ಎಚ್-1ಬಿ, ಎಚ್-4 ವೀಸಾ ಅರ್ಜಿ 
ವಿದೇಶ

ಎಚ್-1ಬಿ, ಎಚ್-4 ವೀಸಾ ಅರ್ಜಿಗೆ ನಿಯಮ ಕಠಿಣ

ನ್ಯೂಯಾರ್ಕ್: ಎಚ್-1ಬಿ ವೀಸಾ ಅರ್ಜಿದಾರರು ಮತ್ತು ಅವರ ಅವಲಂಬಿತರ ಎಚ್-4 ಪರಿಶೀಲನೆ ಕ್ರಮಗಳನ್ನು ಇನ್ನಷ್ಟು ವಿಸ್ತರಿಸಿರುವ ಅಮೆರಿಕ ಸರ್ಕಾರ, ಅವರ ಎಲ್ಲ ಸೋಷಿಯಲ್ ಮೀಡಿಯಾ ಪ್ರೊಫೈಲ್ಗಳ ಪ್ರೈವೆಸಿ ಸೆಟ್ಟಿಂಗ್ಗಳನ್ನು ‘ಪಬ್ಲಿಕ್’ ಎಂದು ಸೆಟ್ ಮಾಡುವಂತೆ ನಿರ್ದೇಶಿಸಿದೆ. 

ಬುಧವಾರ ಹೊರಡಿಸಿರುವ ಹೊಸ ಆದೇಶದ ಪ್ರಕಾರ, ಡಿಸೆಂಬರ್ 15ರಿಂದ ಎಲ್ಲ ಎಚ್-1ಬಿ ಅರ್ಜಿದಾರರು ಮತ್ತು ಅವರ ಅವಲಂಬಿತರ ಆನ್ಲೈನ್ ಖಾತೆಗಳ ಪರಿಶೀಲನೆಯನ್ನು ನಡೆಸಲಾಗುತ್ತದೆ. ರಾಷ್ಟ್ರೀಯ ಭದ್ರತಾ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳುತ್ತಿರುವುದಾಗಿ ವಿದೇಶಾಂಗ ಇಲಾಖೆ ತಿಳಿಸಿದೆ.

ಮಾಹಿತಿ ತಂತ್ರಜ್ಞಾನ (ಐಟಿ) ಉದ್ಯೋಗಿಗಳು ಮತ್ತು ವೈದ್ಯರ ಸಹಿತ ಭಾರತೀಯ ವೃತ್ತಿಪರರು ಎಚ್-ಬಿ ವೀಸಾ ಹೊಂದಿರುವವರಲ್ಲಿ ದೊಡ್ಡ ಪ್ರಮಾಣದಲ್ಲಿದ್ದಾರೆ. ಹೀಗಾಗಿ, ಸರ್ಕಾರದ ಹೊಸ ಕ್ರಮ ಅವರ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ವಿದ್ಯಾರ್ಥಿಗಳು ಮತ್ತು ವಿನಿಮಯ ಕಾರ್ಯಕ್ರಮಗಳನ್ವಯ ಭೇಟಿ ನೀಡುವವರನ್ನು ಈಗಾಗಲೇ ಇಂಥ ಪರಿಶೀಲನೆಗೆ ಒಳಪಡಿಸಲಾಗುತ್ತಿದೆ. ಅದನ್ನು ಈಗ ಎಚ್-1ಬಿ ಮತ್ತು ಎಚ್-4 ಸಹಿತ ಇತರ ಎಲ್ಲ ವೀಸಾ ಅರ್ಜಿದಾರರಿಗೆ ವಿಸ್ತರಿಸಲು ಡೊನಾಲ್ಡ್ ಟ್ರಂಪ್ ಆಡಳಿತ ನಿರ್ಧರಿಸಿದೆ. 

ಈ ಪರಿಶೀಲನೆಗೆ ಅನುಕೂಲವಾಗುವಂತೆ ಎಚ್ 1ಬಿ ಮತ್ತು ಅವರ ಅವಲಂಬಿತರು (ಎಚ್4), ಎಫ್, ಎಂ ಮತ್ತು ವಲಸೆಯೇತರ ವೀಸಾಗಳ ಎಲ್ಲ ಅರ್ಜಿದಾರರಿಗೆ ಅವರ ಸೋಷಿಯಲ್ ಮೀಡಿಯಾ ಪ್ರೊಫೈಲ್ಗಳ ಪ್ರೈವೆಸಿ ಸೆಟ್ಟಿಂಗ್ಗಳನ್ನು ‘ಪಬ್ಲಿಕ್’ ಎಂದು ಸೆಟ್ ಮಾಡಬೇಕು ಎಂದು ವಿದೇಶಾಂಗ ಇಲಾಖೆ ಹೇಳಿಕೆಯಲ್ಲಿ ಸೂಚಿಸಿದೆ.