- ಭಾರತ ವಿಶ್ವದ ಅತ್ಯುತ್ತಮ ಚೀಸ್ ಉತ್ಪಾದಿಸುವ ದೇಶವಾಗಿಯೂ ಹೊರಹೊಮ್ಮುತ್ತಿದೆ
- ಬ್ರೆಜಿಲ್‌ನಲ್ಲಿ ನಡೆದ 'ಮುಂಡಿಯಾಲ್ ಡೊ ಕ್ವಿಜೊ ಡೊ ಬ್ರೆಸಿಲ್ 2026' ವಿಶ್ವ ಚೀಸ್ ಸ್ಪರ್ಧೆ
- ಚೀಸ್ ಮಾದರಿಗಳನ್ನು ಸುಮಾರು 350 ಅಂತರಾಷ್ಟ್ರೀಯ ತಜ್ಞರ ಬೃಹತ್ ಸಮಿತಿಯು ಕೂಲಂಕಷವಾಗಿ ಪರಿಶೀಲನೆ
- ಮುಂಡಿಯಾಲ್ ಡೊ ಕ್ವಿಜೊ ಡೊ ಬ್ರೆಸಿಲ್ 2026 ರಲ್ಲಿ ಪ್ರಭಾವಶಾಲಿಯಾಗಿ ಪಾದಾರ್ಪಣೆ ಮಾಡಿತು
ನವದೆಹಲಿ: ಭಾರತ ಎಂದರೆ ಕೇವಲ ಸಾಂಬಾರ ಪದಾರ್ಥಗಳ ತವರಲ್ಲ, ಈಗ ಅದು ವಿಶ್ವದ ಅತ್ಯುತ್ತಮ ಚೀಸ್ ಉತ್ಪಾದಿಸುವ ದೇಶವಾಗಿಯೂ ಹೊರಹೊಮ್ಮುತ್ತಿದೆ. ಇತ್ತೀಚೆಗೆ ಬ್ರೆಜಿಲ್‌ನಲ್ಲಿ ನಡೆದ 'ಮುಂಡಿಯಾಲ್ ಡೊ ಕ್ವಿಜೊ ಡೊ ಬ್ರೆಸಿಲ್ 2026' ವಿಶ್ವ ಚೀಸ್ ಸ್ಪರ್ಧೆಯಲ್ಲಿ ಭಾರತದ ಕುಶಲಕರ್ಮಿ ಚೀಸ್ ತಯಾರಕರು ಚೊಚ್ಚಲ ಪ್ರವೇಶದಲ್ಲೇ 4 ಪ್ರಮುಖ ಪ್ರಶಸ್ತಿಗಳನ್ನು ಬಾಚಿಕೊಳ್ಳುವ ಮೂಲಕ ಜಾಗತಿಕ ಗಮನ ಸೆಳೆದಿದ್ದಾರೆ.
ಈ ಸ್ಪರ್ಧೆಯಲ್ಲಿ 30 ಕ್ಕೂ ಹೆಚ್ಚು ದೇಶಗಳು ಭಾಗವಹಿಸಿದ್ದವು. ಚೀಸ್ ಮಾದರಿಗಳನ್ನು ಸುಮಾರು 350 ಅಂತರಾಷ್ಟ್ರೀಯ ತಜ್ಞರ ಬೃಹತ್ ಸಮಿತಿಯು ಕೂಲಂಕಷವಾಗಿ ಪರಿಶೀಲನೆ ನಡೆಸಿದ್ದು, ರುಚಿ ಮತ್ತು ವಿನ್ಯಾಸ, ತಯಾರಿಕೆ ಶೈಲಿಯಲ್ಲಿ ಭಾರತ 4 ಪ್ರಶಸ್ತಿಗಳನ್ನು ಪಡೆದುಕೊಂಡಿದೆ.
ಪ್ರಧಾನಿ ಮೋದಿ ಶ್ಲಾಘನೆ
ಭಾರತದ ಚೀಸ್ ಜಾಗತಿಕವಾಗಿ ತನ್ನ ಛಾಪು ಮೂಡಿಸಿದ್ದು, ಮುಂಡಿಯಾಲ್ ಡೊ ಕ್ವಿಜೊ ಡೊ ಬ್ರೆಸಿಲ್ 2026 ರಲ್ಲಿ ಪ್ರಭಾವಶಾಲಿಯಾಗಿ ಪಾದಾರ್ಪಣೆ ಮಾಡಿತು. ಇದೊಂದು ಡೈರಿ ಉತ್ಪನ್ನಗಳಿಗಾಗಿಯೇ ನಡೆಸುವ ಅಂತರಾಷ್ಟ್ರೀಯ ಸ್ಪರ್ಧೆಯಾಗಿದೆ.
ನಾಲ್ಕು ಭಾರತೀಯ ಉತ್ಪನ್ನಗಳಾದ ಎಲೆಫ್ಥೇರಿಯಾ ಗುಲ್ಮಾರ್ಗ್ ಸೂಪರ್ ಗೋಲ್ಡ್ ಪ್ರಶಸ್ತಿ ಗೆದ್ದುಕೊಂಡಿದೆ. ಎಲೆಫ್ಥೇರಿಯಾ ಬ್ರೂನೋಸ್ಟ್ ಮತ್ತು ಯಾಕ್ ಚುರ್ಪಿ-ಸಾಫ್ಟ್ಗೆ ಚಿನ್ನದ ಪದಕ ಮತ್ತು ಎಲೆಫ್ಥೇರಿಯಾ ಕಾಳಿ ಮಿರಿಗೆ ಬೆಳ್ಳಿ ಪದಕ ಪಡೆದುಕೊಂಡಿದೆ.
ಆದಾಗ್ಯೂ, ಈ ಐತಿಹಾಸಿಕ ಸಾಧನೆಯ ಹಿಂದೆ ಮೌಸಮ್ ನಾರಂಗ್ ಮತ್ತು ತೆನ್ಲೇ ನುರ್ಬೂ ಅವರ ಕಠಿಣ ಪರಿಶ್ರಮವಿದೆ. ಅವರ ಈ ನೈಪುಣ್ಯತೆ ಭಾರತದ ಡೈರಿ ಉದ್ಯಮದ ಘನತೆಯನ್ನು ವಿಶ್ವದಾದ್ಯಂತ ಹೆಚ್ಚಿಸಿದೆ ಎಂದು ಪ್ರಧಾನಿ ಮೋದಿ ಪೋಸ್ಟ್ ಮಾಡಿದ್ದಾರೆ.
ಪ್ರಧಾನ ಮಂತ್ರಿಯವರ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಎಲೆಫ್ಥೇರಿಯಾ ಚೀಸ್, "ಭಾರತವು ಹಾಲು, ಟೆರೊಯಿರ್ ಮತ್ತು ವಿಶ್ವದ ಅತ್ಯುತ್ತಮ ಚೀಸ್ ತಯಾರಿಕೆಯ ಸಂಪ್ರದಾಯಗಳಲ್ಲಿ ನಿಲ್ಲುವ ಕರಕುಶಲತೆಯನ್ನು ಹೊಂದಿದೆ ಎಂಬ ದೃಢ ನಿಶ್ಚಯದಿಂದಲೇ ಎಲೆಫ್ಥೇರಿಯಾ ಪ್ರಾರಂಭವಾಯಿತು. ಈ ಗೆಲುವು ಅವರಿಗೆ ಮಾತ್ರವಲ್ಲ. ಡೈರಿ ರೈತರು, ಚೀಸ್ ತಯಾರಕರು ಮತ್ತು ಭಾರತೀಯ ಹಾಲಿನೊಂದಿಗೆ ಕೆಲಸ ಮಾಡುವ ಪ್ರತಿಯೊಬ್ಬರಿಗೂ ಸಲ್ಲುತ್ತದೆ ಎಂದು ಹೇಳಿದರು.
ಏನಿದು 'ಮುಂಡಿಯಾಲ್ ಡೊ ಕ್ವಿಜೊ ಡೊ ಬ್ರೆಸಿಲ್'?
'ಮುಂಡಿಯಾಲ್ ಡೊ ಕ್ವಿಜೊ ಡೊ ಬ್ರೆಸಿಲ್' ಎನ್ನುವುದು ಚೀಸ್ ಮತ್ತು ಡೈರಿ ಉತ್ಪನ್ನಗಳ ಜಗತ್ತಿನಲ್ಲಿ ನಡೆಯುವ ಅತ್ಯಂತ ಪ್ರತಿಷ್ಠಿತ ಅಂತರರಾಷ್ಟ್ರೀಯ ಸ್ಪರ್ಧೆ ಮತ್ತು ಉತ್ಸವವಾಗಿದೆ. ಇಲ್ಲಿ ಜಗತ್ತಿನ ಸಾವಿರಾರು ಚೀಸ್ ತಯಾರಕರು ಭಾಗವಹಿಸುತ್ತಾರೆ. ಚೀಸ್‌ನ ರುಚಿ, ವಿನ್ಯಾಸ, ವಾಸನೆ ಮತ್ತು ತಯಾರಿಕಾ ವಿಧಾನವನ್ನು ಆಧರಿಸಿ ಅಂತರಾಷ್ಟ್ರೀಯ ತೀರ್ಪುಗಾರರು ವಿಜೇತರನ್ನು ಆಯ್ಕೆ ಮಾಡುತ್ತಾರೆ (ಏಜೆನ್ಸೀಸ್).