ಪುಟಿನ್ ನ್ಯೂಕ್ಲಿಯರ್ ಗೇಮ್!; ಕಜಾಕಿಸ್ತಾನದಲ್ಲಿ ಮೊದಲ ಅಣು ವಿದ್ಯುತ್ ಸ್ಥಾವರ ನಿರ್ಮಾಣಕ್ಕೆ ರಷ್ಯಾ ಐತಿಹಾಸಿಕ ಸಹಿ!
ಅಸ್ತಾನಾ: ಭೌಗೋಳಿಕ ರಾಜಕೀಯ ವಲಯದಲ್ಲಿ ಅಮೆರಿಕ ಹಾಗೂ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ನಡುಕ ಹುಟ್ಟಿಸುವಂತೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತೊಂದು ಪ್ರಬಲ ನ್ಯೂಕ್ಲಿಯರ್ ಪವರ್ ಪ್ಲೇ ಪ್ರದರ್ಶಿಸಿದ್ದಾರೆ. ಮಧ್ಯ ಏಷ್ಯಾದ ಪ್ರಮುಖ ರಾಷ್ಟ್ರವಾದ ಕಜಾಕಿಸ್ತಾನಕ್ಕೆ ಅಧಿಕೃತ ಭೇಟಿ ನೀಡಿರುವ ಪುಟಿನ್(Putins Nuclear Play), ಅಲ್ಲಿನ ಅಧ್ಯಕ್ಷ ಕಾಸ್ಸಿಮ್-ಜೋಮಾರ್ಟ್ ಟೋಕಾಯೆವ್ ಅವರೊಂದಿಗೆ ಮಾತುಕತೆ ನಡೆಸಿ, ಆ ದೇಶದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಅಣು ವಿದ್ಯುತ್ ಸ್ಥಾವರವನ್ನು ಜಂಟಿಯಾಗಿ ನಿರ್ಮಿಸುವ ಐತಿಹಾಸಿಕ ಒಪ್ಪಂದಕ್ಕೆ ಗುರುವಾರ ಸಹಿ ಹಾಕಿದ್ದಾರೆ.
ಈ ಕುರಿತು ರಾಜಧಾನಿ ಅಸ್ತಾನಾದಲ್ಲಿ ನಡೆದ ಈ ಹೈ-ಪ್ರೊಫೈಲ್ ಸಭೆಯು ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ರಷ್ಯಾದ ಪ್ರಭುತ್ವವನ್ನು ಮತ್ತಷ್ಟು ಗಟ್ಟಿಗೊಳಿಸಿದೆ.
ಈ ಐತಿಹಾಸಿಕ ಒಪ್ಪಂದದ ಕುರಿತು ಹರ್ಷ ವ್ಯಕ್ತಪಡಿಸಿರುವ ಕಜಾಕಿಸ್ತಾನ್ ಅಧ್ಯಕ್ಷ ಟೋಕಾಯೆವ್, ಬಾಲ್ಖಾಶ್ ಪರಮಾಣು ವಿದ್ಯುತ್ ಸ್ಥಾವರದ ನಿರ್ಮಾಣಕ್ಕಾಗಿ ಇಂದು ಸಹಿ ಮಾಡಲಾದ ಈ ಒಪ್ಪಂದವು ನಮ್ಮ ದೇಶದ ಇತಿಹಾಸದಲ್ಲೇ ಅತ್ಯಂತ ಮಹತ್ವದ ಮೈಲಿಗಲಾಗಿದೆ. ಇಷ್ಟು ದೊಡ್ಡ ಪ್ರಮಾಣದ ಜಾಗತಿಕ ಯೋಜನೆಯನ್ನು ಅನುಷ್ಠಾನಗೊಳಿಸಲು ರಷ್ಯಾ ನೀಡುತ್ತಿರುವ ಬೆಂಬಲಕ್ಕೆ ನಾನು ಅಧ್ಯಕ್ಷ ಪುಟಿನ್ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಅಧಿಕೃತವಾಗಿ ಘೋಷಿಸಿದ್ದಾರೆ.
15 ಬಿಲಿಯನ್ ಡಾಲರ್ ಮೆಗಾ ಡೀಲ್; ಶೇ. 85 ರಷ್ಟು ಬಂಡವಾಳ ರಷ್ಯಾದ್ದು!
ಸುದ್ದಿ ಸಂಸ್ಥೆ ರಾಯಿಟರ್ಸ್ ಬಿಡುಗಡೆ ಮಾಡಿರುವ ಆಳವಾದ ವರದಿಯ ಪ್ರಕಾರ, ಈ ದೈತ್ಯ ಪರಮಾಣು ಯೋಜನೆಗಾಗಿ ರಷ್ಯಾ ಸರ್ಕಾರವು ಕಜಾಕಿಸ್ತಾನಕ್ಕೆ ಭಾರಿ ಮೊತ್ತದ ರಫ್ತು ಕ್ರೆಡಿಟ್ ಹಣಕಾಸು ನೆರವನ್ನು ನೀಡಲಿದೆ. ಕಜಾಕಿಸ್ತಾನದ ಪರಮಾಣು ಇಂಧನ ಸಂಸ್ಥೆಯ ಮಾಹಿತಿ ಅನ್ವಯ, ಈ ಇಡೀ ಸ್ಥಾವರ ನಿರ್ಮಾಣಕ್ಕೆ ಬರೋಬ್ಬರಿ 15 ಬಿಲಿಯನ್ ಅಮೆರಿಕನ್ ಡಾಲರ್ (ಸುಮಾರು 1.25 ಲಕ್ಷ ಕೋಟಿ ರೂಪಾಯಿ) ವೆಚ್ಚವಾಗಲಿದ್ದು, ಈ ಬೃಹತ್ ವೆಚ್ಚದ ಪೈಕಿ ಶೇಕಡಾ 85 ಕ್ಕೂ ಹೆಚ್ಚು ಭಾಗವನ್ನು ಮಾಸ್ಕೋ ಸ್ವತಃ ಫಂಡಿಂಗ್ ಮಾಡಲಿದೆ. ಅಲ್ಲದೆ, ಆಗ್ನೇಯ ಕಜಾಕಿಸ್ತಾನದ ಪ್ರಸಿದ್ಧ ‘ಬಾಲ್ಖಾಶ್’ ಸರೋವರದ ತೀರದಲ್ಲಿರುವ ಉಲ್ಕೆನ್ ಗ್ರಾಮದ ಬಳಿ ಈ ಹೈ-ಟೆಕ್ ಪರಮಾಣು ಸೌಲಭ್ಯ ತಲೆಎತ್ತಲಿದ್ದು, ಇದು ಎರಡು ಅತ್ಯಾಧುನಿಕ ನ್ಯೂಕ್ಲಿಯರ್ ರಿಯಾಕ್ಟರ್‌ಗಳನ್ನು ಒಳಗೊಂಡಿರಲಿದೆ.
ಸೋವಿಯತ್ ಕರಾಳ ಇತಿಹಾಸದ ಆಘಾತ ಮೆಟ್ಟಿ ನಿಂತ ಕಜಾಕಿಸ್ತಾನ್!
ವಿಶ್ವದಲ್ಲೇ ಅತಿ ಹೆಚ್ಚು ಯುರೇನಿಯಂ ಉತ್ಪಾದಿಸುವ ನಂಬರ್ 1 ರಾಷ್ಟ್ರವಾಗಿದ್ದರೂ ಕಜಾಕಿಸ್ತಾನ್ ಕಳೆದ ಎರಡು ದಶಕಗಳಿಂದ ಅಣುಶಕ್ತಿ ಬಳಕೆಗೆ ತೀವ್ರ ಹಿಂಜರಿಕೆ ವ್ಯಕ್ತಪಡಿಸುತ್ತಾ ಬಂದಿತ್ತು. ಇದಕ್ಕೆ ಕಾರಣ ಸೋವಿಯತ್ ಒಕ್ಕೂಟದ ಕಾಲದಲ್ಲಿ ಕಜಾಕಿಸ್ತಾನ್ ನೆಲದಲ್ಲಿ ನಡೆಸಲಾಗಿದ್ದ ಕರಾರುವಾಕ್ ಪರಮಾಣು ಪರೀಕ್ಷೆಗಳು ಸೃಷ್ಟಿಸಿದ್ದ ಕರಾಳ ಪರಿಸರ ಮಾಲಿನ್ಯ ಮತ್ತು ಲಕ್ಷಾಂತರ ಜನರ ಸಾರ್ವಜನಿಕ ಆರೋಗ್ಯದ ಮೇಲಿನ ಭೀಕರ ಆಘಾತಗಳಾಗಿದ್ದವು.
ಆದರೆ, ಹೆಚ್ಚುತ್ತಿರುವ ಇಂಧನ ಅಭಾವವನ್ನು ನೀಗಿಸಲು ಕಜಾಕಿಸ್ತಾನ್ ಸರ್ಕಾರ 2024 ರಲ್ಲಿ ದೇಶಾದ್ಯಂತ ಐತಿಹಾಸಿಕ ರಾಷ್ಟ್ರೀಯ ಜನಾಭಿಪ್ರಾಯ ಸಂಗ್ರಹಣೆ ನಡೆಸಿತ್ತು. ಅಲ್ಲಿನ ಜನತೆ ಅಣು ಸ್ಥಾವರ ನಿರ್ಮಾಣದ ಪರವಾಗಿ ಭರ್ಜರಿ ಮತ ಚಲಾಯಿಸಿದ್ದರಿಂದಲೇ ಇಂದು ಪುಟಿನ್ ಜೊತೆಗಿನ ಈ ಐತಿಹಾಸಿಕ ಒಪ್ಪಂದಕ್ಕೆ ಹಾದಿ ಸುಗಮವಾಗಿದೆ.
ಸುಮಾರು 2.05 ಕೋಟಿ ಜನಸಂಖ್ಯೆ ಹೊಂದಿರುವ ಕಜಾಕಿಸ್ತಾನ್, ತನ್ನ ದೀರ್ಘಾವಧಿಯ ಇಂಧನ ಕಾರ್ಯತಂತ್ರದ ಭಾಗವಾಗಿ ಮತ್ತು ವಿದ್ಯುತ್ ಉತ್ಪಾದನೆಯನ್ನು ವೈವಿಧ್ಯಗೊಳಿಸುವ ನಿಟ್ಟಿನಲ್ಲಿ 2035 ರ ವೇಳೆಗೆ 2.4 ಗಿಗಾವ್ಯಾಟ್ ಪರಮಾಣು ಇಂಧನ ಸಾಮರ್ಥ್ಯವನ್ನು ಹೊಂದುವ ಮಹತ್ವಾಕಾಂಕ್ಷಿ ಗುರಿಯನ್ನು ಹೊಂದಿದ್ದು, ಪುಟಿನ್ ಅವರ ಈ ಆಕ್ಷನ್ ಪ್ಲಾನ್ ಇಡೀ ಏಷ್ಯಾ ಖಂಡದ ಭೌಗೋಳಿಕ ರಕ್ಷಣಾ ವಲಯದಲ್ಲಿ ಹೊಸ ಸಂಚಲನ ಮೂಡಿಸಿದೆ,(ಏಜೆನ್ಸೀಸ್).