ಎಐ ಚಿತ್ರ 
ವಿದೇಶ

ಮಕ್ಕಳಿಲ್ಲದೆ ಪಾರ್ಕ್‌ನಲ್ಲಿ ಕುಳಿತು ಅತ್ತ ಮಹಿಳೆಗೆ 2,500ರೂ. ದಂಡ; ಜರ್ಮನಿಯ ವಿಚಿತ್ರ ರೂಲ್ಸ್​ಗೆ ಕೆಂಡ..German

  • ಮಕ್ಕಳಿಲ್ಲದೆ ಒಬ್ಬಂಟಿಯಾಗಿ ಪಾರ್ಕ್​ನಲ್ಲಿ ಕುಳಿತು ಅಳುತ್ತಿದ್ದ ಮಹಿಳೆಗೆ ದಂಡ.

  • ಮಕ್ಕಳ ಆಟದ ಮೈದಾನದಲ್ಲಿ ಕುಳಿತು ಅಳುತ್ತಿದ್ದ ಮಹಿಳೆಗೆ ದಂಡ ವಿಧಿಸಿದ ಗೆಲ್ಸೆನ್‌ ಕಿರ್ಚೆನ್‌ನ ಪುರಸಭೆ ಅಧಿಕಾರಿಗಳು.

  • ಮಕ್ಕಳ ಅಪಹರಣ ತಡೆಯಲು ಈ ಕಾನೂನು ಜಾರಿಯಲ್ಲಿದೆ ಎಂದು ಪುರಸಭೆ ಅಧಿಕಾರಿಗಳು.

ಬರ್ಲಿನ್​​; ಭಾರತದಲ್ಲಿ ಪಾರ್ಕ್​ನಲ್ಲಿ ಮಕ್ಕಳ ಬಳಕೆಗೆ ಮಾತ್ರ ಎಂದು ಹಾಕಿರುವ ಉಯ್ಯಾಲೆಯಲ್ಲಿ ಆಡುವುದು, ಜಾರೋಬಂಡಿ ಬಳಕೆ ಮಾಡುವುದು ದೊಡ್ಡವರ ಅಭ್ಯಾಸ. ಇನ್ನು ಇಂತವರೇ ಮೈದಾನದಲ್ಲಿ ಇರಬೇಕು..ಇವರಿಗಷ್ಟೇ ಪಾರ್ಕ್​ಗೆ ಎಂಟ್ರಿ ಎನ್ನುವ ರೂಲ್ಸ್​ ಸಹ ಇಲ್ಲ. ಆದರೆ, ಜರ್ಮನಿಯಲ್ಲಿ ಒಂದು ವಿಚಿತ್ರ ನಿಯಮವಿದೆ! ಮಕ್ಕಳಿಲ್ಲದೆ ಮಕ್ಕಳ ಆಟದ ಮೈದಾನದ ಬೆಂಚ್ ಮೇಲೆ ಒಬ್ಬಂಟಿಯಾಗಿ ಕೂತು ಅತ್ತಿದ್ದಕ್ಕೆ ಮಹಿಳೆಯೊಬ್ಬರಿಗೆ ದಂಡ ವಿಧಿಸಲಾಗಿದೆ.

ಹೌದು, ಇಲ್ಲಿನ ಪ್ರಮುಖ ಸುದ್ದಿ ಸಂಸ್ಥೆ ವೆಸ್ಟ್‌ಡ್ಯೂಷರ್ ರಂಡ್‌ಫಂಕ್ (WDR) ಪ್ರಕಾರ, ಅಕ್ಟೋಬರ್ 25 ರಂದು ಗೆಲ್ಸೆನ್‌ಕಿರ್ಚೆನ್‌ನಲ್ಲಿ 31 ವರ್ಷದ ಮಹಿಳೆ ಹಾನಾ ಎಂಬುವವರು ಆಟದ ಮೈದಾನದ ಬೆಂಚ್ ಮೇಲೆ ಕುಳಿತು ಅಳುತ್ತಿದ್ದಕ್ಕಾಗಿ 25-ಯೂರೋ (ರೂ. 2,540) ದಂಡ ವಿಧಿಸಲಾಗಿದೆ.

ಗೆಲ್ಸೆನ್‌ ಕಿರ್ಚೆನ್‌ನ ಪುರಸಭೆಯ ನಿಯಮಗಳ ಪ್ರಕಾರ, 14 ವರ್ಷ ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಆಟವಾಡಲು ಮೈದಾನ ಕಾಯ್ದಿರಿಸಲಾಗಿದೆ. ಪೋಷಕರು ಮತ್ತು ವಯಸ್ಕರು ಮಕ್ಕಳೊಂದಿಗೆ ಹೋಗುವಾಗ ಮಾತ್ರ ಮೈದಾನ ಬಳಸಲು ಅನುಮತಿಸಲಾಗಿದೆ.

ಅ.25ರಂದು ಏನಾಗಿತ್ತು ಎಂದು ಹಾನಾ ಹೇಳಿದ್ದು ಹೀಗೆ, ಅಂದು ನಾಣು ಚಿಕ್ಕಮ್ಮನಿಗೆ ಕರೆ ಮಾಡಿದ್ದೆ. ಆ ಸಮಯದಲ್ಲಿ ನನ್ನ ಅಧ್ಯಯನ ಮತ್ತು ಆರ್ಥಿಕ ವಿಷಯಗಳ ಕಾರಣದಿಂದಾಗಿ ನಾನು ಅಗಾಧ ಒತ್ತಡದಲ್ಲಿದ್ದೆ. ಮಗುವಿಲ್ಲದೆ ಆಟದ ಮೈದಾನದಲ್ಲಿ ಕುಳಿತುಕೊಳ್ಳುವುದು ಪುರಸಭೆಯ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಅವರು ಅರಿತುಕೊಳ್ಳಲಿಲ್ಲ.

ಅಳ್ತಿದ್ರೆ ದಂಡ ಹಾಕ್ತಾರಾ?

ನನಗೆ ದಂಡ ವಿಧಿಸುವ ಈ ಕ್ರಮದ ವಿರುದ್ಧ ಬಹಳ ಸಿಟ್ಟಿದೆ. ಯಾರಾದರು ಅಳುತ್ತಿದ್ದಾರೆ ಎಂದರೆ ನಾವು ಮರುಗುತ್ತೇವೆ. ಅವರ ಬಳಿ ತೆರಳಿ ಏನಾಯಿತು ಎಂತೆಲ್ಲ ವಿಚಾರಿಸುತ್ತೇವೆ. ಸಹಾಯ ಬೇಕೇ? ಕೇಳುತ್ತೇವೆ. ಆನಂತರ ನಂತರ ಮಕ್ಕಳಿಲ್ಲದೆ ನೀವು ಅಲ್ಲಿ ಕುಳಿತುಕೊಳ್ಳಲು ಅನುಮತಿ ಇಲ್ಲ. ಇನ್ನೊಮ್ಮೆ ಹೀಗೆ ನಡೆದುಕೊಳ್ಳಬೇಡಿ ಎಂದು ಅವರು ನನಗೆ ವಿವರಿಸಬಹುದಿತ್ತು. ಆದರೆ ಈ ಅಧಿಕಾರಿಗಳು ಮಾಡಿದ್ದೇನು ಎಂದು ಹಾನಾ ಕಿಡಿಕಾರಿದರು.

ಸ್ಥಳೀಯರು ಏನಂದ್ರು?

'ಒಂದು ಕ್ಷಣ ವಿಶ್ರಾಂತಿ ಪಡೆಯಲು ಬಯಸುವ ಮಹಿಳೆಯನ್ನು ಶಿಕ್ಷಿಸುವುದು ಅಸಂಬದ್ಧವೆಂದು ನಾನು ಭಾವಿಸುತ್ತೇನೆ. ನಾನು ಇಲ್ಲಿ 64 ವರ್ಷಗಳಿಂದ ವಾಸಿಸುತ್ತಿದ್ದೇನೆ ಮತ್ತು ಯಾವಾಗಲೂ ಬೆಂಚ್ ಮೇಲೆ ಕುಳಿತಿದ್ದೇನೆ. ಯಾರೂ ಪರಿಶೀಲಿಸಲು ಬಂದಿಲ್ಲ' ಎಂದು ಮಹಿಳೆಯೊಬ್ಬರು ಹೇಳಿದರು.

ಸಿಟಿ ಕೌನ್ಸಿಲ್ ಅಧಿಕಾರಿಗಳು ಮಾತನಾಡಿ, 'ಆಟದ ಮೈದಾನ ಮಕ್ಕಳಿಗಾಗಿ ಮಾತ್ರ. ಹೀಗಾಗಿ ಪೋಷಕರೊಂದಿಗೆ ಮಕ್ಕಳಿಲ್ಲದಿದ್ದರೆ ಅವರು ಮೈದಾನಕ್ಕೆ ಪ್ರವೇಶಿಸುವಂತಿಲ್ಲ. ಆಟದ ಮೈದಾನಗಳಲ್ಲಿ ಮಕ್ಕಳ ಅಪಹರಣದಂತಹ ಅಪಾಯವನ್ನು ತಡೆಯಲು ನಾವು ಈ ಕ್ರಮ ಕೈಗೊಂಡಿದ್ದೇವೆ' ಎಂದು ಸದಸ್ಯರಾದ ಸೈಮನ್ ನೋವಾಕ್ ಹೇಳಿದರು.

ಇದೇ ವೇಳೆ, ಆಟದ ಮೈದಾನಗಳನ್ನು ಅನಧಿಕೃತವಾಗಿ ಬಳಸುವವರಿಗೆ (ಬೆಂಚ್ ಮೇಲೆ ಒಬ್ಬರೇ ಕುಳಿತುಕೊಳ್ಳುವುದು ಸೇರಿದಂತೆ) ವಿಧಿಸುವ ದಂಡದ ಮೊತ್ತವನ್ನು ಹೆಚ್ಚಿಸುವ ಪ್ರಸ್ತಾಪದ ಬಗ್ಗೆ ಮಂಡಳಿಯು ಚರ್ಚಿಸುತ್ತಿದೆ. ಪ್ರಸ್ತಾವಿತ ದಂಡದ ಮೊತ್ತವು ಪ್ರಸ್ತುತ ಇರುವ 55 ಯುರೋಗಳಿಂದ (ರೂ. 5,613) 60 ಯುರೋಗಳಿಗೆ (ರೂ. 6,121) ಏರಿಕೆಯಾಗಲಿದೆ,(ಏಜೆನ್ಸೀಸ್).