ಖಮೇನಿ ಕೊಲೆಗೆ ಪ್ರತಿಕಾರ! ಇರಾನ್​ ಕೊಟ್ಟ ಬಿಗ್ ಆಫರ್ ಕೇಳಿ ಬೆಚ್ಚಿಬಿದ್ದ ಜಗತ್ತು! ಟ್ರಂಪ್-ನೆತನ್ಯಾಹು ಹತ್ಯೆಗೆ ರೆಡಿಯಾಯ್ತಾ ಸ್ಕೆಚ್..? 
ವಿದೇಶ

ಖಮೇನಿ ಕೊಲೆಗೆ ಪ್ರತಿಕಾರ! ಇರಾನ್​ ಕೊಟ್ಟ ಬಿಗ್ ಆಫರ್ ಕೇಳಿ ಬೆಚ್ಚಿಬಿದ್ದ ಜಗತ್ತು! ಟ್ರಂಪ್-ನೆತನ್ಯಾಹು ಹತ್ಯೆಗೆ ರೆಡಿಯಾಯ್ತಾ ಸ್ಕೆಚ್..? Netanyahu- Trump Hit Price

ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಹಬ್ಬಿರುವ ಭೀಕರ ಯುದ್ಧದ ಕಿಡಿ ಈಗ ಜಾಗತಿಕ ಇತಿಹಾಸದಲ್ಲೇ ಕಾಣದ ಮಹಾ ಸಂಘರ್ಷಕ್ಕೆ ನಾಂದಿ ಹಾಡಿದೆ. ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಮೇನಿ ಅವರ ಹತ್ಯೆಯ ಬೆನ್ನಲ್ಲೇ ಕೆರಳಿ ಕೆಂಡವಾಗಿರುವ ಇರಾನ್ ಸಂಸತ್ತು, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು(Netanyahu- Trump Hit Price) ಸೇರಿದಂತೆ ಅಗ್ರ ನಾಯಕರನ್ನು ಹತ್ಯೆ ಮಾಡಿದವರಿಗೆ ಬರೋಬ್ಬರಿ 50 ಮಿಲಿಯನ್ ಯುರೋ (ಸುಮಾರು 450 ಕೋಟಿ ರೂಪಾಯಿಗೂ ಅಧಿಕ) ಇನಾಮು ನೀಡುವ ಭೀಕರ ಕಾನೂನು ಮಸೂದೆಯನ್ನು ಸಿದ್ಧಪಡಿಸುತ್ತಿದೆ ಎಂದು ದಿ ಟೆಲಿಗ್ರಾಫ್' ವರದಿ ಮಾಡಿದೆ.

ಖಮೇನಿ ಹತ್ಯೆಗೆ ಇರಾನ್ ಭೀಕರ ಪ್ರತಿಜ್ಞೆ; ಟ್ರಂಪ್-ನೆತನ್ಯಾಹು ಟಾರ್ಗೆಟ್!

ಕಳೆದ ಫೆಬ್ರವರಿ 28 ರಂದು ನಡೆದ ಭೀಕರ ಮಿಲಿಟರಿ ವೈಮಾನಿಕ ದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಮೇನಿ ಮೃತಪಟ್ಟಿದ್ದರು. ಈ ದಾಳಿಯ ಹಿಂದೆ ಅಮೆರಿಕ ಮತ್ತು ಇಸ್ರೇಲ್‌ನ ಜಂಟಿ ರಣತಂತ್ರವಿದೆ ಎಂದು ಇರಾನ್ ದೃಢವಾಗಿ ನಂಬಿದೆ. ಇದಕ್ಕೆ ಪ್ರತಿಯಾಗಿ ಇರಾನ್ ಸಂಸತ್ತು ಈಗ ಇಸ್ಲಾಮಿಕ್ ಗಣರಾಜ್ಯದ ಮಿಲಿಟರಿ ಮತ್ತು ಭದ್ರತಾ ಪಡೆಗಳಿಂದ ಪರಸ್ಪರ ಪ್ರತಿಕ್ರಿಯಾತ್ಮಕ ಕ್ರಮ ಎಂಬ ಅಪಾಯಕಾರಿ ವಿಧೇಯಕವನ್ನು ಸಿದ್ಧಪಡಿಸುತ್ತಿದೆ.
ಇರಾನ್‌ನ ರಾಷ್ಟ್ರೀಯ ಭದ್ರತಾ ಆಯೋಗದ ಅಧ್ಯಕ್ಷ ಇಬ್ರಾಹಿಂ ಅಜೀಜಿ ಈ ಕುರಿತು ಮಾಹಿತಿ ನೀಡಿದ್ದು, ಡೊನಾಲ್ಡ್ ಟ್ರಂಪ್ ಅವರನ್ನು ಸರಣಿ ಹತ್ಯೆ ಮಾಡುವ ಯಾರಿಗೇ ಆದರೂ ಅಧಿಕೃತವಾಗಿ 50 ಮಿಲಿಯನ್ ಯುರೋ ಬಹುಮಾನ ನೀಡಲು ಶಾಸನ ರೂಪಿಸಲಾಗುತ್ತಿದೆ ಎಂದಿದ್ದಾರೆ. ಅಷ್ಟೇ ಅಲ್ಲದೆ, ಅಲಿ ಖಮೇನಿ ಅವರ ಸಾವಿಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಯುಎಸ್ ಸೆಂಟ್ರಲ್ ಕಮಾಂಡ್‌ನ ಅಡ್ಮಿರಲ್ ಬ್ರಾಡ್ ಕೂಪರ್ ಅವರೇ ನೇರ ಹೊಣೆ ಎಂದು ಇರಾನ್ ಬಹಿರಂಗವಾಗಿ ಆರೋಪಿಸಿದೆ.

ಸೈಬರ್ ಲೋಕದಲ್ಲೂ ಮಹಾ ಯುದ್ಧ; ಹ್ಯಾಕರ್ಸ್ ಗುಂಪಿನಿಂದಲೂ ಬಿಗ್ ಆಫರ್!

ಇರಾನ್ ಸಂಸತ್ತಿನ ರಾಷ್ಟ್ರೀಯ ಭದ್ರತಾ ಸಮಿತಿಯ ಉಪಾಧ್ಯಕ್ಷ ಮಹಮೂದ್ ನಬಾವಿಯನ್ ಈ ಪ್ರಸ್ತಾವಿತ ಕಾನೂನನ್ನು ಇರಾನ್‌ನ ರಣತಂತ್ರದಲ್ಲಿನ ಮಹಾ ಬದಲಾವಣೆ ಎಂದು ಬಣ್ಣಿಸಿದ್ದಾರೆ. ವಿದೇಶಿ ನಾಯಕರು ಇರಾನ್ ವಿರುದ್ಧ ಉಗುಳುತ್ತಿರುವ ಆಕ್ರೋಶದ ಮಾತುಗಳು ಶತ್ರು ಅಧಿಕಾರಿಗಳ ಅಸಹ್ಯಕರ ಬಾಯಿಗಳಿಂದ ಬರುತ್ತಿವೆ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮುಂದಿನ ದಿನಗಳಲ್ಲಿ ಇರಾನ್ ಅಥವಾ ಅದರ ನಾಯಕತ್ವದ ಮೇಲೆ ಯಾವುದೇ ದಾಳಿ ನಡೆದರೆ, ಅದಕ್ಕೆ ಕೇವಲ ಅಮೆರಿಕ ಮತ್ತು ಇಸ್ರೇಲ್ ಮಾತ್ರವಲ್ಲದೆ, ಅವರಿಗೆ ಸಾಥ್ ನೀಡುವ ಪ್ರಾದೇಶಿಕ ಅರಬ್ ಮಿತ್ರ ರಾಷ್ಟ್ರಗಳೂ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಇನ್ನೊಂದೆಡೆ, ಈ ಯುದ್ಧವು ಕೇವಲ ಭೂಮಿಯ ಮೇಲಷ್ಟೇ ಅಲ್ಲದೆ ಸೈಬರ್ ಲೋಕಕ್ಕೂ ವ್ಯಾಪಿಸಿದೆ. ಇರಾನ್ ವೈರ್ ವರದಿಯ ಪ್ರಕಾರ, ಹಂದಾಲಾ ಹೆಸರಿನ ಕುಖ್ಯಾತ ಹ್ಯಾಕಿಂಗ್ ಗುಂಪೊಂದು ಡೊನಾಲ್ಡ್ ಟ್ರಂಪ್ ಮತ್ತು ನೆತನ್ಯಾಹು ಅವರ ನಿರ್ಮೂಲನೆಗಾಗಿ ಪ್ರತ್ಯೇಕವಾಗಿ 50 ಮಿಲಿಯನ್ ಯುಎಸ್ ಡಾಲರ್ ಇನಾಮು ಘೋಷಿಸಿದೆ. 2020 ರಲ್ಲಿ ಇರಾನ್ ಕಮಾಂಡರ್ ಖಾಸಿಂ ಸುಲೈಮಾನಿ ಹತ್ಯೆಯಾದಾಗಿನಿಂದಲೇ ಟ್ರಂಪ್ ವಿರುದ್ಧ ಇರಾನ್ ಜನರಲ್ಲಿ ಭೀಕರ ಆಕ್ರೋಶವಿದ್ದು, ಈಗ ಅದು ಜ್ವಾಲಾಮುಖಿಯಾಗಿ ಸ್ಫೋಟಿಸಿದೆ.

ಇರಾನ್ ಅನ್ನು ಭೂಪಟದಿಂದಲೇ ಅಳಿಸಿ ಹಾಕುತ್ತೇವೆ- ಟ್ರಂಪ್

ಇರಾನ್‌ನ ಈ ಅತಿರೇಕದ ಬೆದರಿಕೆಗಳಿಗೆ ವೈಟ್ ಹೌಸ್ ಮತ್ತು ಡೊನಾಲ್ಡ್ ಟ್ರಂಪ್ ಅತ್ಯಂತ ಕ್ರೂರ ಹಾಗೂ ಭೀಕರ ಶೈಲಿಯಲ್ಲೇ ತಿರುಗೇಟು ನೀಡಿದ್ದಾರೆ. ತಮ್ಮ ಮೇಲೆ ಅಥವಾ ಅಮೆರಿಕದ ಮೇಲೆ ಇರಾನ್ ಯಾವುದೇ ಸಾಹಸಕ್ಕೆ ಕೈಹಾಕಿದರೆ, ಇಡೀ ಇರಾನ್ ದೇಶವನ್ನು ಭೂಮಿಯ ಮುಖಪುಟದಿಂದಲೇ ಸಂಪೂರ್ಣವಾಗಿ ಅಳಿಸಿ ಹಾಕಲಾಗುವುದು ಎಂದು ಟ್ರಂಪ್ ಅತ್ಯಂತ ಕಠಿಣ ಎಚ್ಚರಿಕೆ ನೀಡಿದ್ದಾರೆ. ಇತ್ತ ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರು ತಮ್ಮ ಕ್ರಿಮಿನಲ್ ವಿಚಾರಣೆಯ ಕೋರ್ಟ್ ಸಭೆಗಳನ್ನು ರದ್ದುಗೊಳಿಸಿ, ಇಡೀ ದಿನ ಉನ್ನತ ಮಟ್ಟದ ಯುದ್ಧ ಭದ್ರತಾ ಸಭೆಗಳಲ್ಲಿ ಭಾಗವಹಿಸುತ್ತಿರುವುದು ಇಸ್ರೇಲ್ ದೊಡ್ಡ ಮಟ್ಟದ ಮಿಲಿಟರಿ ಕಾರ್ಯಾಚರಣೆಗೆ ಸಜ್ಜಾಗುತ್ತಿರುವುದರ ದಿಕ್ಸೂಚಿಯಾಗಿದೆ.
ಆದಾಗ್ಯೂ, ಹಿನ್ನೆಲೆಯಲ್ಲಿ ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ವಾಷಿಂಗ್ಟನ್ ಮತ್ತು ಟೆಹ್ರಾನ್ ನಡುವೆ ರಹಸ್ಯ ರಾಜತಾಂತ್ರಿಕ ಮಾತುಕತೆಗಳು ಮುಂದುವರಿದಿವೆ. ಇರಾನ್‌ನ ಪರಮಾಣು ಸ್ಥಾವರಗಳ ಮೇಲೆ ನಿಯಂತ್ರಣ ಹೇರಬೇಕು ಮತ್ತು ಯುರೇನಿಯಂ ದಾಸ್ತಾನು ಒಪ್ಪಿಸಬೇಕು ಎಂದು ಅಮೆರಿಕ ಷರತ್ತು ವಿಧಿಸುತ್ತಿದ್ದರೆ, ಇತ್ತ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ದೇಶದ ಕೈಗಾರಿಕೆಗಳಿಗೆ ಆಗಿರುವ ಹಾನಿಯನ್ನು ಉಲ್ಲೇಖಿಸಿ, ಆರ್ಥಿಕ ನಿರ್ಬಂಧಗಳ ಸಡಿಲಿಕೆಗೆ ಪಟ್ಟು ಹಿಡಿದಿದ್ದಾರೆ,(ಏಜೆನ್ಸೀಸ್).