Ronaldo 
ವಿದೇಶ

ಯುದ್ಧದ ಕಿಚ್ಚಿಗೆ ಬೆಚ್ಚಿದ ರೊನಾಲ್ಡೊ: 750 ಕೋಟಿ ರೂ. ಮೌಲ್ಯದ ವಿಮಾನದಲ್ಲಿ ಸೌದಿಯಿಂದ ಯುರೋಪ್‌ಗೆ ಪ್ರಯಾಣ! | Ronaldo

ರಿಯಾದ್/ನವದೆಹಲಿ: ಫೆಬ್ರವರಿ 28 ರಿಂದ ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ನಲ್ಲಿ ಸರಣಿ ಸ್ಫೋಟಗಳು ಸಂಭವಿಸಿದ್ದು, ಫುಟ್‌ಬಾಲ್ ಸಾಮ್ರಾಟ ಕ್ರಿಸ್ಟಿಯಾನೋ ರೊನಾಲ್ಡೊ(Ronaldo) ಅವರ 750 ಕೋಟಿ ರೂ. ಮೌಲ್ಯದ ಖಾಸಗಿ ವಿಮಾನ ಸೌದಿಯಿಂದ ಯುರೋಪ್‌ಗೆ ಹಾರಿದೆ ಎಂದು ವರದಿಯಾಗಿದೆ. 
ಮಧ್ಯಪ್ರಾಚ್ಯದಲ್ಲಿ ಇಸ್ರೇಲ್-ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಈಗ ಕೇವಲ ಗಡಿಗೆ ಸೀಮಿತವಾಗಿಲ್ಲ, ಅದು ಕ್ರೀಡಾ ಲೋಕದ ದಿಗ್ಗಜರನ್ನೂ ಬೆಚ್ಚಿಬೀಳಿಸಿದೆ. 
ವರದಿಗಳ ಪ್ರಕಾರ, ರಿಯಾದ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯನ್ನು ಗುರಿಯಾಗಿಸಿಕೊಂಡು ಇರಾನ್ ಡ್ರೋನ್ ದಾಳಿ ನಡೆಸಿದೆ. ಸೌದಿ ವಾಯುಪಡೆ ಹಲವು ದಾಳಿಗಳನ್ನು ತಡೆದಿದೆಯಾದರೂ, ನಗರದಲ್ಲಿ ಕೇಳಿಬಂದ ಭೀಕರ ಸ್ಫೋಟದ ಶಬ್ದಗಳು ಅಲ್ಲಿನ ಜನರಲ್ಲಿ ಭೀತಿ ಹುಟ್ಟಿಸಿವೆ. ಅಲ್ ನಾಸರ್ ಕ್ಲಬ್ ಪರ ಆಡುತ್ತಿರುವ 41 ವರ್ಷದ ರೊನಾಲ್ಡೊ ಮತ್ತು ಅವರ ಕುಟುಂಬ ಈ ಬೆಳವಣಿಗೆಯಿಂದ ತೀವ್ರ ಆತಂಕಕ್ಕೊಳಗಾಗಿದ್ದಾರೆ. ರೊನಾಲ್ಡೊ ಅವರ ಗಲ್ಫ್‌ಸ್ಟ್ರೀಮ್ G650 ವಿಮಾನವು ರಿಯಾದ್‌ನಿಂದ ಹಾರಾಟ ನಡೆಸಿರುವುದು ದೃಢಪಟ್ಟಿದೆಯಾದರೂ, ಸ್ವತಃ ರೊನಾಲ್ಡೊ ವಿಮಾನದಲ್ಲಿದ್ದರೇ ಎಂಬುದು ಇನ್ನು ನಿಗೂಢವಾಗಿದೆ.

ಸೌದಿ ಪ್ರೊ ಲೀಗ್‌ಗೆ ಬಿದ್ದ ದೊಡ್ಡ ಹೊಡೆತ

ಕೇವಲ ರೊನಾಲ್ಡೊ ಮಾತ್ರವಲ್ಲದೆ ಕರೀಮ್ ಬೆಂಜೆಮಾ, ಸಾಧಿಯೋ ಮಾನೆ ಮತ್ತು ಜೋ ಫೆಲಿಕ್ಸ್ ಅಂತಹ ವಿಶ್ವದ ಟಾಪ್ ಫುಟ್‌ಬಾಲ್ ಆಟಗಾರರು ಈಗ ಸೌದಿಯಲ್ಲಿದ್ದಾರೆ. ರೊನಾಲ್ಡೊ ಅವರಂತಹ ಜಾಗತಿಕ ರಾಯಭಾರಿಯೇ ದೇಶ ಬಿಟ್ಟು ಹೊರಡುವ ಸೂಚನೆ ನೀಡಿರುವುದು ಸೌದಿ ಪ್ರೊ ಲೀಗ್‌ನ ಭವಿಷ್ಯವನ್ನು ಅತಂತ್ರಗೊಳಿಸಿದೆ. ಈಗಾಗಲೇ ಅಲ್ ನಾಸರ್, ಅಲ್ ಹಿಲಾಲ್ ಮತ್ತು ಅಲ್ ಇತ್ತಿಹಾದ್ ತಂಡಗಳ ಪಂದ್ಯಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.

750 ಕೋಟಿಯ ಹಾರುವ ಅರಮನೆ

ರೊನಾಲ್ಡೊ ಬಳಸುವ ವಿಮಾನವು ವಿಶ್ವದ ಅತ್ಯಂತ ಸುಸಜ್ಜಿತ ಖಾಸಗಿ ಜೆಟ್‌ಗಳಲ್ಲಿ ಒಂದಾಗಿದೆ. 19 ಪ್ರಯಾಣಿಕರನ್ನು ಹೊತ್ತೊಯ್ಯಬಲ್ಲ ಈ ವಿಮಾನವು ಸತತ 7,000 ಮೈಲಿಗಳವರೆಗೆ ಹಾರುವ ಸಾಮರ್ಥ್ಯ ಹೊಂದಿದೆ. ಒಂದು ವೇಳೆ ರೊನಾಲ್ಡೊ ಯುರೋಪ್‌ಗೆ ಮರಳಿದ್ದೇ ಆದಲ್ಲಿ, ಇದು ಸೌದಿ ಅರೇಬಿಯಾದ ಮಹತ್ವಾಕಾಂಕ್ಷೆಯ ಕ್ರೀಡಾ ಯೋಜನೆಗೆ ಬಿತ್ತ ದೊಡ್ಡ ಪೆಟ್ಟು ಎನ್ನಲಾಗುತ್ತಿದೆ.
ಪ್ರಸ್ತುತ ಯುದ್ಧದ ವಾತಾವರಣವು ಕ್ರೀಡಾಪಟುಗಳ ಸುರಕ್ಷತೆಯ ಮೇಲೆ ಕರಿನೆರಳು ಬೀರಿದೆ. ಸೌದಿ ಅಧಿಕಾರಿಗಳು ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಹೇಳುತ್ತಿದ್ದರೂ, ಸ್ಟಾರ್ ಆಟಗಾರರು ಮಾತ್ರ ಅಲ್ಲಿಂದ ಹೊರಬರಲು ಸನ್ನದ್ಧರಾಗುತ್ತಿದ್ದಾರೆ,(ಏಜೆನ್ಸೀಸ್).