ಕರಾಚಿ: ಪಾಕಿಸ್ತಾನ ಸೂಪರ್ ಲೀಗ್ (PSL) 2026ರ ಎರಡನೇ ಎಲಿಮಿನೇಟರ್ ಪಂದ್ಯದಲ್ಲಿ ಇಸ್ಲಾಮಾಬಾದ್ ಯುನೈಟೆಡ್ ವಿರುದ್ಧ ಹೈದರಾಬಾದ್ ಕಿಂಗ್ಸ್‌ಮೆನ್ ರೋಚಕ ಜಯ ಸಾಧಿಸಿದೆ. ಕೇವಲ 2 ರನ್‌ಗಳ ಅಂತರದಿಂದ ಗೆಲುವು ದಾಖಲಿಸಿದ ಮಾರ್ನಸ್ ಲಬುಶೇನ್ ನೇತೃತ್ವದ ಹೈದರಾಬಾದ್ ತಂಡವು ಅದ್ಧೂರಿಯಾಗಿ ಫೈನಲ್ ಪ್ರವೇಶಿಸಿದೆ. ಭಾನುವಾರ ನಡೆಯಲಿರುವ ಫೈನಲ್ ಹಣಾಹಣಿಯಲ್ಲಿ ಹೈದರಾಬಾದ್ ತಂಡವು ಪೇಶಾವರ ಝಲ್ಮಿ ತಂಡವನ್ನು ಎದುರಿಸಲಿದೆ.
ರೋಚಕ ಅಂತ್ಯ ಕಂಡ ಪಂದ್ಯ
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ ಕಿಂಗ್ಸ್‌ಮೆನ್, ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 186 ರನ್‌ಗಳ ಸ್ಪರ್ಧಾತ್ಮಕ ಮೊತ್ತವನ್ನು ಪೇರಿಸಿತು. ತಂಡದ ಪರ ಉಸ್ಮಾನ್ ಖಾನ್ ಕೇವಲ 30 ಎಸೆತಗಳಲ್ಲಿ 61 ರನ್‌ಗಳ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ನಾಯಕ ಮಾರ್ನಸ್ ಲಬುಶೇನ್ (39) ಮತ್ತು ಸೈಮ್ ಅಯೂಬ್ (38) ಅವರ ಜವಾಬ್ದಾರಿಯುತ ಆಟ ತಂಡದ ಮೊತ್ತವನ್ನು ಹೆಚ್ಚಿಸಲು ನೆರವಾಯಿತು.
ಈ ಗುರಿಯನ್ನು ಬೆನ್ನಟ್ಟಿದ ಇಸ್ಲಾಮಾಬಾದ್ ಯುನೈಟೆಡ್ ಪರ ಮಾರ್ಕ್ ಚಾಪ್ಮನ್ (43) ಮತ್ತು ಹೈದರ್ ಅಲಿ (31) ಹೋರಾಟ ನಡೆಸಿದರೂ, ಅಂತಿಮವಾಗಿ 184/7 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಹೈದರಾಬಾದ್ ಪರ ಮೊಹಮ್ಮದ್ ಅಲಿ ಮತ್ತು ಹುನೈನ್ ಶಾ ತಲಾ ಎರಡು ವಿಕೆಟ್ ಪಡೆದು ಗೆಲುವಿನ ರೂವಾರಿಯಾದರು.
ಪಾಕ್ ವೇಗಿಯ ದ್ರಾವಿಡ್ ಉಲ್ಲೇಖ!
ಪಂದ್ಯದ ನಂತರ ಹೈದರಾಬಾದ್ ಕಿಂಗ್ಸ್‌ಮೆನ್ ತಂಡದ ವೇಗಿ ಮೊಹಮ್ಮದ್ ಅಲಿ ಅವರು ನೀಡಿದ ಹೇಳಿಕೆ ಈಗ ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ತಮ್ಮ ತಂಡದ ಗೆಲುವಿನ ಬಗ್ಗೆ ಮಾತನಾಡುತ್ತಾ ಅವರು ಭಾರತದ ಮಾಜಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಮಾತುಗಳನ್ನು ನೆನಪಿಸಿಕೊಂಡಿದ್ದಾರೆ.
"ನಾನು ಕೆಟ್ಟದಾಗಿ ಓವರ್ ಬೌಲಿಂಗ್ ಮಾಡಿದ ನಂತರ ಮಾತನಾಡಲು ಪದಗಳೇ ಸಿಗುತ್ತಿಲ್ಲ. ಈ ಗೆಲುವಿನ ಸಂಪೂರ್ಣ ಶ್ರೇಯಸ್ಸು ಹುನೈನ್ ಅವರಿಗೆ ಸಲ್ಲಬೇಕು. ಅವರು ಅಂತಿಮ ಓವರ್‌ನಲ್ಲಿ ಒತ್ತಡವನ್ನು ನಿಭಾಯಿಸಿದ ರೀತಿ ಅದ್ಭುತವಾಗಿತ್ತು. ಗ್ರೇಟ್ ರಾಹುಲ್ ದ್ರಾವಿಡ್ ಅವರು ಒಮ್ಮೆ ಹೇಳಿದ್ದರು- 'ಯಾರು ನಿಜವಾಗಿಯೂ ಕಷ್ಟಪಟ್ಟು ಕೆಲಸ ಮಾಡುತ್ತಾರೋ, ಅಂತವರಿಗೆ ಅದೃಷ್ಟ ಯಾವಾಗಲೂ ಒಲಿಯುತ್ತದೆ'. ಇಂದು ಹುನೈನ್ ಅವರ ಕಠಿಣ ಪರಿಶ್ರಮಕ್ಕೆ ಈ ಗೆಲುವು ಸಿಕ್ಕಿದೆ," ಎಂದು ಅಲಿ ಭಾವನಾತ್ಮಕವಾಗಿ ನುಡಿದರು.
ಹಿಂದಿನ ಪಂದ್ಯವೊಂದರಲ್ಲಿ ಹುನೈನ್ ಅವರು 14 ರನ್ ಉಳಿಸಿಕೊಳ್ಳಲು ಸಾಧ್ಯವಾಗದೆ ಸೋಲಿಗೆ ಕಾರಣವಾಗಿದ್ದರು, ಆದರೆ ಇಂದು ಅದೇ ಹುನೈನ್ ತಂಡವನ್ನು ಫೈನಲ್‌ಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಅಲಿ ಶ್ಲಾಘಿಸಿದರು. ಪಾಕಿಸ್ತಾನದ ವೇಗಿಯೊಬ್ಬರು ಗೆಲುವಿನ ಸಂಭ್ರಮದಲ್ಲಿ ಭಾರತದ ದಿಗ್ಗಜ ದ್ರಾವಿಡ್ ಅವರ ತತ್ವವನ್ನು ಉಲ್ಲೇಖಿಸಿರುವುದು ಅಭಿಮಾನಿಗಳ ಹೃದಯ ಗೆದ್ದಿದೆ,(ಏಜೆನ್ಸೀಸ್).