ಮೆಕ್ಸಿಕನ್ ಅಧ್ಯಕ್ಷೆ ಕ್ಲೌಡಿಯಾ ಶೀನ್‌ಬಾಮ್
Mexico: ಶುಕ್ರವಾರ(ಜ. 02) ಮೆಕ್ಸಿಕೋದಲ್ಲಿ ಪ್ರಬಲ ಭೂಕಂಪನ(Earthquake) ಸಂಭವಿಸಿದ್ದು, ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಮಂದಿಗೆ ಗಾಯಗೊಂಡಿದ್ದಾರೆ. ರಿಕ್ಟರ್ ಮಾಪಕದಲ್ಲಿ 6.5ರಷ್ಟು ತೀವ್ರತೆ ದಾಖಲಾಗಿದೆ ಎಂದು ವರದಿಯಾಗಿದೆ.
ಗೆರೆರೋ ರಾಜ್ಯದ ಸ್ಯಾನ್ ಮಾರ್ಕೋಸ್ ಬಳಿಯ ಅಕಾಪುಲ್ಕೊ ನಗರದಲ್ಲಿ ಸುಮಾರು 35 ಕಿಮೀ ಆಳದಲ್ಲಿ ಭೂಕಂಪನದ ಕೇಂದ್ರ ಬಿಂದು ಎನ್ನಲಾಗಿದೆ. 33 ಸೆಕೆಂಡುಗಳ ಕಾಲ ಭೂಮಿ ಕಂಪಿಸಿದ್ದು, ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, 50 ಮನೆಗಳು ಬಿದ್ದಿವೆ.
ಈ ಕುರಿತು ಮಾಹಿತಿ ನೀಡಿರುವ ನಗರದ ಮೇಯರ್ ಕ್ಲಾರಾ ಬ್ರುಗಾಡಾ, ಭೂಮಿ ಕಂಪಿಸುತ್ತಿದ್ದಂತೆ ಲಕ್ಷಾಂತರ ಜನರು ತಮ್ಮ ಮನೆಗಳು ಮತ್ತು ಕಚೇರಿಗಳಿಂದ ಬೀದಿಗಳಿಗೆ ಓಡಿ ಬಂದಿದ್ದಾರೆ. ಅಪಾರ್ಟ್ಮೆಂಟ್ ಕಟ್ಟಡವೊಂದರ ಎರಡನೇ ಮಹಡಿಯಿಂದ ಬಿದ್ದು 60 ವರ್ಷದ ವ್ಯಕ್ತಿಯೊಬ್ಬರು ಮೃತರಾಗಿದ್ದಾರೆ. ಇತರ ಹನ್ನೆರಡು ಮಂದಿ ಗಾಯಗೊಂಡಿದ್ದಾರೆ. ಭೂಕಂಪದ ಕೇಂದ್ರಬಿಂದುವಿನ ಸಮೀಪವಿರುವ ಹಳ್ಳಿಯಲ್ಲಿ ಮನೆ ಕುಸಿದು 50 ವರ್ಷದ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.
ಸುದ್ದಿಗೋಷ್ಠಿ ನಡೆಸಿದ್ದ ಶೀನ್ಬಾಮ್ಗೆ ಅಡ್ಡಿ
ಭೂಕಂಪ ಸಂಭವಿಸಿದಾಗ ಮೆಕ್ಸಿಕನ್ ಅಧ್ಯಕ್ಷೆ ಕ್ಲೌಡಿಯಾ ಶೀನ್‌ಬಾಮ್ ಪತ್ರಿಕಾಗೋಷ್ಠಿ ನಡೆಸುತ್ತಿದ್ದರು. ಹಠಾತ್ ಕಂಪನದಿಂದಾಗಿ ಪತ್ರಿಕಾಗೋಷ್ಠಿಯನ್ನು ಅರ್ಧಕ್ಕೆ ನಿಲ್ಲಿಸಿ ಎಲ್ಲರೂ ಕಟ್ಟಡದಿಂದ ಆಚೆ ಬರುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ (ಏಜೆನ್ಸೀಸ್).