ನೈಜ ಕದನ, ನಾಟಕದ ವಿರಾಮ, ಬಿಕ್ಕಳಿಸುವ ಶಾಂತಿ 
ವಿದೇಶ

ನೈಜ ಕದನ, ನಾಟಕದ ವಿರಾಮ, ಬಿಕ್ಕಳಿಸುವ ಶಾಂತಿ

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕಥೆಗಾರರು)
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರದು ಒಂದೇ ಪಟ್ಟು, ‘ಇರಾನ್ ತನ್ನ ಅಣ್ವಸ್ತ್ರ ಯೋಜನೆಯನ್ನು ನಿಲುಗಡೆಗೆ ತರಬೇಕು’ ಎಂದು. ಇರಾನ್​ನದೂ ಒಂದೇ ಹಠ, ‘ನಾವು ಅಣ್ವಸ್ತ್ರ ಯೋಜನೆಯನ್ನು ಮುಂದುವರಿಸುತ್ತಲೇ ಹೋಗುತ್ತೇವೆ, ಅದು ನಮ್ಮ ಹಕ್ಕು’ ಎಂದು. ಕೆರಳಿದ ಟ್ರಂಪ್ ಮೊದಲಿಗೆ ಅಮೆರಿಕವನ್ನು 2015ರ ಜುಲೈನ ಬಹುಪಕ್ಷೀಯ ಒಪ್ಪಂದದಿಂದ ಹೊರಗೊಯ್ದರು, ಇರಾನ್ ಮೇಲೆ ಆರ್ಥಿಕ ದಿಗ್ಬಂಧನಗಳನ್ನು ಹೇರಿದರು. ‘ಆದಾಯವನ್ನೇ ಕುಗ್ಗಿಸಿದರೆ ಅಣ್ವಸ್ತ್ರ ಯೋಜನೆ ನಿಲ್ಲುತ್ತದೆ’ ಎಂದವರ ಲೆಕ್ಕಾಚಾರ. ಅವರ ಜತೆಗೆ ನಿಂತ ಇಸ್ರೇಲ್, ಇರಾನಿ ಅಣುವಿಜ್ಞಾನಿಗಳನ್ನು ಹತ್ಯೆಗೈಯುವುದರ ಜತೆಗೆ ಇರಾನಿ ಅಣು ಸಂಯಂತ್ರಗಳಲ್ಲಿ ಅವಘಡಗಳನ್ನು ಸೃಷ್ಟಿಸಿ ತೆಹರಾನ್​ನ ಅಣ್ವಸ್ತ್ರ ಕನಸು ಹಗಲುಗನಸಾಗಿಯೇ ಉಳಿದುಹೋಗುವಂತೆ ಮಾಡಲು ಶತಾಯಗತಾಯ ಪ್ರಯತ್ನ ನಡೆಸುತ್ತಲೇ ಬಂತು. ಅತ್ತ ಇರಾನ್ ಯಾವುದಕ್ಕೂ ಜಗ್ಗದೇ ತನ್ನ ಕನಸನ್ನು ನೇರವಾಗಿ ಬೆಂಬತ್ತಿತು. ‘ಸಣ್ಣಪುಟ್ಟ ಏಟುಗಳಿಗೆ ಬಗ್ಗದ ಮೊಂಡ ಈ ಇರಾನ್’ ಎಂದು ಇಸ್ರೇಲ್ ಮತ್ತು ಅಮೆರಿಕ ಎರಡೂ ಒಟ್ಟುಗೂಡಿ 2025ರ ಜೂನ್​ನಲ್ಲಿ ಇರಾನ್ ಮೇಲೆ ಸತತ 12 ದಿನಗಳವರೆಗೆ ಘಾತಕ ದಾಳಿ ನಡೆಸಿದವು.
ಅಮೆರಿಕವಂತೂ ಏಳು ಟನ್ ಉಕ್ಕಿನ ಕವಚದೊಳಗೆ ಆರೂವರೆ ಟನ್ ಸ್ಫೋಟಕಗಳನ್ನು ತುಂಬಿಕೊಂಡ ಒಟ್ಟು ಹದಿಮೂರೂವರೆ ಟನ್ ತೂಕದ ಜಿಬಿಯು-57 ಬಾಂಬ್​ಗಳನ್ನೂ ಇರಾನಿ ಅಣು ಸಂಯಂತ್ರಗಳ ಮೇಲೆ ಪ್ರಯೋಗಿಸಿತು. ಬಂಕರ್ ಬಸ್ಟರ್ ಎಂಬ ಆ ಭಯಾನಕ ಬಾಂಬ್​ಗಳಿಗೂ ಇರಾನ್ ಜಗ್ಗಲಿಲ್ಲ, ತನ್ನ ಅಣ್ವಸ್ತ್ರ ಕನಸನ್ನು ಇನ್ನಷ್ಟು ವೇಗದಿಂದ ಬೆಂಬತ್ತಿತು. ಅಂತಿಮ ಹೊಡೆತವೆಂಬಂತೆ ಇದೇ ಫೆ. 28ರಂದು ಇಸ್ರೇಲ್ ತೆಹರಾನ್ ಮೇಲೆರಗಿ ಇರಾನಿ ಸರ್ವೋಚ್ಚ ಧಾರ್ಮಿಕ ನೇತಾರ ಆಯತೊಲ್ಲಾ ಆಲಿ ಖಮೇನಿಯವರನ್ನೇ ಹತ್ಯೆಗೈಯಿತು. ಜತೆಗೂಡಿದ ಅಮೆರಿಕ ಮೊದಲ ಹೆಜ್ಜೆಯಲ್ಲೇ ಮುಗ್ಗರಿಸಿ ಮಿನಾಬ್​ನಲ್ಲಿನ ಹೆಣ್ಣು ಮಕ್ಕಳ ಶಾಲೆಯ ಮೇಲೆ ಮೂರು ಕ್ಷಿಪಣಿ ದಾಳಿ ನಡೆಸಿ 165 ಎಳೆಬಾಲೆಯರನ್ನೂ, 14 ಅಧ್ಯಾಪಕಿಯರನ್ನೂ ಹತ್ಯೆಗೈಯುವ ಅಕ್ಷಮ್ಯ ಅಪರಾಧವನ್ನೆಸಗಿತು. ನಂತರದ 39 ದಿನಗಳಲ್ಲಿ ಇಸ್ರೇಲ್ ಮತ್ತು ಅಮೆರಿಕಗಳೆರಡೂ ಇರಾನ್ ಮೇಲೆ ಸುಮಾರು ಒಂದೂಕಾಲು ಲಕ್ಷ ದಾಳಿ ನಡೆಸಿದವು. ಅವುಗಳದು ಒಂದೇ ಪಟ್ಟು, ‘ಅಣ್ವಸ್ತ್ರ ಯೋಜನೆ ನಿಲ್ಲಿಸುವುದಾಗಿ ವಾಗ್ದಾನ ಮಾಡಿ, ಅಡಗಿಸಿಟ್ಟುಕೊಂಡಿರುವ 440 ಕೆಜಿ 60% ಸಂಸ್ಕರಿತ ಯುರೇನಿಯಂ ಅನ್ನು ನಮಗೊಪ್ಪಿಸಿ’ ಎಂದು. ಬಗ್ಗದ ಇರಾನ್ ಕೊಲ್ಲಿ ರಾಷ್ಟ್ರಗಳಲ್ಲಿನ ಅಮೆರಿಕದ ನೆಲೆಗಳು ಮತ್ತು ಅದಕ್ಕೆ ಸಂಬಂಧಿಸಿದ ಇತರ ಸಂಕೀರ್ಣಗಳ ಮೇಲೆ ದಾಳಿಯೆಸಗತೊಡಗಿದ್ದಲ್ಲದೇ ಆಯಕಟ್ಟಿನ ಹೋರ್ಮುಜ್ ಜಲಸಂಧಿಯನ್ನು ಅಮೆರಿಕ ಮತ್ತದರ ಮಿತ್ರದೇಶಗಳಿಗೆ ಬಂದ್ ಮಾಡಿಬಿಟ್ಟಿತು. ಜಗತ್ತಿನ 20% ಇಂಧನ ಸಾಗಾಣಿಕೆಯಾಗುವ ಹೋರ್ಮುಜ್ ಜಲಸಂಧಿ ಹೀಗೆ ಭಾಗಶಃ ಬಂದ್ ಆದೊಡನೇ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಅಲ್ಲೋಲಕಲ್ಲೋಲ.
ಮೊದಲೇ ಇದ್ದ ಇರಾನಿ ಅಣ್ವಸ್ತ್ರ ಬಯಕೆಯ ಬೆದರಿಕೆಯೊಂದಿಗೆ ಈಗ ಜಾಗತಿಕ ತೈಲ ಪೂರೈಕೆ ಅಸ್ತವ್ಯಸ್ತವಾಗುವ ಹೊಸ ಸಂಕಟವೂ ಸೇರಿಕೊಂಡು ಟ್ರಂಪ್​ರ ತಲೆಕೆಡಿಸಿಬಿಟ್ಟಿತು. ಜತೆಗೆ ‘ನಿನ್ನಿಂದಾಗಿ ಇಷ್ಟೆಲ್ಲ ತಾಪತ್ರಯ ನೋಡು’ ಎಂದು ಮಿತ್ರರೇ ಹೇಳತೊಡಗಿದಾಗ ಅವರಿಗೆ ಇನ್ನೂ ತಲೆಬಿಸಿ. ಹುಚ್ಚೆದ್ದ ಅವರು ವಿದ್ಯುತ್ ಸಂಯಂತ್ರಗಳು ಹಾಗೂ ಸೇತುವೆಗಳೂ ಸೇರಿದಂತೆ ವಿವಿಧ ನಾಗರಿಕ ಸೇವಾ ಸೌಲಭ್ಯಗಳನ್ನು ನಾಶ ಮಾಡುವ ಭಯಾನಕ ಬೆದರಿಕೆಯನ್ನೊಡ್ಡಿದರು. ಅದಕ್ಕೆ ಇರಾನ್ ಮಣಿಯುತ್ತದೆ ಎಂದವರ ನಿರೀಕ್ಷೆಯಾಗಿದ್ದಂತಿತ್ತು. ಆದರೆ ಆದದ್ದೇ ಬೇರೆ.
ಎಲ್ಲೆಲ್ಲಿ ದಾಳಿಯೆಸಗುವುದಾಗಿ ಟ್ರಂಪ್ ಬೆದರಿಸಿದ್ದರೋ ಅಲ್ಲಿಗೆಲ್ಲ ಸುಮಾರು 1 ಕೋಟಿ 40 ಲಕ್ಷ ಇರಾನಿ ನಾಗರಿಕರು ಧಾವಿಸಿದರು. ಅವರಲ್ಲಿ ಇರಾನಿ ಮೂಲಭೂತವಾದಿ ಸತ್ತೆ ‘ಹ್ಯೂಮನ್ ಶೀಲ್ಡ್’ ಆಗಿ ಬಳಸಲು ಕರೆತಂದ ಜನರ ಜತೆ ಸ್ವಯಂಸ್ಪೂರ್ತಿಯಿಂದ ಬಂದವರೂ ಸಾಕಷ್ಟಿದ್ದರು. ಶ್ವೇತಭವನದಲ್ಲಿ ಚೆಂಗೀಸ್ ಖಾನ್ ಇದ್ದಿದ್ದರೆ ಅಷ್ಟೂ ಜನರ ಕಥೆ ಒಂದೇ ಗಳಿಗೆಯಲ್ಲಿ ಮುಗಿದುಹೋಗುತ್ತಿತ್ತೇನೋ. ಆದರೆ ಆ ಹೇಯ ಮಾರಣಹೋಮ ಈ 21ನೇ ಶತಮಾನದಲ್ಲಂತೂ ಯಾವ ಪ್ರಜಾಪ್ರಭುತ್ವವಾದಿ ರಾಷ್ಟ್ರನಾಯಕನಿಗೂ ಶೋಭೆಯಲ್ಲ. ಮನಸ್ಸೂ ಒಪ್ಪುವುದಿಲ್ಲ, ಇಂದಿನ ಜಗತ್ತೂ ಅದನ್ನು ಒಪ್ಪುವುದಿಲ್ಲ. ಕೊಲ್ಲಿಯಲ್ಲಿ ಸಮರವೆಂದರೆ ಸಾರಾಸಗಟಾಗಿ ಕೋಟಿಗಟ್ಟಲೆ ಜನರನ್ನು ಕೊಲ್ಲಬಹುದು ಎಂದಲ್ಲ.
ಟ್ರಂಪ್​ರ ಬೆದರಿಕೆಗೆ ಇರಾನ್ ಹೂಡಿದ ಈ ಬಗೆಯ ಪ್ರತಿತಂತ್ರ ಗಾಜಾದಲ್ಲಿ ಇಸ್ರೇಲ್ ವಿರುದ್ಧ ಹಮಾಸ್ ಮಾಡಿದ್ದಂತಹದೇ. ಇಷ್ಟಾದರೂ ಮೂಲಭೂತವಾದಿ ಇರಾನ್ ಭಯೋತ್ಪಾದಕ ಹಮಾಸ್​ನ ಗುರುವಲ್ಲವೇ! ಒಟ್ಟಿನಲ್ಲಿ ತಮ್ಮ ದಾರಿಯಲ್ಲಿ ಈ ಬಗೆಯ ಬೃಹತ್ ಬಂಡೆ ಏಕಾಏಕಿ ಉದ್ಭವವಾದೊಡನೇ ಟ್ರಂಪ್ ದಾರಿ ಬದಲಿಸುವ ಒತ್ತಡಕ್ಕೊಳಗಾದರು. ಸೂಕ್ತವೆನಿಸುವ ಹೊಸ ದಾರಿ ಹುಡುಕಲು ಅವರಿಗೆ ಸಮಯಾವಕಾಶದ ಅಗತ್ಯವಿತ್ತು. ಅದೇ ಕದನವಿರಾಮದ ಘೋಷಣೆಯ ನಾಟಕ. ಒಂದಿಷ್ಟು ಉಸಿರು ತೆಗೆದುಕೊಳ್ಳಲು ಇರಾನಿಗಳಿಗೂ ಸಮಯಾವಕಾಶ ಬೇಕಿತ್ತು. ಹೀಗಾಗಿ ಅವರಿಂದಲೂ ಕದನವಿರಾಮದ ನಾಟಕ. ‘ಪ್ರೇಮ ಮತ್ತು ಯುದ್ಧದಲ್ಲಿ ಎಲ್ಲವೂ ನ್ಯಾಯಸಮ್ಮತ’ ಎನ್ನುವುದು ಹಳೆಯ ನಾಣ್ಣುಡಿ.
ಟ್ರಂಪ್​ಗೆ ನಾಟಕಕ್ಕಾಗಿ ಅಗತ್ಯವಿದ್ದ ರಂಗಸಜ್ಜಿಕೆ ಮಾಡಲು ಪಾಕಿಸ್ತಾನಕ್ಕಿಂತ ದೊಡ್ಡ ಬಂಟ ಬೇಕೇ? ಕಳೆದ ಜೂನ್​ನಲ್ಲಿ ಶ್ವೇತಭವನದಲ್ಲಿ ತಾವು ಊಟ ಹಾಕಿದಂದಿನಿಂದ ಜೀ ಹುಜೂರ್ ಎಂದು ಸದಾ ತಮ್ಮ ಆಜ್ಞೆಗಾಗಿಯೇ ಕಾಯುವ, ತಾವು ಮೈ ಫೇವರಿಟ್ ಫೀಲ್ಡ್ ಮಾರ್ಷಲ್ ಎಂದಾಗಲೆಲ್ಲ ಹಿಗ್ಗಿ ಹೀರೇಕಾಯಿಯಾಗುವ ಅಸೀಮ್ ಮುನೀರ್; ಸೆಪ್ಟೆಂಬರ್​ನಲ್ಲಿ ಶರ್ಮ್-ಅಲ್-ಶೇಖ್​ನಲ್ಲಿ ನಡೆದ ಗಾಜಾ ಶಾಂತಿ ಸಮ್ಮೇಳನದಲ್ಲಿ ತಮಗೆ ಸೆಲ್ಯೂಟ್ ಹೊಡೆದು ನೆರೆದಿದ್ದವರಲ್ಲಿ ಬೆರಗು ಮೂಡಿಸಿದ, ತಮ್ಮನ್ನು ಹಿಗ್ಗಾಮುಗ್ಗಾ ಹೊಗಳಿ ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿಯವರಲ್ಲಿ ತಡೆಯಲಾಗದಷ್ಟು ನಡುಕ ಮೂಡಿಸಿದ ಶೆಹ್​ಬಾಜ್ ಶರೀಫ್; ಅವರಿಬ್ಬರೂ ನಡೆಸುವ, ತಮ್ಮನ್ನು ನೊಬೆಲ್ ಶಾಂತಿ ಪಾರಿತೋಷಕಕ್ಕೆ ನಾಮಾಂಕಿತಗೊಳಿಸಿದ ಪಾಕಿಸ್ತಾನಿ ಸರ್ಕಾರ ತಮಗನುಕೂಲವಾಗುವಂತೆಯೇ ರಂಗಸಜ್ಜಿಕೆ ಮಾಡುತ್ತದೆಂದು ವ್ಯವಹಾರನಿಪುಣ ಟ್ರಂಪ್​ಗೆ ಗೊತ್ತೇ ಇತ್ತು.
ಹಾನಿಗೊಳಗಾಗಿರುವ ತಮ್ಮ ಕ್ಷಿಪಣಿ ಉಡಾವಣಾ ವ್ಯವಸ್ಥೆಗಳನ್ನು ದುರಸ್ತಿ ಮಾಡಿಕೊಂಡು ಮುಂದಿನ ಹಂತದ ಸಮರಕ್ಕೆ ತಯಾರಾಗುವ ಹಂಚಿಕೆಯಿದ್ದ ಇರಾನ್ ಮಾತುಕತೆಯಲ್ಲಿ ಭಾಗವಹಿಸುವ ನಾಟಕವಾಡಿತು. ಹೀಗಾಗಿ ಏ. 11ರಂದು ಇಸ್ಲಾಮಾಬಾದ್​ನಲ್ಲಿ ನಡೆದ ಮಾತುಕತೆಗಳನ್ನು ಯಶಸ್ವಿಯಾಗಿಸಿ ನಿಜವಾದ ಶಾಂತಿ ಸ್ಥಾಪಿಸುವ ಉದ್ದೇಶ ಎರಡು ಪಕ್ಷಗಳಿಗೂ ಇರಲಿಲ್ಲ. ಶಾಶ್ವತ ಶಾಂತಿಯೆಂದರೆ ಪ್ರಸಕ್ತ ಇರಾನಿ ಸತ್ತೆಯ ಪ್ರಕಾರ ತನ್ನ ಅಣ್ವಸ್ತ್ರ ಯೋಜನೆ ನಿರ್ಬಾಧಿತವಾಗಿ ಮುಂದುವರಿಯಬೇಕು, ಅಮೆರಿಕ ಮತ್ತು ಇಸ್ರೇಲ್ ಪ್ರಕಾರ ಇರಾನ್ ಎಂದೂ ಅಣ್ವಸ್ತ್ರ ರಾಷ್ಟ್ರವಾಗಕೂಡದು ಹಾಗೂ ಆ ಬಯಕೆ ಹೊಂದಿರುವ ಮೂಲಭೂತವಾದಿ ಸತ್ತೆ ತೆಹರಾನ್​ನಲ್ಲಿರಲೇಬಾರದು. ಹೀಗಾಗಿ ಇಸ್ಲಾಮಾಬಾದ್ ಶಾಂತಿನಾಟಕದ ಮೊದಲ ಅಂಕ ಯಶಸ್ವಿಯಾಗುವ ಸಾಧ್ಯತೆಯೇ ಇರಲಿಲ್ಲ.
ಈಗ ಶಾಂತಿನಾಟಕದ ಎರಡನೆಯ ಅಂಕದ ಅಗತ್ಯ ಅಮೆರಿಕಕ್ಕೆ ಆಗಿರುವ ಕಾರಣ ನಾಗರಿಕ ಸೌಲಭ್ಯಗಳ ಮೇಲೆ ದಾಳಿಯೆಸಗದೇ ಇರಾನ್ ಅನ್ನು ಮಣಿಸುವ ಬದಲಿ ಮಾರ್ಗ ಟ್ರಂಪ್​ಗಿನ್ನೂ ಗೋಚರವಾಗದೇ ಇರುವುದು. ಹೀಗಾಗಿ ಅವರು ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಜತೆಗೆ ಸ್ಟೀವ್ ವಿಟ್​ಕಾಫ್ ಹಾಗೂ ಜಾರೆಡ್ ಕುಶ್ನರ್ ಸೇರಿದ ಅದೇ ಹಳೆಯ ತಂಡವನ್ನೇ ಇಸ್ಲಾಮಾಬಾದ್​ಗೆ ಕಳುಹಿಸುತ್ತಿರುವುದಾಗಿ ಹೇಳಿದ್ದಾರೆ. ಆದರೆ ತೆಹರಾನ್​ನಲ್ಲಿನ ಅಧಿಕಾರ ಸಮೀಕರಣಗಳು ಬದಲಾಗಿಹೋಗಿವೆ.
ಅಧ್ಯಕ್ಷ ಮಸೂದ್ ಪೆಜೆಷ್ಕಿಯಾನ್, ವಿದೇಶಮಂತ್ರಿ ಅಬ್ಬಾಸ್ ಅರಾಗ್ಚಿ ಮತ್ತು ಸಂಸತ್ ಸಭಾಪತಿ ಮಹಮ್ಮದ್ ಬಘೇರ್ ಘಾಲಿಬಾಫ್​ರನ್ನೊಳಗೊಂಡ ರಾಜಕೀಯ ನಾಯಕತ್ವ ಮತ್ತು ಯುದ್ಧದ ಪ್ರಮುಖ ಪಾತ್ರಧಾರಿ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕೋರ್ (ಐಆರ್​ಜಿಸಿ) ನಡುವಿನ ಅಭಿಪ್ರಾಯಭೇದ ಉಗ್ರವಾಗಿದೆ. ಐಆರ್​ಜಿಸಿ ಪ್ರಕಾರ ಇರಾನಿ ರಾಜಕೀಯ ನಾಯಕತ್ವ ಅಮೆರಿಕ ಬಗ್ಗೆ ಮೃದುಧೋರಣೆ ಹೊಂದಿದೆ. ಇದರಲ್ಲಿ ಸತ್ಯವಿರಲೂಬಹುದು. ಹೇಗೆಂದರೆ ಆಯತೊಲ್ಲಾ ಖಮೇನಿ ಸೇರಿದಂತೆ ಧಾರ್ಮಿಕ ಹಾಗೂ ಸೇನಾ ನಾಯಕತ್ವದ ಎಲ್ಲ ನಾಯಕರನ್ನೂ ಕೊಂದ ಅಮೆರಿಕ ಮತ್ತು ಇಸ್ರೇಲ್​ಗೆ ರಾಜಕೀಯ ನಾಯಕರಾದ ಪಜೆಷ್ಕಿಯಾನ್, ಅರಾಗ್ಚಿ, ಘಾಲಿಬಾಫ್​ರನ್ನೂ ಕೊಲ್ಲುವುದು ಕಷ್ಟವೇನಲ್ಲ. ಆದರೂ ಅವರಿನ್ನೂ ಉಳಿದುಕೊಂಡಿರುವುದಕ್ಕೆ ಕಾರಣ ರಾಜಕೀಯ ಉದಾರವಾದಿಗಳಾದ ಅವರ ಜೀವವುಳಿಸಿ, ಮುಂದೆ ಅವರನ್ನು ಇರಾನ್​ನ ನಿಜವಾದ ನಾಯಕರನ್ನಾಗಿ ಮಾನ್ಯಮಾಡಿ, ತಮಗನುಕೂಲವಾದ ನೀತಿಗಳನ್ನು ಅವರು ಜಾರಿಗೊಳಿಸುವಂತೆ ಅಂದರೆ ಪ್ರಸಕ್ತ ಮೂಲಭೂತವಾದಿ ಸತ್ತೆಯ ಅಣ್ವಸ್ತ್ರ ಬಯಕೆಯನ್ನು ತೆಹರಾನ್ ಶಾಶ್ವತವಾಗಿ ತೊರೆಯುವಂತೆ ಮಾಡುವುದು ವಾಷಿಂಗ್ಟನ್ ಮತ್ತು ಟೆಲ್​ಅವಿವ್​ಗಳ ಒಳ ಲೆಕ್ಕಾಚಾರವಾಗಿದ್ದರೂ ಇರಬಹುದು.
ಹೀಗಾಗಿ ರಾಜಕೀಯ ನಾಯಕತ್ವದ ನೀತಿನಿಲುವುಗಳನ್ನು ಐಆರ್​ಜಿಸಿ ಬಹಿರಂಗವಾಗಿಯೇ ತಿರಸ್ಕರಿಸತೊಡಗಿದೆ. ಏ. 11ರ ಮಾತುಕತೆಗಳ ಬಗ್ಗೆ ಅಸಮಾಧಾನ ತೋರಿ ಪ್ರಮುಖ ಐಆರ್​ಜಿಸಿ ನಾಯಕನೊಬ್ಬ ಹೇಳಿದ ‘ಮೃತ ಆಯತೊಲ್ಲಾರ ಅಂತ್ಯಸಂಸ್ಕಾರವನ್ನೇ ನಾವಿನ್ನೂ ಮಾಡಿಲ್ಲ, ಹಾಗಿರುವಾಗ ಅವರ ಹತ್ಯಾಕಾರಿಗಳ ಜತೆ ಶಾಂತಿ ಮಾತುಕತೆಗೆ ಏನರ್ಥ?’ ಎಂಬ ಕಿಡಿಮಾತು ತೆಹರಾನ್​ನಲ್ಲಿ ಎರಡು ವಿಭಿನ್ನ ವಿಚಾರಧಾರೆಗಳು ಪ್ರಚಲಿತವಿರುವ ಸೂಚನೆ ನೀಡುತ್ತವೆ.
ಜತೆಗೆ ಸೌದಿ ಅರೇಬಿಯಾದ ರಕ್ಷಣೆಗಾಗಿ 13,000 ಸೈನಿಕರನ್ನೂ, 18 ಯುದ್ಧವಿಮಾನಗಳನ್ನೂ ಕಳುಹಿಸಿರುವ ಪಾಕಿಸ್ತಾನ ಹಾಗೂ ಟ್ರಂಪ್ ಜತೆ ಘನಿಷ್ಠ ಸಂಬಂಧ ಹೊಂದಿರುವ ಆಸಿಮ್ ಮುನೀರ್ ಮತ್ತು ಶೆಹ್​ಬಾಜ್ ಶರೀಫ್ ಹೇಗೆ ತಾನೆ ನಿಷ್ಕಕ್ಷಪಾತಿ ಮಧ್ಯವರ್ತಿಗಳಾಗಲು ಸಾಧ್ಯ ಎಂಬ ಪ್ರಶ್ನೆ ಐಆರ್​ಜಿಸಿಯಲ್ಲಿ ದೊಡ್ಡದಾಗಿ ಎದ್ದಿದೆ. ಅದರ ಅನುಮಾನವನ್ನು ಬಗೆಹರಿಸಲು ಮುನೀರ್ ಇನ್ನಿಲ್ಲದ ಆಟ ಆಡುತ್ತಿದ್ದಾರೆ, ತಾನು ಪಾಕಿಸ್ತಾನಿ ಸೇನೆಯ ಬೇಹುಗಾರಿಕಾ ಮುಖ್ಯಸ್ಥನಾಗಿದ್ದಾಗ ಐಆರ್​ಜಿಸಿ ಜತೆ ಒಳ್ಳೆಯ ಸಹಕಾರ ಸಂಬಂಧಗಳನ್ನು ಹೊಂದಿದ್ದನ್ನು ನೆನಪಿಸುತ್ತಿದ್ದಾರೆ. ಅವರ ಮಾತಿಗೆ ಐಆರ್​ಜಿಸಿ ಎಷ್ಟು ಬೆಲೆ ಕೊಡುತ್ತದೆಂದು ಸ್ಪಷ್ಟವಾಗಿಲ್ಲ.
ಇದು ಸಾಲದು ಎಂಬಂತೆ, ಇಸ್ಲಾಮಾಬಾದ್ ಮಾತುಕತೆಯ ಮೊದಲ ಸುತ್ತಿನಲ್ಲಿ ಇರಾನಿ ತಂಡದ ಸದಸ್ಯರಾಗಿದ್ದ ಮಹಮ್ಮದ್ ಮರಾಂದಿ ಎನ್ನುವವರು ಪಾಕಿಸ್ತಾನದಲ್ಲಿ ತಮ್ಮ ತಂಡಕ್ಕೆ ಸುರಕ್ಷೆ ಇರಲಿಲ್ಲ, ತಾವೆಲ್ಲರೂ ಪ್ರಯಾಸದಿಂದ ಅಲ್ಲಿಂದ ಹೊರಬಂದೆವು ಎಂಬ ಬಾಂಬ್ ಸ್ಫೋಟಿಸಿದ್ದಾರೆ!
ಈ ಎಲ್ಲ ವಾಸ್ತವಗಳ ಹಿನ್ನೆಲೆಯಲ್ಲಿ ಇಸ್ಲಾಮಾಬಾದ್​ನಲ್ಲಿ ಎರಡನೆಯ ಸುತ್ತಿನ ಮಾತುಕತೆಗಳು ನಡೆಯುವ ಬಗ್ಗೆ ಅನುಮಾನವೆದ್ದಿದೆ. ಇದರ ಸುಳಿವು ಟ್ರಂಪ್​ಗೆ ಹತ್ತಿರಲೇಬೇಕು. ಅದರಿಂದಾಗಿಯೇ, ‘ಯಶಸ್ವಿ ಮಾತುಕತೆ ನಡೆಯದಿದ್ದಲ್ಲಿ ಇರಾನಿ ನಾಗರಿಕ ಸೌಲಭ್ಯಗಳ ಮೇಲೆ ಭೀಕರ ದಾಳಿ ನಡೆಸುತ್ತೇನೆ’ ಎಂದು ಅಬ್ಬರಿಸಿದ್ದಾರೆ. ಇದಕ್ಕೆ ಎರಡು ಉದ್ದೇಶಗಳಿವೆ. ಒಂದು- ಇರಾನ್ ಮಾತುಕತೆಗೆ ಬರಬೇಕು, ಆ ನೆಪದಲ್ಲಿ ಕದನವಿರಾಮವನ್ನು ಇನ್ನಷ್ಟು ಮುಂದುವರಿಸುವ ಅವಕಾಶ ತಮಗೆ ಸಿಗಬೇಕು; ಎರಡು- ತಮ್ಮ ಬೆದರಿಕೆಗೆ ಉತ್ತರವಾಗಿ ಇರಾನ್ ಮತ್ತೆ ಕೋಟಿಗಟ್ಟಲೆ ಜನರನ್ನು ನಾಗರಿಕ ಸೌಲಭ್ಯಗಳ ಸುತ್ತಲೂ ‘ಹ್ಯೂಮನ್ ಶೀಲ್ಡ್’ ಆಗಿ ನಿಲ್ಲಿಸಬೇಕು, ಆಗ ಮಾನವತೆಯ ದೃಷ್ಟಿಯಿಂದ ತಾವು ದಾಳಿ ಯೋಜನೆಯನ್ನು ಕೈಬಿಟ್ಟಿರುವುದಾಗಿ ಹೇಳಬೇಕು, ಆ ಮೂಲಕವೂ ಕದನವಿರಾಮವನ್ನು ತಮಗೆ ಬೇಕಾದಷ್ಟು ದಿನಗಳವರೆಗೆ ಮುಂದುವರಿಸುವ ಅವಕಾಶ ತಮಗೆ ದೊರೆಯಬೇಕು.
ಆ ಎರಡೂ ಅವಕಾಶಗಳು ಅವರಿಗೆ ಸಿಗದೆಹೋದರೆ...? ಪ್ರಸಕ್ತ ಕದನವಿರಾಮ ಏ. 22ರ ಬೆಳಿಗ್ಗೆ ಅಂತ್ಯಗೊಳ್ಳುವವರೆಗೆ ಕಾಯೋಣ.