ವಿಶ್ವದ ಶ್ರೀಮಂತ ರಾಷ್ಟ್ರಗಳ ಪೈಕಿ ಜಪಾನ್ ಕೂಡ ಒಂದು. ಆದರೆ ಸರ್ಕಾರದ ಅಂಕಿ-ಅಂಶಗಳ ಪ್ರಕಾರವೇ, ಜಪಾನ್ನಲ್ಲಿ ಬಡತನದ ಪ್ರಮಾಣ ವೇಗವಾಗಿ ಹೆಚ್ಚುತ್ತಿದ್ದು, ‘ಸಿರಿವಂತ ರಾಷ್ಟ್ರ’ಕ್ಕೆ ಕಳವಳ ಹುಟ್ಟಿಸಿದೆ. 2020ರ ನಂತರ ಆಹಾರ ಪದಾರ್ಥಗಳ ಬೆಲೆಯಲ್ಲಿ ಶೇಕಡ 30ರಷ್ಟು ಹೆಚ್ಚಳವಾಗಿದ್ದು, ಕಡಿಮೆ ಆದಾಯ ಹೊಂದಿರುವ ಕುಟುಂಬಗಳ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ. ಬಹುತೇಕರು ಕಡಿಮೆ ವೇತನ ಮತ್ತು ಅನಿಶ್ಚಿತ ಉದ್ಯೋಗಗಳಲ್ಲಿಯೇ ಇದ್ದಾರೆ. ತೀವ್ರ ಬೆಲೆಯೇರಿಕೆ ಜನರ ಬದುಕು ಹಾಗೂ ದೇಶದ ಆರ್ಥಿಕತೆ ಎರಡರ ಮೇಲೂ ತೀವ್ರ ದುಷ್ಪರಿಣಾಮ ಬೀರಿದ್ದು, ಜಪಾನ್ ಈ ಸಮಸ್ಯೆಗೆ ಸಿಲುಕಿಕೊಂಡಿದ್ದು ಹೇಗೆ? ಅದರ ಮುಂದಿರುವ ದಾರಿಗಳೇನು? ಈ ಕುರಿತಾದ ವಿವರ ಇಲ್ಲಿದೆ.
ಜಪಾನ್ ವಿಶ್ವದ ಪ್ರಮುಖ ಆರ್ಥಿಕ ಶಕ್ತಿಗಳಲ್ಲಿ ಒಂದಾಗಿದ್ದರೂ, ಅಲ್ಲಿ ಬಡತನ (Relative Poverty) ತೀವ್ರವಾಗಿ ಹೆಚ್ಚುತ್ತಿದೆ. ಒಇಸಿಡಿ (Organisatin for Economic Co-operation and Development) ದೇಶಗಳ ಪೈಕಿ ಜಪಾನ್ನ ಸಾಪೇಕ್ಷ ಬಡತನದ ಪ್ರಮಾಣವು 15.4% ರಷ್ಟಿದ್ದು, ಇದು ಮುಂದುವರಿದ ದೇಶಗಳ ಸರಾಸರಿಗಿಂತ ಹೆಚ್ಚಾಗಿದೆ. ಮೇಲ್ನೋಟಕ್ಕೆ ಜಪಾನ್ನಲ್ಲಿ ತುತ್ತು ಅನ್ನಕ್ಕೂ ಪರದಾಡುವ ತೀವ್ರ ಬಡತನ ಹೆಚ್ಚಾಗಿ ಕಾಣಿಸದಿದ್ದರೂ, ಸಮಾಜದಲ್ಲಿ ಗೌರವಯುತ ಜೀವನ ನಡೆಸಲು ಅಗತ್ಯವಿರುವ ಆದಾಯವಿಲ್ಲದ ಅದೃಶ್ಯ ಬಡತನ ಆಳವಾಗಿ ಬೇರೂರಿದೆ. ಜಪಾನಿ ಸಂಸ್ಕೃತಿಯಲ್ಲಿ ಸರ್ಕಾರದ ಸಹಾಯ ಪಡೆಯುವುದನ್ನು ಕೀಳಾಗಿ ಅಥವಾ ಅವಮಾನಕರವಾಗಿ ನೋಡಲಾಗುತ್ತದೆ. ಇದರಿಂದಾಗಿ ಅರ್ಹ ಬಡವರಲ್ಲಿ 20%ರಷ್ಟು ಮಂದಿ ಮಾತ್ರ ಸರ್ಕಾರಿ ಸಹಾಯಧನಕ್ಕೆ ಅರ್ಜಿ ಸಲ್ಲಿಸಿದ್ದು, ಉಳಿದವರು ಸಂಕಷ್ಟದಲ್ಲೇ ಬದುಕು ಸಾಗಿಸುತ್ತಿದ್ದಾರೆ.
ಜಪಾನ್ನಲ್ಲಿ 2024ರಲ್ಲಿ ಶೇಕಡ 11ರಷ್ಟು ಮಕ್ಕಳು ಬಡತನದಲ್ಲಿ ಬದುಕುತ್ತಿದ್ದರು. ಈ ಮಕ್ಕಳ ಕುಟುಂಬಗಳ ಖರ್ಚು ಮಾಡಬಹುದಾದ ಆದಾಯವು ರಾಷ್ಟ್ರೀಯ ಸರಾಸರಿ ಆದಾಯದ ಅರ್ಧಕ್ಕಿಂತ ಕಡಿಮೆಯಿದೆ, ಅಂದರೆ ವಾರ್ಷಿಕ 16.76 ಲಕ್ಷ ರೂಪಾಯಿಗಳು (17,500 ಡಾಲರ್). ಹಲವು ಕುಟುಂಬಗಳಲ್ಲಿ ಪ್ರತಿ ವ್ಯಕ್ತಿಗೆ ದಿನದ ಆಹಾರ ವೆಚ್ಚವು 335 ರೂ.ಗಳಿಗಿಂತ ಕಡಿಮೆಯಾಗಿದೆ. ಬಡ ಮಕ್ಕಳಿಗೆ ಶಾಲೆಗಳಲ್ಲಿ ಉಚಿತ ಊಟ ಒದಗಿಸಲಾಗುತ್ತಿದೆ. ಜಪಾನ್ನಲ್ಲಿ ಸಿಂಗಲ್ ಮದರ್ ಅಥವಾ ಸಿಂಗಲ್ ಫಾದರ್ ಕುಟುಂಬಗಳಲ್ಲಿ ಬಡತನ ದರವು ಶೇಕಡ 44.7ರಷ್ಟಿದೆ. ವಿಚ್ಛೇದನದ ಶೇ.90ರಷ್ಟು ಪ್ರಕರಣಗಳಲ್ಲಿ ಮಕ್ಕಳ ಜವಾಬ್ದಾರಿ ತಾಯಂದಿರಿಗೇ ಸಿಗುತ್ತದೆ. ‘ಸೇವ್ ದಿ ಚಿಲ್ಡ›ನ್ ಜಪಾನ್’ ನಡೆಸಿದ ಸಮೀಕ್ಷೆಯಲ್ಲಿ, ಆಹಾರ ನೆರವು ಕೋರಿದ ಶೇ.90ರಷ್ಟು ಜನರು ಬೆಲೆ ಏರಿಕೆಯನ್ನೇ ಇದಕ್ಕೆ ಮುಖ್ಯ ಕಾರಣವೆಂದು ತಿಳಿಸಿದ್ದಾರೆ.
ಅಸ್ಥಿರ ಉದ್ಯೋಗ ಮಾರುಕಟ್ಟೆ: 1990ರ ದಶಕದ ಆರ್ಥಿಕ ಬಿಕ್ಕಟ್ಟಿನ ನಂತರ ಜಪಾನ್ನ ಪ್ರಸಿದ್ಧ ಆಜೀವ ಉದ್ಯೋಗ (ಔಜ್ಛಿಛಿಠಿಜಿಞಛಿ ಛಿಞಟ್ಝಟಢಞಛ್ಞಿಠಿ) ವ್ಯವಸ್ಥೆ ಕುಸಿಯಿತು. ಪ್ರಸ್ತುತ ಒಟ್ಟು ಕಾರ್ವಿುಕರಲ್ಲಿ 35%ರಿಂದ 40%ರಷ್ಟು ಮಂದಿ ಗುತ್ತಿಗೆ, ಅರೆಕಾಲಿಕ ಅಥವಾ ತಾತ್ಕಾಲಿಕ ಕೆಲಸಗಾರರಾಗಿದ್ದಾರೆ. ಇವರಿಗೆ ಕಡಿಮೆ ವೇತನ ಇದ್ದು, ಉದ್ಯೋಗ ಭದ್ರತೆಯ ಕೊರತೆ ಕಾಡುತ್ತಿದೆ. ಅಲ್ಲದೆ, ಪಿಂಚಣಿ ಸೌಲಭ್ಯಗಳು ಇಲ್ಲ.
ವೃದ್ಧಾಪ್ಯದ ಸವಾಲು: ಜಪಾನ್ ವಿಶ್ವದಲ್ಲೇ ಅತ್ಯಂತ ವೇಗವಾಗಿ ವಯಸ್ಸಾಗುತ್ತಿರುವ ದೇಶಗಳಲ್ಲಿ ಒಂದಾಗಿದೆ. ನಿವೃತ್ತಿಯ ನಂತರ ಕೇವಲ ಮೂಲಭೂತ ಸರ್ಕಾರಿ ಪಿಂಚಣಿಯನ್ನೇ ನೆಚ್ಚಿಕೊಂಡಿರುವ ಲಕ್ಷಾಂತರ ಹಿರಿಯ ನಾಗರಿಕರಿಗೆ ಜೀವನ ವೆಚ್ಚ, ವೈದ್ಯಕೀಯ ಖರ್ಚುಗಳನ್ನು ನಿಭಾಯಿಸಲು ಸಾಧ್ಯವಾಗದೆ ಬಡತನಕ್ಕೆ ದೂಡಲ್ಪಡುತ್ತಿದ್ದಾರೆ.
ಮಹಿಳೆಯರ ಸಮಸ್ಯೆ: ಒಂಟಿ ತಾಯಂದಿರು (ಸಿಂಗಲ್ ಮದರ್ಸ್) ಇರುವ ಕುಟುಂಬಗಳಲ್ಲಿ ಬಡತನದ ಪ್ರಮಾಣವು 44%ರಿಂದ 50% ರಷ್ಟಿದೆ. ಲಿಂಗ ಅಸಮಾನತೆ, ಹೆರಿಗೆಯ ನಂತರ ಕಾಯಂ ಕೆಲಸ ಸಿಗದಿರುವುದು ಮತ್ತು ಮಕ್ಕಳ ಪಾಲನೆಗೆ ದುಬಾರಿ ವೆಚ್ಚ ತಗಲುವುದರಿಂದ ಮಹಿಳೆಯರು ಹೆಚ್ಚಾಗಿ ಕಡಿಮೆ ವೇತನದ ಅರೆಕಾಲಿಕ ಕೆಲಸಗಳಲ್ಲೇ ಸಿಲುಕಿಕೊಂಡಿದ್ದಾರೆ.
ಹಣದುಬ್ಬರ: ಕಳೆದ ಮೂರು ದಶಕಗಳಿಂದ ಜಪಾನ್ನಲ್ಲಿ ವೇತನ ಹೆಚ್ಚಳ ನಿಧಾನಗತಿಯಲ್ಲಿದೆ. ಇತ್ತೀಚಿನ ವರ್ಷಗಳಲ್ಲಿ ಜಪಾನಿ ಯೆನ್ ಮೌಲ್ಯ ಕುಸಿತ ಹಾಗೂ ಆಹಾರ, ಇಂಧನದಂತಹ ಅಗತ್ಯ ವಸ್ತುಗಳ ಬೆಲೆ ಏರಿಕೆಯು ಕೆಳಮಧ್ಯಮ ವರ್ಗದವರ ಬದುಕನ್ನು ಸಂಕಷ್ಟಕ್ಕೆ ತಳ್ಳಿದೆ.
ಸಮಾನ ಕೆಲಸಕ್ಕೆ ಸಮಾನ ವೇತನ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕಿದೆ ಹಾಗೂ ಕಾಯಂ ಮತ್ತು ತಾತ್ಕಾಲಿಕ ಉದ್ಯೋಗಿಗಳ ನಡುವಿನ ವೇತನ-ಸಾಮಾಜಿಕ ಭದ್ರತೆಯ ಅಂತರವನ್ನು ತಗ್ಗಿಸಬೇಕಿದೆ.
ಮಕ್ಕಳ ಆರೈಕೆ (ಡೇ ಕೇರ್) ಕೇಂದ್ರಗಳ ವಿಸ್ತರಣೆ, ಶಾಲೆಗಳಲ್ಲಿ ಉಚಿತ ಪೌಷ್ಟಿಕ ಆಹಾರ ವಿತರಣೆ ಮತ್ತು ಒಂಟಿ ತಾಯಂದಿರಿಗೆ ಆರ್ಥಿಕ ನೆರವಿನ ಜೊತೆಗೆ ವೃತ್ತಿಪರ ಕೌಶಲ ತರಬೇತಿ ನೀಡುವುದು.
ಸರ್ಕಾರಿ ಸವಲತ್ತುಗಳನ್ನು ಪಡೆಯುವ ಪ್ರಕ್ರಿಯೆಯಲ್ಲಿನ ಕಟ್ಟುನಿಟ್ಟಿನ ನಿಯಮಗಳನ್ನು ಸಡಿಲಿಸುವುದು ಹಾಗೂ ಸರ್ಕಾರಿ ಸಹಾಯ ಪಡೆಯುವವರ ಮೇಲಿನ ಸಾಮಾಜಿಕ ಮುಜುಗರವನ್ನು ಹೋಗಲಾಡಿಸಲು ಜನರಲ್ಲಿ ಜಾಗೃತಿ ಮೂಡಿಸಬೇಕಿದೆ.
ಕಡಿಮೆ ಆದಾಯ ಹೊಂದಿರುವ ಹಿರಿಯ ನಾಗರಿಕರಿಗೆ ಪೂರಕ ಆರ್ಥಿಕ ನೆರವು ಒದಗಿಸುವುದು ಮತ್ತು ಅವರು ಶಕ್ತಿ ಇರುವಷ್ಟು ದಿನ ಹಗುರ ಕೆಲಸಗಳಲ್ಲಿ ಗೌರವಯುತವಾಗಿ ಮುಂದುವರಿಯಲು ಪೂರಕ ವಾತಾವರಣ ಸೃಷ್ಟಿಸುವುದು.
ಜಪಾನ್ನ ಪ್ರಸ್ತುತ ಆರ್ಥಿಕತೆಯು 4.2 ಟ್ರಿಲಿಯನ್ ಡಾಲರ್ ಜಿಡಿಪಿಯೊಂದಿಗೆ (660+ ಟ್ರಿಲಿಯನ್ ಯೆನ್) ವಿಶ್ವದಲ್ಲೇ ನಾಲ್ಕನೇ ದೊಡ್ಡ ಆರ್ಥಿಕತೆಯಾಗಿದೆ (ಅಮೆರಿಕ, ಚೀನಾ ಮತ್ತು ಜರ್ಮನಿಯ ನಂತರ).
ಜಪಾನ್ನ ನೈಜ ಜಿಡಿಪಿ ಬೆಳವಣಿಗೆ ದರವು ವಾರ್ಷಿಕವಾಗಿ 0.8%ರಿಂದ 1.2%ರ ನಡುವೆ ಮಂದಗತಿಯಲ್ಲಿದೆ.
ಅಮೆರಿಕನ್ ಡಾಲರ್ ಎದುರು ಜಪಾನಿ ಯೆನ್ ಮೌಲ್ಯ ತೀವ್ರವಾಗಿ ಕುಸಿದಿರುವುದರಿಂದ ಆಮದು ವೆಚ್ಚ, ಇಂಧನ ಮತ್ತು ಆಹಾರ ಪದಾರ್ಥಗಳ ಬೆಲೆ ಹೆಚ್ಚಾಗಿದೆ.
ಮಾತುಕತೆಗಳ ಮೂಲಕ ಕಂಪನಿಗಳು ವೇತನ ಹೆಚ್ಚಿಸುತ್ತಿದ್ದರೂ, ಬೆಲೆ ಏರಿಕೆಗೆ ಹೋಲಿಸಿದರೆ ನೈಜ ವೇತನ ಹೆಚ್ಚಳ ಸಾಲುತ್ತಿಲ್ಲ. ಇದರಿಂದ ಸಾಮಾನ್ಯ ಜನರ ಖರ್ಚು ಮಾಡುವ ಸಾಮರ್ಥ್ಯ ಕುಸಿದಿದೆ.
ದೇಶದಲ್ಲಿ ನಿರುದ್ಯೋಗ ದರವು ಕೇವಲ 2.5%ರಿಂದ 2.6% ರಷ್ಟಿದೆ. ಆದರೆ, ಜನಸಂಖ್ಯೆ ಕ್ಷೀಣಿಸುತ್ತಿರುವುದರಿಂದ ಕಾರ್ವಿುಕರ ತೀವ್ರ ಕೊರತೆ ಎದುರಾಗಿದೆ.
ಜಪಾನ್ನ ಅನುಭವವು ಜಗತ್ತಿಗೆ ನೀಡುವ ದೊಡ್ಡ ಸಂದೇಶವೆಂದರೆ: ಬೃಹತ್ ಜಿಡಿಪಿ ಅಥವಾ ತಾಂತ್ರಿಕ ಪ್ರಗತಿ ಮಾತ್ರವೇ ಒಂದು ದೇಶದ ಪ್ರಜೆಗಳ ಆರ್ಥಿಕ ಸಮೃದ್ಧಿಯ ಸಂಕೇತವಲ್ಲ. ವಿಶ್ವದ ಮುಂಚೂಣಿ ಆರ್ಥಿಕ ಶಕ್ತಿಯಾಗಿಯೂ ಜಪಾನ್ ಎದುರಿಸುತ್ತಿರುವ ಬಡತನದ ಬಿಕ್ಕಟ್ಟು, ಅಭಿವೃದ್ಧಿಶೀಲ ದೇಶಗಳಿಗೆ ಹಾಗೂ ಇತರ ಮುಂದುವರಿದ ರಾಷ್ಟ್ರಗಳಿಗೆ ಹಲವು ಮಹತ್ವದ ಪಾಠಗಳನ್ನು ಕಲಿಸುತ್ತದೆ.
ಸಮಾನ ಹಂಚಿಕೆ ಮುಖ್ಯ: ರಾಷ್ಟ್ರದ ಒಟ್ಟು ಆಸ್ತಿ ಬೆಳೆದರೂ, ಅದು ಸಮಾನವಾಗಿ ಹಂಚಿಕೆ ಯಾಗದಿದ್ದರೆ ತಳಮಟ್ಟದ ಜನ ಬಡತನದಲ್ಲೇ ಉಳಿಯುತ್ತಾರೆ. ಕೇವಲ ಶ್ರೀಮಂತರ ಆದಾಯ ಹೆಚ್ಚಿಸುವ ನೀತಿಗಳು ಬಡತನ ವನ್ನು ಹೋಗಲಾಡಿಸುವುದಿಲ್ಲ; ಕೆಳವರ್ಗದ ಜನರ ಕೊಳ್ಳುವ ಶಕ್ತಿ ಹೆಚ್ಚಿಸುವುದು ಅತ್ಯಗತ್ಯ.
ಅಸ್ಥಿರ ಉದ್ಯೋಗಗಳ ಅಪಾಯ: ಕಂಪನಿಗಳ ಲಾಭಕ್ಕಾಗಿ ಕಾಯಂ ನೌಕರಿಗಳನ್ನು ಕಡಿತಗೊಳಿಸಿ ಗುತ್ತಿಗೆ ಮತ್ತು ಅರೆಕಾಲಿಕ ಕೆಲಸಗಳನ್ನು ಹೆಚ್ಚಿಸುವುದರಿಂದ ದೀರ್ಘಾವಧಿಯಲ್ಲಿ ಯುವಜನತೆ ಮತ್ತು ಆರ್ಥಿಕತೆ ನಲುಗುತ್ತದೆ. ಉದ್ಯೋಗ ಭದ್ರತೆ, ಕನಿಷ್ಠ ವೇತನ ಮತ್ತು ಸಾಮಾಜಿಕ ರಕ್ಷಣೆ ಇಲ್ಲದ ಉದ್ಯೋಗ ಸೃಷ್ಟಿ ಬಡತನವನ್ನಷ್ಟೇ ಹೆಚ್ಚಿಸುತ್ತದೆ.
ಜನಸಂಖ್ಯಾ ಬದಲಾವಣೆಗೆ ಸಿದ್ಧತೆ: ಯುವಜನತೆಯ ಸಂಖ್ಯೆ ಕಡಿಮೆಯಾಗಿ ವೃದ್ಧರ ಸಂಖ್ಯೆ ಹೆಚ್ಚಾಗುವ ಮುನ್ನವೇ ಸುಭದ್ರ ಪಿಂಚಣಿ, ವೃದ್ಧಾಪ್ಯ ಆರೈಕೆ ಮತ್ತು ಆರೋಗ್ಯ ವಿಮಾ ವ್ಯವಸ್ಥೆಯನ್ನು ರೂಪಿಸಬೇಕು. ಸಿದ್ಧತೆ ಇಲ್ಲದಿದ್ದರೆ ವೃದ್ಧಾಪ್ಯವು ಸಮಾಜಕ್ಕೆ ದೊಡ್ಡ ಆರ್ಥಿಕ ಹೊರೆಯಾಗಿ ಬಡತನಕ್ಕೆ ದೂಡುತ್ತದೆ.
ಮಹಿಳೆಯರ ಆರ್ಥಿಕ ಸಬಲೀಕರಣ: ಮಹಿಳೆಯರಿಗೆ ಸಮಾನ ವೇತನ, ಉದ್ಯೋಗಾವಕಾಶ ಮತ್ತು ಶಿಶುಪಾಲನಾ ವ್ಯವಸ್ಥೆ ಕಲ್ಪಿಸದಿದ್ದರೆ, ಅವರ ಕುಟುಂಬಗಳು (ವಿಶೇಷವಾಗಿ ಒಂಟಿ ತಾಯಂದಿರು) ಸುಲಭವಾಗಿ ಬಡತನಕ್ಕೆ ಜಾರುತ್ತವೆ. ಮಹಿಳೆಯರನ್ನು ಅರೆಕಾಲಿಕ ಕೆಲಸಗಳಿಗೆ ಸೀಮಿತ ಗೊಳಿಸುವುದು ದೇಶದ ಆರ್ಥಿಕತೆಗೆ ದೊಡ್ಡ ನಷ್ಟ.
‘ಅದೃಶ್ಯ ಬಡತನ’ದ ಎಚ್ಚರಿಕೆ: ಬಡತನವೆಂದರೆ ಕೊಳೆಗೇರಿಗಳು ಅಥವಾ ರಸ್ತೆಯಲ್ಲಿ ಭಿಕ್ಷೆ ಬೇಡುವುದು ಮಾತ್ರವಲ್ಲ; ದಿನವಿಡೀ ದುಡಿದರೂ ಮನೆ ಬಾಡಿಗೆ, ಮಕ್ಕಳ ಶಿಕ್ಷಣ ಮತ್ತು ವೈದ್ಯಕೀಯ ವೆಚ್ಚ ಭರಿಸಲಾಗದೆ ಗೌರವಯುತವಾಗಿ ಬದುಕಲು ಪರದಾಡುವ ಸ್ಥಿತಿಯೂ ಬಡತನವೇ. ಸರ್ಕಾರಗಳು ಇಂತಹ ಅದೃಶ್ಯ ಬಡತನವನ್ನು ಆರಂಭದಲ್ಲೇ ಗುರುತಿಸಿ ನೀತಿಗಳನ್ನು ರೂಪಿಸಬೇಕು.
ಒಟ್ಟಾರೆಯಾಗಿ, ಆರ್ಥಿಕ ನೀತಿಗಳು ಕೇವಲ ಕಾರ್ಪೆರೇಟ್ ಬೆಳವಣಿಗೆಯನ್ನು ಕೇಂದ್ರೀಕರಿಸದೆ, ಸಮಾಜದ ತಳವರ್ಗದ ಜನರ ಜೀವನ ಗುಣಮಟ್ಟ ಮತ್ತು ಸಾಮಾಜಿಕ ಭದ್ರತೆಯನ್ನು ಮೊದಲ ಆದ್ಯತೆಯಾಗಿ ಇಟ್ಟುಕೊಳ್ಳಬೇಕು ಎಂಬುದೇ ಜಪಾನ್ ನೀಡುವ ಪ್ರಮುಖ ಎಚ್ಚರಿಕೆ.
ಸರ್ಕಾರವು ಪ್ರತಿ ಗಂಟೆಯ ಕನಿಷ್ಠ ವೇತನವನ್ನು ದಾಖಲೆ ಮಟ್ಟದಲ್ಲಿ ಹೆಚ್ಚಿಸುತ್ತಿದ್ದು, ರಾಷ್ಟ್ರೀಯ ಸರಾಸರಿಯನ್ನು 1,500 ಯೆನ್ಗೆ ಕೊಂಡೊಯ್ಯುವ ಗುರಿ ಹೊಂದಿದೆ.
ಎಲ್ಲ ಮಕ್ಕಳಿಗೆ ಮಾಸಿಕ ಭತ್ಯೆಯನ್ನು ಹೆಚ್ಚಿಸಲಾಗಿದೆ. ಕಡಿಮೆ ಆದಾಯದ ಕುಟುಂಬಗಳ ಮಕ್ಕಳಿಗೆ ಶುಲ್ಕ ಮನ್ನಾ ಮಾಡಿ, ವಿದ್ಯಾರ್ಥಿವೇತನ ನೀಡಲಾಗುತ್ತಿದೆ.
ಅಗತ್ಯ ವಸ್ತುಗಳ ಬೆಲೆ ಏರಿಕೆಯ ಹೊರೆ ತಗ್ಗಿಸಲು, ಕಡಿಮೆ ಆದಾಯದ ಕುಟುಂಬಗಳಿಗೆ ನೇರ ನಗದು ವರ್ಗಾವಣೆ ಹಾಗೂ ವಿದ್ಯುತ್, ಅಡುಗೆ ಅನಿಲ ಮತ್ತು ಇಂಧನದ ಬಿಲ್ಗಳಿಗೆ ಸರ್ಕಾರಿ ಸಬ್ಸಿಡಿ ನೀಡಲಾಗುತ್ತಿದೆ.