ಅಮೆರಿಕ-ಇರಾನ್ ಯುದ್ಧ ನಿಲ್ಲಿಸಲು ಮುಂದಾದ ಪುಟಿನ್​ 
ವಿದೇಶ

ಅಮೆರಿಕ-ಇರಾನ್ ಸಂಘರ್ಷಕ್ಕೆ ಎಂಟ್ರಿಕೊಟ್ಟ ಪುಟಿನ್; ಮಧ್ಯಪ್ರಾಚ್ಯದಲ್ಲಿ ನಾನೇ ಶಾಂತಿ ಸ್ಥಾಪಿಸುತ್ತೇನೆ; ರಷ್ಯಾ ಅಧ್ಯಕ್ಷರ ಭರವಸೆ! Vladimir Putin

ಮಾಸ್ಕೋ: ಇತ್ತೀಚೆಗೆ ಅಮೆರಿಕದಲ್ಲಿ ಮಧ್ಯಂತರ ಚುನಾವಣೆ ನಡೆದಿದ್ದು, ಅದರಲ್ಲಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ನಾಯಕತ್ವದ ರಿಪಬ್ಲಿಕ್​ ಪಕ್ಷ ಸೋಲನ್ನು ಕಂಡಿದೆ. ಇರಾನ್​ ಮೇಲಿನ ಯುದ್ಧ, ಅಧಿಕ ತೆರಿಗೆ ಹಾಗೂ ನಿರಂಕುಶ ಪ್ರಭುತ್ವವೇ ಈ ಸೋಲಿಗೆ ಕಾರಣವೆಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ.

ಕಳೆದ ಎಂಟು ತಿಂಗಳಿನಿಂದ ನಡೆಯುತ್ತಿರುವ ಅಮೆರಿಕ- ಇರಾನ್​ ಸಂಘರ್ಷದಿಂದ ಈಡೀ ಜಗತ್ತೇ ಕಂಗೆಟ್ಟಿದ್ದು, ಆದಷ್ಟು ಬೇಗ ಈ ಸಮಸ್ಯೆಗೆ ಪರಿಹಾರ ಕಾಣುವಂತಾಗಲೀ ಎನ್ನುವುದು ಎಲ್ಲಾ ದೇಶಗಳ ಆಶಯವಾಗಿದೆ.

ಗುರುವಾರ (ನ.5) ಇರಾನ್ ಭದ್ರತಾ ಮುಖ್ಯಸ್ಥ ಮೊಹ್ಸೆನ್ ರೆಜೈ, ರಷ್ಯಾಗೆ ಬೇಟಿ ನೀಡಿದ್ದ ಸಂದರ್ಭದಲ್ಲಿ ಅಧ್ಯಕ್ಷ ವ್ಲಾಡಿಮೀರ್ ಪುಟಿನ್​, ಟೆಹ್ರಾನ್ ಮೇಲೆ ಅಮೆರಿಕ ದಾಳಿಯನ್ನು ಖಂಡಿಸಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಈ ಸಂಘರ್ಷಕ್ಕೆ ಬ್ರೇಕ್​ ಬೀಳಲಿದೆ. ಇದರ ಮಧ್ಯಸ್ಥಿಕೆಯನ್ನು ರಷ್ಯಾ ವಹಸಿಕೊಳ್ಳಲಿದೆ ಎಂಬ ಭರವಸೆ ನೀಡಿದ್ದಾರೆಂದು ಜಾಗತಿಕ ಮಾಧ್ಯಮಗಳು ವರದಿ ಮಾಡಿವೆ.

ನಾನು ನಿಮ್ಮೊಂದಿಗಿದ್ದೇನೆ!

ವರದಿ ಪ್ರಕಾರ, ರಷ್ಯಾ ಅಧ್ಯಕ್ಷ ವ್ಲಾಡಿಮೀರ್ ಪುಟಿನ್​ ರನ್ನು ಇರಾನ್ ಭದ್ರತಾ ಮುಖ್ಯಸ್ಥ ಮೊಹ್ಸೆನ್ ರೆಜೈ ಬೇಟಿ ಮಾಡಿದ್ದು, ತಮ್ಮ ಮಿಲಿಟರಿ ಪರಿಸ್ಥಿತಿ ಹಾಗೂ ಅಮೆರಿಕ ಜೊತೆ ಮುಂದುವರಿದಿರುವ ಬಿಕ್ಕಟ್ಟಿನ ಬಗ್ಗೆ ವಿವರಿಸಿದ್ದಾರೆ.

ಇದನ್ನು ಕೇಳಿಸಿಕೊಂಡ ಪುಟಿನ್​, ಅಮೆರಿಕ ಮತ್ತು ಇರಾನ್​ ನಡುವಿನ ಸಂಘರ್ಷವನ್ನು ನಿಲ್ಲಿಸಲು ಏನು ಮಾಡಲು ಸಾಧ್ಯವೋ ಅದನ್ನು ನಾನು ಮಾಡುತ್ತೇನೆ. ಆದರೆ, ಇರಾನ್​ ದೇಶದ ಪರಮಾಣು ಘಟಕಗಳ ಮೇಲೆ ಅಮೆರಿಕ ನಡೆಸಿರುವ ದಾಳಿಯನ್ನು ತಾವು ವಿರೋಧಿಸುತ್ತೇವೆ. ಇದಕ್ಕೆಲ್ಲಾ ಆದಷ್ಟು ಬೇಗ ಪರಿಹಾರ ಕಂಡುಕೊಳ್ಳಲಾಗುವುದೆಂದು ಹೇಳಿದ್ದಾರೆ.

7 ಷರತ್ತುಗಳನ್ನು ಮುಂದಿಟ್ಟ ಇರಾನ್​!

ಇನ್ನು ಮಧ್ಯಂತರ ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದರೂ, ಡೊನಾಲ್ಡ್​ ಟ್ರಂಪ್​ ದೌಲತ್ತು ಇನ್ನು ಕಡಿಮೆಯಾಗಿಲ್ಲ. ಇರಾನ್​ನ ಪ್ರತಿ ಇಂಚು ಭೂಮಿಯನ್ನು ಧ್ವಂಸ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಆದರೆ, ಈ ಬೆದರಿಕೆಗೆ ಜಗ್ಗದ ಇರಾನ್​, ತಮ್ಮ 7 ಷರತ್ತುಗಳನ್ನು ಒಪ್ಪಿಕೊಂಡರೆ ಮಾತ್ರ ಶಾಂತಿ ಮಾತುಕತೆ ನಡೆಸುತ್ತೇವೆ. ಇಲ್ಲದಿದ್ದರೆ ಹೊರ್ಮುಜ್​ ಜಲಸಂಧಿ ತೆರೆಯುವ ಪ್ರಶ್ನೆಯೇ ಉದ್ಭವಿಸುವುದಿಲ್ಲವೆಂದು ಹೇಳಿದ್ದಾರೆ.

ಇರಾನ್​ ಮುಂದಿಟ್ಟಿರುವ 7 ಷರತ್ತುಗಳು:

1. ಲೆಬನಾನ್ ಯುದ್ಧಕ್ಕೆ ಫುಲ್‌ಸ್ಟಾಪ್: ಲೆಬನಾನ್‌ನಲ್ಲಿ ನಡೆಯುತ್ತಿರುವ ಮಿಲಿಟರಿ ಸಂಘರ್ಷವನ್ನು ಸಂಪೂರ್ಣವಾಗಿ ನಿಲ್ಲಿಸಬೇಕು.

2. ನೌಕಾ ದಿಗ್ಬಂಧನ ತೆರವು: ಇರಾನ್‌ನ ಪ್ರಮುಖ ಬಂದರುಗಳ ಮೇಲೆ ಅಮೆರಿಕ ವಿಧಿಸಿರುವ ನೌಕಾ ದಿಗ್ಬಂಧನವನ್ನು ತಕ್ಷಣವೇ ಹಿಂಪಡೆಯಬೇಕು.

3. ನಿರ್ಬಂಧಗಳ ರದ್ದು: ಇರಾನ್ ಮೇಲೆ ಹೇರಿರುವ ಎಲ್ಲಾ ಆರ್ಥಿಕ ನಿರ್ಬಂಧಗಳನ್ನು ರದ್ದುಗೊಳಿಸಬೇಕು.

4. ಆಸ್ತಿ ಬಿಡುಗಡೆ: ವಿದೇಶಗಳಲ್ಲಿ ಅಮೆರಿಕ ಮುಟ್ಟುಗೋಲು ಹಾಕಿಕೊಂಡಿರುವ ಇರಾನ್‌ನ ಬಿಲಿಯನ್‌ಗಟ್ಟಲೆ ಡಾಲರ್ ಮೌಲ್ಯದ ಆಸ್ತಿಯನ್ನು ಮುಕ್ತಗೊಳಿಸಬೇಕು.

5. ಅಮೆರಿಕ ಸೇನೆ ವಾಪಸ್: ಮಧ್ಯಪ್ರಾಚ್ಯ ಭಾಗದಲ್ಲಿ ಬೀಡುಬಿಟ್ಟಿರುವ ಅಮೆರಿಕದ ಸೇನಾ ಪಡೆಯನ್ನು ಗಣನೀಯವಾಗಿ ಕಡಿತಗೊಳಿಸಬೇಕು.

6. ಯುದ್ಧ ನಷ್ಟ ಪರಿಹಾರ: ಈವರೆಗೆ ನಡೆದಿರುವ ದಾಳಿ ಮತ್ತು ಹಾನಿಗೆ ಅಮೆರಿಕವೇ ಸಂಪೂರ್ಣ ನಷ್ಟ ಪರಿಹಾರ ನೀಡಬೇಕು.

7. ದಾಳಿಗೆ ಬ್ರೇಕ್: ಇರಾನ್ ಭೂಪ್ರದೇಶದ ಮೇಲೆ ಅಮೆರಿಕ ನಡೆಸುತ್ತಿರುವ ದಾಳಿಗಳನ್ನು ಸಂಪೂರ್ಣವಾಗಿ ಕೊನೆಗೊಳಿಸಬೇಕು.

ಈಗ ಇರಾನ್​ ಪ್ರಸ್ತಾಪಿಸಿರುವ ಈ ಏಳು ಷರತ್ತುಗಳನ್ನು ಡೊನಾಲ್ಡ್​ ಟ್ರಂಪ್​ ಒಪ್ಪಿಕೊಳ್ಳುತ್ತಾರಾ? ಇಲ್ಲವೇ ಅಮೆರಿಕ, ಟೆಹ್ರಾನ್​ ಮೇಲೆ ದಾಳಿ ಮುಂದುವರಿಸುತ್ತಾ? ರಷ್ಯಾ ಅಧ್ಯಕ್ಷ ಪುಟಿನ್​ ಈ ಸಂಘರ್ಷವನ್ನು ಹೇಗೆ ನಿಲ್ಲಿಸಲಿದ್ದಾರೆ? ಎಂಬೆಲ್ಲಾ ಪ್ರಶ್ನೆಗಳಿಗೆ ಕಾಲವೇ ಉತ್ತರಿಸಬೇಕಿದೆ, (ಏಜೆನ್ಸೀಸ್​).