ಮುಂಬೈನಲ್ಲಿ 60 ರೂ.ಗೆ ಪಾನಿಪುರಿ ತಿಂದು ದುಬಾರಿ ಎಂದಿದ್ದ ರಷ್ಯಾ ಮಾಡೆಲ್ ದುಬೈನಲ್ಲಿ ಅದರ ಬೆಲೆ ಕೇಳಿ ದಂಗು! Russian model
- ಮುಂಬೈನಲ್ಲಿ ಅಗ್ಗದ ಬೆಲೆಗೆ ಸಿಗುವ ಪಾನಿಪುರಿ ದುಬಾರಿಯೆಂದು ದೂರಿದ್ದ ರಷ್ಯನ್ ಮಾಡೆಲ್ ಇರಿನಾ ರುಡಾರೋವಾ
- ಮುಂಬೈನ ಲೋಖಂಡವಾಲಾ ಮಾರುಕಟ್ಟೆಯಲ್ಲಿ ಕೇವಲ ಅರವತ್ತು ರೂಪಾಯಿಗೆ ಸಿಗುವ ಪಾನಿಪುರಿಯ ಬೆಲೆ ನೋಡಿ ಅಚ್ಚರಿ
- ದುಬೈ ವಿಮಾನ ನಿಲ್ದಾಣದಲ್ಲಿ ಒಂದು ತಟ್ಟೆ ಪಾನಿಪುರಿಯ ಬೆಲೆ ಬರೋಬ್ಬರಿ ಒಂದು ಸಾವಿರದ ತೊಂಬತ್ತಾರು ರೂಪಾಯಿ
- ಮುಂಬೈ ಬೆಲೆಯನ್ನು ದುಬೈ ಬೆಲೆಗೆ ಹೋಲಿಸಿ ತಾನು ಮಾಡಿದ್ದ ದೂರು ತಪ್ಪು ಎಂದು ನಗುತ್ತಲೇ ಒಪ್ಪಿಕೊಂಡ ಮಾಡೆಲ್
ನವದೆಹಲಿ: ಮುಂಬೈನಲ್ಲಿ ಕೇವಲ 60 ರೂಪಾಯಿಗೆ ಒಂದು ಪ್ಲೇಟ್ ಪಾನಿಪುರಿ ತಿಂದು, ಅದನ್ನೇ ದುಬಾರಿಯೆಂದು ದೂರಿದ್ದ ರಷ್ಯಾ ಮೂಲದ ಮಾಡೆಲ್ ( Russian model ) ಒಬ್ಬಳು, ದುಬೈನಲ್ಲಿ ಅದೇ ಪಾನಿಪುರಿಯ ಬೆಲೆ ಕೇಳಿ ದಂಗಾಗಿ ಹೋಗಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ರಷ್ಯನ್ ಮಾಡೆಲ್ ಹಾಗೂ ನಟಿ ಇರಿನಾ ರುಡಾರೋವಾ (Irina Rudarova) ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ್ದರು. ಈ ವೇಳೆ ಮುಂಬೈನ ಲೋಖಂಡವಾಲಾ ಮಾರುಕಟ್ಟೆಯಲ್ಲಿ ಒಂದು ಪ್ಲೇಟ್ ಪಾನಿಪುರಿ ಖರೀದಿ ಮಾಡಿ ಸವಿದಿದ್ದರು. ಆದರೆ, ಒಂದು ಪ್ಲೇಟ್ ಪಾನಿಪುರಿಗೆ 60 ರೂಪಾಯಿ ಎಂದು ಹೇಳಿದಾಗ, ಇದು ತುಂಬಾನೇ ಜಾಸ್ತಿ ಎಂದು ವಿಡಿಯೋ ಮಾಡಿ ದೂರು ನೀಡಿದ್ದರು. ಆದರೆ, ಅದೇ ಪಾನಿಪುರಿ ವಿದೇಶದಲ್ಲಿ ಎಷ್ಟು ಬೆಲೆಗೆ ಮಾರಾಟವಾಗುತ್ತದೆ ಎಂಬುದನ್ನು ನೋಡಿದ ಬಳಿಕ ಅವರ ಯೋಚನೆಯೇ ಸಂಪೂರ್ಣ ಬದಲಾಗಿದೆ.
ಇರಿನಾ ಅವರು ಇತ್ತೀಚೆಗಷ್ಟೇ ದುಬೈನ ಟರ್ಮಿನಲ್ 1 ರಲ್ಲಿ ಒಂದು ಪ್ಲೇಟ್ ಪಾನಿಪುರಿಯನ್ನು ಸವಿದಿದ್ದರು. ಇದೇ ವೇಳೆ ಅದರ ಬೆಲೆ ಬರೋಬ್ಬರಿ 1,096 ರೂಪಾಯಿ ಎಂಬುದನ್ನು ತಿಳಿದು ಒಂದು ಕ್ಷಣ ಬೆರಗಾದರು. ಅಲ್ಲದೆ, ತಾನು ಮುಂಬೈನಲ್ಲಿ 60 ರೂಪಾಯಿಗೆ ಪಾನಿಪುರಿ ತಿಂದಾಗ ದೂರು ನೀಡಿದ್ದು ತಪ್ಪು ಎಂಬುದನ್ನು ಇರಿನಾ ಒಪ್ಪಿಕೊಂಡಿದ್ದಾರೆ.
ಮುಂಬೈನಲ್ಲಿ 60 ರೂಪಾಯಿಗೆ ಪಾನಿಪುರಿ ನೀಡಿದಾಗ ನಾನು ತಪ್ಪು ತಿಳಿದುಕೊಂಡಿದ್ದೆ ಮತ್ತು ಬಹಳಷ್ಟು ದೂರು ನೀಡಿದ್ದೆ, ಆದರೆ ಈಗ ನಾನು ವಾಪಸ್ ಮುಂಬೈಗೆ ಹೋಗುತ್ತಿದ್ದೇನೆ ಎಂದು ಅವರು ತಮ್ಮ ಹೊಸ ವಿಡಿಯೋದಲ್ಲಿ ದುಬೈ ಪಾನಿಪುರಿಗೆ ತಮಾಷೆಯಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಅಂದಹಾಗೆ, ಜುಲೈ 20 ರಂದು ಮೊದಲ ವಿಡಿಯೋ ಹಂಚಿಕೊಂಡಿದ್ದ ಇರಿನಾ, 60 ರೂಪಾಯಿ ಬೆಲೆ ಕೇಳಿ ಹಲವು ಬಾರಿ ಅಚ್ಚರಿಯಿಂದ ಮರುಪ್ರಶ್ನೆ ಮಾಡಿದ್ದರು. ಆದರೆ ಈಗ ದುಬೈನ ಬೆಲೆಯನ್ನು ನೋಡಿದ ಬಳಿಕ ಮುಂಬೈನ ಪಾನಿಪುರಿ ಅತಿ ಹೆಚ್ಚು ರುಚಿಕರ ಹಾಗೂ ಅಗ್ಗವೆಂದು ಅರಿತುಕೊಂಡಿದ್ದು, ಈ ಮೂಲಕ ಪಾನಿಪುರಿ ಬೆಲೆಯ ಬಗ್ಗೆ ನಡೆದಿದ್ದ ಚರ್ಚೆಗಳಿಗೆ ತೆರೆ ಬಿದ್ದಿದೆ, (ಏಜೆನ್ಸೀಸ್).