ಅದೃಷ್ಟ ಅಂದ್ರೆ ಹೀಗಿರಬೇಕು ಕಣ್ರೀ... ಪಾರ್ಕ್​ನಲ್ಲಿ ಸಿಕ್ಕಿತು ಅಪರೂಪದಲ್ಲೇ ಅಪರೂಪದ 9.6 ಕೋಟಿ ರೂ. ವಜ್ರ! ​ | Rare Diamond  
ವಿದೇಶ

ಅದೃಷ್ಟ ಅಂದ್ರೆ ಹೀಗಿರಬೇಕು ಕಣ್ರೀ... ಪಾರ್ಕ್​ನಲ್ಲಿ ಸಿಕ್ಕಿತು ಅಪರೂಪದಲ್ಲೇ ಅಪರೂಪದ 9.6 ಕೋಟಿ ರೂ. ಮೌಲ್ಯದ ವಜ್ರ! ​ | Rare Diamond

ಹಳದಿ ವಜ್ರವನ್ನು ಅಮೆರಿಕಾದ ಅರ್ಕಾನ್ಸಾಸ್ ರಾಜ್ಯದ 'ಕ್ರೇಟರ್ ಆಫ್ ಡೈಮಂಡ್ಸ್ ಸ್ಟೇಟ್ ಪಾರ್ಕ್'ನಲ್ಲಿ ಪತ್ತೆಹಚ್ಚಿದ್ದಾರೆ. ಅಸಲಿಗೆ, ಈ ವರ್ಷದ ಜನವರಿಯಲ್ಲಿ 6.03 ಕ್ಯಾರೆಟ್ ತೂಕದ ವಜ್ರ ಪತ್ತೆಯಾಗಿದೆ ಎಂದು 'ಪೀಪಲ್' ಮ್ಯಾಗಜೀನ್​ ವರದಿ ಮಾಡಿದೆ.

Rare Diamond: ಅದೃಷ್ಟ ಯಾವಾಗ, ಹೇಗೆ ಖುಲಾಯಿಸುತ್ತೆ? ಬಾಗಿಲು ತಟ್ಟುತ್ತದೆ ಎಂಬುದನ್ನೂ ಯಾರೊಬ್ಬರೂ ಊಹಿಸಲು ಸಾಧ್ಯವಿಲ್ಲ. ಯಾಕೆಂದರೆ, ಇದೊಂದು ರೀತಿ ಊಹೆಗೂ ಮೀರಿದ್ದು ಎಂದರೆ ಖಂಡಿತ ತಪ್ಪಾಗಲಾರದು. 100 ಅಥವಾ 500 ರೂ.ಗೆ ಲಾಟರಿ ಖರೀದಿಸಿದ ವ್ಯಕ್ತಿಗೆ ಕೋಟಿಗಟ್ಟಲೇ ಹಣ ಬಂಪರ್​ ಹೊಡೆದಾಗ ಆಗುವ ಖುಷಿ, ಆಶ್ಚರ್ಯ ಹೇಳತೀರದು. ಅಂತೆಯೇ, ಇಲ್ಲೊಬ್ಬ ವ್ಯಕ್ತಿಗೂ ಜಾಕ್​ಪಾಟ್​ ಹೊಡೆದಿದ್ದೇ ಆದರೂ ಅದು ಲಾಟರಿ ಅಲ್ಲ. ಬದಲಿಗೆ ಅಪರೂಪದಲ್ಲೇ ಅಪರೂಪ ಎನ್ನುವ ದುಬಾರಿ ಮೌಲ್ಯದ ವಜ್ರ.

ಇತ್ತೀಚೆಗೆ ಅಮೆರಿಕದ ಜಾಕ್ ಪಿಯರಾರ್ಡಿನ್ (Jack Pierardin) ಎಂಬ ವ್ಯಕ್ತಿಗೆ ಇಂತಹದ್ದೊಂದು ಅದೃಷ್ಟ ಒಲಿದಿದೆ. ಕಳೆದ 13 ವರ್ಷಗಳಿಂದ ವಿವಿಧ ಬಗೆಯ ವಜ್ರಗಳ ಹುಡುಕಾಟದಲ್ಲಿ ತೊಡಗಿದ್ದ ಈತ, ಇದೀಗ ಅಪರೂಪದ ಹಳದಿ ವಜ್ರವನ್ನು ಅಮೆರಿಕಾದ ಅರ್ಕಾನ್ಸಾಸ್ ರಾಜ್ಯದ 'ಕ್ರೇಟರ್ ಆಫ್ ಡೈಮಂಡ್ಸ್ ಸ್ಟೇಟ್ ಪಾರ್ಕ್'ನಲ್ಲಿ ಪತ್ತೆಹಚ್ಚಿದ್ದಾರೆ. ಅಸಲಿಗೆ, ಈ ವರ್ಷದ ಜನವರಿಯಲ್ಲಿ 6.03 ಕ್ಯಾರೆಟ್ ತೂಕದ ವಜ್ರ ಪತ್ತೆಯಾಗಿದೆ ಎಂದು 'ಪೀಪಲ್' ಮ್ಯಾಗಜೀನ್​ ವರದಿ ಮಾಡಿದೆ.

ಟಿಕ್‌ಟಾಕ್ ಲೈವ್‌ನಲ್ಲಿ ಅಪರೂಪದ ಪತ್ತೆ

ಜಾಕ್ ತಮ್ಮ ಸ್ನೇಹಿತ ಮೈಕೆಲ್ ಶುಮಾಕರ್ ಅವರೊಂದಿಗೆ ಉದ್ಯಾನವನದಲ್ಲಿನ ಜಲ್ಲಿಕಲ್ಲುಗಳನ್ನು ಪರಿಶೀಲಿಸುತ್ತಿದ್ದಾಗ ಈ ವಜ್ರ ಕಣ್ಣಿಗೆ ಬಿದ್ದಿತು ಎಂದಿದ್ದಾರೆ. ಆ ಸಮಯದಲ್ಲಿ ಅವರು ಟಿಕ್‌ಟಾಕ್‌ನಲ್ಲಿ ಲೈವ್ ವಿಡಿಯೋ ಕೂಡ ಮಾಡುತ್ತಿದ್ದರು. ಇದನ್ನು ಬಹಳ ಸೂಕ್ಷ್ಮವಾಗಿ ಹತ್ತಿರದಿಂದ ನೋಡಿದಾಗ, ಉಗುರಿನ ಗಾತ್ರದಷ್ಟಿದ್ದ ಆ ಹೊಳೆಯುವ ಕಲ್ಲು ವಜ್ರವೆಂದು ಗೊತ್ತಾದಾಗ ಆಶ್ಚರ್ಯಚಕಿತರಾಗಿದ್ದಾರೆ. ಈ ವರ್ಷ ಪತ್ತೆಯಾದ ಅತಿದೊಡ್ಡ ವಜ್ರ ಇದಾಗಿದೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.

2013ರಲ್ಲಿ ಮೊದಲ ಬಾರಿಗೆ ಈ ಉದ್ಯಾನವನಕ್ಕೆ ಭೇಟಿ ಕೊಟ್ಟಿದ್ದ ಜಾಕ್ ಅವರಿಗೆ ವಜ್ರದ ಅನ್ವೇಷಣೆಯಲ್ಲಿ ಆಸಕ್ತಿ ಮೂಡಿತು. ಆ ಪ್ರದೇಶಕ್ಕೆ ಸಮೀಪದಲ್ಲಿರಲು ಅವರು ಮಿಸೌರಿಯಿಂದ ಮರ್ಫ್ರೀಸ್‌ಬೊರೊಗೆ ತಮ್ಮ ನಿವಾಸವನ್ನು ಬದಲಾಯಿಸಿದರು. ಇಲ್ಲಿಯವರೆಗೆ ಅವರು 300ಕ್ಕೂ ಹೆಚ್ಚು ಸಣ್ಣ ವಿಶೇಷ ರೂಪದ ಕಲ್ಲುಗಳನ್ನು ಪತ್ತೆಹಚ್ಚಿದ್ದಾರೆ. ಆದರೀಗ, ಕಂಡುಹಿಡಿದಿರುವ ಈ ಹಳದಿ ವಜ್ರ ಜಾಕ್​ಗೆ ಜಾಗತಿಕ ಮಟ್ಟದಲ್ಲಿ ಮನ್ನಣೆಯನ್ನು ತಂದುಕೊಟ್ಟಿದೆ. ಇನ್ನೂ ವಿಶೇಷ ಎಂದರೆ, ವಜ್ರಕ್ಕೆ 'ಅಮೆರಿಕನ್ ಡ್ರೀಮ್' ಎಂದು ಹೆಸರಿಟ್ಟಿದ್ದಾರೆ.

ಎಷ್ಟಿದೆ ವಜ್ರದ ಮೌಲ್ಯ?

ಈ ವಜ್ರದ ಮೌಲ್ಯದ ಬಗ್ಗೆ ವಿವಿಧ ಅಂದಾಜುಗಳಿವೆ. ಇದರ ಮೌಲ್ಯ 1 ಮಿಲಿಯನ್ ಡಾಲರ್‌ವರೆಗೆ (8.3ರಿಂದ 9.6 ಕೋಟಿ ರೂ.) ಇರಬಹುದು ಎಂದು ಕೆಲವು ಸಂಗ್ರಾಹಕರು ತಿಳಿಸಿದ್ದಾರೆ. ಆದಾಗ್ಯೂ, 'ಅಸೋಸಿಯೇಟೆಡ್ ಪ್ರೆಸ್' ವರದಿಯ ಪ್ರಕಾರ, ಅನುಭವಿ ಮೌಲ್ಯಮಾಪಕರೊಬ್ಬರು ಇದರ ಮೌಲ್ಯವನ್ನು ಸುಮಾರು 2.1 ಕೋಟಿ ರೂಪಾಯಿ ಇರಬಹುದು ಎಂದು ಅಂದಾಜಿಸಿದ್ದಾರೆ. ಪಾಲಿಶ್ ಮಾಡಿದ ನಂತರ ವಜ್ರದ ಸ್ಪಷ್ಟತೆ, ಗುಣಮಟ್ಟ, ಕಟ್​ ಆಫ್​ ಮತ್ತು ತೂಕವನ್ನು ಅವಲಂಬಿಸಿ ಅದರ ಅಂತಿಮ ಮೌಲ್ಯ ಬದಲಾಗಬಹುದು ಎಂದು ಹೇಳಲಾಗಿದೆ.

'ಕ್ರೇಟರ್ ಆಫ್ ಡೈಮಂಡ್ಸ್ ಸ್ಟೇಟ್ ಪಾರ್ಕ್'ಗೆ ಭೇಟಿ ಕೊಡುವವರು ಮೊದಲು ಈಗಾಗಲೇ ನಿಗದಿಪಡಿಸಿರುವ ಪ್ರವೇಶ ಶುಲ್ಕವನ್ನು ಪಾವತಿಸಿದ ಬಳಿಕವೇ ವಜ್ರಗಳಿಗಾಗಿ ಹುಡುಕಾಟ ನಡೆಸಬಹುದು. ಇಲ್ಲಿ ಸಿಗುವ ಅಪರೂಪದ ಹಾಗೂ ದುಬಾರಿ ಬೆಲೆಬಾಳುವ ವಜ್ರಗಳನ್ನು ತಮ್ಮ ಬಳಿಯೇ ಇಟ್ಟುಕೊಳ್ಳುವ ಆಯ್ಕೆ ಇರುವುದರಿಂದ ಈ ಉದ್ಯಾನವನವು ವಿಶೇಷ ಆಕರ್ಷಣೆ ಎಂದೇ ವಿವರಿಸಲಾಗಿದೆ,(ಏಜೆನ್ಸೀಸ್).