Rahul Gandhi | ಜರ್ಮನಿಯ ಬರ್ಲಿನ್‌ನಲ್ಲಿರುವ ಹರ್ಟೀ ಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ಜರ್ಮನಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಭಾರತದ ಶತ್ರುಗಳ ಜೊತೆ ಸಭೆ ನಡೆಸಿದ್ದಾರೆ ಎಂದು ಬಿಜೆಪಿ ಶನಿವಾರ (ಡಿ.20) ಆರೋಪಿಸಿದೆ. ಅಲ್ಲದೆ, ಇಂತಹ ಶಕ್ತಿಗಳೊಂದಿಗೆ ಕೈಜೋಡಿಸುವ ಮೂಲಕ ಗಾಂಧಿ ದೇಶದ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ ಕಿಡಿಕಾರಿದ್ದಾರೆ.
ಈ ಬಗ್ಗೆ ನವದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ, ಬರ್ಲಿನ್ ಮೂಲದ ಹರ್ಟೀ ಶಾಲೆಯ ಅಧ್ಯಕ್ಷ ಮತ್ತು ಪ್ರಾಧ್ಯಾಪಕ ಕಾರ್ನೆಲಿಯಾ ವೋಲ್ರೊಂದಿಗೆ ಗಾಂಧಿಯ ಫೋಟೋವನ್ನು ಪ್ರದರ್ಶಿಸಿದರು. ಕಾಂಗ್ರೆಸ್ ನಾಯಕ ಜರ್ಮನಿಯಲ್ಲಿ ಭಾರತ ವಿರೋಧಿ ಶಕ್ತಿಗಳನ್ನು ಭೇಟಿಯಾಗುತ್ತಿರುವುದಕ್ಕೆ ಇದು ಪುರಾವೆ ಎಂದು ಹೇಳಿದ್ದಾರೆ.
ಶ್ರೀಮತಿ ವೋಲ್ ಸೆಂಟ್ರಲ್ ಯುರೋಪಿಯನ್ ವಿಶ್ವವಿದ್ಯಾಲಯದ ಟ್ರಸ್ಟಿಗಳಲ್ಲಿ ಒಬ್ಬರಾಗಿದ್ದಾರೆ. ಇದು ಯುಎಸ್ ಮೂಲದ ಬಿಲಿಯನೇರ್ ಹೂಡಿಕೆದಾರ ಜಾರ್ಜ್ ಸೊರೊಸ್ರ ಓಪನ್ ಸೊಸೈಟಿ ಫೌಂಡೇಶನ್‌ನಿಂದ ಹಣಕಾಸು ಒದಗಿಸಲ್ಪಟ್ಟಿದೆ ಎಂದು ಭಾಟಿಯಾ ತಿಳಿಸಿದ್ದಾರೆ.
ಸೊರೊಸ್ ಸಹಚರರೊಂದಿಗೆ ರಾಹುಲ್ ಗಾಂಧಿ ಸಂಬಂಧ ಪ್ರಶ್ನಿಸಿದ ಬಿಜೆಪಿ
ಕಾಂಗ್ರೆಸ್ನಿಂದ ತಕ್ಷಣದ ಪ್ರತಿಕ್ರಿಯೆ ಬಂದಿಲ್ಲ. ಕಳೆದ ವರ್ಷವೂ, ವಿರೋಧಪಕ್ಷದ ಉನ್ನತ ನಾಯಕರು ಭಾರತ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಸೊರೊಸ್-ಅನುದಾನಿತ ಸಂಸ್ಥೆಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಬಿಜೆಪಿ ಆರೋಪಿಸಿತ್ತು.
ಯಾರಾದರೂ ಭಾರತ ವಿರೋಧಿ ಶಕ್ತಿಗಳನ್ನು ಭೇಟಿಯಾಗಿ ವಿದೇಶಿ ನೆಲದಿಂದ ಭಾರತವನ್ನು ಅವಮಾನಿಸಿದರೆ, ಅದು ಬೇರೆ ಯಾರೂ ಅಲ್ಲ, ರಾಹುಲ್ ಮಾತ್ರ ಆಗಿರುತ್ತಾರೆ ಎಂದು ಭಾಟಿಯಾ ಆರೋಪಿಸಿದ್ಧಾರೆ. ಜಾರ್ಜ್ ಸೊರೊಸ್ ಮತ್ತು ರಾಹುಲ್ ಗಾಂಧಿ ಎರಡು ದೇಹಗಳು ಆದರೆ ಒಂದೇ ಆತ್ಮ ಎಂದು ಭಾಟಿಯಾ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸಂಸತ್ತಿನ ಪ್ರತಿಯೊಂದು ಅಧಿವೇಶನದ ಸಮಯದಲ್ಲಿ ರಾಹುಲ್ ಗಾಂಧಿ ವಿದೇಶಕ್ಕೆ ಹೋಗಿ ಭಾರತದ ಬಗ್ಗೆ ಅಸೂಯೆ ಪಟ್ಟ ಮತ್ತು ಅದರ ಸಮಗ್ರತೆಯ ಮೇಲೆ ದಾಳಿ ಮಾಡುವ ಭಾರತದ ಶತ್ರುಗಳನ್ನು ಭೇಟಿಯಾಗುವುದು ಏಕೆ ಎಂದು ಬಿಜೆಪಿ ವಕ್ತಾರರು ಪ್ರಶ್ನಿಸಿದ್ದಾರೆ.
ಗಾಂಧಿಯವರು ತಮ್ಮ ಹಿಂದಿನ ವಿದೇಶ ಭೇಟಿಗಳಲ್ಲಿಯೂ ಸಹ ಭಾರತ ವಿರೋಧಿ ಶಕ್ತಿಗಳನ್ನು ಭೇಟಿಯಾಗಿದ್ದರು. ಅಲ್ಲದೆ, ಗಾಂಧಿ ಹೇಳಿಕೆಗಳ ಮೂಲಕ ಭಾರತವನ್ನು ಅವಮಾನಿಸಿದ್ದಾರೆ ಮತ್ತು ದೂಷಿಸಿದ್ದಾರೆ ಎಂದು ಭಾಟಿಯಾ ಆರೋಪಿಸಿದ್ದಾರೆ.
ರಾಹುಲ್ ಗಾಂಧಿ ಇಂತಹ ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಿರುವುದು ಇದೇ ಮೊದಲಲ್ಲ ಎಂದು ಹೇಳಿದ ಭಾಟಿಯಾ, ರಾಹುಲ್ ಗಾಂಧಿ ಈಗ ಮೀರ್ ಜಾಫರ್ ಆಗಿದ್ದಾರೆ. ಅಲ್ಲದೆ, ಜಾರ್ಜ್ ಸೊರೊಸ್ ಭಾರತ ವಿರೋಧಿ ಹೇಳಿಕೆಗಳನ್ನು ನೀಡುತ್ತಾರೆ. ಭಾರತದಲ್ಲಿ ಅಶಾಂತಿ ಸೃಷ್ಟಿಸಲು ಮತ್ತು ದೇಶದ ಸಮಗ್ರತೆ ಮತ್ತು ಸಾರ್ವಭೌಮತ್ವದ ಮೇಲೆ ದಾಳಿ ಮಾಡಲು ಹಣವನ್ನು ಒದಗಿಸುತ್ತಾರೆ ಎಂದು ಭಾಟಿಯಾ ಆರೋಪಿಸಿದ್ದಾರೆ. ಜಾರ್ಜ್ ಸೊರೊಸ್ ಭಾರತೀಯರಲ್ಲ, ಅವರು ವಿದೇಶಿಯರಾಗಿದ್ದಾರೆ. ಆದರೆ, ರಾಹುಲ್ ಗಾಂಧಿ ಸಂವಿಧಾನವನ್ನು ರಕ್ಷಿಸುವ ಪ್ರಮಾಣವಚನ ಸ್ವೀಕರಿಸಿದ್ದಾರೆ ಎಂದು ಭಾಟಿಯಾ ಕಿಡಿಕಾರಿದ್ದಾರೆ,(ಏಜೆನ್ಸೀಸ್).