ಕೈಯಾರೆ ರಚಿಸಿದ ದುಬೈ ಯುವರಾಜ ಶೇಖ್ ಹಮ್ದಾನ್ ಅವರ ಪೆನ್ಸಿಲ್ ಸ್ಕೆಚ್ ಅನ್ನು ಉಡುಗೊರೆಯಾಗಿ ನೀಡಲು 5 ವರ್ಷಗಳಿಂದ ಕಾಯುತ್ತಿದ್ದ ಕಲಾವಿದ ಮೊಹಮ್ಮದ್ ಮುಫೀಜ್ 
ವಿದೇಶ

5 ವರ್ಷಗಳ ಕಾಯುವಿಕೆಗೆ ಸಿಕ್ಕಿತು 'ರಾಜ' ಮನ್ನಣೆ: ಸೋಷಿಯಲ್ ಮೀಡಿಯಾ ಪೋಸ್ಟ್ ನೋಡಿ ದುಬೈ ಪ್ರಿನ್ಸ್​ ಮಾಡಿದ್ದೇನು? Sheikh Hamdan

ದುಬೈ: ತಾಳ್ಮೆಯಿದ್ದರೆ ಎಂತಹ ದೊಡ್ಡ ಕನಸಾದರೂ ನನಸಾಗುತ್ತದೆ ಎಂಬುದಕ್ಕೆ ಇತ್ತೀಚೆಗೆ ದುಬೈನ ಕಲಾವಿದರೊಬ್ಬರ ಕಥೆ ನೈಜ ಸಾಕ್ಷಿಯಾಗಿದೆ. ದುಬೈನ ಕಿರಿಯ ರಾಜಕುಮಾರ ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ಅವರಿಗೆ ತಾವು ಬಿಡಿಸಿದ ಪೆನ್ಸಿಲ್ ಸ್ಕೆಚ್ ಒಂದನ್ನು ಉಡುಗೊರೆಯಾಗಿ ನೀಡಲು ಬರೋಬ್ಬರಿ ಐದು ವರ್ಷಗಳಿಂದ ಕಾಯುತ್ತಿದ್ದ ವ್ಯಕ್ತಿಗೆ ಈಗ ಯುವರಾಜರಿಂದಲೇ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ.

ಮೊಹಮ್ಮದ್ ಮುಫೀಜ್ ಎಂಬ ಕಲಾವಿದ ಐದು ವರ್ಷಗಳ ಹಿಂದೆ ಶೇಖ್ ಹಮ್ದಾನ್ ಅವರ ಸುಂದರವಾದ ಪೆನ್ಸಿಲ್ ಭಾವಚಿತ್ರವನ್ನು ತಮ್ಮ ಕೈಯಾರೆ ರಚಿಸಿದ್ದರು. ಅಂದಿನಿಂದ ಹೇಗಾದರೂ ಮಾಡಿ ಇದನ್ನು ಯುವರಾಜರ ಕೈಗೆ ತಲುಪಿಸಬೇಕು ಎಂಬುದು ಅವರ ದೊಡ್ಡ ಕನಸಾಗಿತ್ತು. ಇದಕ್ಕಾಗಿ ಇಮೇಲ್‌ಗಳನ್ನು ಕಳುಹಿಸುವುದು ಸೇರಿದಂತೆ ಹಲವು ದಾರಿಗಳನ್ನು ಹುಡುಕಿದ್ದರು. ಆದರೆ, ರಾಜಕುಮಾರನನ್ನು ಖುದ್ದಾಗಿ ಭೇಟಿಯಾಗಿ ಉಡುಗೊರೆ ನೀಡುವ ಅವಕಾಶ ಮಾತ್ರ ಸಿಕ್ಕಿರಲಿಲ್ಲ.

'ದುಬೈ ರನ್' ಕಾರ್ಯಕ್ರಮದಲ್ಲೂ ನಿರಾಸೆ!

ಸಾಮಾನ್ಯವಾಗಿ ಶೇಖ್ ಹಮ್ದಾನ್ 'ದುಬೈ ರನ್' ಎಂಬ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಹೀಗಾಗಿ, ನವೆಂಬರ್ 22 ರಂದು ನಡೆದ ಈ ಕಾರ್ಯಕ್ರಮದಲ್ಲಿ ಯುವರಾಜರನ್ನು ಭೇಟಿಯಾಗಬಹುದು ಎಂಬ ಭರವಸೆಯೊಂದಿಗೆ ಮುಫೀಜ್ ಆ ಸ್ಕೆಚ್ ಹಿಡಿದುಕೊಂಡು ಹೋಗಿದ್ದರು. ಆದರೆ, ಅಂದು ಶೇಖ್ ಹಮ್ದಾನ್ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗದ ಕಾರಣ ಮುಫೀಜ್ ಅವರಿಗೆ ನಿರಾಸೆಯಾಗಿತ್ತು.

ನೆಟ್ಟಿಗರ ನೆರವು ಕೋರಿದ್ದ ಕಲಾವಿದ

ಯುವರಾಜರನ್ನು ಭೇಟಿಯಾಗಲು ಸಾಧ್ಯವಾಗದಿದ್ದಾಗ ಮುಫೀಜ್ ಸೋಷಿಯಲ್ ಮೀಡಿಯಾ ಮೊರೆ ಹೋದರು. ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಆ ಪೆನ್ಸಿಲ್ ಸ್ಕೆಚ್ ಹಿಡಿದು ವಿಡಿಯೋ ಒಂದನ್ನು ಹಂಚಿಕೊಂಡ ಅವರು, ಐದು ವರ್ಷಗಳಿಂದ ಈ ಚಿತ್ರವನ್ನು ಶೇಖ್ ಹಮ್ದಾನ್ ಅವರಿಗೆ ನೀಡಲು ಪ್ರಯತ್ನಿಸುತ್ತಿದ್ದೇನೆ. ಇಂದಿನ 'ದುಬೈ ರನ್' ಕಾರ್ಯಕ್ರಮದಲ್ಲಿ ಅವರನ್ನು ಭೇಟಿಯಾಗಬಹುದು ಅಂದುಕೊಂಡಿದ್ದೆ, ಆದರೆ ಅದು ಸಾಧ್ಯವಾಗಲಿಲ್ಲ.

ದಯವಿಟ್ಟು ನೀವೆಲ್ಲರೂ ಕಾಮೆಂಟ್ ಬಾಕ್ಸ್‌ನಲ್ಲಿ ಯುವರಾಜರ ಹೆಸರನ್ನು ಟ್ಯಾಗ್ ಮಾಡಿ. ಈ ವಿಡಿಯೋ ಹೇಗಾದರೂ ಅವರಿಗೆ ತಲುಪಲಿ, ಒಂದು ದಿನ ನಾನು ಅವರನ್ನು ಭೇಟಿಯಾಗಿ ಈ ಉಡುಗೊರೆ ನೀಡುತ್ತೇನೆ" ಎಂದು ಮನವಿ ಮಾಡಿಕೊಂಡಿದ್ದರು.

ರಾಜಕುಮಾರನ ಪ್ರತಿಕ್ರಿಯೆಗೆ ಫಿದಾ ಆದ ನೆಟ್ಟಿಗರು

ಮುಫೀಜ್ ಅವರ ಈ ವಿಡಿಯೋಗೆ ನೆಟ್ಟಿಗರು ಭರ್ಜರಿ ಬೆಂಬಲ ನೀಡಿದರು. ಸಾವಿರಾರು ಮಂದಿ ಶೇಖ್ ಹಮ್ದಾನ್ ಅವರನ್ನು ಕಾಮೆಂಟ್‌ಗಳಲ್ಲಿ ಟ್ಯಾಗ್ ಮಾಡಿದರು. ಅಭಿಮಾನಿಗಳ ಈ ಪ್ರಯತ್ನ ಕೊನೆಗೂ ಫಲ ನೀಡಿ, ಸ್ವತಃ ಶೇಖ್ ಹಮ್ದಾನ್ ಅವರೇ ಈ ವಿಡಿಯೋವನ್ನು ನೋಡಿದ್ದಾರೆ. ಅಷ್ಟೇ ಅಲ್ಲ, ಕಾಮೆಂಟ್ ವಿಭಾಗದಲ್ಲಿ 'ಕೈ ಮುಗಿದಿರುವ' ಎಮೋಜಿಯನ್ನು ಪೋಸ್ಟ್ ಮಾಡುವ ಮೂಲಕ ಕಲಾವಿದನ ಶ್ರಮಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

ಯುವರಾಜರಿಂದ ಬಂದ ಈ ಒಂದು ಸಣ್ಣ ಪ್ರತಿಕ್ರಿಯೆ ಮುಫೀಜ್ ಅವರ ಐದು ವರ್ಷಗಳ ಕಾಯುವಿಕೆಗೆ ದೊಡ್ಡ ಮನ್ನಣೆ ತಂದುಕೊಟ್ಟಿದೆ. ಸದ್ಯದಲ್ಲೇ ತಾವು ಯುವರಾಜರನ್ನು ಖುದ್ದಾಗಿ ಭೇಟಿಯಾಗಿ, ಈ ಪ್ರೀತಿಯ ಉಡುಗೊರೆಯನ್ನು ಅವರ ಕೈಗೆ ನೀಡಬಹುದು ಎಂಬ ಹೊಸ ಭರವಸೆ ಮತ್ತು ಖುಷಿಯಲ್ಲಿ ಮುಫೀಜ್ ತೇಲುತ್ತಿದ್ದಾರೆ, (ಏಜೆನ್ಸೀಸ್​).