ಆಗಸದಿಂದ ಬಿದ್ದ ಮಾಂಸದ ತುಂಡುಗಳು? ಈ ವಿಚಿತ್ರ ವಿದ್ಯಾಮಾನ ಹಿಂದಿರುವ ರಹಸ್ಯವೇನು? Meat Fell From The Sky
- ಆಕಾಶದಿಂದ ಸುರಿದ ಮಾಂಸದ ಮಳೆ ಕೆಂಟಕಿಯ ವಿಸ್ಮಯಕಾರಿ ರಹಸ್ಯ
- 1876ರ ಕೆಂಟಕಿ ಮೀಟ್ ಶವರ್ ಇಂದಿಗೂ ಬಿಡಿಸಲಾಗದ ರಹಸ್ಯ
- ರಣಹದ್ದುಗಳ ವಾಂತಿಯೋ ಅಥವಾ ದೈವಿಕ ವಿಸ್ಮಯವೋ ಕೆಂಟಕಿ ಘಟನೆಯ ಸತ್ಯಾಸತ್ಯತೆ
- ಕೆಂಟಕಿಯಲ್ಲಿ ಆಕಾಶದಿಂದ ಬಿದ್ದ ಮಾಂಸ ಬೆರಗಾದ ವಿಜ್ಞಾನಿಗಳು
Meat Fell From The Sky : ಅಮೆರಿಕದ ಕೆಂಟಕಿ ಎಂದರೆ ತಕ್ಷಣ ನೆನಪಾಗುವುದು ಜಗತ್ಪ್ರಸಿದ್ಧ 'ಕೆಎಫ್‌ಸಿ' (KFC) ಚಿಕನ್. ಆದರೆ, ಇದೇ ಕೆಂಟಕಿಯಲ್ಲಿ 1876ರಲ್ಲಿ ನಡೆದ ಒಂದು ಅತ್ಯಂತ ವಿಸ್ಮಯಕಾರಿ ಮತ್ತು ವಿಚಿತ್ರ ಘಟನೆ ಇಡೀ ಜಗತ್ತನ್ನೇ ಬೆರಗುಗೊಳಿಸಿತ್ತು! ಹೌದು, ಅಂದು ಅಲ್ಲಿ ಆಕಾಶದಿಂದ ಮಳೆಯಂತೆ ನೀರು ಬೀಳುವ ಬದಲು, ಸಣ್ಣ ಸಣ್ಣ ಮಾಂಸದ ತುಂಡುಗಳು ಸುರಿದಿದ್ದವು! 'ಕೆಂಟಕಿ ಮೀಟ್ ಶವರ್' (Kentucky Meat Shower) ಎಂದೇ ಚರಿತ್ರೆಯಲ್ಲಿ ದಾಖಲಾಗಿರುವ ಈ ರಹಸ್ಯಮಯ ಸನ್ನಿವೇಶವು ವಿಜ್ಞಾನಿಗಳನ್ನು ಮತ್ತು ಜನಸಾಮಾನ್ಯರನ್ನು ಇಂದಿಗೂ ಬೆರಗುಗೊಳಿಸುವಂತಹುದು.
ಈ ವಿಸ್ಮಯಕಾರಿ ಘಟನೆ ನಡೆದಿದ್ದು 1876ರ ಮಾರ್ಚ್ 3ರಂದು, ಕೆಂಟಕಿಯ ಬಾತ್ ಕೌಂಟಿಯ ಒಲಿಂಪಿಯಾ ಸ್ಪ್ರಿಂಗ್ಸ್ ಎಂಬ ಪ್ರದೇಶದಲ್ಲಿ. ಅಂದು ಆಲನ್ ಕ್ರೌಚ್ ಎಂಬ ಗೃಹಿಣಿ ತಮ್ಮ ಮನೆಯ ಅಂಗಳದಲ್ಲಿ ಕುಳಿತು ಸೋಪು ತಯಾರಿಸುತ್ತಿದ್ದಾಗ, ಆಕಾಶದಿಂದ ಮಾಂಸದ ತುಂಡುಗಳು ಮಳೆಯಂತೆ ಬೀಳುವ ವಿಚಿತ್ರ ದೃಶ್ಯ ಕಂಡು ದಿಗ್ಭ್ರಮೆಗೊಂಡರು! ಸುಮಾರು ಒಂದು ಫುಟ್‌ಬಾಲ್ ಮೈದಾನದಷ್ಟು ವಿಶಾಲವಾದ ಪ್ರದೇಶದಲ್ಲಿ ಚಿಕ್ಕ ಹಾಗೂ ದೊಡ್ಡ ಗಾತ್ರದ ಮಾಂಸದ ತುಂಡುಗಳು ಆಕಾಶದಿಂದ ಧರೆಗೆ ಸುರಿದುಬಿದ್ದಿದ್ದವು.
ಆಕಾಶದಿಂದ ಸುರಿದ ಈ ಮಾಂಸದ ಮಾದರಿಗಳನ್ನು ಪರೀಕ್ಷಿಸಿದ ವಿಜ್ಞಾನಿಗಳಿಗೆ ಯಾವುದೇ ಒಂದೇ ಸ್ಪಷ್ಟ ತೀರ್ಮಾನಕ್ಕೆ ಬರಲು ಸಾಧ್ಯವಾಗಲಿಲ್ಲ. ಒಂದು ಪರೀಕ್ಷೆಯ ವರದಿಯು ಅದು ಕುದುರೆ ಅಥವಾ ಯಾವುದೋ ದೊಡ್ಡ ಪ್ರಾಣಿಯ ಶ್ವಾಸಕೋಶದ ಅಂಗಾಂಶ ಎಂದು ತಿಳಿಸಿದರೆ, ಮತ್ತೊಂದು ಪರೀಕ್ಷೆಯು ಅದು ಸ್ನಾಯು, ಕಾರ್ಟಿಲೇಜ್ (ಮೃದ್ವಸ್ಥಿ) ಮತ್ತು ದೇಹದ ಇತರ ಅಂಗಾಂಶಗಳ ಮಿಶ್ರಣ ಎಂದು ಸ್ಪಷ್ಟಪಡಿಸಿತು. ಹೀಗಾಗಿ ಈ ಮಾಂಸವು ಯಾವ ಜೀವಿಯದ್ದು ಎಂಬ ಗೊಂದಲ ಮತ್ತಷ್ಟು ಆಳವಾಯಿತು.
ಈ ವಿಸ್ಮಯಕ್ಕೆ ಅತ್ಯಂತ ಹೆಚ್ಚು ಸ್ವೀಕೃತವಾದ ವೈಜ್ಞಾನಿಕ ವಿವರಣೆಯೆಂದರೆ ಅದು ರಣಹದ್ದುಗಳ ಸಿದ್ಧಾಂತ. ಸಾಮಾನ್ಯವಾಗಿ ರಣಹದ್ದುಗಳು ಪ್ರಾಣಿಯ ಶವವನ್ನು ಭಕ್ಷಿಸಿದ ನಂತರ, ಯಾವುದಾದರೂ ಅಪಾಯದ ಮುನ್ಸೂಚನೆ ಸಿಕ್ಕರೆ ತೂಕ ಕಡಿಮೆ ಮಾಡಿಕೊಂಡು ವೇಗವಾಗಿ ಹಾರಲು ತಮ್ಮ ಹೊಟ್ಟೆಯಲ್ಲಿದ್ದ ಅರೆಜೀರ್ಣಗೊಂಡ ಆಹಾರವನ್ನು ತಕ್ಷಣವೇ ಕಾರಿಕೊಳ್ಳುತ್ತವೆ (ವಾಂತಿ ಮಾಡುತ್ತವೆ). ಅದೇ ರೀತಿ ಬಾತ್ ಕೌಂಟಿಯ ಆಕಾಶದಲ್ಲಿ ಹಾದುಹೋಗುತ್ತಿದ್ದ ರಣಹದ್ದುಗಳ ಹಿಂಡು ತಿಂದ ಆಹಾರವನ್ನು ಒಮ್ಮೆಗೆ ವಾಂತಿ ಮಾಡಿದ್ದರಿಂದಲೇ ಕೆಳಗಿದ್ದ ಜನರಿಗೆ ಮಾಂಸದ ಮಳೆ ಬಿದ್ದಂತೆ ಭಾಸವಾಗಿರಬಹುದು ಎಂದು ಸಂಶೋಧಕರು ಶಂಕಿಸುತ್ತಾರೆ. ಹೆಚ್ಚಿನ ವಿಜ್ಞಾನಿಗಳು ಈ ವಾದವನ್ನು ಒಪ್ಪುತ್ತಾರಾದರೂ, ಅಂದು ಆಕಾಶದಲ್ಲಿ ರಣಹದ್ದುಗಳು ಹಾರಾಡಿದ್ದನ್ನು ಕಂಡ ಯಾವುದೇ ಪ್ರತ್ಯಕ್ಷದರ್ಶಿಗಳ ಸಾಕ್ಷ್ಯವಿಲ್ಲದಿರುವುದರಿಂದ ಇದಕ್ಕೆ ಬಲವಾದ ಪುರಾವೆಗಳಿಲ್ಲ.
ಚರಿತ್ರೆಯ ಪುಟಗಳಲ್ಲಿ ಆಕಾಶದಿಂದ ಮೀನುಗಳು, ಕಪ್ಪೆಗಳು ಹಾಗೂ ಹುಳುಗಳು ಮಳೆಯಂತೆ ಸುರಿದ ಉದಾಹರಣೆಗಳಿವೆ. 'ವಿಚಿತ್ರ ಮಳೆ' (Strange rain) ಎಂಬ ಅದ್ಭುತ ವಿದ್ಯಮಾನಗಳ ಸಾಲಿನಲ್ಲಿ 1876ರ ಕೆಂಟಕಿ ಘಟನೆಯು ಅತ್ಯಂತ ಪ್ರಸಿದ್ಧವಾಗಿದೆ. ಆದರೆ, ಇತರ ಘಟನೆಗಳಲ್ಲಿ ಜೀವಂತ ಪ್ರಾಣಿಗಳು ಅಥವಾ ಜೀವಿಗಳು ಆಕಾಶದಿಂದ ಬಿದ್ದರೆ, ಕೆಂಟಕಿಯಲ್ಲಿ ಮಾತ್ರ ಮಾಂಸದ ತುಂಡುಗಳೇ ಮಳೆಯಾಗಿ ಸುರಿದಿದ್ದು ಈ ಘಟನೆಯನ್ನು ಜಗತ್ತಿನಲ್ಲೇ ವಿಶಿಷ್ಟ ಹಾಗೂ ಅತ್ಯಂತ ರಹಸ್ಯಮಯ ಸನ್ನಿವೇಶವಾಗಿಯೇ ಉಳಿದಿದೆ, (ಏಜೆನ್ಸೀಸ್).