- POK ಪಾಕಿಸ್ತಾನದ ಭಾಗವಲ್ಲ
- ರಾವಲಕೋಟ್‌ನಲ್ಲಿ ಜನರ ದಂಗೆ
- ಆವಾಮಿ ಕಮಿಟಿ ಬ್ಯಾನ್ ಬೆನ್ನಲ್ಲೇ POK ಉದ್ವಿಗ್ನ
- ಪಾಕ್ ಸರ್ಕಾರದ ವಿರುದ್ಧ ಸಿಡಿದೆದ್ದ POK ಜನತೆ!
ಇಸ್ಲಾಮಾಬಾದ್: ಪಾಕ್ ಆಕ್ರಮಿತ ಕಾಶ್ಮೀರದ ಜನ ಪಾಕಿಸ್ತಾನ ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದು, ಮಂಗಳವಾರ (ಜೂ.30) ರಾವಲಕೋಟ್‌ನ ಈದ್ಗಾ ಮೈದಾನದಲ್ಲಿ ನಡೆದ ಪ್ರತಿಭಟನೆಯಲ್ಲಿ 'ಪಾಕ್ ಆಕ್ರಮಿತ ಕಾಶ್ಮೀರ' ಪಾಕಿಸ್ತಾನದ ಭಾಗವಲ್ಲ (PoK is not part of Pakistan) ಎಂದು ಘೋಷಿಸಿದ್ದಾರೆ.
ಈ ಪ್ರತಿಭಟನೆಯನ್ನು ಮುನ್ನಡೆಸುತ್ತಿರುವ ಜಮ್ಮು ಕಾಶ್ಮೀರ ಆವಾಮಿ ಆ್ಯಕ್ಷನ್ ಕಮಿಟಿ ಮುಖ್ಯಸ್ಥ ಶೌಕತ್ ನವಾಜ್ ಮಿರ್ನನ್ನು ಆತನ ಇಬ್ಬರು ಸಹಚರರೊಂದಿಗೆ ಬಂಧಿಸಲಾಗಿದೆ ಎಂದು ಹೇಳಲಾಗುತ್ತಿದೆ. ಹಾಗೆಯೇ ಈ ಕಮಿಟಿಯ ಸುಮಾರು 600 ಜನ ಕಾರ್ಯಕರ್ತರನ್ನು ಪಾಕಿಸ್ತಾನದ ಪಡೆಗಳು ವಶಕ್ಕೆ ಪಡೆದುಕೊಂಡಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.
ಪಾಕಿಸ್ತಾನಕ್ಕೆ ನಾವು ಬೇಕು; ನಮಗೆ ಪಾಕ್ ಬೇಡ!
ರಾವಲಕೋಟ್‌ನಲ್ಲಿ ನಡೆದ ಪ್ರತಿಭಟನೆ ವೇಳೆ ಜಮ್ಮು ಕಾಶ್ಮೀರ ಆವಾಮಿ ಆ್ಯಕ್ಷನ್ ಕಮಿಟಿ ನಾಯಕ ಸರ್ದಾರ್ ಅಮನ್ ಖಾನ್, ನಮಗೆ ನಿಮ್ಮ ರೇಶನ್ ಬೇಡ, ನಿಮಗೆ ಪಿಓಕೆ ಜನ ಬೇಕು. ಒಂದು ವೇಳೆ ನಮಗೆ ಬರಬೇಕಾದ ಅಗತ್ಯ ವಸ್ತುಗಳ ಬರದೇ ಹೋದರೆ, ನಾವು ಬದುಕಲು ಬೇರೆ ಮಾರ್ಗವನ್ನು ಅನುಸರಿಸಬೇಕಾಗುತ್ತದೆ ಎಂದು ಪಾಕಿಸ್ತಾನ ಸರ್ಕಾರಕ್ಕೆ ನೇರ ಎಚ್ಚರಿಕೆ ನೀಡಿದ್ದಾರೆ.
ಪಿಓಕೆ ಜನರಿಗೆ ಮೂಲಭೂತ ಸೌಕರ್ಯಗಳನ್ನು ಪಾಕಿಸ್ತಾನ ಸರ್ಕಾರ ತಲುಪಿಸುವಲ್ಲಿ ವಿಫಲವಾಗುತ್ತಿದ್ದು, ಅಕ್ಕಿ, ಬೇಳೆ, ಹಣ್ಣು, ತರಕಾರಿಗಳ ಬೆಲೆ ಕೈಗೆಟುಕದಿರುವ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನಲೆ ಈ ಪ್ರತಿಭಟನೆ ಆರಂಭವಾಯಿತು. ಆದರೆ ಪಾಕಿಸ್ತಾನದ ರಕ್ಷಣಾ ಮಂತ್ರಿ, ರಾವಲಕೋಟ್ ಮತ್ತು ಮಿರ್ಪುರದ ಜನ ನಕಲಿ ಕಾಶ್ಮೀರಿಗಳೆಂದು ಹೇಳಿಕೆ ನೀಡಿದ ನಂತರ ಈ ಹೋರಾಟ ಈಗ ರಾಜಕೀಯ ಸಂಘರ್ಷವಾಗಿ ಪರಿವರ್ತನೆಯಾಗಿದೆ.
ಪಿಓಕೆ ಜನರ ಹೋರಾಟ ತೀವ್ರವಾದ ಹಿನ್ನಲೆ ಪಾಕಿಸ್ತಾನ ಸೇನೆ ಪಿಓಕೆಗೆ ರವಾನೆಯಾಗಿದ್ದು, ಸದ್ಯ ಈ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಪಿಓಕೆ ಜನರ ಮೂಲಭೂತ ಅಗತ್ಯತೆಗಾಗಿ ಹೋರಾಡುತ್ತಿರುವ ಜಮ್ಮು ಕಾಶ್ಮೀರ ಆವಾಮಿ ಆ್ಯಕ್ಷನ್ ಕಮಿಟಿಯನ್ನು ಪಾಕ್ ಸರ್ಕಾರ ಭಯೋತ್ಪಾದನಾ ನಿಗ್ರಹ ಕಾಯ್ದೆಯಡಿಯಲ್ಲಿ ಸಂಘಟನೆಯನ್ನು ನಿಷೇಧಿಸಿದ್ದು, ಸಂಘಟನಾ ನಾಯಕ ಶೌಕತ್ ನವಾಜ್ ಮಿರ್ನ ತಲೆಗೆ 1 ಕೋಟಿ ಬಹುಮಾನವನ್ನು ಘೋಷಿಸಿದೆ. ಅಂತಯೇ ಈ ಆ್ಯಕ್ಷನ್ ಕಮಿಟಿ ಸದಸ್ಯರನ್ನು ಭಯೋತ್ಪಾದನಾ ಚಟುವಟಿಕೆಯಲ್ಲಿ ತೊಡಗಿದ್ದಾರೆಂದು ಆರೋಪಿಸಿ ವಶಕ್ಕೆ ಪಡೆಯಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಜುಲೈ 27 ಕ್ಕೆ ಚುನಾವಣೆ!
ಈ ಹೋರಾಟ-ಪ್ರತಿಭಟನೆ ಜೊತೆಗೆ ಜುಲೈ 27 ರಂದು ಪಿಓಕೆನಲ್ಲಿ ಅಸೆಂಬ್ಲಿ ಚುನಾವಣೆ ನಡೆಯಲಿದೆ. ಒಟ್ಟು 53 ಸೀಟ್ಗಳನ್ನು ಹೊಂದಿರುವ ಪಿಓಕೆ ಅಸೆಂಬ್ಲಿಯಲ್ಲಿ 45 ಕ್ಷೇತ್ರಗಳಲ್ಲಿ ಚುವಾವಣೆ ಮೂಲಕ ಶಾಸಕರು ಆಯ್ಕೆಯಾದರೆ ಉಳಿದ 8 ಕ್ಷೇತ್ರಗಳಿಗೆ (5 ಮಹಿಳಾ ಮೀಸಲು 3 ಧಾರ್ಮಿಕ ಮೀಸಲು) ಅಭ್ಯರ್ಥಿಗಳನ್ನು ನೇರವಾಗಿ ಆಯ್ಕೆ ಮಾಡಲಾಗುತ್ತದೆ, (ಏಜನ್ಸೀಸ್).