Artificial Intelligence: ಕೃತಕ ಬುದ್ಧಿಮತ್ತೆ (ಎಐ) ಕ್ಷೇತ್ರದಲ್ಲಿ ಆಗುತ್ತಿರುವ ಅತ್ಯಂತ ವೇಗದ ಪ್ರಗತಿಯು ತಾಂತ್ರಿಕ ತಜ್ಞರಲ್ಲಿ ಆರಂಭದಿಂದಲೂ ಆತಂಕ ಮೂಡಿಸಿತ್ತು. ಆದರೆ ಈಗ ಸಾಮಾನ್ಯ ಜನರೂ ಇದರ ಬಗ್ಗೆ ಅಸಹಜತೆ ಮತ್ತು ಭಯವನ್ನು ಅನುಭವಿಸಲು ಪ್ರಾರಂಭಿಸಿದ್ದಾರೆ.
ಪಾಶ್ಚಿಮಾತ್ಯ ದೇಶಗಳಲ್ಲಿ ಎಐ ಜನಪ್ರಿಯತೆ ದಿನೇದಿನೇ ಕುಸಿಯುತ್ತಿದೆ. ಎಐ ಬ್ಯಾಕ್ಲ್ಯಾಶ್ ಅಥವಾ ಜನವಿರೋಧದ ಕಾರಣದಿಂದಾಗಿ ಅಮೆರಿಕದ ಡೇಟಾ ಸೆಂಟರ್ಗಳ ನಿರ್ವಣಕ್ಕೆ ತಡೆ ಬಿದ್ದಿದ್ದು, 10 ಲಕ್ಷ ಕೋಟಿ ರೂಪಾಯಿ ಮೊತ್ತದ ಯೋಜನೆಗಳು ನನೆಗುದಿಗೆ ಬಿದ್ದಿವೆ. ಆಶ್ಚರ್ಯಕರ ಸಂಗತಿಯೆಂದರೆ, ಶೇಕಡ 40ರಷ್ಟು ಅಮೆರಿಕನ್ ಮತದಾರರು ಬಹುತೇಕ ಎಲ್ಲ ಕೈಗಾರಿಕೆಗಳಲ್ಲಿ ಎಐ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ಈ ಬೆಳವಣಿಗೆ ಕುರಿತಾದ ವಿವರ ಇಲ್ಲಿದೆ.
ಕೃತಕ ಬುದ್ಧಿಮತ್ತೆ (ಎಐ) ಕ್ಷೇತ್ರದಲ್ಲಿ ಚೀನಾವನ್ನು ಮೀರಿಸಬೇಕು ಎಂದು ಅಮೆರಿಕ ತೀವ್ರ ಸ್ಪರ್ಧೆಗಿಳಿದಿದೆ. ಇದಕ್ಕಾಗಿ ಎಐ ತಂತ್ರಜ್ಞಾನ ಸಂಬಂಧಿತ ಯೋಜನೆಗಳಲ್ಲಿ ವ್ಯಾಪಕವಾಗಿ ಹೂಡಿಕೆ ಮಾಡುತ್ತಿದೆ. ಆದರೆ, ಹೆಚ್ಚುತ್ತಿರುವ ಎಐ ವ್ಯಾಪ್ತಿ ಮತ್ತು ಅದು ಉದ್ಯೋಗಗಳಿಗೆ ತಂದೊಡ್ಡಿರುವ ಆಪತ್ತು ಅಮೆರಿಕದಲ್ಲಿ ಭಾರಿ ಜನಾಕ್ರೋಶಕ್ಕೆ ಕಾರಣವಾಗಿದೆ. ಎಐ ಯೋಜನೆಗಳ ವಿರುದ್ಧ ಸಾರ್ವಜನಿಕರ ಆಕ್ರೋಶದ ತೀವ್ರತೆ ಎಷ್ಟಿದೆ ಎಂದರೆ, 3.5 ಗಿಗಾವಾಟ್ ವಿದ್ಯುತ್ ಬಳಸಬಹುದಾಗಿದ್ದ 3.96 ಲಕ್ಷ ಕೋಟಿ ರೂಪಾಯಿ ವೆಚ್ಚದ ಇಪ್ಪತ್ತು ಡೇಟಾ ಸೆಂಟರ್ ಯೋಜನೆಗಳನ್ನು 2026ರ ಮೊದಲ ಮೂರು ತಿಂಗಳಲ್ಲೇ ರದ್ದುಗೊಳಿಸಲಾಗಿದೆ.
ಕಳೆದ ಮೂರು ವರ್ಷಗಳಲ್ಲಿ ಅಮೆಜಾನ್ ಮತ್ತು ಮೆಟಾ ಕಂಪನಿಗಳ ಪ್ರಸ್ತಾಪಿತ ಸಣ್ಣ ಕೇಂದ್ರಗಳು ಸೇರಿದಂತೆ ಒಟ್ಟು 8 ಲಕ್ಷ ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ಮೊತ್ತದ ಯೋಜನೆಗಳನ್ನು ಕೈಬಿಡಲಾಗಿದೆ. ಪ್ರಸ್ತುತ, ಎಐ ವಿರುದ್ಧ, ವಿಶೇಷವಾಗಿ ಡೇಟಾ ಸೆಂಟರ್ಗಳ (ದತ್ತಾಂಶ ಕೇಂದ್ರಗಳು) ಸ್ಥಾಪನೆಯ ವಿರುದ್ಧ ನಡೆಯುತ್ತಿರುವ ವ್ಯಾಪಕ ಪ್ರತಿಭಟನೆಗಳಿಂದಾಗಿ 10 ಲಕ್ಷ ಕೋಟಿ ರೂಪಾಯಿಗಳ ಬೃಹತ್ ಯೋಜನೆಗಳನ್ನು ಕೈಬಿಡಲಾಗಿದೆ. ಸ್ಥಳೀಯ ಮಟ್ಟದಲ್ಲಿ ಈ ಪ್ರತಿಭಟನೆಗಳು ಎಷ್ಟು ಬಲವಾಗಿವೆ ಎಂದರೆ, ಮಿಸೌರಿಯಂತಹ ಕೆಲವು ನಗರಗಳಲ್ಲಿ ಡೇಟಾ ಸೆಂಟರ್ಗಳಿಗೆ ಅನುಮತಿ ನೀಡಿದ ಕೌನ್ಸಿಲ್ ಸದಸ್ಯರನ್ನು ಮತದಾರರು ಚುನಾವಣೆಯಲ್ಲಿ ಸೋಲಿಸಿದ್ದಾರೆ. ಹೀಗಾಗಿ ರಾಜಕೀಯ ನಾಯಕರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.
ಅಯೋವಾದ ಸೀಡರ್ ರಾಪಿಡ್ಸ್ ನಿವಾಸಿಗಳು ಅಲ್ಲಿನ ಗೂಗಲ್ ಯೋಜನೆಯನ್ನು ತೀವ್ರವಾಗಿ ವಿರೋಧಿಸುತ್ತಿದ್ದಾರೆ ಹಾಗೂ ಮಿಚಿಗನ್ನ ಹಲವು ನಗರಗಳೂ ಡೇಟಾ ಸೆಂಟರ್ಗಳ ಸ್ಥಾಪನೆಗೆ ವಿರುದ್ಧವಾಗಿವೆ. ಭವಿಷ್ಯದಲ್ಲಿ ಎಐ ಕೋಟ್ಯಂತರ ಉದ್ಯೋಗಗಳನ್ನು ನುಂಗಿಹಾಕಬಹುದು ಅಥವಾ ಎಐ ಮೂಲಕ ಸೃಷ್ಟಿಯಾಗುವ ಯಾವುದಾದರೂ ಸೂಪರ್-ವೈರಸ್ ಮಾನವ ನಾಗರಿಕತೆಗೆ ಕಂಟಕವಾಗಬಹುದು ಎಂದು ಎಐ ಕಂಪನಿಗಳ ಮುಖ್ಯಸ್ಥರೇ ದೀರ್ಘಕಾಲದಿಂದ ಎಚ್ಚರಿಕೆ ನೀಡುತ್ತಿರುವುದು ಈ ಸಾರ್ವಜನಿಕ ಆಕ್ರೋಶಕ್ಕೆ ಪ್ರಮುಖ ಕಾರಣವಾಗಿದೆ. ಅಮೆರಿಕ ಮಾತ್ರವಲ್ಲದೆ ಪ್ರಪಂಚದ ಇತರ ಭಾಗಗಳಲ್ಲೂ ಇದರ ವಿರುದ್ಧ ಪ್ರತಿಭಟನೆಗಳು ಹೆಚ್ಚಾಗುತ್ತಿವೆ. ಉದಾಹರಣೆಗೆ, ದಕ್ಷಿಣ ಕೊರಿಯಾದಲ್ಲಿ ಚಿಪ್ ತಯಾರಿಕಾ ಕಂಪನಿಗಳ ಲಾಭದಲ್ಲಿ ಭಾರಿ ಹೆಚ್ಚಳವಾದ ನಂತರ, ಸ್ಯಾಮ್ಂಗ್ ಉದ್ಯೋಗಿಗಳು ತಮಗೆ ವಿಶೇಷ ಬೋನಸ್ ನೀಡಬೇಕೆಂದು ಒತ್ತಾಯಿಸಿ ಮುಷ್ಕರದ ಎಚ್ಚರಿಕೆ ನೀಡಿದ್ದಾರೆ.
ಅಮೆರಿಕದಲ್ಲಿ ಎಐ ಮೇಲಿನ ಹೂಡಿಕೆಯು ತಾಂತ್ರಿಕ ಕೇಂದ್ರಗಳಿಗೆ ಸೀಮಿತವಾಗಿ ಉಳಿದಿಲ್ಲ. ಅಮೆಜಾನ್, ಗೂಗಲ್, ಮೆಟಾ, ಮೈಕ್ರೋಸಾಫ್ಟ್ ಮತ್ತು ಒರಾಕಲ್ನಂತಹ ಜಾಗತಿಕ ದೈತ್ಯ ಕಂಪನಿಗಳು ಮಿಚಿಗನ್, ವಿಸ್ಕಾನ್ಸಿನ್, ಓಹಿಯೋ, ಲೂಸಿಯಾನ, ಮಿಸ್ಸಿಸ್ಸಿಪ್ಪಿ ಮತ್ತು ಟೆಕ್ಸಾಸ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಭವಿಷ್ಯದ ಡೇಟಾ ಸೆಂಟರ್ಗಳಿಗಾಗಿ 70.85 ಲಕ್ಷ ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡುತ್ತಿವೆ. 2026ರಿಂದ 2030ರ ಅವಧಿಯಲ್ಲಿ ಜಗತ್ತಿನಾದ್ಯಂತ ಎಐ ಡೇಟಾ ಸೆಂಟರ್ಗಳಿಗಾಗಿ ಸುಮಾರು 283 ಲಕ್ಷ ಕೋಟಿ ರೂಪಾಯಿಗಳು ಖರ್ಚಾಗಲಿವೆ ಎಂದು ಅಂದಾಜಿಸಲಾಗಿದೆ. ಇದರಿಂದಾಗಿ ಎಐನ ಕಂಪ್ಯೂಟಿಂಗ್ ಸಾಮರ್ಥ್ಯವು ಹಲವು ಪಟ್ಟು ಹೆಚ್ಚಾಗಲಿದೆ. ಅಮೆರಿಕದ ಡೇಟಾ ಸೆಂಟರ್ಗಳ ಪ್ರಸ್ತುತ ವಿದ್ಯುತ್ ಬಳಕೆ 12 ಗಿಗಾವಾಟ್ ಆಗಿದ್ದು, ಈ ದಶಕದ ಅಂತ್ಯದ ವೇಳೆಗೆ ಇದು ಐದು ಪಟ್ಟು ಹೆಚ್ಚಾಗುವ ಸಾಧ್ಯತೆಯಿದೆ.
‘ದಿ ಎಕನಾಮಿಸ್ಟ್’ ಸಂಸ್ಥೆಯು ಎಐ ಮಾಡೆಲ್ಗಳ ಆಲೋಚನಾ ಶೈಲಿಯ ಕುರಿತು ಸಂಶೋಧನೆಯನ್ನು ನಡೆಸಿದೆ. ಅದರ ಪ್ರಮುಖ ಅಂಶಗಳು ಹೀಗಿವೆ.
ಚಾಟ್ಜಿಪಿಟಿ: ಓಪನ್ಎಐನ ಚಾಟ್ಜಿಪಿಟಿ ಮಾಡೆಲ್ಗಳು ಭೂಮಿಯ ಮೇಲಿನ ಯಾವುದೇ ದೇಶದ ಜನರ ಆಲೋಚನೆಗಿಂತ ಹೆಚ್ಚು ಜಾತ್ಯತೀತ ಆಗಿವೆ.
ಜೆಮಿನಿ: ಗೂಗಲ್ ಜೆಮಿನಿಯ ಮಾಡೆಲ್ಗಳು ಯಾವುದೇ ದೇಶದ ಜನರಿಗಿಂತ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಹೆಚ್ಚಿನ ಮಹತ್ವ ನೀಡುತ್ತವೆ.
ಪ್ರತಿನಿಧಿತ್ವದ ಕೊರತೆ: ಜಾಗತಿಕ ವಿಷಯಗಳಲ್ಲಿ ಯಾವುದೇ ಪ್ರಮುಖ ಎಐ ಮಾಡೆಲ್ಗಳು ಬಹುತೇಕ ಆಫ್ರಿಕನ್ ಮತ್ತು ಮುಸ್ಲಿಂ ದೇಶಗಳ ಜನರ ಆಲೋಚನೆ ಅಥವಾ ಚಿಂತನೆಗಳನ್ನು ಸರಿಯಾಗಿ ಬಿಂಬಿಸಿಲ್ಲ.
ವಾಸ್ತವವಾಗಿ, ಎಐ ಮಾಡೆಲ್ಗಳು ತಮಗೆ ತರಬೇತಿ ನೀಡಲು ಬಳಸಲಾದ ದತ್ತಾಂಶಗಳ (ಡೇಟಾ) ಆಧಾರದ ಮೇಲೆ ತಮ್ಮ ಆಲೋಚನೆಗಳನ್ನು ರೂಪಿಸಿಕೊಳ್ಳುತ್ತವೆ. ಉದಾಹರಣೆಗೆ, ಚೀನಾದ ಡೇಟಾ ಬಳಸಿ ತರಬೇತಿ ಪಡೆದ ಎಐ ಮಾಡೆಲ್ಗಳು ಚೀನಾ ಸರ್ಕಾರದ ಕಮ್ಯುನಿಸ್ಟ್ ವಿಚಾರಗಳನ್ನು ಪ್ರದರ್ಶಿಸುತ್ತವೆ.
ಸಾರ್ವಜನಿಕರ ಅತಿಯಾದ ವಿರೋಧವು ತಾಂತ್ರಿಕ ಪ್ರಗತಿಗೆ ಧಕ್ಕೆ ತರಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಹಿಂದೆ ವಿದ್ಯುತ್ ಅಥವಾ ಹಬೆಯ ಇಂಜಿನ್ (ಸ್ಟೀಮ್ ಇಂಜಿನ್) ಪ್ರಪಂಚವನ್ನು ಹೇಗೆ ಬದಲಾಯಿಸಿತೋ, ಅದೇ ರೀತಿ ಇಡೀ ಜಗತ್ತನ್ನು ಬದಲಾಯಿಸುವ ಸಾಮರ್ಥ್ಯ ಎಐ ತಂತ್ರಜ್ಞಾನಕ್ಕಿದೆ. ಎಐ ಮೂಲಕ ಉತ್ಪಾದಕತೆಯನ್ನು ಹೆಚ್ಚಿಸಲು, ಹೊಸ ಅತ್ಯಾಧುನಿಕ ಔಷಧಗಳು ಮತ್ತು ಚಿಕಿತ್ಸೆಗಳನ್ನು ಅಭಿವೃದ್ಧಿಪಡಿಸಲು, ಶಿಕ್ಷಣ ಮತ್ತು ಹಸಿರು ತಂತ್ರಜ್ಞಾನವನ್ನು ಸುಧಾರಿಸಲು ದೊಡ್ಡ ಅವಕಾಶಗಳಿವೆ. ಒಂದು ವೇಳೆ ಪಾಶ್ಚಿಮಾತ್ಯ ದೇಶಗಳು ಸಾರ್ವಜನಿಕ ಪ್ರತಿಭಟನೆಗಳ ಒತ್ತಡಕ್ಕೆ ಮಣಿದು ಎಐ ಮೂಲಸೌಕರ್ಯಗಳನ್ನು ಸೀಮಿತಗೊಳಿಸಿದರೆ, ಅವರ ತಾಂತ್ರಿಕ ನಾಯಕತ್ವ, ಸೈಬರ್ ಭದ್ರತೆ ಮತ್ತು ಕಾರ್ಯತಂತ್ರದ ಮುನ್ನಡೆ ದುರ್ಬಲಗೊಳ್ಳಬಹುದು. ಇದರ ನೇರ ಲಾಭವು ಚೀನಾದಂತಹ ಪ್ರತಿಸ್ಪರ್ಧಿ ದೇಶಗಳಿಗೆ ಸಿಗುವ ಸಾಧ್ಯತೆಯಿದೆ ಎನ್ನುತ್ತಾರೆ ತಜ್ಞರು.
ಭವಿಷ್ಯದಲ್ಲಿ ಅಮೆರಿಕದ ಹಲವು ಪ್ರದೇಶಗಳಲ್ಲಿ ಪರಮಾಣು ವಿದ್ಯುತ್ ಸ್ಥಾವರಗಳಿಗಿಂತ ಹೆಚ್ಚಾಗಿ ಡೇಟಾ ಸೆಂಟರ್ಗಳೇ ಕಾಣಸಿಗಲಿವೆ ಎಂದು ಹಲವು ಸಮೀಕ್ಷೆಗಳು ಹೇಳುತ್ತಿವೆ. 2026ರ ನವೆಂಬರ್ನಲ್ಲಿ ಗವರ್ನರ್ ಹುದ್ದೆಗೆ ಚುನಾವಣೆ ನಡೆಯಲಿದೆ. ಮತದಾರರು ಗವರ್ನರ್ ಹುದ್ದೆಯ ಅಭ್ಯರ್ಥಿಗಳಿಗೆ, ‘ಈ ವಿಷಯದ ಬಗ್ಗೆ ನಿಮ್ಮ ನಿಲುವೇನು?’ ಎಂದು ಪ್ರಶ್ನಿಸುತ್ತಿದ್ದಾರೆ. ಈ ಡೇಟಾ ಸೆಂಟರ್ಗಳ ಕುರಿತಾದ ಚರ್ಚೆ ಮುಂಬರುವ ವರ್ಷಗಳಲ್ಲಿ ದೊಡ್ಡ ರಾಜಕೀಯ ಮತ್ತು ಸಾಮಾಜಿಕ ವಿಷಯವಾಗಿ ಮಾರ್ಪಡಲಿದೆ. ಅನೇಕ ಅಮೆರಿಕನ್ನರು ತಮ್ಮ ಭಾಗದಲ್ಲಿ ಡೇಟಾ ಸೆಂಟರ್ ಸ್ಥಾಪಿಸುವುದಕ್ಕಿಂತ ಪರಮಾಣು ರಿಯಾಕ್ಟರ್ಗಳನ್ನು ಸ್ಥಾಪಿಸುವುದು ಉತ್ತಮ ಆಯ್ಕೆ ಎಂದು ಭಾವಿಸುತ್ತಿದ್ದಾರೆ.