ಕಠ್ಮಂಡು (ನೇಪಾಳ): ನೇಪಾಳದ ರಾಜಕೀಯ ಇತಿಹಾಸದಲ್ಲಿ ಹಿಂದೆಂದೂ ಕಂಡರಿಯದ ಮಹತ್ತರ ಬದಲಾವಣೆಯೊಂದು ಸಂಭವಿಸುತ್ತಿದೆ. ಕೇವಲ ಹಾಡುಗಳ ಮೂಲಕ ಯುವಜನರ ಧ್ವನಿಯಾಗಿದ್ದ ರ್ಯಾಪರ್ ಬಾಲೇಂದ್ರ "ಬಾಲೇನ್" ಶಾ( Balen Shah), ಈಗ ಹಿಮಾಲಯದ ರಾಷ್ಟ್ರ ನೇಪಾಳದ ಕಿರಿಯ ಪ್ರಧಾನ ಮಂತ್ರಿಯಾಗುವ ಹಾದಿಯಲ್ಲಿದ್ದಾರೆ.
ಹೌದು, 2025ರ ರಾಜಕೀಯ ದಂಗೆಯ ನಂತರ ನಡೆಯುತ್ತಿರುವ ಈ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಬಾಲೇನ್ ಶಾ ನೇತೃತ್ವದ 'ರಾಷ್ಟ್ರೀಯ ಸ್ವತಂತ್ರ ಪಾರ್ಟಿ' (RSP) ಐತಿಹಾಸಿಕ ಜಯದತ್ತ ಮುನ್ನುಗ್ಗುತ್ತಿದೆ.
ನೇಪಾಳದ ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಆರಂಭಿಕ ಅಂಕಿಅಂಶಗಳ ಪ್ರಕಾರ, ಒಟ್ಟು 165 ಕ್ಷೇತ್ರಗಳ ಪೈಕಿ 144 ಕ್ಷೇತ್ರಗಳ ಫಲಿತಾಂಶದ ಟ್ರೆಂಡ್ ಲಭ್ಯವಿದ್ದು, ಬಾಲೇನ್ ಶಾ ಅವರ ಪಕ್ಷವು ಬರೋಬ್ಬರಿ 104 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಹಳೆಯ ರಾಜಕೀಯ ಪಕ್ಷಗಳಾದ ನೇಪಾಳಿ ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪಕ್ಷಗಳನ್ನು ಧೂಳೀಪಟ ಮಾಡಿರುವ ಈ 'ಯುವ ಅಲೆ', ನೇಪಾಳದ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಸಂಚಲನ ಮೂಡಿಸಿದೆ.
ಯಾರು ಈ ಬಾಲೇಂದ್ರ ಶಾ? (ಬೆಂಗಳೂರಿನ ನಂಟು!)
35 ವರ್ಷದ ಬಾಲೇನ್ ಶಾ ನೇಪಾಳದ ಸಾಂಪ್ರದಾಯಿಕ ರಾಜಕೀಯ ಚೌಕಟ್ಟನ್ನು ಮುರಿದ ನಾಯಕ. ಕೇವಲ ರ್ಯಾಪರ್ ಮಾತ್ರವಲ್ಲದೆ, ಇವರು ವೃತ್ತಿಯಲ್ಲಿ ಸ್ಟ್ರಕ್ಚರಲ್ ಇಂಜಿನಿಯರ್ ಕೂಡ ಹೌದು. ನೇಪಾಳದಲ್ಲಿ ಸಿವಿಲ್ ಇಂಜಿನಿಯರಿಂಗ್ ಮುಗಿಸಿದ ನಂತರ, ಭಾರತದ ಬೆಂಗಳೂರಿನಲ್ಲಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ (VTU) ಸ್ನಾತಕೋತ್ತರ ಪದವಿ (M.Tech) ಪಡೆದಿದ್ದಾರೆ. 2012ರಲ್ಲಿ 'ಸಡಕ್ ಬಾಲಕ್' ಎಂಬ ಹಾಡಿನ ಮೂಲಕ ಸಂಗೀತ ಲೋಕಕ್ಕೆ ಕಾಲಿಟ್ಟ ಇವರು, ಸಾಮಾಜಿಕ ಕಳಕಳಿಯ ಸಾಹಿತ್ಯದ ಮೂಲಕ ಯುವಜನರ ನೆಚ್ಚಿನ 'ರ್ಯಾಪ್ ಸ್ಟಾರ್' ಆಗಿ ಬೆಳೆದರು.
ಮೇಯರ್‌ನಿಂದ ರಾಷ್ಟ್ರ ನಾಯಕನವರೆಗೆ..
2022ರಲ್ಲಿ ಕಠ್ಮಂಡು ಮಹಾನಗರ ಪಾಲಿಕೆಯ ಮೇಯರ್ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಬಾಲೇನ್, ಘಟಾನುಘಟಿ ರಾಜಕಾರಣಿಗಳನ್ನು ಸೋಲಿಸಿ ಇಡೀ ಜಗತ್ತಿನ ಗಮನ ಸೆಳೆದಿದ್ದರು. 2025ರಲ್ಲಿ ಕೆಪಿ ಶರ್ಮಾ ಒಲಿ ಸರ್ಕಾರದ ವಿರುದ್ಧ ನಡೆದ ಬೃಹತ್ ಯುವ ಪ್ರತಿಭಟನೆಯಲ್ಲಿ ಬಾಲೇನ್ ಮುಂಚೂಣಿಯಲ್ಲಿದ್ದರು. ಭ್ರಷ್ಟಾಚಾರದ ವಿರುದ್ಧದ ಆ ಹೋರಾಟವೇ ಇಂದು ಅವರನ್ನು ಪ್ರಧಾನಿ ಹುದ್ದೆಯ ಹೊಸ್ತಿಲಿಗೆ ತಂದು ನಿಲ್ಲಿಸಿದೆ.
ಬಾಲೇನ್ ಶಾ ಈ ಗೆಲುವಿನ ಸಂದೇಶವೇನು?
ಸಾಂಪ್ರದಾಯಿಕ ಪಕ್ಷಗಳ ಭ್ರಷ್ಟಾಚಾರದಿಂದ ಬೇಸತ್ತಿದ್ದ ಜನರಿಗೆ ಬಾಲೇನ್ ಒಬ್ಬ ಆಶಾಕಿರಣವಾಗಿದ್ದಾರೆ. ಶೇ. 60ಕ್ಕೂ ಹೆಚ್ಚು ಯುವ ಜನಸಂಖ್ಯೆ ಹೊಂದಿರುವ ನೇಪಾಳದಲ್ಲಿ, ಒಬ್ಬ ಯುವಕನೇ ರಾಷ್ಟ್ರದ ಚುಕ್ಕಾಣಿ ಹಿಡಿಯಬೇಕೆಂಬ ಬಯಕೆ ಈ ಫಲಿತಾಂಶದಲ್ಲಿ ವ್ಯಕ್ತವಾಗಿದೆ. ಇಂಜಿನಿಯರ್ ಆಗಿರುವ ಬಾಲೇನ್, ವೈಜ್ಞಾನಿಕ ಹಾದಿಯಲ್ಲಿ ನೇಪಾಳವನ್ನು ಕಟ್ಟುವ ಭರವಸೆ ನೀಡಿದ್ದಾರೆ.
ಈಗಿನ ಟ್ರೆಂಡ್ ಮುಂದುವರಿದರೆ, ಬಾಲೇಂದ್ರ ಶಾ ನೇಪಾಳದ ಇತಿಹಾಸದಲ್ಲೇ ಅತ್ಯಂತ ಕಿರಿಯ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಇದು ಕೇವಲ ನೇಪಾಳಕ್ಕೆ ಮಾತ್ರವಲ್ಲ, ಇಡೀ ದಕ್ಷಿಣ ಏಷ್ಯಾದ ರಾಜಕೀಯಕ್ಕೆ ಒಂದು ದೊಡ್ಡ ಪಾಠವಾಗಲಿದೆ,(ಏಜೆನ್ಸೀಸ್).