ಹೊಟ್ಟೆ ನೋವಿನಿಂದ ಮನುಷ್ಯ ಒದ್ದಾಡುವಂತೆ ರೋಬಾಟ್ ಒದ್ದಾಟ: ನಿಯಂತ್ರಿಸಲು ನಿರ್ವಾಹಕರಿಂದ ಪರದಾಟ! Robot  
ವಿದೇಶ

ಹೊಟ್ಟೆ ನೋವಿನಿಂದ ಮನುಷ್ಯ ಒದ್ದಾಡುವಂತೆ ರೋಬಾಟ್ ಒದ್ದಾಟ: ನಿಯಂತ್ರಿಸಲು ನಿರ್ವಾಹಕರಿಂದ ಪರದಾಟ! Robot

ಪ್ರಮುಖ ಮುಖ್ಯಾಂಶಗಳು

  • ಚೀನಾದಲ್ಲಿ ನಡೆದ ವಿಶ್ವ ರೋಬೋಟ್ ಸಮ್ಮೇಳನದಲ್ಲಿ ನಿಯಂತ್ರಣ ತಪ್ಪಿದ ಹ್ಯೂಮನಾಯ್ಡ್ ರೋಬಾಟ್
  • ರಿಮೋಟ್ ಕಂಟ್ರೋಲ್ ದೋಷದಿಂದಾಗಿ ನೆಲಕ್ಕೆ ಉರುಳಿ ಒದ್ದಾಡಿದ ಯಂತ್ರದ ದೃಶ್ಯ ವೈರಲ್
  • ಮಗುವಿನಂತೆ ಕೈಕಾಲು ಬಡಿದುಕೊಂಡ ರೋಬಾಟ್ ಅನ್ನು ನಿಯಂತ್ರಿಸಲು ಪರದಾಡಿದ ಸಿಬ್ಬಂದಿ
  • ಯಂತ್ರವನ್ನು ತಕ್ಷಣ ಆಫ್ ಮಾಡಲು ಬಟನ್ ಇಲ್ಲದಿರುವುದಕ್ಕೆ ನೆಟಿಗರಿಂದ ವ್ಯಂಗ್ಯ
ಬೀಜಿಂಗ್​: ಚೀನಾದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಜಾಗತಿಕ ತಂತ್ರಜ್ಞಾನ ಸಮ್ಮೇಳನವೊಂದರಲ್ಲಿ ಹ್ಯೂಮನಾಯ್ಡ್ ರೋಬಾಟ್ ( Robot ) ಒಂದರ ರಿಮೋಟ್ ಕಂಟ್ರೋಲ್‌ನಲ್ಲಿ ಉಂಟಾದ ತಾಂತ್ರಿಕ ದೋಷದಿಂದಾಗಿ ಅದು ನಿಯಂತ್ರಣ ಕಳೆದುಕೊಂಡು ವೇದಿಕೆಯ ಮೇಲೆಯೇ ಮನುಷ್ಯ ವಿಪರೀತ ಹೊಟ್ಟೆ ನೋವಿನಿಂದ ಒದ್ದಾಡಿದಂತೆ ರೋಬಾಟ್​ ಒದ್ದಾಡಿದ ದೃಶ್ಯವು ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಚೀನಾದಲ್ಲಿ ಜರುಗಿದ 2026ರ ವಿಶ್ವ ರೋಬಾಟ್ ಸಮ್ಮೇಳನದಲ್ಲಿ ಹ್ಯೂಮನಾಯ್ಡ್ ರೋಬಾಟ್‌ಗಳ ನಾವೀನ್ಯತೆ ಹಾಗೂ ಸಾಮರ್ಥ್ಯವನ್ನು ಪ್ರದರ್ಶಿಸುವ ಪ್ರಮುಖ ಪ್ರದರ್ಶನ ನಡೆಯುತ್ತಿತ್ತು. ಈ ವೇಳೆ ರೋಬಾಟ್‌ನ ರಿಮೋಟ್ ಕಂಟ್ರೋಲ್‌ನಲ್ಲಿ ಉಂಟಾದ ಅನಿರೀಕ್ಷಿತ ದೋಷದಿಂದಾಗಿ ಯಂತ್ರವು ಸಂಪೂರ್ಣವಾಗಿ ತನ್ನ ನಿಯಂತ್ರಣವನ್ನು ಕಳೆದುಕೊಂಡು ಅಚಾನಕ್ಕಾಗಿ ನೆಲಕ್ಕೆ ಉರುಳಿ ಬಿದ್ದಿತು.
ನಿಯಂತ್ರಣ ಕಳೆದುಕೊಂಡ ರೋಬಾಟ್ ದಿಢೀರ್ ಕೆಳಗೆ ಬಿದ್ದು, ತನ್ನ ಕೈಕಾಲುಗಳನ್ನು ವೇಗವಾಗಿ ಆಡಿಸಲು ಆರಂಭಿಸಿತು. ನೆಲದ ಮೇಲೆ ಬಿದ್ದು ಹಠಮಾರಿ ಮಗುವಿನಂತೆ ಅಥವಾ ಹೊಟ್ಟೆ ನೋವು ಬಂದ ಮನುಷ್ಯನಂತೆ ಆ ರೋಬಾಟ್ ಒದ್ದಾಡುತ್ತಿದ್ದ ದೃಶ್ಯ ಅಲ್ಲಿ ನೆರದಿದ್ದವರಲ್ಲಿ ಬೆರಗು ಮೂಡಿಸಿತು.
ರೋಬಾಟ್‌ನ ಈ ಅನಿರೀಕ್ಷಿತ ಅಸಹಜ ನಡವಳಿಕೆಯನ್ನು ಗಮನಿಸಿದ ತಕ್ಷಣವೇ ಅದರ ನಿರ್ವಾಹಕರು ಮತ್ತು ಇಂಜಿನಿಯರ್‌ಗಳು ವೇದಿಕೆಯ ಮೇಲಕ್ಕೆ ಓಡಿಬಂದು ಪರಿಸ್ಥಿತಿಯನ್ನು ನಿಯಂತ್ರಿಸಲು ಹರಸಾಹಸ ಪಟ್ಟರು. ಹಲವರು ಅದನ್ನು ಹಿಡಿದು ನಿಲ್ಲಿಸಲು ಮತ್ತು ಅದರ ಚಲನೆಯನ್ನು ನಿಲ್ಲಿಸಲು ಪ್ರಯತ್ನಿಸಿದರೂ, ಯಂತ್ರವನ್ನು ತಕ್ಷಣವೇ ಆಫ್ ಮಾಡಲು ಸಾಧ್ಯವಾಗದೆ ಸಿಬ್ಬಂದಿ ಪರದಾಡಬೇಕಾಯಿತು.

ರೋಬಾಟ್ ಕೈಕಾಲುಗಳನ್ನು ನಿರಂತರವಾಗಿ ಬಡಿಯುತ್ತಿದ್ದ ಈ ದೃಶ್ಯವನ್ನು ನೋಡಿ ನೆಟ್ಟಿಗರು ತರಹೇವಾರಿ ಕಾಮೆಂಟ್‌ಗಳನ್ನು ಹಂಚಿಕೊಂಡಿದ್ದಾರೆ. "ರೋಬಾಟ್ ಅನ್ನು ಹಿಡಿದು ತಡೆಯುವುದೇ ಇದಕ್ಕೆ ಪರಿಹಾರವೇ? ಅದನ್ನು ಆಫ್ ಮಾಡಲು ಒಂದು ಬಟನ್ ಕೂಡ ಇಲ್ವಾ?" ಎಂದು ಕೆಲವರು ವ್ಯಂಗ್ಯವಾಡಿದರೆ, ಇನ್ನು ಕೆಲವರು ಇದು ಕೋಪಗೊಂಡ ಪುಟ್ಟ ಮಗುವಿನಂತೆ ಕಾಣುತ್ತಿದೆ ಎಂದು ಹಾಸ್ಯ ಮಾಡಿದ್ದಾರೆ.

ರಿಮೋಟ್ ಕೆಲಸ ಮಾಡದಿದ್ದರೂ ರೋಬಾಟ್ ಅನ್ನು ತಕ್ಷಣವೇ ಸುರಕ್ಷಿತವಾಗಿ ನಿಲ್ಲಿಸಲು ಒಂದು ತುರ್ತು ಆಫ್ ಸ್ವಿಚ್ ವ್ಯವಸ್ಥೆ ಇರಬೇಕು ಎಂದು ತಜ್ಞರು ಮತ್ತು ವೀಕ್ಷಕರು ಆತಂಕ ವ್ಯಕ್ತಪಡಿಸಿದ್ದಾರೆ. ಹೊಸ ಆವಿಷ್ಕಾರಗಳ ಪ್ರದರ್ಶನಕ್ಕಾಗಿ ಜಮಾಯಿಸಿದ್ದ ಜಾಗತಿಕ ವೇದಿಕೆಯಲ್ಲಿ, ಈ ರೋಬಾಟ್‌ನ ಅವಘಡವೇ ಇಡೀ ಸಮ್ಮೇಳನದ ಮುಖ್ಯ ಆಕರ್ಷಣೆಯಾಗಿ ಚರ್ಚೆಗೆ ಗ್ರಾಸವಾಗಿದೆ, (ಏಜೆನ್ಸೀಸ್​).