ಹನೋಯಿ: ಸೌಂದರ್ಯ ಸ್ಪರ್ಧೆಯ ಕಿರೀಟ ಮುಡಿಗೇರಿಸಿಕೊಂಡು ಸಂಭ್ರಮದಲ್ಲಿದ್ದ ವಿಯೆಟ್ನಾಂನ ಸುಂದರಿಗೆ ಇದೀಗ ತನ್ನ ಮಾತುಗಳೇ ಮುಳುವಾಗಿವೆ. ಖಾಸಗಿ ವಾಟ್ಸ್ಆ್ಯಪ್ ಅಥವಾ ಗ್ರೂಪ್ ಚಾಟ್ನ ಸ್ಕ್ರೀನ್ಶಾಟ್ಗಳು ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾದ ಬೆನ್ನಲ್ಲೇ, 'ಮಿಸ್ ಯೂನಿವರ್ಸ್ ವಿಯೆಟ್ನಾಂ 2026' ವಿಜೇತೆ ನ್ಗುಯೆನ್ ಕ್ವಿನ್ ಆನ್ ( Nguyen Quynh Anh ) ಅವರ ಕಿರೀಟವನ್ನು ಆಯೋಜಕರು ಹಿಂಪಡೆದಿದ್ದಾರೆ. ಪ್ರಶಸ್ತಿ ಗೆದ್ದ ಕೇವಲ 46 ದಿನಗಳಲ್ಲೇ ಶಿಸ್ತು ಉಲ್ಲಂಘನೆಯ ಆರೋಪದಡಿ ಅವರು ತಮ್ಮ ಪ್ರತಿಷ್ಠಿತ ಪಟ್ಟವನ್ನು ಕಳೆದುಕೊಂಡು ಭಾರಿ ಮುಖಭಂಗ ಅನುಭವಿಸಿದ್ದಾರೆ.
ಕಳೆದ ಅಕ್ಟೋಬರ್ 2ರಂದು ವಿಯೆಟ್ನಾಂನ ಹೈಫಾಂಗ್ನಲ್ಲಿ ನಡೆದ ಅದ್ಧೂರಿ ಸೌಂದರ್ಯ ಸ್ಪರ್ಧೆಯಲ್ಲಿ ನ್ಗುಯೆನ್ ಕ್ವಿನ್ ಆನ್ ಅವರು 'ಮಿಸ್ ಯೂನಿವರ್ಸ್ ವಿಯೆಟ್ನಾಂ 2026' ವಿಜೇತರಾಗಿ ಹೊರಹೊಮ್ಮಿದ್ದರು. ಆದರೆ, ಈ ಗೆಲುವಿನ ಸಂಭ್ರಮ ಹೆಚ್ಚು ದಿನ ಉಳಿಯಲಿಲ್ಲ. ಆಯೋಜಕ ಸಂಸ್ಥೆಯಾದ 'ಫೈವ್ ಸಿಕ್ಸ್ ಎಂಟರ್ಟೈನ್ಮೆಂಟ್' (Five Six Entertainment) ಶಿಸ್ತು ನಿಯಮಗಳ ಉಲ್ಲಂಘನೆಯ ಕಾರಣ ನೀಡಿ ಇದೇ ನವೆಂಬರ್ 16ರಂದು ಅವರ ಗೆಲುವನ್ನು ಅಧಿಕೃತವಾಗಿ ರದ್ದುಗೊಳಿಸಿದೆ. ಪ್ರಶಸ್ತಿ ಗೆದ್ದ ಸರಿಯಾಗಿ 46 ದಿನಗಳ ನಂತರ ನ್ಗುಯೆನ್ ಅವರಿಂದ ಕಿರೀಟವನ್ನು ಕಿತ್ತುಕೊಳ್ಳಲಾಗಿದ್ದು, ಅಂತಾರಾಷ್ಟ್ರೀಯ ಸೌಂದರ್ಯ ಸ್ಪರ್ಧಾ ವಲಯದಲ್ಲಿ ಈ ಘಟನೆ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಈ ವಿವಾದಕ್ಕೆ ಮೂಲ ಕಾರಣವಾಗಿದ್ದು ಅಕ್ಟೋಬರ್ 12ರಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಖಾಸಗಿ ಚಾಟ್ ಸ್ಕ್ರೀನ್ಶಾಟ್ಗಳು. ವಿಜೇತೆ ನ್ಗುಯೆನ್ ಕ್ವಿನ್ ಆನ್ ಮತ್ತು ಮೊದಲ ರನ್ನರ್ ಅಪ್ ಟ್ರಿನ್ ಮೈ ಆನ್ (Trinh My An) ನಡುವಿನ ಸಂಭಾಷಣೆಯ ಸ್ಕ್ರೀನ್ಶಾಟ್ಗಳು ಆನ್ಲೈನ್ನಲ್ಲಿ ಸೋರಿಕೆಯಾಗಿದ್ದವು.
ಈ ಸಂದೇಶಗಳಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಇತರ ಸ್ಪರ್ಧಿಗಳು, ತೀರ್ಪುಗಾರರು ಹಾಗೂ ವಿಯೆಟ್ನಾಂನ ಹಲವು ಪ್ರಮುಖ ಗಣ್ಯರ ಬಗ್ಗೆ ಅತ್ಯಂತ ಅವಹೇಳನಕಾರಿಯಾಗಿ ಮಾತನಾಡಿರುವುದು ಕಂಡುಬಂದಿತ್ತು. ಅಷ್ಟೇ ಅಲ್ಲದೆ, ಮಾಜಿ ಮಿಸ್ ಯೂನಿವರ್ಸ್ ವಿಯೆಟ್ನಾಂ ವಿಜೇತೆ ಕಿ ಡುಯೆನ್ (Ki Duyen) ವಿರುದ್ಧವೂ ಅವಮಾನಕರ ಪದಗಳನ್ನು ಬಳಸಲಾಗಿತ್ತು ಎನ್ನಲಾಗಿದೆ.
ಚಾಟ್ ಸೋರಿಕೆಯಾಗಿ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ನ್ಗುಯೆನ್ ಕ್ವಿನ್ ಆನ್ ಮತ್ತು ಟ್ರಿನ್ ಮೈ ಆನ್ ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗವಾಗಿ ಕ್ಷಮೆಯಾಚಿಸಿದ್ದರು. ತಮ್ಮ ಮಾತು ಮತ್ತು ನಡವಳಿಕೆಯಲ್ಲಿ ಇನ್ನಷ್ಟು ಎಚ್ಚರಿಕೆ ವಹಿಸಬೇಕಿತ್ತು ಎಂದು ಇಬ್ಬರೂ ಒಪ್ಪಿಕೊಂಡಿದ್ದರು.
ಇದರ ಬೆನ್ನಲ್ಲೇ ಅಕ್ಟೋಬರ್ 25ರಂದು 'ಫೈವ್ ಸಿಕ್ಸ್ ಎಂಟರ್ಟೈನ್ಮೆಂಟ್' ಮತ್ತು ಸ್ಪರ್ಧೆಯ ಆಯೋಜಕ ಸಮಿತಿಯು ಇಬ್ಬರ ವಿರುದ್ಧವೂ ಕಠಿಣ ಶಿಸ್ತು ಕ್ರಮಗಳನ್ನು ಘೋಷಿಸಿತ್ತು. ಅದರಂತೆ ನ್ಗುಯೆನ್ ಅವರಿಗೆ ದಂಡ ವಿಧಿಸುವುದರ ಜತೆಗೆ, ಮಿಸ್ ಯೂನಿವರ್ಸ್ ವಿಯೆಟ್ನಾಂ ಆಗಿ ಯಾವುದೇ ಕಲಾತ್ಮಕ ಮತ್ತು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸದಂತೆ ಆರು ತಿಂಗಳ ಕಾಲ ನಿಷೇಧ ಹೇರಲಾಗಿತ್ತು; ಮೊದಲ ರನ್ನರ್ ಅಪ್ ಟ್ರಿನ್ ಮೈ ಆನ್ ಅವರಿಗೂ ಮೂರು ತಿಂಗಳ ನಿಷೇಧ ವಿಧಿಸಲಾಗಿತ್ತು.
ಆಯೋಜಕರು ಕಠಿಣ ಎಚ್ಚರಿಕೆ ಮತ್ತು ನಿಷೇಧ ಹೇರಿದ್ದರೂ ಸಹ ನ್ಗುಯೆನ್ ಕ್ವಿನ್ ಆನ್ ಅದನ್ನು ಲೆಕ್ಕಿಸದೆ ನಿಯಮಗಳನ್ನು ಮತ್ತೆ ಗಾಳಿಗೆ ತೂರಿದ್ದಾರೆ. ನಿಷೇಧದ ಅವಧಿಯಲ್ಲೇ ಅವರು ಹಣ ಪಾವತಿಸುವ ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಇದನ್ನು ಆಯೋಜಕರು ತಾವು ವಿಧಿಸಿದ ಶಿಸ್ತು ಕ್ರಮಗಳ ನೇರ ಉಲ್ಲಂಘನೆ ಎಂದು ಗಂಭೀರವಾಗಿ ಪರಿಗಣಿಸಿದ್ದಾರೆ. ಮೊದಲೇ ವಿವಾದದ ಸುಳಿಯಲ್ಲಿದ್ದ ವಿಜೇತೆ ಮತ್ತೆ ನಿಯಮ ಮುರಿದಿದ್ದರಿಂದ ತಾಳ್ಮೆ ಕಳೆದುಕೊಂಡ 'ಫೈವ್ ಸಿಕ್ಸ್ ಎಂಟರ್ಟೈನ್ಮೆಂಟ್', ಅಂತಿಮವಾಗಿ ನವೆಂಬರ್ 16ರಂದು ಅವರ 'ಮಿಸ್ ಯೂನಿವರ್ಸ್ ವಿಯೆಟ್ನಾಂ 2026' ಕಿರೀಟವನ್ನೇ ಕಿತ್ತುಕೊಳ್ಳುವ ಮೂಲಕ ಕಠಿಣ ಸಂದೇಶ ರವಾನಿಸಿದೆ, (ಏಜೆನ್ಸೀಸ್).