ಜಕಾರ್ತ: ಇಂಡೋನೇಷ್ಯಾದಲ್ಲಿ ಶನಿವಾರ 11 ಜನರಿದ್ದ ಎಟಿಆರ್ 42-500 (ATR 42-500) ಎಂಬ ಸಣ್ಣ ಪ್ರಯಾಣಿಕ ವಿಮಾನವೊಂದು ನಾಪತ್ತೆಯಾಗಿದ್ದು, ದಕ್ಷಿಣ ಸುಲಾವೆಸಿ ಪ್ರಾಂತ್ಯದ ಪರ್ವತ ಪ್ರದೇಶದಲ್ಲಿ ಪತನಗೊಂಡಿರುವ ಶಂಕೆ ವ್ಯಕ್ತವಾಗಿದೆ.
ಇಂಡೋನೇಷ್ಯಾ ಏರ್ ಟ್ರಾನ್ಸ್‌ಪೋರ್ಟ್ (IAT) ಸಂಸ್ಥೆಗೆ ಸೇರಿದ ಈ ವಿಮಾನವು ಯೋಗಕರ್ತಾದಿಂದ ಮಕಾಸ್ಸರ್ ನಗರಕ್ಕೆ ಹೊರಟಿತ್ತು. ಸುಲ್ತಾನ್ ಹಸನುದ್ದೀನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿದ್ದ ಈ ವಿಮಾನವು, ಮಧ್ಯಾಹ್ನ ಸುಮಾರು 1:17ರ ಹೊತ್ತಿಗೆ ಏರ್ ಟ್ರಾಫಿಕ್ ಕಂಟ್ರೋಲ್ (ATC) ಜೊತೆಗಿನ ಸಂಪರ್ಕ ಕಳೆದುಕೊಂಡಿದೆ. ನಾಪತ್ತೆಯಾದ ಸಮಯದಲ್ಲಿ ವಿಮಾನದಲ್ಲಿ 8 ಸಿಬ್ಬಂದಿ ಮತ್ತು 3 ಪ್ರಯಾಣಿಕರು ಸೇರಿ ಒಟ್ಟು 11 ಜನರಿದ್ದರು ಎಂದು ರಾಷ್ಟ್ರೀಯ ಶೋಧ ಮತ್ತು ರಕ್ಷಣಾ ಸಂಸ್ಥೆ (Basarnas) ದೃಢಪಡಿಸಿದೆ.
ಬ್ಯಾಂಟಿಮುರುಂಗ್ ಬೆಟ್ಟಗಳಲ್ಲಿ ಶೋಧ
ವಿಮಾನವು ಕೊನೆಯದಾಗಿ ದಕ್ಷಿಣ ಸುಲಾವೆಸಿಯ ಮರೋಸ್ ಜಿಲ್ಲೆಯ ಲಿಯಾಂಗ್-ಲಿಯಾಂಗ್ ಎಂಬ ಕಡಿದಾದ ಬೆಟ್ಟದ ಪ್ರದೇಶದಲ್ಲಿ ಹಾರಾಟ ನಡೆಸುತ್ತಿತ್ತು ಎಂದು ರೇಡಾರ್ ಮಾಹಿತಿಯಿಂದ ತಿಳಿದುಬಂದಿದೆ. ಸ್ಥಳೀಯ ವರದಿಗಳ ಪ್ರಕಾರ, ಪರ್ವತ ಪ್ರದೇಶದಲ್ಲಿ ವಿಮಾನದ ಅವಶೇಷಗಳಂತಹ ವಸ್ತುಗಳು ಕಂಡುಬಂದಿವೆ ಎನ್ನಲಾಗಿದ್ದು, ರಕ್ಷಣಾ ಪಡೆಗಳು ಮತ್ತು ಇಂಡೋನೇಷ್ಯಾ ವಾಯುಪಡೆಯ ಹೆಲಿಕಾಪ್ಟರ್‌ಗಳು ಸ್ಥಳಕ್ಕೆ ಧಾವಿಸಿವೆ.
ದಟ್ಟವಾದ ಅರಣ್ಯ ಮತ್ತು ಸುಣ್ಣದ ಕಲ್ಲಿನ ಬೆಟ್ಟಗಳಿಂದ ಕೂಡಿದ ಈ ಪ್ರದೇಶದಲ್ಲಿ ಶೋಧ ಕಾರ್ಯ ಸವಾಲಾಗಿ ಪರಿಣಮಿಸಿದೆ. ಹವಾಮಾನ ವೈಪರೀತ್ಯ ಅಥವಾ ತಾಂತ್ರಿಕ ದೋಷ ಈ ಘಟನೆಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದ್ದು, ಹೆಚ್ಚಿನ ಮಾಹಿತಿ ಇನ್ನು ಹೊರಬರಬೇಕಿದೆ,(ಏಜೆನ್ಸೀಸ್).