Putin India Visit | ನವದೆಹಲಿಯ ಹೈದರಾಬಾದ್ ಹೌಸ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ 
ವಿದೇಶ

Putin India Visit | ಭಾರತಕ್ಕೆ ನಿರಂತರ ಇಂಧನ ಪೂರೈಕೆ ಮಾಡಲು ರಷ್ಯಾ ಸಿದ್ಧ...ದೆಹಲಿಯಿಂದಲೇ ಟ್ರಂಪ್​ಗೆ ಪುಟಿನ್ ಕೌಂಟರ್​​

ದೆಹಲಿ: ಭಾರತಕ್ಕೆ ಇಂಧನದ ತಡೆರಹಿತ ಸಾಗಣೆಯನ್ನು ಕಾಯ್ದುಕೊಳ್ಳುವ ಮಾಸ್ಕೋದ ಬದ್ಧತೆಯನ್ನು ಪುನರುಚ್ಚರಿಸಿರುವ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ರಷ್ಯಾ ತೈಲ, ಅನಿಲ, ಕಲ್ಲಿದ್ದಲು ಮತ್ತು ಭಾರತದ ಇಂಧನ ಅಭಿವೃದ್ಧಿಗೆ ಅಗತ್ಯವಿರುವ ಎಲ್ಲದರ ವಿಶ್ವಾಸಾರ್ಹ ಪೂರೈಕೆದಾರ ಎಂದು ಹೇಳಿದರು.
ನವದೆಹಲಿಯ ಹೈದರಾಬಾದ್ ಹೌಸ್‌ನಲ್ಲಿ ನಡೆದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೊಂದಿಗಿನ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪುಟಿನ್​, ಭಾರತದ ದೀರ್ಘಕಾಲೀನ ಇಂಧನ ಅವಶ್ಯಕತೆಗಳನ್ನು ಯಾವುದೇ ಅಡೆತಡೆಯಿಲ್ಲದೆ ಮುಂದುವರೆಸಲು ಮಾಸ್ಕೋ ಸಿದ್ಧವಾಗಿದ್ದು, ವೇಗವಾಗಿ ಬೆಳೆಯುತ್ತಿರುವ ಭಾರತದ ಆರ್ಥಿಕತೆಗೆ ಇಂಧನದ ನಿರಂತರ ಸಾಗಣೆಯನ್ನು ಮುಂದುವರಿಸಲು ನಾವು ತಯಾರಾಗಿದ್ದೇವೆ ಎಂದು ಹೇಳಿದರು.

ಐದು ದಶಕಗಳ ರಕ್ಷಣಾ ಪಾಲುದಾರಿಕೆಯನ್ನು ಪುಟಿನ್ ಶ್ಲಾಘನೆ...

ಭಾರತ ಮತ್ತು ರಷ್ಯಾ ನಡುವಿನ ದೀರ್ಘಕಾಲದ ರಕ್ಷಣಾ ಸಂಬಂಧವನ್ನು ಶ್ಲಾಘಿಸಿರುವ ಪುಟಿನ್, ರಷ್ಯಾ ಕಳೆದ ಐದು ದಶಕದಲ್ಲಿ ವಾಯು ರಕ್ಷಣಾ ಪಡೆಗಳು, ವಾಯುಯಾನ ಮತ್ತು ನೌಕಾಪಡೆ ಸೇರಿದಂತೆ ಭಾರತೀಯ ಸೇನೆಯನ್ನು ಶಸ್ತ್ರಸಜ್ಜಿತಗೊಳಿಸಲು ಮತ್ತು ಆಧುನೀಕರಿಸಲು ಸಹಾಯ ಮಾಡುತ್ತಿದೆ. ನಾವು ಈಗ ನಡೆಸಿದ ಮಾತುಕತೆಯ ಫಲಿತಾಂಶಗಳಿಂದ ಸಂತೃಪ್ತರಾಗಿದ್ದು, ಈ ಭೇಟಿ ಫಲಿತಾಂಶ ರಷ್ಯಾ ಮತ್ತು ಭಾರತದ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಗಾಢವಾಗಿಸಲು ಸಹಾಯ ಮಾಡುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಜಾಗತಿಕ ರಾಜತಾಂತ್ರಿಕತೆಗಾಗಿ...

ಬ್ರಿಕ್ಸ್, ಎಸ್‌ಸಿಒ ಮತ್ತು ಜಾಗತಿಕ ಬಹುಮತದ ಇತರ ದೇಶಗಳಲ್ಲಿ ಸಮಾನ ಮನಸ್ಸಿನ ದೇಶಗಳೊಂದಿಗೆ ರಷ್ಯಾ ಮತ್ತು ಭಾರತ ಸ್ವತಂತ್ರ ಮತ್ತು ಸ್ವಾವಲಂಬಿ ವಿದೇಶಾಂಗ ನೀತಿಯನ್ನು ನಡೆಸುತ್ತಿವೆ. ನಾವು ವಿಶ್ವಸಂಸ್ಥೆಯಲ್ಲಿ ಪ್ರತಿಪಾದಿಸಲಾದ ಕಾನೂನಿನ ಮುಖ್ಯ ತತ್ವವನ್ನು ಸಮರ್ಥಿಸುತ್ತಿದ್ದೇವೆ ಎಂದು ಹೇಳಿದರು.

ಹೊಸ ಸಾರಿಗೆ ಕಾರಿಡಾರ್‌...

ಹೊಸ ಅಂತರರಾಷ್ಟ್ರೀಯ ಸಾರಿಗೆ ಮಾರ್ಗಗಳ ಪ್ರಗತಿಯನ್ನು ಉಲ್ಲೇಖಿಸಿದ ಪುಟಿನ್​, ರಷ್ಯಾ ಅಥವಾ ಬೆಲಾರಸ್‌ನಿಂದ ಹಿಂದೂ ಮಹಾಸಾಗರದ ಕರಾವಳಿಗೆ ಉತ್ತರ-ದಕ್ಷಿಣ ಸಾರಿಗೆಯನ್ನು ನಿರ್ಮಿಸಯವ ಯೋಜನೆ ಸೇರಿದಂತೆ ಹೊಸ ಅಂತರರಾಷ್ಟ್ರೀಯ ಸಾರಿಗೆ ಮಾರ್ಗಗಳನ್ನು ನಿರ್ಮಿಸಲು ನಾವು ನಮ್ಮ ಭಾರತೀಯ ಪಾಲುದಾರರೊಂದಿಗೆ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು. ಭಾರತದ ಅತಿದೊಡ್ಡ ಪರಮಾಣು ಸ್ಥಾವರವನ್ನು ನಿರ್ಮಿಸುವ ಯೋಜನೆಯಲ್ಲಿ ನಾವು ಕೆಲಸ ಮಾಡುತ್ತಿದ್ದು. ಆರು ರಿಯಾಕ್ಟರ್‌ಗಳಲ್ಲಿ, ಈಗಾಗಲೇ ಮೂರು ಇಂಧನ ಜಾಲಕ್ಕೆ ಸಂಪರ್ಕ ಹೊಂದಿವೆ ಎಂದು ಹೇಳಿದರು.

ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ಮೋದಿಗೆ ಪುಟಿನ್ ಧನ್ಯವಾದ

ಭಾರತದಲ್ಲಿ ತಮಗೆ ಸಿಕ್ಕ ಅದ್ಭುತ ಸ್ವಾಗತಕ್ಕಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ಮೋದಿಗೆ ಧನ್ಯವಾದ ತಿಳಿಸಿದ ಪುಟಿನ್​, ಉಭಯ ದೇಶಗಳ ನಡುವಿನ ಉತ್ಪಾದಕ ಸಂವಾದವನ್ನು ಸ್ಥಾಪಿಸಲು ಪ್ರಧಾನಿ ಮೋದಿ ಜೊತೆ ನಿರಂತರ ಸಂಪರ್ಕದಲ್ಲಿರುವುದಾಗಿ ತಿಳಿಸಿದರು. ಭೋಜನಕೂಟದಲ್ಲಿ ಪ್ರಧಾನಿ ಮೋದಿ ಅವರೊಂದಿಗಿನ ನನ್ನ ಮಾತುಕತೆಗಳು ನಮ್ಮ ಕಾರ್ಯತಂತ್ರದ ಪಾಲುದಾರಿಕೆಗೆ ಬಹಳ ಸಹಾಯಕವಾಗಿದ್ದವು. ನಾವು ಈ ಹಿಂದೆ SCO ಶೃಂಗಸಭೆಯ ಸಮಯದಲ್ಲಿ ಭೇಟಿಯಾದೆವು ಎಂದರು(ಏಜೆನ್ಸೀಸ್​).