ಬಾಂಗ್ಲಾದಲ್ಲಿ ಮತ್ತೊಮ್ಮೆ ಭುಗಿಲೆದ್ದ ಹಿಂಸಾಚಾರ 
ವಿದೇಶ

ಬಾಂಗ್ಲಾದಲ್ಲಿ ಭುಗಿಲೆದ್ದ ಹಿಂಸಾಚಾರ! ಮಧ್ಯಂತರ ಸರ್ಕಾರದ ವಿರುದ್ಧ ತಿರುಗಿಬಿದ್ದ ಪ್ರತಿಭಟನಾಕಾರರು; 1971ರ ವರ್ಷ ನೆನಪಿಗೆ..

ಪ್ರಮುಖ ಮುಖ್ಯಾಂಶಗಳು

  • ತ್ರಿಪುರದಲ್ಲಿ ಬಾಂಗ್ಲಾ ವಿರುದ್ಧ ತೀವ್ರ ಪ್ರತಿಭಟನೆ
  • 1971ರ ಯುದ್ಧ ನೆನಪಿಸಿದ ಪ್ರತಿಭಟನಾಕಾರರು
  • ಹಿಂದೂ ವ್ಯಕ್ತಿಯನ್ನು ಥಳಿಸಿ, ಮರಕ್ಕೆ ಕಟ್ಟಿ, ಬೆಂಕಿ ಹಚ್ಚಿದ್ದಾರೆ
ಢಾಕಾ: ಬಾಂಗ್ಲಾದೇಶ ಮತ್ತೊಮ್ಮೆ ಹಿಂಸಾಚಾರದಿಂದ ನಲುಗಿದೆ ಎಂಬುದಕ್ಕೆ ಹಿಂದು ವ್ಯಕ್ತಿಯ ಬರ್ಬರ ಹತ್ಯೆಯೇ ಸಾಕ್ಷಿ. ಮೂಲಭೂತವಾದಿ ಇಸ್ಲಾಮಿ ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿ ಸಾವಿನಿಂದ ಕೆರಳಿರುವ ಪ್ರತಿಭಟನಾಕಾರರು, ಸ್ಥಳೀಯ ಮಾಧ್ಯಮಗಳಿದ್ದ ಕಟ್ಟಡಗಳಿಗೆ ಬೆಂಕಿ ಹಚ್ಚಿ, ಹಿಂದೂಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ.
ಇಸ್ಲಾಮಿಸ್ಟ್ ನಾಯಕ ಮತ್ತು ರಾಜಕಾರಣಿ ಷರೀಫ್ ಉಸ್ಮಾನ್ ಬಿನ್ ಹೈದಿ ಸಾವಿನ ಬೆನ್ನಲ್ಲೇ ಬಾಂಗ್ಲಾದೇಶದಲ್ಲಿ ಪ್ರತಿಭಟನಾಕಾರರು ಬೀದಿಗಿಳಿದಿದ್ದಾರೆ. ಡಿ.12ರಂದು ನಡೆದ ಗುಂಡಿನ ದಾಳಿಯಲ್ಲಿ ಷರೀಫ್​ ಗಂಭೀರವಾಗಿ ಗಾಯಗೊಂಡರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಗುರುವಾರ (ಡಿ.18) ನಿಧನರಾದರು. ಈ ಸುದ್ದಿ ಹೊರಬೀಳುತ್ತಿದ್ದಂತೆ ಅವಾಮಿ ಲೀಗ್ ಪಕ್ಷದ ವಿರುದ್ಧ ರಾತ್ರಿಯಿಂದಲೇ ಹಿಂಸಾತ್ಮಕ ಪ್ರತಿಭಟನೆಗಳು ಭುಗಿಲೆದ್ದಿತು. ಇದು ದೇಶದಲ್ಲಿ ತೀವ್ರ ಉದ್ವಿಗ್ನತೆಗೆ ಕಾರಣವಾಯಿತು.
ಗುರುವಾರ ರಾತ್ರಿ, ಪ್ರತಿಭಟನಾಕಾರರು ರಾಜ್‌ಶಾಹಿಯಲ್ಲಿರುವ ಅವಾಮಿ ಲೀಗ್ ಪಕ್ಷದ ಕಚೇರಿಯನ್ನು ಧ್ವಂಸಗೊಳಿಸಿದ್ದಾರೆ. ಚಿತ್ತಗಾಂಗ್‌ನ ಮಾಜಿ ಮೇಯರ್ ಮೊಹಿಯುದ್ದೀನ್ ಅವರ ನಿವಾಸಕ್ಕೂ ಬೆಂಕಿ ಇಡಲಾಗಿದೆ. ಢಾಕಾದಲ್ಲಿರುವ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂಸ್ಥೆ ಚಯಾನಾತ್‌ನ ಆವರಣವನ್ನು ಛಿದ್ರಗೊಳಿಸಿ ಬೆಂಕಿ ಹಚ್ಚಿದ ಪ್ರತಿಭಟನಾಕಾರರು, ಹಲವಾರು ಮಾಧ್ಯಮ ಕಚೇರಿಗಳಿಗೂ ಕೊಳ್ಳಿಯಿಟ್ಟರು.
ಈ ಬೆಳವಣಿಗೆಗಳ ಹಿನ್ನೆಲೆ, ಬಾಂಗ್ಲಾದೇಶದಲ್ಲಿರುವ ಭಾರತೀಯ ಹೈಕಮಿಷನ್ ಮಹತ್ವದ ಸಲಹೆಯನ್ನು ನೀಡಿದ್ದು, ಎಲ್ಲಾ ಭಾರತೀಯರು ಜಾಗರೂಕರಾಗಿರಲು ಎಚ್ಚರಿಸಿದೆ. ಬಾಂಗ್ಲಾದಲ್ಲಿ ವಾಸಿಸುವ ಭಾರತೀಯರು ಮತ್ತು ಭಾರತೀಯ ವಿದ್ಯಾರ್ಥಿಗಳು ಅನಗತ್ಯ ಪ್ರವಾಸಗಳನ್ನು ಕೈಗೊಳ್ಳುವುದು ಬೇಡ ಮತ್ತು ತುರ್ತು ಪರಿಸ್ಥಿತಿ ಇಲ್ಲದಿದ್ದರೆ ಹೊರಗೆ ಬರಬಾರದು ಎಂದು ಸೂಚಿಸಿದೆ. ಯಾವುದೇ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ, ಸಹಾಯಕ್ಕಾಗಿ ಭಾರತೀಯ ಎಂಬೆಸ್ಸಿ ಮತ್ತು ಸಹಾಯಕ ಹೈಕಮಿಷನ್ ಕಚೇರಿಗಳನ್ನು ಸಂಪರ್ಕಿಸಬೇಕು ಎಂದು ಸಲಹೆ ನೀಡಿದೆ.
ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ವೈಟಿಎಫ್ ಅಧ್ಯಕ್ಷ ಸೂರಜ್ ದೇಬ್ಬರ್ಮಾ, 1971ರ ವಿಮೋಚನಾ ಯುದ್ಧದಲ್ಲಿ ಭಾರತದ ಬೆಂಬಲ ಮತ್ತು ಭಾರತೀಯ ಸೇನೆಯ ತ್ಯಾಗದಿಂದ ಬಾಂಗ್ಲಾದೇಶ ರಚನೆಯಾಯಿತು ಎಂಬುದನ್ನು ನೆನಪಿಸಿಕೊಂಡರು. ಪ್ರಸ್ತುತ, ಬಾಂಗ್ಲಾದೇಶದ ಹೊಸ ಪೀಳಿಗೆ ಇದನ್ನು ಮರೆತಂತೆ ತೋರುತ್ತದೆ ಎಂದು ಒತ್ತಿ ಹೇಳಿದರು. ಪ್ರಸ್ತುತ, ಪೀಳಿಗೆ ಭಾರತವನ್ನು ಶತ್ರುವಾಗಿ ಚಿತ್ರಿಸುತ್ತಿದೆ. ಇದು ತುಂಬಾ ದುರದೃಷ್ಟಕರ ಎಂದು ಕಳವಳ ವ್ಯಕ್ತಪಡಿಸಿದರು.

ಬಾಂಗ್ಲಾ ಸರ್ಕಾರ ಆಕ್ರೋಶ

"ಮೈಮೆನ್ಸಿಂಗ್‌ನಲ್ಲಿ ಹಿಂದೂ ವ್ಯಕ್ತಿಯನ್ನು ಥಳಿಸಿ ಕೊಂದ ಘಟನೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಇಲ್ಲಿ ಅಂತಹ ಹಿಂಸಾಚಾರಕ್ಕೆ ಸ್ಥಳವಿಲ್ಲ. ಈ ಕ್ರೂರ ಅಪರಾಧದಲ್ಲಿ ಭಾಗಿಯಾಗಿರುವ ಯಾರೊಬ್ಬರನ್ನೂ ಸುಮ್ಮನೆ ಬಿಡುವುದಿಲ್ಲ" ಎಂದು ಸರ್ಕಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ,(ಏಜೆನ್ಸೀಸ್).