ಘಟನೆಯ ಸ್ಥಳ 
ವಿದೇಶ

ಪಿಓಕೆಯಲ್ಲಿ ಚುನಾವಣೆ ಬಹಿಷ್ಕಾರಕ್ಕೆ ಕರೆ ನೀಡಿ ಪ್ರತಿಭಟನೆ; ಪಾಕ್ ಸೇನೆಯಿಂದ ಭೀಕರ ಕಾರ್ಯಾಚರಣೆ; 20 ಮಂದಿ ಸಾವು | PoK

ಇಸ್ಲಾಮಾಬಾದ್: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ(PoK) ಚುನಾವಣೆಯನ್ನು ಬಹಿಷ್ಕರಿಸುವಂತೆ ಕರೆ ನೀಡಿದ್ದ ಸ್ಥಳೀಯರ ಮೇಲೆ ಪಾಕಿಸ್ತಾನ ಸೇನೆ ದಾಳಿ ನಡೆಸಿದ್ದು, ಕಳೆದ 24 ಗಂಟೆಗಳಲ್ಲಿ ಕನಿಷ್ಠ 20 ಕಾಶ್ಮೀರಿಗಳು ಮೃತಪಟ್ಟಿದ್ದು, 50 ಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ರಾವಲ್ಕೋಟ್‌ನ ಡ್ರೀಕ್ ಎಂಟನೇ ಪ್ರದೇಶದಲ್ಲಿ ಹಿಂಸಾಚಾರ ನಡೆದಿದೆ. ಪಾಕ್​ ಸೇನೆ ಪ್ರತಿಭಟನಾಕಾರರನ್ನು ಗುರಿಯಾಗಿಸಿಕೊಂಡಿದ್ದು, ನಿನ್ನೆಯಿಂದ ಚುನಾವಣೆಯನ್ನು ಬಹಿಷ್ಕರಿಸುತ್ತಿದ್ದ ಜಂಟಿ ಅವಾಮಿ ಕ್ರಿಯಾ ಸಮಿತಿ(ಜೆಎಎಸಿ) ಕೋರ್ ಕಮಿಟಿ ಸದಸ್ಯ ಮತ್ತು ವಕ್ತಾರ ಉಮರ್ ನಜೀರ್ ಕಾಶ್ಮೀರಿ ಅವರ ಸಹೋದರ ಉಸ್ಮಾನ್ ನಜೀರ್ ಸೇರಿದಂತೆ 20 ಮಂದಿಯನ್ನು ಕೊಲ್ಲಲಾಗಿದೆ ಎನ್ನಲಾಗಿದೆ.
ಜೂನ್ 5ರಂದು ಪಿಒಕೆಯಲ್ಲಿ ಪ್ರತಿಭಟನೆಗಳು ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ ಪಾಕಿಸ್ತಾನಿ ಪಡೆಗಳು ಒಟ್ಟು 80 ಮಂದಿಯನ್ನು ಹತ್ಯೆ ಮಾಡಿವೆ. ಸ್ಥಳದ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸೇನೆ ನಡೆಸಿದ ಗುಂಡಿನ ದಾಳಿಯಿಂದ ಪ್ರತಿಭಟನಾಕಾರರ ಮೃತದೇಹಗಳು ರಸ್ತೆಗಳಲ್ಲಿ ಬಿದ್ದಿರುವುದು ಕಂಡುಬಂದಿದೆ.
ಪಿಒಕೆಯ ಸಾಮಾಜಿಕ ಮಾಧ್ಯಮ ಪ್ರಭಾವಿ ಅಕೀಲ್ ಭಾಯ್ ಎಂಬುವರು ವಿಡಿಯೋ ಮೂಲಕ ಮಾತನಾಡಿದ್ದು, ಸ್ನೇಹಿತರೇ, ಪರಿಸ್ಥಿತಿ ಭೀಕರವಾಗಿದೆ. ರಾವಲಕೋಟ್ ಮೃತದೇಹಗಳು ಮತ್ತು ಗಾಯಾಳುಗಳಿಂದ ತುಂಬಿದೆ. ದೇವರ ಸಲುವಾಗಿ, ಇದೀಗ ನಮ್ಮೊಂದಿಗೆ ನಿಂತುಕೊಳ್ಳಿ. ದಯವಿಟ್ಟು, ನಮ್ಮೊಂದಿಗೆ ನಿಂತುಕೊಳ್ಳಿ ಎಂದು ವಿನಂತಿಸಿದ್ದಾರೆ.
ಪಾಕಿಸ್ತಾನ ಸೇನೆ ಪ್ರಾಥಮಿಕವಾಗಿ ಅವಾಮಿ ಕ್ರಿಯಾ ಸಮಿತಿ(ಎಎಸಿ) ಸದಸ್ಯರನ್ನು ಗುರಿಯಾಗಿಸಿಕೊಂಡಿದೆ. ಈ ಸಮಿತಿಯು ಪಿಒಕೆಯಲ್ಲಿ ನಡೆಯುತ್ತಿರುವ ಶಾಸಕಾಂಗ ಚುನಾವಣೆಗಳನ್ನು ಬಹಿಷ್ಕರಿಸುವ ಅಭಿಯಾನವನ್ನು ಮುನ್ನಡೆಸುತ್ತಿದೆ. ಸೋಮವಾರ ಚುನಾವಣಾ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಪಾಕ್ ಸರ್ಕಾರ ಪಿಒಕೆಯಾದ್ಯಂತ ಭಾರಿ ಭದ್ರತೆಗಾಗಿ 14,000ಕ್ಕೂ ಹೆಚ್ಚು ಸಶಸ್ತ್ರ ಭದ್ರತಾ ಸಿಬ್ಬಂದಿಯನ್ನು ಈ ಪ್ರದೇಶಕ್ಕೆ ಕಳುಹಿಸಿದೆ.
ಇನ್ನೂ ಪಿಒಕೆಯಲ್ಲಿ 45 ಸ್ಪರ್ಧಾತ್ಮಕ ಸ್ಥಾನಗಳಿಗೆ ಆಗಸ್ಟ್ 10 ರವರೆಗೆ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಪಿಒಕೆಯ ಶಾಸಕಾಂಗ ಸಭೆಯಲ್ಲಿ 53 ಸ್ಥಾನಗಳಿದ್ದು, ಅದರಲ್ಲಿ 45 ಸ್ಥಾನಗಳಿಗೆ ಚುನಾವಣೆ ಮೂಲಕ ಆಯ್ಕೆ ಮಾಡಲಾಗುತ್ತದೆ. ಎಂಟು ಸ್ಥಾನಗಳನ್ನು ಮಹಿಳೆಯರು, ತಂತ್ರಜ್ಞರು ಮತ್ತು ಧರ್ಮಗುರುಗಳಿಗೆ ಮೀಸಲಿಡಲಾಗಿದೆ (ಏಜೆನ್ಸೀಸ್).