ಎಸ್ ಜೈಶಂಕರ್ ಖಲೀದಾ ಜಿಯಾ ಅವರ ಮಗ ತಾರಿಕ್ ರೆಹಮಾನ್ ಅವರನ್ನು ಭೇಟಿಯಾದರು. 
ವಿದೇಶ

Jaishankar | ಖಲೀದಾ ಜಿಯಾ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ: ಪುತ್ರ ತಾರಿಖ್ ರೆಹಮಾನ್ ಪತ್ರ ಹಸ್ತಾಂತರಿಸಿದ ಜೈಶಂಕರ್​

ಢಾಕಾ: ನಿನ್ನೆ ನಿಧನರಾದ ಖಲೀದಾ ಜಿಯಾ ಅವರ ಪುತ್ರ ತಾರಿಕ್ ರೆಹಮಾನ್​ರನ್ನು ವಿದೇಶಾಂಗ ಸಚಿವ ಎಸ್. ಜೈಶಂಕರ್(Jaishankar) ಬುಧವಾರ (ಡಿ.31) ಭೇಟಿಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ ನೀಡಿದ ಬಾಂಗ್ಲಾ ಮಾಜಿ ಪ್ರಧಾನಿ ಜಿಯಾ ನಿಧನಕ್ಕೆ ಸಂತಾಪ ಸೂಚಿಸುವ ಪತ್ರವನ್ನು ಹಸ್ತಾಂತರಿಸಿದ್ದಾರೆ.
ಈ ಬಗ್ಗೆ ಎಕ್ಸ್​​ನಲ್ಲಿ ಪೋಸ್ಟ್ ಮಾಡಿರುವ ಭಾರತಕ್ಕೆ ಬಾಂಗ್ಲಾದೇಶದ ಹೈಕಮಿಷನರ್ ರಿಯಾಜ್ ಹಮೀದುಲ್ಲಾ, ಢಾಕಾದಲ್ಲಿರುವ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್, ಖಲೀದಾ ಜಿಯಾ ಅವರ ನಿಧನಕ್ಕೆ ಭಾರತ ಸರ್ಕಾರದ ಪರವಾಗಿ ಸಂತಾಪವನ್ನು ವ್ಯಕ್ತಪಡಿಸಿದರು.
ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಿಯಾಗಿ, ರಾಷ್ಟ್ರದ ರಾಜಕೀಯ ಪ್ರಯಾಣ ಮತ್ತು ದ್ವಿಪಕ್ಷೀಯ ಸಂಬಂಧಗಳಿಗೆ ಜಿಯಾ ಅವರ ಕೊಡುಗೆ ಯಾವಾಗಲೂ ಸ್ಮರಣೀಯ ಎಂದು ಜೈಶಂಕರ್ ಸ್ಮರಿಸಿದ್ದಾರೆ.
ಸ್ಥಿರ, ಶಾಂತಿಯುತ ಮತ್ತು ಪ್ರಜಾಸತ್ತಾತ್ಮಕ ಬಾಂಗ್ಲಾದೇಶಕ್ಕೆ ಭಾರತದ ಬದ್ಧತೆಯನ್ನು ಪತ್ರವು ಒತ್ತಿಹೇಳಿತು. ಮುಂಬರುವ 2026 ರ ಫೆಬ್ರವರಿ ಸಾರ್ವತ್ರಿಕ ಚುನಾವಣೆಗೆ ದೇಶವು ತಯಾರಿ ನಡೆಸುತ್ತಿರುವಾಗ ಎಲ್ಲಾ ರಾಜಕೀಯ ಪಾಲುದಾರರೊಂದಿಗೆ ಕೆಲಸ ಮಾಡಲು ನವದೆಹಲಿ ಸಿದ್ಧವಾಗಿದೆ ಎಂದು ಸೂಚಿಸಿದೆ.

ಖಲೀದಾ ಜಿಯಾ ಅಂತ್ಯಕ್ರಿಯೆ ವಿವರ

ಖಲೀದಾ ಜಿಯಾ ಅವರ 'ನಮಾಜ್-ಎ-ಜನಾಜಾ' (ಅಂತ್ಯಕ್ರಿಯೆಯ ಪ್ರಾರ್ಥನೆ) ಇಂದು ಮಧ್ಯಾಹ್ನ 2 ಗಂಟೆಗೆ ಢಾಕಾದ ಸಂಸತ್ತಿನ ದಕ್ಷಿಣ ಪ್ಲಾಜಾ ಮತ್ತು ಮಣಿಕ್ ಮಿಯಾ ಅವೆನ್ಯೂದಲ್ಲಿ ನಡೆಯಲಿದೆ. ಬಳಿಕ ಮಧ್ಯಾಹ್ನ 3.30ರ ಸುಮಾರಿಗೆ ಅವರ ಪತಿ, ಮಾಜಿ ಅಧ್ಯಕ್ಷ ಜಿಯಾವುರ್ ರೆಹಮಾನ್ ಅವರ ಸಮಾಧಿಯ ಪಕ್ಕದಲ್ಲಿ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ.
ಇನ್ನೂ ಖಲೀದಾ ಜಿಯಾ ಅವರ ನಿಧನ ಹಿನ್ನೆಲೆ ಬಾಂಗ್ಲಾದ ಮಧ್ಯಂತರ ಸರ್ಕಾರ, ದೇಶಾದ್ಯಂತ ಮೂರು ದಿನಗಳ ಕಾಲ ಶೋಕಾಚರಣೆ ಮತ್ತು ಇಂದು(ಡಿ. 31) ಸಾರ್ವತ್ರಿಕ ರಜೆ ಘೋಷಣೆ ಮಾಡಿದೆ.

ದೀರ್ಘಕಾಲದ ಅನಾರೋಗ್ಯದಿಂದ ಖಲೀದಾ ಜಿಯಾ ನಿಧನ

ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಿ ಮತ್ತು ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷದ ಅಧ್ಯಕ್ಷೆ ಖಲೀದಾ ಜಿಯಾ ತಮ್ಮ 80 ನೇ ವಯಸ್ಸಿನಲ್ಲಿ ಢಾಕಾದ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ನಿಧನರಾದರು ಎಂದು ಪಕ್ಷದ ಮೂಲಗಳು ತಿಳಿಸಿವೆ. ಡಿಸೆಂಬರ್ ಆರಂಭದಲ್ಲಿ ಪ್ರಧಾನಿ ಮೋದಿ, ಖಲೀದಾ ಜಿಯಾ ಅವರ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು ಮತ್ತು ಭಾರತವು ಸಾಧ್ಯವಾದಷ್ಟು ಎಲ್ಲಾ ರೀತಿಯಲ್ಲಿ ಬೆಂಬಲವನ್ನು ನೀಡಲು ಸಿದ್ಧವಾಗಿದೆ ಎಂದು ಬಾಂಗ್ಲಾದೇಶಕ್ಕೆ ಭರವಸೆ ನೀಡಿದ್ದರು.

ಖಲೀದಾ ಜಿಯಾ ಜೀವನ

ಬಾಂಗ್ಲಾದೇಶದ ರಾಜಕೀಯ ಇತಿಹಾಸದಲ್ಲಿ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಖಲೀದಾ ಜಿಯಾ ಕೂಡ ಒಬ್ಬರು. ಹತ್ಯೆಗೀಡಾದ ಅಧ್ಯಕ್ಷ ಜಿಯಾ ಉರ್ ರೆಹಮಾರ್​ರ ಪತ್ನಿಯಾಗಿರುವ ಖಲೀದಾ, 1991 ರಿಂದ 1996 ರವರೆಗೆ ಮತ್ತು 2001 ರಿಂದ 2006 ರವರೆಗೆ ಎರಡು ಅವಧಿಗೆ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ. 1945 ರ ಆಗಸ್ಟ್ 15 ರಂದು ಪಶ್ಚಿಮ ಬಂಗಾಳದ ಜಲ್ಪೈಗುರಿಯಲ್ಲಿ ಜನಿಸಿದ ಅವರು, ಬಾಂಗ್ಲಾದೇಶದ ಮೊದಲ ಚುನಾಯಿತ ಮಹಿಳಾ ಸರ್ಕಾರದ ಮುಖ್ಯಸ್ಥರಾದರು ಮತ್ತು ದಶಕಗಳ ಕಾಲ ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷವನ್ನು ಮುನ್ನಡೆಸಿದರು.
ಖಲೀದಾ ಇಬ್ಬರು ಗಂಡು ಮಕ್ಕಳಿಗೆ ಜನ್ಮ ನೀಡಿದ್ದರು, ಹಿರಿಯ ಮಗ ತಾರಿಕ್ ರೆಹಮಾನ್ ಬಿಎನ್‌ಪಿಯ ಹಂಗಾಮಿ ಅಧ್ಯಕ್ಷರಾಗಿದ್ದಾರೆ. 17 ವರ್ಷಗಳ ಗಡಿಪಾರಿನ ಬಳಿಕ ಇತ್ತೀಚೆಗೆ ಬಾಂಗ್ಲಾದೇಶಕ್ಕೆ ಮರಳಿದ್ದು, ಖಲೀದಾ ಕಿರಿಯ ಮಗ ಅರಾಫತ್ ರೆಹಮಾನ್ 2015 ರಲ್ಲಿ ಹೃದಯಾಘಾತದಿಂದ ನಿಧನರಾದರು(ಏಜೆನ್ಸೀಸ್​).