Japan | ಜಪಾನ್ ದೇಶದ ಮೊದಲ ಮಹಿಳಾ ಪ್ರಧಾನಿ ಸನೇ ತಕೈಚಿ  
ವಿದೇಶ

ಜಪಾನ್​ನಲ್ಲೂ ರಾಜಕೀಯ ಕಂಪನ | Japan

Japan: ಜಪಾನ್ ದೇಶದ ಮೊದಲ ಮಹಿಳಾ ಪ್ರಧಾನಿಯಾಗಿ 2025ರ ಅಕ್ಟೋಬರ್​ನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದ ಸನೇ ತಕೈಚಿ (64) ಮೂರೇ ತಿಂಗಳಲ್ಲಿ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಅವರು ಜಪಾನ್ ಸಂಸತ್​ನ ಕೆಳಮನೆಯಾಗಿರುವ ಪಾರ್ಲಿಮೆಂಟ್​ನ್ನು ವಿಸರ್ಜಿಸಿದ್ದಾರೆ. ಸನೇ ತಕೈಚಿ ಪ್ರಧಾನಿಯಾದ ನಂತರ ತೈವಾನ್ ಪರ ನಿಲುವು ತಳೆದಿದ್ದು, ಚೀನಾ ಆಕ್ರೋಶಕ್ಕೆ ಕಾರಣವಾಗಿತ್ತು. ಅಮೆರಿಕದೊಂದಿಗೂ ಕಠಿಣವಾಗಿ ವರ್ತಿಸಿದ ಸನೇ ತಕೈಚಿ ಜಪಾನ್ ಸೇನೆಯನ್ನು ಬಲಿಷ್ಠಗೊಳಿಸಲು ಮೂರೇ ತಿಂಗಳಲ್ಲಿ ಹಲವು ಕ್ರಮಗಳನ್ನು ಕೈಗೊಂಡರು. ಲಿಬರಲ್ ಡೆಮಾಕ್ರಟಿಕ್ ಪಕ್ಷದ ಪ್ರಧಾನಿ ಅಭ್ಯರ್ಥಿಯಾಗಿ ಸನೇ ತಕೈಚಿ ಚುನಾವಣೆಗೆ ಸಜ್ಜಾಗುತ್ತಿದ್ದಾರೆ.
465 ಸದಸ್ಯಬಲ್ಯದ ಪಾರ್ಲಿಮೆಂಟ್​ಗೆ ಫೆಬ್ರವರಿ 8ರಂದು ಮತದಾನ ನಡೆಯಲಿದೆ. ಶಿಂಜೋ ಅಬೆ ಅವರ ನಿಧನದ ನಂತರ ಕೇವಲ ಒಂದು ವರ್ಷ ಪ್ರಧಾನಿಯಾಗಿದ್ದ ಶಿಗೇರು ಇಶಿಬಾ ಅವರ ನೇತೃತ್ವದಲ್ಲಿ ಲಿಬರಲ್ ಡೆಮಾಕ್ರಟಿಕ್ ಪಕ್ಷ ನಿರಂತರ ಸೋಲುಗಳನ್ನು ಅನುಭವಿಸಿತು. ಈ ಕಾರಣದಿಂದ ಬಲಪಂಥೀಯ ವಾದದ ನಾಯಕಿ ಸನೇ ತಕೈಚಿ ಪ್ರಧಾನಿಯಾಗುವ ಮೂಲಕ ಲಿಬರಲ್ ಡೆಮಾಕ್ರಟಿಕ್ ಪಕ್ಷದ ಆಂತರಿಕ ಭಿನ್ನಾಭಿಪ್ರಾಯವನ್ನು ತಕ್ಕಮಟ್ಟಿಗೆ ಸರಿಪಡಿಸಿದರು. ಈ ಜನಪ್ರಿಯತೆಯ ಆಧಾರದ ಮೇಲೆ ಅವರು ಚುನಾವಣೆ ಎದುರಿಸಲು ಸಜ್ಜಾಗಿದ್ದು, ಅವಧಿ ಮುನ್ನವೇ ಪಾರ್ಲಿಮೆಂಟ್ ವಿಸರ್ಜಿಸಿರುವುದು ಕುತೂಹಲ ಮೂಡಿಸಿದೆ.

ಹೀಗಿದೆ ವ್ಯವಸ್ಥೆ

ಜಪಾನ್ ಪಾರ್ಲಿಮೆಂಟ್​ಗೆ ನ್ಯಾಷನಲ್ ಡಯಟ್ ಅಥವಾ ಕೊಕ್ಕೈ ಎಂದು ಹೆಸರು. ಇದು ಎರಡು ಮನೆಗಳನ್ನು ಹೊಂದಿದೆ: ಕೆಳಮನೆಯು ‘ಹೌಸ್ ಆಫ್ ರಿಪ್ರೆಸೆಂಟೇಟಿವ್ಸ್’ ಆಗಿದ್ದು, ಜಪಾನೀಸ್​ನಲ್ಲಿ ಇದನ್ನು ‘ಶೂಗಿಇನ್’ ಎಂದು ಕರೆಯುತ್ತಾರೆ. ಕೆಳಮನೆಯೇ ಹೆಚ್ಚು ಶಕ್ತಿಶಾಲಿಯಾಗಿದ್ದು, ಪ್ರಧಾನಮಂತ್ರಿಯನ್ನು ಆಯ್ಕೆ ಮಾಡುವುದು, ಬಜೆಟ್ ಅನುಮೋದನೆ ಮುಂತಾದವುಗಳಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಮೇಲ್ಮನೆಯು ‘ಹೌಸ್ ಆಫ್ ಕೌನ್ಸಿಲರ್ಸ್’ ಆಗಿದ್ದು, ಜಪಾನೀಸ್​ನಲ್ಲಿ ಇದನ್ನು ‘ಸಂಗಿಇನ್’ ಎಂದು ಕರೆಯುತ್ತಾರೆ. ಇದು ಸ್ಥಿರತೆ ಮತ್ತು ಪರಿಶೀಲನೆಯ ಪಾತ್ರವನ್ನು ನಿರ್ವಹಿಸುತ್ತದೆ, ಸದಸ್ಯರು 6 ವರ್ಷಗಳ ಅವಧಿಗೆ ಆಯ್ಕೆಯಾಗುತ್ತಾರೆ.