗಳನ್ನು ಅವಲಂಬಿಸಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಕೂಡ ಖಮೇನಿಯೊಂದಿಗೆ ನೇರ ಸಂಪರ್ಕವು ಪ್ರಸ್ತುತ ತುಂಬಾ ಕಷ್ಟಕರವಾಗಿದೆ ಎಂದು ಹೇಳಿದ್ದರು (ಏಜೆನ್ಸೀಸ್).