ವಿದೇಶ

ತುರ್ತುಸ್ಥಿತಿಗೆ ಸನ್ನದ್ಧ!: ಪ್ರಮುಖ ದೇಶಗಳಲ್ಲಿ ಬಿ ರೆಡಿ ಅಭಿಯಾನ

ಅಮೆರಿಕ, ಜಪಾನ್​, ಬ್ರಿಟನ್​ ಮತ್ತು ಹಲವು ಯುರೋಪಿಯನ್​ ದೇಶಗಳಲ್ಲಿ ಸರ್ಕಾರಗಳು ಜನರಿಗೆ ಮನೆಯಲ್ಲಿ ತುರ್ತು ಪಡಿತರ, ಪವರ್​ ಬ್ಯಾಂಕ್​, ಕುಡಿಯುವ ನೀರು ಮುಂತಾದ ಅಗತ್ಯ ವಸ್ತುಗಳನ್ನು ಸಂಗ್ರಹಿಸಿಟ್ಟುಕೊಳ್ಳುವಂತೆ ಹೇಳಿವೆ. ರಷ್ಯಾ ತನ್ನ ಮೇಲೆ ದೊಡ್ಡ ಮಟ್ಟದ ದಾಳಿಗೆ ಸಿದ್ಧತೆ ನಡೆಸುತ್ತಿದೆ ಎಂದು ಬ್ರಿಟನ್​ ಹೇಳಿದೆ. ಅಮೆರಿಕ ತನ್ನ ಸೇನಾ ನೆಲೆಗಳಲ್ಲಿ 90 ದಿನಗಳವರೆಗಿನ ಆಹಾರ, ಶಸ್ತ್ರಾಸ್ತ್ರ ಮತ್ತು ಇಂಧನವನ್ನು ಒಟ್ಟುಗೂಡಿಸುತ್ತಿದೆ. 3ನೇ ಮಹಾಯುದ್ಧ ಸನ್ನಿಹಿತವಾಗಿದೆ ಎಂದು ಡೊನಾಲ್ಡ್​ ಟ್ರಂಪ್​ ಈಗಾಗಲೇ ಹೇಳಿದ್ದಾರೆ. ನಿಜವಾಗಿಯೂ ಜಗತ್ತಿನಲ್ಲಿ ಏನಾದರೂ ದೊಡ್ಡ ಅನಾಹುತ ಸಂಭವಿಸಲಿದೆಯೇ? ಈ ಪರಿಸ್ಥಿತಿಗೆ ಯಾರು ಜವಾಬ್ದಾರರು? ತುರ್ತಾಗಿ ಏನೆಲ್ಲ ಸಂಗ್ರಹಿಸಲಾಗುತ್ತಿದೆ? ಈ ಕುರಿತಾದ ವಿವರ ಇಲ್ಲಿದೆ.

ಬ್ರಿಟನ್​ ಸರ್ಕಾರವು ಅಕ್ಟೋಬರ್​ 22ರಿಂದ "ಬಿ ರೆಡಿ' ಅಭಿಯಾನವನ್ನು ಪ್ರಾರಂಭಿಸಿದೆ. ರಕ್ಷಣಾ ತಂಡಗಳು ಸ್ಥಳಕ್ಕೆ ತಲುಪುವವರೆಗೆ ಅಗತ್ಯ ವಸ್ತುಗಳ ಕೊರತೆಯಾಗಬಾರದು ಎಂದು ಇದರ ವೆಬ್​ಸೈಟ್​ನಲ್ಲಿ ತಿಳಿಸಲಾಗಿದೆ. ಇದಕ್ಕಾಗಿ 3 ದಿನಗಳ ಸಂಗ್ರಹ ಸಾಕಾಗುತ್ತದೆ. ಜನರಿಗೆ 9 ಲೀಟರ್​ ನೀರು, 3 ದಿನಗಳಿಗೆ ಸಾಕಾಗುವಷ್ಟು ಆಹಾರ, ಟಾರ್ಚ್​, ಬ್ಯಾಟರಿಗಳು, ಪ್ರಥಮ ಚಿಕಿತ್ಸಾ ಕಿಟ್​, ನಗದು ಹಣ, ಪವರ್​ ಬ್ಯಾಂಕ್​, ಶೌಚಗೃಹ ಸಾಮಗ್ರಿಗಳು, ಹೊದಿಕೆಗಳು, ಗುರುತಿನ ಚೀಟಿಗಳ ಜೆರಾಕ್ಸ್​ ಪ್ರತಿಗಳು ಮತ್ತು ರೇಡಿಯೋವನ್ನು ಸಿದ್ಧವಾಗಿಟ್ಟುಕೊಳ್ಳಲು ತಿಳಿಸಲಾಗಿದೆ.

ನೈಸರ್ಗಿಕ ವಿಕೋಪಗಳು, ಯುದ್ಧ, ಭಯೋತ್ಪಾದಕ ದಾಳಿಗಳು ಮತ್ತು ಯುದ್ಧದಂತಹ ತುರ್ತು ಪರಿಸ್ಥಿತಿಗಳಿಗೆ ಸಿದ್ಧತೆ ಮಾಡಿಕೊಳ್ಳುವುದು ಇದರ ಉದ್ದೇಶ ಎಂದು ಹೇಳಲಾಗಿದೆ. ರಕ್ಷಣಾ ತಂಡಗಳು ಏಕಕಾಲದಲ್ಲಿ ಎಲ್ಲೆಡೆ ತಲುಪಲು ಸಾಧ್ಯವಿಲ್ಲ; ಅಲ್ಲಿಯವರೆಗೆ ಈ ವ್ಯವಸ್ಥೆಗಳು ಜನರು ಸುರಕ್ಷಿತವಾಗಿರಲು ನೆರವಾಗುತ್ತವೆ. ಬ್ರಿಟನ್​ ರಕ್ಷಣಾ ಕಾರ್ಯದರ್ಶಿ ವೆಸ್​ ಸ್ಟ್ರೀಟಿಂಗ್​ ಅವರು, "ಶತ್ರುಗಳ ದಾಳಿಗಳು ನಮ್ಮ ದೈನಂದಿನ ಮೂಲಸೌಕರ್ಯಗಳಿಗೆ ಹಾನಿ ಉಂಟುಮಾಡಬಹುದು. ಈ ಅಪಾಯಗಳು ಇನ್ನು ಕಾಲ್ಪನಿಕವಲ್ಲ, ವಾಸ್ತವ' ಎಂದು ಹೇಳಿದ್ದಾರೆ.

ಯುರೋಪಿಯನ್​ ದೇಶಗಳ ಕ್ರಮ

  • ಯುರೋಪಿಯನ್​ ಒಕ್ಕೂಟವು ಕಳೆದ ವರ್ಷ "ಪ್ರಿಪೇರ್ಡ್​ನೆಸ್​ ಯೂನಿಯನ್​ ಸ್ಟ್ರಾಟಿಜಿ' ಅಳವಡಿಸಿಕೊಂಡಿದೆ. ಇದರ ಪ್ರಕಾರ, ತುರ್ತು ಸಂದರ್ಭಗಳಲ್ಲಿ ಜನರು ಯಾವುದೇ ನೆರವಿಲ್ಲದೆ 72 ಗಂಟೆಗಳ ಕಾಲ ಕಳೆಯಲು ಸನ್ನದ್ಧರಾಗಿರಬೇಕು.

  • ಫಿನ್​ಲ್ಯಾಂಡ್​ 9 ತಿಂಗಳಿಗೆ ಸಾಕಾಗುವಷ್ಟು ಧಾನ್ಯವನ್ನು ಸಂಗ್ರಹಿಸಿಟ್ಟಿದೆ. ಸ್ವೀಡನ್​ ತನ್ನ ರಕ್ಷಣಾ ವ್ಯವಸ್ಥೆಗಳನ್ನು ಮೇಲ್ದರ್ಜೆಗೇರಿಸಿದೆ. ಪೋಲೆಂಡ್​, ಫಿನ್​ಲ್ಯಾಂಡ್​, ಎಸ್ಟೋನಿಯಾ, ಲಾಟ್ವಿಯಾ ಮತ್ತು ಲಿಥುವೇನಿಯಾ ದೇಶಗಳು ಆಶ್ರಯ ತಾಣಗಳನ್ನು ಸುಧಾರಿಸಿವೆ.

  • ಆಗಸ್ಟ್​ನಲ್ಲಿ ಐರ್ಲೆಂಡ್​ ಆರಂಭಿಸಿದ "ಬಿ ಎಮರ್ಜೆನ್ಸಿ ರೆಡಿ' ಅಭಿಯಾನದಡಿಯಲ್ಲಿ, ಮನೆಯಲ್ಲಿ ಆಹಾರ ಮತ್ತು ನೀರು ಇತ್ಯಾದಿ ಸಂಗ್ರಹಿಸಿಟ್ಟುಕೊಳ್ಳುವಂತೆ, ಕರೆಂಟ್​ ಮತ್ತು ಗ್ಯಾಸ್​ ಸಂಪರ್ಕ ಕಡಿತಗೊಳ್ಳಲು ಸಿದ್ಧರಾಗಿರಲು ಜನರಿಗೆ ಸಲಹೆ ನೀಡಲಾಗಿದೆ. ಬೆಂಕಿಪೊಟ್ಟಣ ಮತ್ತು ಲೈಟರ್​ಗಳನ್ನು ಖರೀದಿಸಿಟ್ಟುಕೊಳ್ಳಲು ಹಾಗೂ ಬೆಲೆಬಾಳುವ ವಸ್ತುಗಳನ್ನು ರಕ್ಷಿಸಲು ಗಟ್ಟಿಮುಟ್ಟಾದ ಪ್ಲಾಸ್ಟಿಕ್​ ಬ್ಯಾಗ್​ಗಳನ್ನು ಇಟ್ಟುಕೊಳ್ಳಲು ಸೂಚಿಸಲಾಗಿದೆ.

ಅಮೆರಿಕದಲ್ಲಿ ಕೋಟೆ

ಅಮೆರಿಕದ ರಕ್ಷಣಾ ಪ್ರಧಾನ ಕಚೇರಿ ಪೆಂಟಗನ್​, ಪ್ರಮುಖ ಮಿಲಿಟರಿ ನೆಲೆಗಳನ್ನು ಬಾಹ್ಯ ನೆರವಿಲ್ಲದೆ 90 ದಿನಗಳವರೆಗೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಸಜ್ಜುಗೊಳಿಸುತ್ತಿದೆ. ಅಮೆರಿಕದ ಸುದ್ದಿ ವಾಹಿನಿ ಫಾಕ್ಸ್​ ಪ್ರಕಾರ, ಸೆಪ್ಟೆಂಬರ್​ 30ರಂದು ರಕ್ಷಣಾ ಸಚಿವ ಪೀಟ್​ ಹೆಗ್ಸೆತ್​ ಅವರು "ಫೋರ್ಟ್ರೆಸ್​' ಅಂದರೆ "ಕೋಟೆ' ಹೆಸರಿನ ಈ ಯೋಜನೆಯನ್ನು ಪ್ರಾರಂಭಿಸಿದರು. ಇದರಡಿಯಲ್ಲಿ ಮಿಲಿಟರಿ ನೆಲೆಗಳು ತಮಗೆ ಬೇಕಾದ ವಿದ್ಯುತ್​ ಅನ್ನು ತಾವೇ ಉತ್ಪಾದಿಸಿಕೊಳ್ಳಲಿವೆ. ಯುದ್ಧದ ಸಂದರ್ಭದಲ್ಲಿ ನಗರದ ಮೂಲಸೌಕರ್ಯಗಳು ನಾಶವಾದರೂ, ಈ ಮಿಲಿಟರಿ ನೆಲೆಗಳು ಹೊರಗಿನ ವಿದ್ಯುತ್​ ಮತ್ತು ಇಂಧನದ ಸಹಾಯವಿಲ್ಲದೆ ಕಾರ್ಯನಿರ್ವಹಿಸುತ್ತಲೇ ಇರುತ್ತವೆ.

ಮಿಲಿಟರಿ ನೆಲೆಗಳಲ್ಲಿ ನೀರು ಹಾಗೂ ವಿದ್ಯುತ್​ ಮತ್ತು ಇಂಟರ್ನೆಟ್​ ಇಲ್ಲದೆಯೂ ಸಂವಹನ ನಡೆಸಲು ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಮದ್ದುಗುಂಡುಗಳು, ಪ್ರಮುಖ ಖನಿಜಗಳು, ಎಲೆಕ್ಟ್ರಾನಿಕ್ಸ್​, ಬಿಡಿಭಾಗಗಳು ಮತ್ತು ವೈದ್ಯಕೀಯ ಸರಬರಾಜುಗಳ ಕಾರ್ಯತಂತ್ರ ಸಿದ್ಧಪಡಿಸಲಾಗುತ್ತಿದೆ. ಮಿಲಿಟರಿಯ ಅಗತ್ಯ ವಸ್ತುಗಳಿಗಾಗಿ ಇಬ್ಬರು ಪೂರೈಕೆದಾರರು ಅಥವಾ ತಯಾರಕರು ಇರುತ್ತಾರೆ; ಇದರಿಂದ ಒಬ್ಬರನ್ನು ಕಳೆದುಕೊಂಡರೂ ಕಾರ್ಯಾಚರಣೆಗಳು ಸ್ಥಗಿತಗೊಳ್ಳುವುದಿಲ್ಲ. ಅಮೆರಿಕವು ನವೆಂಬರ್​ 17ರಂದು ತನ್ನ ತುರ್ತು ಎಚ್ಚರಿಕೆ ವ್ಯವಸ್ಥೆಯನ್ನು (ಇಎಎಸ್​) ದೇಶಾದ್ಯಂತ ಪರೀಕ್ಷಿಸಲು ಸಜ್ಜಾಗಿದೆ.

ಜಪಾನ್​ನಿಂದ ತುರ್ತು ಮನವಿ

ಭೂಕಂಪ ಮತ್ತು ಜ್ವಾಲಾಮುಖಿ ಸ್ಫೋಟದ ಮುನ್ನೆಚ್ಚರಿಕೆ ಸಿದ್ಧತೆಯಾಗಿ ಕನಿಷ್ಠ 3ರಿಂದ 7 ದಿನಗಳವರೆಗೆ ಸಾಕಾಗುವಷ್ಟು ಆಹಾರ ಮತ್ತು ನೀರನ್ನು ಸಂಗ್ರಹಿಸಿಟ್ಟುಕೊಳ್ಳಲು ಜಪಾನ್​ ಸರ್ಕಾರವು ಜನರಿಗೆ ತಿಳಿಸಿದೆ. ನವೆಂಬರ್​ 2ರಂದು ಈ ಘೋಷಣೆ ಹೊರಬಿದ್ದಿದೆ. ವಿಪತ್ತು ನಿರ್ವಹಣಾ ಸಚಿವ ಗೋಷಿ ಹೊಸೊನೊ ಅವರು, "ಸರ್ಕಾರದ ಬೆಂಬಲವಿಲ್ಲದೆಯೂ ದಿನ ದೂಡಲು ಸಾಧ್ಯವಾಗುವಂತೆ ಮನೆಯಲ್ಲಿ ಆಹಾರ, ಶೌಚಗೃಹ ಸಾಮಗ್ರಿಗಳು, ಅಗತ್ಯ ಎಲೆಕ್ಟ್ರಾನಿಕ್​ ವಸ್ತುಗಳು ಮತ್ತು ನೀರನ್ನು ಸಂಗ್ರಹಿಸಿಡಿ' ಎಂದು ತಿಳಿಸಿದ್ದಾರೆ.

ಪ್ರಮುಖ ದೇಶಗಳಲ್ಲಿ ಬಿ ರೆಡಿ ಅಭಿಯಾನ

  • ಬ್ರಿಟನ್​ ರಕ್ಷಣಾ ಕಾರ್ಯದರ್ಶಿ ವೆಸ್​ ಸ್ಟ್ರೀಟಿಂಗ್​ ಅಕ್ಟೋಬರ್​ 24ರಂದು ಮಾಧ್ಯಮಗಳೊಂದಿಗೆ ಮಾತನಾಡಿ, "ರಷ್ಯಾವು ನ್ಯಾಟೋ ವಿರುದ್ಧ ಹೈಬ್ರಿಡ್​ ವಾರ್​ಫೇರ್​ (ಮಿಶ್ರ ಯುದ್ಧತಂತ್ರ) ತೀವ್ರಗೊಳಿಸುತ್ತಿದೆ. 2030ರ ವೇಳೆಗೆ ಶತ್ರುಗಳ ಬಲ ಮತ್ತು ಆರ್ಥಿಕತೆ ಅವರಿಗೆ ದಾಳಿ ಮಾಡುವ ಸಾಮರ್ಥ್ಯವನ್ನು ನೀಡಲಿದೆ. ನಾವು ಯುದ್ಧ ಮಾಡಲು ಮತ್ತು ಗೆಲ್ಲಲು ಸನ್ನದ್ಧರಾಗಬೇಕು. ನಮ್ಮ ಬಳಿ 1,000 ದಿನಗಳಿವೆ' ಎಂದು ಹೇಳಿದ್ದಾರೆ.

  • ಬ್ರಿಟನ್​ ಸೇನೆಯ ಮಾಜಿ ಮುಖ್ಯಸ್ಥ ಜನರಲ್​ ಪ್ಯಾಟ್ರಿಕ್​ ಸ್ಯಾಂಡರ್ಸ್​, "ಜಗತ್ತು ಶೀತಲಸಮರದ ಕಾಲಕ್ಕಿಂತಲೂ ಹೆಚ್ಚು ಅಪಾಯಕಾರಿಯಾಗಿದೆ. ನಮ್ಮ ಸೈನಿಕ ಬಲ ಮತ್ತು ನಾಗರಿಕರ ಸುರತೆಯ ಬಗ್ಗೆ ನನಗೆ ಆತಂಕವಿದೆ' ಎಂದಿದ್ದಾರೆ. ಬ್ರಿಟನ್​ಗೆ ರಷ್ಯಾದೊಂದಿಗಿನ ಯುದ್ಧಕ್ಕೆ ಸಿದ್ಧತೆ ಮಾಡಿಕೊಳ್ಳಲು 5 ವರ್ಷಕ್ಕಿಂತ ಕಡಿಮೆ ಸಮಯವಿದೆ ಎಂದು ಸ್ಯಾಂಡರ್ಸ್​ 2025ರ ಜುಲೈನಲ್ಲೂ ಎಚ್ಚರಿಸಿದ್ದರು. ಬಂಕರ್​ಗಳನ್ನು ನಿರ್ಮಿಸಲು ಮತ್ತು ವಾಯು ರಕ್ಷಣಾ ವ್ಯವಸ್ಥೆಯಲ್ಲಿ ಹೂಡಿಕೆ ಮಾಡುವ ಅಗತ್ಯವಿದೆ ಎಂದಿದ್ದರು.

  • ರಷ್ಯಾ-ಯೂಕ್ರೇನ್​ ಯುದ್ಧ ನಿಲ್ಲದಿದ್ದರೆ, ಅದು ಮೂರನೇ ಮಹಾಯುದ್ಧವಾಗಿ ಮಾರ್ಪಡಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಈಗಾಗಲೇ ಹೇಳಿದ್ದಾರೆ. ಕಳೆದ ತಿಂಗಳು ನ್ಯಾಟೋ ಮಹಾಕಾರ್ಯದರ್ಶಿ ಮಾರ್ಕ್​ ರುಟ್ಟೆ ಕೂಡ, "ರಷ್ಯಾದ ಮುಂದಿನ ಗುರಿ ಯುರೋಪ್​ ಆಗಿರಬಹುದು. ನಾವು ಹಳೆಯ ಕಾಲದಂತಹ ಯುದ್ಧಕ್ಕೆ ಸಿದ್ಧರಾಗಿರಬೇಕು' ಎಂದು ಎಚ್ಚರಿಸಿದ್ದರು.

  • ಅಮೆರಿಕವು ಕೊಲ್ಲಿ ದೇಶಗಳ ಮಿಲಿಟರಿ ನೆಲೆಗಳಲ್ಲಿ ಸೈನಿಕರು, ಶಸ್ತ್ರಾಸ್ತ್ರಗಳು, 20 ಯುದ್ಧನೌಕೆಗಳು, ಪೇಟ್ರಿಯಾಟ್​ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಮತ್ತು ಯುದ್ಧ ವಿಮಾನಗಳನ್ನು ನಿಯೋಜಿಸುತ್ತಿದೆ. ಇರಾನ್​ ವಿರುದ್ಧದ ಯುದ್ಧವು ಮಧ್ಯಪ್ರಾಚ್ಯದ ವಿಶಾಲ ಪ್ರದೇಶಕ್ಕೆ ಹರಡಬಹುದು.

  • ಇನ್ನೊಂದೆಡೆ ಜಪಾನ್​, ತೈವಾನ್​-ಚೀನಾ ಉದ್ವಿಗ್ನತೆ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಜಪಾನ್​ ರಕ್ಷಣಾ ಸಚಿವ ಶಿಂಜಿರೊ ಕೊಯಿಜುಮಿ, "ಜಪಾನ್​ ಸುತ್ತಲಿನ ಪರಿಸ್ಥಿತಿ ಎರಡನೇ ಮಹಾಯುದ್ಧದ ನಂತರ ಅತ್ಯಂತ ಗಂಭೀರವಾಗಿದೆ. ಚೀನಾ ಅತಿ ದೊಡ್ಡ ಸವಾಲಾಗಿದೆ. ಪಶ್ಚಿಮ ಏಷ್ಯಾದಲ್ಲಿ ಯೂಕ್ರೇನ್​ನಂತಹ ಬಿಕ್ಕಟ್ಟು ಎದುರಾಗಬಹುದು' ಎಂದು ಹೇಳಿದ್ದಾರೆ. ಅವರು ರಷ್ಯಾ ಮತ್ತು ಚೀನಾದ ಪಾಲುದಾರಿಕೆಯ ಬಗ್ಗೆಯೂ ಕಳವಳ ವ್ಯಕ್ತಪಡಿಸಿದ್ದಾರೆ.

ತಲ್ಲಣ ಸೃಷ್ಟಿಸಿದ ಘಟನೆಗಳು

ಸರ್ಕಾರಿ ವೆಬ್​ಸೈಟ್​ಗಳು ಸ್ಥಗಿತ: ಪಿಎಚ್​ಪಿ ಪ್ರೋಗ್ರಾಮಿಂಗ್​ ಭಾಷೆಯಲ್ಲಿ ಭದ್ರತಾ ದೋಷ ಇದೇ ತಿಂಗಳು ಪತ್ತೆಯಾಗಿದೆ. ಇದರ ಪರಿಣಾಮವಾಗಿ ಬ್ರಿಟನ್​ನಲ್ಲಿ 32 ಆನ್​ಲೈನ್​ ಸರ್ಕಾರಿ ವೆಬ್​ಸೈಟ್​ಗಳನ್ನು ತಾತ್ಕಾಲಿಕವಾಗಿ ಮುಚ್ಚಬೇಕಾಯಿತು. ನೆದರ್​ಲ್ಯಾಂಡ್ಸ್​, ಫಿನ್​ಲ್ಯಾಂಡ್​, ಫ್ರಾನ್ಸ್​ ಮತ್ತು ಇತರ ಯುರೋಪಿಯನ್​ ದೇಶಗಳಲ್ಲೂ ಇದೇ ರೀತಿಯಾಯಿತು.

ಇಂಟರ್ನೆಟ್​ ಕೇಬಲ್​ ಕತ್ತರಿಸಲು ರಷ್ಯಾ ಯತ್ನ: ರಾಯಿಟರ್ಸ್​ ಪ್ರಕಾರ, 2026ರಲ್ಲಿ ಬ್ರಿಟನ್​, ನಾರ್ವೆ ಮತ್ತು ಅಮೆರಿಕ ದೇಶಗಳು ಆರ್ಕ್ಟಿಕ್​ ಸಮುದ್ರ ಪ್ರದೇಶದಲ್ಲಿ ರಷ್ಯಾದ ಕಾರ್ಯಾಚರಣೆಯನ್ನು ತಡೆಹಿಡಿದವು. ರಷ್ಯಾದ ಜಲಾಂತರ್ಗಾಮಿ ನೌಕೆಗಳು ಸಮುದ್ರದ ತಳದಲ್ಲಿ ಹಾಕಲಾಗಿರುವ ಆಪ್ಟಿಕಲ್​ ಫೈಬರ್​ ಕೇಬಲ್​ಗಳನ್ನು ಸದ್ದಿಲ್ಲದೆ ನಿಷ್ಕ್ರಿಯಗೊಳಿಸಲು ಯತ್ನಿಸುತ್ತಿದ್ದವು. ಈ ಕೇಬಲ್​ಗಳ ಮೂಲಕವೇ ಜಗತ್ತಿನಾದ್ಯಂತ ಇಂಟರ್ನೆಟ್​ ಸಂಪರ್ಕ ಕಾರ್ಯನಿರ್ವಹಿಸುತ್ತದೆ.

ಫ್ರೀಜರ್​ಗಳಿಗೆ ಬೆಂಕಿ ಹಚ್ಚಿದ ಹ್ಯಾಕರ್​ಗಳು: ಫ್ರಾನ್ಸ್​ನ ನೂರಾರು ಸೂಪರ್​ಮಾರ್ಕೆಟ್​ಗಳಲ್ಲಿದ್ದ ಫ್ರೀಜರ್​ಗಳನ್ನು ಹ್ಯಾಕರ್​ಗಳು ಅಕ್ಟೋಬರ್​ 12 ಮತ್ತು ನವೆಂಬರ್​ 3ರಂದು ರಿಮೋಟ್​ ಮೂಲಕ ನಿಯಂತ್ರಿಸಿ, ಅವುಗಳ ತಾಪಮಾನವನ್ನು 50 ಡಿಗ್ರಿ ಸೆಲ್ಸಿಯಸ್​ಗೆ ಹೆಚ್ಚಿಸಿದರು. ಇದರಿಂದಾಗಿ ಬೆಂಕಿ ಕಾಣಿಸಿಕೊಂಡಿತ್ತು.

ಪ್ರಪಂಚದಾದ್ಯಂತ ಭಾರೀ ಸೈಬರ್​ ದಾಳಿ

ಚೀನಾ, ಅಮೆರಿಕ ಮತ್ತು ರಷ್ಯಾದಂತಹ ದೇಶಗಳಲ್ಲಿ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಡ್ರೋನ್​ಗಳು, ಕ್ಷಿಪಣಿಗಳು, ಶಸ್ತ್ರಾಸ್ತ್ರಗಳು, ಎಐ ತಂತ್ರಜ್ಞಾನ ಹೊಂದಿರುವ ರಕ್ಷಣಾ ವ್ಯವಸ್ಥೆಗಳು ಮತ್ತು ನೂತನ ಸೈಬರ್​ ತಂತ್ರಜ್ಞಾನಗಳ ಪೈಪೋಟಿ ತೀವ್ರಗೊಳ್ಳುತ್ತಿದೆ. ಅಮೆರಿಕದ ರಾಷ್ಟ್ರೀಯ ಭದ್ರತಾ ಸಂಸ್ಥೆ ಹಲವು ಎಚ್ಚರಿಕೆಗಳನ್ನು ನೀಡಿದೆ. ಜಪಾನ್​ ಮತ್ತು ಯುರೋಪಿಯನ್​ ದೇಶಗಳ ನಾಯಕರೂ ಗಂಭೀರ ಸೈಬರ್​ ಮತ್ತು ಹೈಬ್ರಿಡ್​ ಅಪಾಯಗಳ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ. ಬ್ರಿಟನ್​ ಮಾತ್ರವಲ್ಲ ಫ್ರಾನ್ಸ್​ ಮತ್ತು ಜರ್ಮನಿಯಂತಹ ದೇಶಗಳು ಸೈಬರ್​ ದಾಳಿಗೆ ಸನ್ನದ್ಧರಾಗಿರಲು ತಮ್ಮ ನಾಗರಿಕರಿಗೆ ಸಲಹೆ ನೀಡಿವೆ.

ಯುರೋಪ್​ ಮತ್ತು ಫ್ರಾನ್ಸ್​ ವಿರುದ್ಧ ರಷ್ಯಾದ ಹೈಬ್ರಿಡ್​ ದಾಳಿಯ ಭೀತಿ ಹೆಚ್ಚಾಗಿದೆ' ಎಂದು ಫ್ರಾನ್ಸ್​ ಅಧ್ಯಕ್ಷ ಇಮ್ಯಾನುಯೆಲ್​ ಮ್ಯಾಕ್ರನ್​ ಹೇಳಿದ್ದಾರೆ. ಮಾಹಿತಿ ವ್ಯವಸ್ಥೆಗಳು ಮತ್ತು ವಾಯುಪ್ರದೇಶದಲ್ಲಿ ಒಳನುಸುಳುವಿಕೆ ಹಾಗೂ ಕಣ್ಗಾವಲಿನಂತಹ ವಿಚಾರಗಳನ್ನೂ ಅವರು ಪ್ರಸ್ತಾಪಿಸಿದ್ದಾರೆ.