ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಮತ್ತು ಜೋಡಿ ಹೇಡನ್
- 62ನೇ ವಯಸ್ಸಿನಲ್ಲಿ ಎರಡನೇ ವಿವಾಹವಾದ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್
- ತಮ್ಮ ಗೆಳತಿ ಜೋಡಿ ಹೇಡನ್ ಅವರೊಂದಿಗೆ ಶನಿವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಲ್ಬನೀಸ್
- ಕ್ಯಾನ್‌ಬೆರಾದಲ್ಲಿರುವ ಅಲ್ಬನೀಸ್ ಅವರ ಅಧಿಕೃತ ನಿವಾಸದಲ್ಲಿ ಆಪ್ತ ಸ್ನೇಹಿತರ ಸಮ್ಮುಖದಲ್ಲಿ ವಿವಾಹ
- ಅಲ್ಬನೀಸ್ ಅವರ ವಯಸ್ಸು 62 ವರ್ಷವಾದರೆ, ಗೆಳತಿ ಜೋಡಿ ಹೇಡನ್ ಅವರ ವಯಸ್ಸು 46 ವರ್ಷ
ಸಿಡ್ನಿ: ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ( PM Anthony Albanese ) ತಮ್ಮ 62ನೇ ವಯಸ್ಸಿನಲ್ಲಿ ಎರಡನೇ ವಿವಾಹವಾಗಿದ್ದಾರೆ. ತಮ್ಮ ಗೆಳತಿ ಜೋಡಿ ಹೇಡನ್ ಅವರೊಂದಿಗೆ ಶನಿವಾರ (ನ.29) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕ್ಯಾನ್‌ಬೆರಾದಲ್ಲಿರುವ ಅಲ್ಬನೀಸ್ ಅವರ ಅಧಿಕೃತ ನಿವಾಸದಲ್ಲಿ ಆಪ್ತ ಸ್ನೇಹಿತರ ಸಮ್ಮುಖದಲ್ಲಿ ವಿವಾಹ ಸಮಾರಂಭ ಸರಳವಾಗಿ ನಡೆಯಿತು.
ಆಂಥೋನಿ ಅಲ್ಬನೀಸ್ ಅವರ ವಯಸ್ಸು 62 ವರ್ಷವಾದರೆ, ಗೆಳತಿ ಜೋಡಿ ಹೇಡನ್ ಅವರ ವಯಸ್ಸು 46 ವರ್ಷ. ಇಬ್ಬರ ನಡುವೆ 16 ವರ್ಷ ವಯಸ್ಸಿನ ಅಂತರವಿದೆ. ಹೇಡನ್ ಮತ್ತು ಅಲ್ಬನೀಸ್ ಐದು ವರ್ಷಗಳ ಹಿಂದೆ ಮೆಲ್ಬೋರ್ನ್‌ನಲ್ಲಿ ನಡೆದ ಭೋಜನಕೂಟವೊಂದರಲ್ಲಿ ಮೊದಲು ಭೇಟಿಯಾದರು. ಮೊದಲ ಪರಿಚಯದಲ್ಲಿ ಬೆಳೆದ ಸ್ನೇಹ, ನಂತರದಲ್ಲಿ ಪ್ರೀತಿಗೆ ತಿರುಗಿ, ಇದೀಗ ವಿವಾಹ ಬಂಧನದಲ್ಲಿ ಗಟ್ಟಿಯಾಗಿದೆ.
ನಮ್ಮ ಕುಟುಂಬ ಮತ್ತು ಆಪ್ತ ಸ್ನೇಹಿತರ ಮುಂದೆ, ನಮ್ಮ ಪ್ರೀತಿ ಮತ್ತು ಭವಿಷ್ಯದ ಜೀವನವನ್ನು ಒಟ್ಟಿಗೆ ಕಳೆಯುವ ನಮ್ಮ ಬದ್ಧತೆಯನ್ನು ಮುಕ್ತವಾಗಿ ಹಂಚಿಕೊಳ್ಳಲು ತುಂಬಾ ಖುಷಿಯಾಗುತ್ತಿದೆ ಎಂದು ಜಂಟಿ ಹೇಳಿಕೆಯಲ್ಲಿ ನವದಂಪತಿ ತಿಳಿಸಿದರು.
ಅಂದಹಾಗೆ, ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಈ ಹಿಂದೆ ಕಾರ್ಮೆಲ್ ಟೆಬಟ್ ಎಂಬುವರನ್ನು ವಿವಾಹವಾಗಿದ್ದರು. 2000 ಇಸವಿಯಲ್ಲಿ ಮದುವೆಯಾಗಿ 2019 ರಲ್ಲಿ ವಿಚ್ಛೇದನ ಪಡೆದರು. ಅವರಿಗೆ ಒಬ್ಬ ಮಗನೂ ಇದ್ದಾನೆ. ಕಾರ್ಮೆಲ್ ಟೆಬಟ್ ಅವರು ಆಸ್ಟ್ರೇಲಿಯಾದ ಮಾಜಿ ರಾಜಕಾರಣಿ ಕೂಡ ಹೌದು. ಲೇಬರ್ ಪಾರ್ಟಿಯ ಸದಸ್ಯರಾಗಿ 1998 ರಿಂದ 2015ರವರೆಗೆ ನ್ಯೂ ಸೌತ್ ವೇಲ್ಸ್ ವಿಧಾನಸಭೆಯಲ್ಲಿ ಮರಿಕ್‌ವಿಲ್ ಕ್ಷೇತ್ರದ ಪ್ರತಿನಿಧಿಯಾಗಿದ್ದರು. 2008ರಿಂದ 2011ರವರೆಗೆ ಅವರು ನ್ಯೂ ಸೌತ್ ವೇಲ್ಸ್‌ನ ಉಪ-ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದು, ರಾಜ್ಯದ ಮೊದಲ ಮಹಿಳಾ ಉಪ-ಮುಖ್ಯಮಂತ್ರಿಯಾಗಿ ಇತಿಹಾಸ ಬರೆದಿದ್ದಾರೆ. ಅಲ್ಲದೆ, ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ಸೇವೆಗಳ ಇಲಾಖೆಗಳಲ್ಲಿ ಸಚಿವರಾಗಿ ಕೆಲಸ ಮಾಡಿದ್ದಾರೆ. 2000ರಲ್ಲಿ ಆಸ್ಟ್ರೇಲಿಯಾ ಪ್ರಧಾನಿಯಾದ ಆಂಥೋನಿ ಅಲ್ಬನೀಸ್‌ರನ್ನು ವಿವಾಹವಾದ ಅವರು, 2019ರಲ್ಲಿ ವಿಚ್ಛೇದನ ಪಡೆದರು. ನಾಥನ್ ಹೆಸರಿನ ಓರ್ವ ಪುತ್ರನಿದ್ದಾನೆ. ರಾಜಕೀಯದಿಂದ ನಿವೃತ್ತರಾದ ನಂತರ, 2015ರಿಂದ 2018ರವರೆಗೆ ಮೆಡಿಕಲ್ ಡೀನ್ಸ್ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನ ಸಿಇಒ ಆಗಿ, 2018 ರಿಂದ 2023 ರವರೆಗೆ ಮೆಂಟಲ್ ಹೆಲ್ತ್ ಕೋರ್ಡಿನೇಟಿಂಗ್ ಕೌನ್ಸಿಲ್‌ನ ಸಿಇಒ ಆಗಿ ಸೇವೆ ಸಲ್ಲಿಸಿದ್ದಾರೆ.
ಪ್ರಸ್ತುತ ಅಲ್ಬನೀಸ್ ಅವರು ಜೋಡಿ ಹೇಡನ್ ಅವರನ್ನು ಎರಡನೇ ಬಾರಿಗೆ ವಿವಾಹವಾಗಿದ್ದಾರೆ. ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ವಿವಾಹಕ್ಕೆ ಸಂಬಂಧಿಸಿದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಆಸ್ಟ್ರೇಲಿಯಾದ ಫೆಡರಲ್ ಸರ್ಕಾರದ 124 ವರ್ಷಗಳ ಇತಿಹಾಸದಲ್ಲಿ ಒಬ್ಬ ವ್ಯಕ್ತಿ ಅಧಿಕಾರದಲ್ಲಿರುವಾಗ ವಿವಾಹವಾಗುತ್ತಿರುವುದು ಇದೇ ಮೊದಲು.
ಜೋಡಿ ಹೇಡನ್ ಓರ್ವ ಆಸ್ಟ್ರೇಲಿಯನ್ ಆರ್ಥಿಕ ಸೇವೆಗಳ ವೃತ್ತಿಪರ ಮತ್ತು ಮಹಿಳಾ ಹಕ್ಕುಗಳ ಪ್ರಚಾರಕಿ. 1979ರಲ್ಲಿ ಸಿಡ್ನಿಯ ಬ್ಯಾಂಕ್‌ಟೌನ್‌ನಲ್ಲಿ ಜನಿಸಿದ ಅವರು, ನ್ಯೂ ಸೌತ್ ವೇಲ್ಸ್‌ನ ಸೆಂಟ್ರಲ್ ಕೋಸ್ಟ್‌ನಲ್ಲಿ ಬೆಳೆದರು. ಟೀಚರ್ಸ್ ಮ್ಯೂಚುಯಲ್ ಬ್ಯಾಂಕ್‌ನಲ್ಲಿ ಸ್ಟ್ರ್ಯಾಟೆಜಿಕ್ ಪಾಲುದಾರಿಕೆಗಳ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿದ್ದಾರೆ. ಪ್ರಧಾನಿಯ ಪತ್ನಿಯಾಗಿ ರಾಷ್ಟ್ರೀಯ ಪೋರ್ಟ್ರೇಟ್ ಗ್ಯಾಲರಿಯ ಪ್ಯಾಟ್ರಾನ್ ಮತ್ತು ಬಾಲ್ಯ ಕ್ಯಾನ್ಸರ್ ಚಾರಿಟಿ ರೆಡ್‌ಕೈಟ್‌ನ ಅಂಬಾಸಡರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ವಿವಾಹಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ. ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಮೋದಿ, ನನ್ನ ಆತ್ಮೀಯ ಗೆಳೆಯನಿಗೆ ಅಭಿನಂದನೆಗಳು. ನಿಮ್ಮ ವೈವಾಹಿಕ ಜೀವನ ಫಲಪ್ರದವಾಗಲಿ ಎಂದು ಹಾರೈಸಿದ್ದಾರೆ, (ಏಜೆನ್ಸೀಸ್).