ಪಾಕ್ ಸರ್ಕಾರದ ವಿರುದ್ಧ ತಿರುಗಿಬಿದ್ದ ಪಿಒಕೆ ಪ್ರಧಾನಿ: ನಮ್ಮ ಅಸ್ಮಿತೆಗೆ ನಿಮ್ಮ ಪ್ರಮಾಣಪತ್ರ ಬೇಕಿಲ್ಲ; ಆಸಿಫ್ ವಿರುದ್ಧ ಮುಮ್ತಾಜ್ ಆಕ್ರೋಶ!
ಮುಜಾಫರಾಬಾದ್: ಪಾಕಿಸ್ತಾನದ ಆಕ್ರಮಿತ ಕಾಶ್ಮೀರ ಮತ್ತು ಇಸ್ಲಾಮಾಬಾದ್‌ನ ಫೆಡರಲ್ ಸರ್ಕಾರದ ನಡುವಿನ ರಾಜಕೀಯ ಜಿದ್ದಾಜಿದ್ದಿ ಈಗ ಬೀದಿಗೆ ಬಂದಿದೆ. ಪಿಒಕೆಯ ಪ್ರಮುಖ ಪ್ರದೇಶಗಳಾದ ರಾವಲಕೋಟ್ ಮತ್ತು ಮಿರ್ಪುರ್ ನಿವಾಸಿಗಳ ಕಾಶ್ಮೀರಿ ಗುರುತನ್ನು ಬಹಿರಂಗವಾಗಿಯೇ ಪ್ರಶ್ನಿಸಿದ್ದ ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ವಿರುದ್ಧ ಪಿಒಕೆ ಪ್ರಧಾನಿ ಫೈಸಲ್ ಮುಮ್ತಾಜ್ ರಾಥೋಡ್(PoK PM Faisal Mumtaz Rathore) ತೀವ್ರವಾಗಿ ಕಿಡಿಕಾರಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಜನರಿಗೆ ತಮ್ಮ ಅಸ್ಮಿತೆಯನ್ನು ಸಾಬೀತುಪಡಿಸಲು ಪಾಕಿಸ್ತಾನದ ರಕ್ಷಣಾ ಸಚಿವರಾಗಲಿ ಅಥವಾ ಬೇರೆ ಯಾರದ್ದೇ ಆಗಲಿ ಪ್ರಮಾಣಪತ್ರದ ಅಗತ್ಯವಿಲ್ಲ ಎಂದು ರಾಥೋಡ್ ಗುಡುಗಿದ್ದಾರೆ.
ನೆಲದ ಮಟ್ಟದಲ್ಲಿ ಪಾಕ್ ಆಡಳಿತದ ವಿರುದ್ಧ ಭಾರಿ ಜನಾಗ್ರಹ ಉಂಟಾಗಿರುವ ಬೆನ್ನಲ್ಲೇ, ಉಭಯ ಆಡಳಿತಗಳ ಮುಖಂಡರ ನಡುವೆ ಈ ರೀತಿಯ ತೀವ್ರ ವಾಗ್ದಾಳಿ ನಡೆದಿರುವುದು ಪಾಕಿಸ್ತಾನದ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದೆ.
ವಿವಾದಕ್ಕೆ ಕಾರಣವಾಗಿದ್ದು ಏನು..?
ಇತ್ತೀಚೆಗೆ ನಡೆದ ದೂರದರ್ಶನ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್, ರಾವಲಕೋಟ್ ಮತ್ತು ಮಿರ್ಪುರ್ ಭಾಗದ ನಿವಾಸಿಗಳು ಅಸಲಿ ಅಥವಾ ಸೂಕ್ತ ಕಾಶ್ಮೀರಿಗಳೇ ಅಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಆಸಿಫ್ ಈ ಮಾತುಗಳು ಇಡೀ ಪಿಒಕೆ ಭಾಗದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿವೆ.
ವಿಶೇಷವೆಂದರೆ, ಕಳೆದ ಕೆಲವು ತಿಂಗಳುಗಳಿಂದ ರಾವಲಕೋಟ್‌ನಲ್ಲಿ ಜಂಟಿ ಅವಾಮಿ ಆಕ್ಷನ್ ಕಮಿಟಿ ನೇತೃತ್ವದಲ್ಲಿ ಪಾಕ್ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆಗಳು ನಡೆಯುತ್ತಿವೆ. ಗಗನಕ್ಕೇರಿರುವ ಹಣದುಬ್ಬರ, ನಿರಂತರ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ತಮಗೆ ಹೆಚ್ಚಿನ ಸಾಂವಿಧಾನಿಕ ಹಾಗೂ ರಾಜಕೀಯ ಹಕ್ಕುಗಳನ್ನು ನೀಡಬೇಕು ಎಂದು ಅಲ್ಲಿನ ಸ್ಥಳೀಯರು ಪಾಕ್ ಆಡಳಿತದ ವಿರುದ್ಧ ದಂಗೆ ಎದ್ದಿದ್ದಾರೆ. ಈ ಜನಪ್ರತಿಭಟನೆಯಿಂದ ಕಂಗಾಲಾಗಿರುವ ಪಾಕ್ ಸಚಿವರು, ಈಗ ಅಲ್ಲಿನ ಜನರ ಗುರುತನ್ನೇ ಪ್ರಶ್ನಿಸಲು ಶುರು ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಕ್ಷಮೆಯಾಚಿಸಲು ಸಚಿವರ ನಿರಾಕರಣೆ; ತಿರುಗೇಟು ನೀಡಿದ ಪಿಒಕೆ ಸಿಎಂ
ಸಾರ್ವಜನಿಕವಾಗಿ ಭಾರಿ ಆಕ್ಷೇಪ ವ್ಯಕ್ತವಾದ ಬೆನ್ನಲ್ಲೇ ರಕ್ಷಣಾ ಸಚಿವ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ಯತ್ನಿಸಿದ್ದಾರೆ. ಕಾಶ್ಮೀರಿ ಗುರುತು ಎನ್ನುವುದು ಹುಟ್ಟು ಅಥವಾ ಭೌಗೋಳಿಕತೆಯಿಂದ ಬರುವುದಿಲ್ಲ, ಬದಲಿಗೆ ದಶಕಗಳ ಹೋರಾಟ ಮತ್ತು ಬಲಿದಾನದಿಂದ ನಿರ್ಧಾರವಾಗುತ್ತದೆ ಎಂದು ಸಬೂಬು ನೀಡಿದರಲ್ಲದೆ, ಪಿಒಕೆ ಸರ್ಕಾರದ ಆಡಳಿತ ವೈಫಲ್ಯವನ್ನು ಟೀಕಿಸಿದ್ದಾರೆ.
ಇದಕ್ಕೆ ತಕ್ಷಣವೇ Xನಲ್ಲಿ ತಿರುಗೇಟು ನೀಡಿದ ಪಿಒಕೆ ಪ್ರಧಾನಿ ಫೈಸಲ್ ಮುಮ್ತಾಜ್ ರಾಥೋಡ್, ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಆಸಿಫ್ ಈಗ ನಮ್ಮ ಆಡಳಿತದ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಇಂತಹ ಮುದಿ ನಾಯಕರ ಹುಚ್ಚುತನದ ವರ್ತನೆಗಳು ಜನರನ್ನು ಹತ್ತಿರ ತರುವ ಬದಲು ಅವರ ಮಧ್ಯೆ ಮತ್ತಷ್ಟು ಕಂದಕ ಸೃಷ್ಟಿಸುತ್ತಿವೆ. ನಮ್ಮ ಆಡಳಿತ ಎಷ್ಟು ಚೆನ್ನಾಗಿದೆ ಎಂದು ನಿಮ್ಮದೇ ಮೇಲಧಿಕಾರಿಗಳನ್ನು ಕೇಳಿ ತಿಳಿದುಕೊಳ್ಳಿ. ಬೇರೆ ವಿಷಯಗಳಿಗೆ ಜಿಗಿಯುವ ಬದಲು, ನೀವು ಮಾಡಿದ ತಪ್ಪಿಗೆ ತಕ್ಷಣವೇ ಬೇಷರತ್ ಕ್ಷಮೆ ಕೇಳುವುದು ಗೌರವಯುತ ನಡವಳಿಕೆ ಎನಿಸಿಕೊಳ್ಳುತ್ತದೆ ಎಂದು ಲೇವಡಿ ಮಾಡಿದ್ದಾರೆ. ಆದರೆ, ಇಷ್ಟೆಲ್ಲಾ ಆದರೂ ನಾನು ಯಾವುದೇ ಕಾರಣಕ್ಕೂ ಕ್ಷಮೆ ಕೇಳುವುದಿಲ್ಲ ಎಂದು ಆಸಿಫ್ ಹಠ ಹಿಡಿದಿದ್ದಾರೆ.
ಬಿಲಾವಲ್ ಭುಟ್ಟೋ ಎಚ್ಚರಿಕೆ: ನಿಮ್ಮ ಸಚಿವರನ್ನು ನಿಯಂತ್ರಣದಲ್ಲಿಡಿ
ಈ ವಿವಾದವು ಪಾಕ್ ಸಂಸತ್ತಿನ ಒಳಗೂ ಭಾರಿ ಸೌಂಡ್ ಮಾಡಿದೆ. ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ಅಧ್ಯಕ್ಷ ಬಿಲಾವಲ್ ಭುಟ್ಟೋ ಜರ್ದಾರಿ ಅವರು ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಪ್ರಧಾನಿ ಶೆಹಬಾಜ್ ಷರೀಫ್ ಅವರಿಗೆ ನೇರ ಎಚ್ಚರಿಕೆ ನೀಡಿದ್ದಾರೆ. ಮೊದಲು ನಿಮ್ಮ ಸಚಿವರನ್ನು ನಿಯಂತ್ರಣದಲ್ಲಿಡಿ. ಕಾಶ್ಮೀರದಂತಹ ಅತ್ಯಂತ ಸೂಕ್ಷ್ಮ ವಿಷಯಗಳ ಬಗ್ಗೆ ಮಾತನಾಡುವಾಗ ಹಿರಿಯ ನಾಯಕರು ಎಚ್ಚರಿಕೆ ವಹಿಸಬೇಕು. ಇಂತಹ ಬೇಜವಾಬ್ದಾರಿ ಹೇಳಿಕೆಗಳು ಜಾಗತಿಕ ಮಟ್ಟದಲ್ಲಿ ಕಾಶ್ಮೀರ ವಿಷಯದ ಕುರಿತು ಪಾಕ್ ಹೊಂದಿರುವ ನಿಲುವಿಗೇ ಗೊಂದಲ ಉಂಟುಮಾಡುತ್ತವೆ ಎಂದು ಭುಟ್ಟೋ ತರಾಟೆಗೆ ತೆಗೆದುಕೊಂಡಿದ್ದಾರೆ. ರಾಜಕೀಯ ಭಿನ್ನಾಭಿಪ್ರಾಯಗಳನ್ನು ಆಡಳಿತಾತ್ಮಕ ದಬ್ಬಾಳಿಕೆಯಿಂದಲ್ಲ, ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದ್ದಾರೆ.
ಒಟ್ಟಾರೆಯಾಗಿ, ಇಸ್ಲಾಮಾಬಾದ್ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಆಡಳಿತದ ನಡುವಿನ ಈ ಬಹಿರಂಗ ಸಂಘರ್ಷವು, ಪಿಒಕೆ ಮೇಲಿನ ಪಾಕಿಸ್ತಾನದ ಹಿಡಿತ ಸಡಿಲಗೊಳ್ಳುತ್ತಿರುವುದನ್ನು ಸ್ಪಷ್ಟವಾಗಿ ಬಿಂಬಿಸುತ್ತಿದೆ,(ಏಜೆನ್ಸೀಸ್).