Princess Isabella (ಚಿತ್ರ X)
ಜೀಲ್ಯಾಂಡ್ : ಡೆನ್ಮಾರ್ಕ್ ರಾಜಮನೆತನದ ಇತಿಹಾಸದಲ್ಲೇ ಹೊಸ ಅಧ್ಯಾಯವೊಂದು ಸೃಷ್ಟಿಯಾಗಿದೆ. ರಾಜ ಫ್ರೆಡರಿಕ್ X ಮತ್ತು ರಾಣಿ ಮೇರಿ ಅವರ 19 ವರ್ಷದ ಪುತ್ರಿ ರಾಜಕುಮಾರಿ ಇಸಾಬೆಲ್ಲಾ,(
ಪೂರ್ಣ ಪ್ರಮಾಣದ ಕಡ್ಡಾಯ ಮಿಲಿಟರಿ ತರಬೇತಿಗೆ ಸೇರ್ಪಡೆಯಾಗುವ ಮೂಲಕ ಈ ಸಾಧನೆ ಮಾಡಿದ ರಾಜಕುಟುಂಬದ ಮೊದಲ ಮಹಿಳೆ ಎನಿಸಿಕೊಂಡಿದ್ದಾರೆ.
ಪ್ರೌಢ ಶಾಲಾ ಶಿಕ್ಷಣ ಮುಗಿಸಿದ ಕೆಲವೇ ವಾರಗಳಲ್ಲಿ ಹಾಗೂ ಬೇಸಿಗೆ ರಜೆಯ ನಂತರ ಅವರು ಸ್ಲಾಗೆಲ್ಸ್‌ನಲ್ಲಿರುವ 'ಆಂಟ್ವೋರ್ಸ್ಕೊವ್ ಬ್ಯಾರಕ್ಸ್'ಗೆ ಆಗಸ್ಟ್ 3ರಂದು ವರದಿ ಮಾಡಿಕೊಂಡರು. ತಮ್ಮ ಮೊದಲ ದಿನದಂದು ಯಾವುದೇ ರಾಜಮನೆತನದ ಅಡಂಬರವಿಲ್ಲದೆ, ಸ್ವತಃ ಕಪ್ಪು ಬಣ್ಣದ ಎಸ್‌ಯುವಿ ಕಾರು ಚಲಾಯಿಸಿಕೊಂಡು ಬಂದ ಇಸಾಬೆಲ್ಲಾ, ಸಾಮಾನ್ಯ ಯುವತಿಯಂತೆ ಜೀನ್ಸ್ ಹಾಗೂ ಜಾಕೆಟ್ ಧರಿಸಿ, ಭದ್ರತಾ ಸಿಬ್ಬಂದಿಗೆ ಗುರುತಿನ ಚೀಟಿ ತೋರಿಸಿ ಒಳಗೆ ಪ್ರವೇಶ ಪಡೆದರು.
ಇಸಾಬೆಲ್ಲಾ ಅವರ ಅಣ್ಣ, ಕ್ರೌನ್ ಪ್ರಿನ್ಸ್ ಕ್ರಿಸ್ಟಿಯನ್ ಕೂಡ ಇದೇ ಬ್ಯಾರಕ್ಸ್‌ನಲ್ಲಿ ಸೇವೆ ಪೂರ್ಣಗೊಳಿಸಿ ಪ್ರಸ್ತುತ ಸೆಕೆಂಡ್ ಲೆಫ್ಟಿನೆಂಟ್ ಆಗಿ ತರಬೇತಿ ಪಡೆಯುತ್ತಿದ್ದಾರೆ. ರಾಜಮನೆತನದ ಪುರುಷರು ಸೇನೆಯಲ್ಲಿ ಸೇವೆ ಸಲ್ಲಿಸುವ ಸುದೀರ್ಘ ಪರಂಪರೆ ಡೆನ್ಮಾರ್ಕ್‌ನಲ್ಲಿದ್ದರೂ, ವಿಸ್ತರಿತ ಕಡ್ಡಾಯ ನಿಯಮದಡಿ ಸಕ್ರಿಯ ಮಿಲಿಟರಿ ತರಬೇತಿಗೆ ಒಳಗಾಗುತ್ತಿರುವ ಮೊದಲ ರಾಜಕುಮಾರಿ ಇವರಾಗಿದ್ದಾರೆ.
ಸಾಮಾನ್ಯವಾಗಿ ಡೆನ್ಮಾರ್ಕ್‌ನಲ್ಲಿ ಕಡ್ಡಾಯ ಸೇನೆಗೆ ಸೇರುವ ಯುವಕ-ಯುವತಿಯರಿಗೆ ಮಾಸಿಕ ವೇತನ ಮತ್ತು ದೈನಂದಿನ ಭತ್ಯೆಗಳನ್ನು ನೀಡಲಾಗುತ್ತದೆ. ಆದರೆ ರಾಜಕುಮಾರಿ ಇಸಾಬೆಲ್ಲಾ ಈ ಯಾವುದೇ ಸರ್ಕಾರಿ ಸೌಲಭ್ಯಗಳನ್ನು ಪಡೆಯದಿರಲು ನಿರ್ಧರಿಸಿದ್ದು, ತರಬೇತಿ ಅವಧಿಯಲ್ಲಿ ಹೆತ್ತವರ ಆರ್ಥಿಕ ನೆರವನ್ನೇ ಬಳಸಿಕೊಳ್ಳಲಿದ್ದಾರೆ.
ಯುರೋಪ್‌ನಲ್ಲಿ ಹೆಚ್ಚುತ್ತಿರುವ ಭದ್ರತಾ ಸವಾಲುಗಳು ಹಾಗೂ ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ಡೆನ್ಮಾರ್ಕ್ ತನ್ನ ಸೇನೆಯನ್ನು ಬಲಪಡಿಸುತ್ತಿದೆ. 2024ರಲ್ಲಿ ಮಹಿಳೆಯರಿಗೂ ಮಿಲಿಟರಿ ಸೇವೆಯನ್ನು ಕಡ್ಡಾಯಗೊಳಿಸಲಾಗಿದ್ದು, ಸೇವೆಯ ಅವಧಿಯನ್ನು 4 ತಿಂಗಳಿಂದ 11 ತಿಂಗಳಿಗೆ ಹೆಚ್ಚಿಸಲಾಗಿದೆ. ಈ ಹೊಸ ನಿಯಮದ ಅಡಿಯಲ್ಲಿ ಇಸಾಬೆಲ್ಲಾ ಸೇರಿದಂತೆ ಸುಮಾರು 1,600 ಯುವಕ-ಯುವತಿಯರು ಈ ವಾರ ಸೇನಾ ತರಬೇತಿಗೆ ಹೆಜ್ಜೆ ಇಟ್ಟಿದ್ದಾರೆ (ಏಜೆನ್ಸೀಸ್).