ರಾ ಮಾಜಿ ಮುಖ್ಯಸ್ಥ ವಿಕ್ರಮ್ ಸೂದ್ 
ವಿದೇಶ

ಪಾಕಿಸ್ತಾನ ಜಿಹಾದ್​ ಬಿಟ್ಟರೆ ಮಾತ್ರ ಭಾರತದೊಂದಿಗೆ ಶಾಂತಿ ಸಾಧ್ಯ: ಮಾಜಿ ರಾ ಮುಖ್ಯಸ್ಥ ಸ್ಪಷ್ಟ ಸಂದೇಶ | RAW Chief

ಪ್ರಮುಖ ಮುಖ್ಯಾಂಶಗಳು

  • ಪಾಕಿಸ್ತಾನ ಜಿಹಾದ್​ ತ್ಯಜಿಸಿದರೆ ಭಾರತದೊಂದಿಗೆ ಶಾಂತಿ ಸಾಧ್ಯ
  • ಇಸ್ಲಾಮಾಬಾದ್‌ನ ಕಾರ್ಯವಿಧಾನದಲ್ಲಿ ಮೂಲಭೂತ ಬದಲಾವಣೆ ಆಗಬೇಕು
  • ಭಾರತ ಸ್ವಾವಲಂಬಿತನವನ್ನು ಬೆಳೆಸಿಕೊಳ್ಳಬೇಕು
ಮಂಗಳೂರು: ಇಸ್ಲಾಮಾಬಾದ್‌ನ ಕಾರ್ಯವಿಧಾನದಲ್ಲಿ ಮೂಲಭೂತ ಬದಲಾವಣೆ ಆಗದೆ ಪಾಕಿಸ್ತಾನದೊಂದಿಗೆ ಶಾಂತಿ ಸ್ಥಾಪನೆ ಸಾಧ್ಯವಿಲ್ಲ ಎಂದು ಮಾಜಿ ರಾ ಮುಖ್ಯಸ್ಥ (RAW Chief) ವಿಕ್ರಮ್ ಸೂದ್ ಹೇಳಿದರು.
ಮಂಗಳೂರು ಲಿಟ್ ಫೆಸ್ಟ್‌ನಲ್ಲಿ ಜಾಗತಿಕ ಶಕ್ತಿ ಕುರಿತಾದ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಸೂದ್, ಪಾಕಿಸ್ತಾನದ ಸ್ಥಾಪಿತ ನೀತಿಗಳು ಮತ್ತು ಪುನರಾವರ್ತಿತ ಹಗೆತನವನ್ನು ನೋಡಿದರೆ ರಾಜಿ ಅಥವಾ ಮಾತುಕತೆಗಳಿಂದ ಹೆಚ್ಚಿನ ಪ್ರಯೋಜನವಿಲ್ಲ ಎಂದು ಹೇಳಿದರು.
ಭಾರತದೊಂದಿಗೆ ಪಾಕಿಸ್ತಾನದ ಸಮಸ್ಯೆಗಳಿಗೆ ಯಾವುದೇ ಪರಿಹಾರ ಕಾಣುತ್ತಿಲ್ಲ. ಪಾಕಿಸ್ತಾನದ ನಾಯಕರು ದೇಶವನ್ನು ಇಸ್ಲಾಮಿಕ್ ರಾಷ್ಟ್ರವೆಂದು ಬಹಿರಂಗವಾಗಿ ಹೇಳುತ್ತಾರೆ ಮತ್ತು ಕಾಶ್ಮೀರ ವಿಷಯ ಸೇರಿದಂತೆ ಮುಸ್ಲಿಮೇತರರ ವಿರುದ್ಧ ಜಿಹಾದ್ ಮುಂದುವರಿಯುತ್ತದೆ ಎಂದು ನಂಬುತ್ತಾರೆ. ಅವರು ಸರಿಯಾದ ಸಮಯಕ್ಕಾಗಿ ಕಾಯುತ್ತಿದ್ದಾರೆ ಎಂದು ಹೇಳಿದರು.
ಅಮೆರಿಕದ ಜಾಗತಿಕ ಹಸ್ತಕ್ಷೇಪಗಳನ್ನು ಟೀಕಿಸುತ್ತಾ,ಪರಿಣಾಮಕಾರಿ ಆಡಳಿತಕ್ಕೆ ಶಕ್ತಿ, ಮಿಲಿಟರಿ ಸಾಮರ್ಥ್ಯ ಅತ್ಯಗತ್ಯ ಎಂದರು. ಉತ್ಪಾದನಾ ಸ್ವಾತಂತ್ರ್ಯದಿಂದಾಗಿ ಅಮೆರಿಕದ ಆರ್ಥಿಕ ಪ್ರಾಬಲ್ಯವನ್ನು ಪ್ರಶ್ನಿಸುವ ಶಕ್ತಿಯನ್ನು ಚೀನಾ ಪಡೆದುಕೊಂಡಂತೆ ನಾವು ಸ್ವಾವಲಂಭಿಗಳಾಗುವತ್ತ ಗಮನ ಹರಿಸಬೇಕು ಎಂದು ಹೇಳಿದರು.
ಭಾರತ ಬಾಹ್ಯ ಬೆಂಬಲವನ್ನು ಅವಲಂಬಿಸುವ ಬದಲು ತನ್ನ ಸುರಕ್ಷತೆಯನ್ನು ತನೇ ನೋಡಿಕೊಳ್ಳುವ ರಾಜತಾಂತ್ರಿಕ ಕಾರ್ಯತಂತ್ರವನ್ನು ರೂಪಿಸಿಕೊಳ್ಳುವುದು ಉತ್ತಮ ಎಂದು ಅಭಿಪ್ರಾಯಪಟ್ಟರು. ಬಾಲಕೋಟ್ ವೈಮಾನಿಕ ದಾಳಿ ಮತ್ತು ಉರಿ ಪ್ರತಿದಾಳಿ ಸೇರಿದಂತೆ ಇತ್ತೀಚಿನ ಭಾರತೀಯ ಮಿಲಿಟರಿ ಕಾರ್ಯಾಚರಣೆಗಳನ್ನು ಭಾರತದ ಬೆಳೆಯುತ್ತಿರುವ ಕಾರ್ಯತಂತ್ರದ ದೃಢತೆಯ ಸೂಚನೆಗಳಾಗಿವೆ ಎಂದರು.

ಯಾರು ಈ ವಿಕ್ರಮ್ ಸೂದ್ ?

ವಿಕ್ರಮ್ ಸೂದ್ 2000 ರಿಂದ 2003 ರವರೆಗೆ ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗದ (RAW) ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು. ನಿವೃತ್ತಿಯ ನಂತರ, ಸೂದ್ ಅವರು ಅಬ್ಸರ್ವರ್ ರಿಸರ್ಚ್ ಫೌಂಡೇಶನ್‌ನಂತಹ ಪ್ರಮುಖ ಚಿಂತಕರ ಚಾವಡಿಗಳೊಂದಿಗೆ ಸಂಪರ್ಕ ಹೊಂದಿದ್ದಾರೆ. ಅವರು ಪ್ರಸ್ತುತ ಅಲ್ಲಿ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದಾರೆ ಮತ್ತು ಕಾರ್ಯತಂತ್ರ ಮತ್ತು ಭದ್ರತಾ ವಿಷಯಗಳ ಕುರಿತು ಅವರ ಅಭಿಪ್ರಾಯಗಳಿಗೆ ಹೆಸರುವಾಸಿಯಾಗಿದ್ದಾರೆ,(ಏಜನ್ಸೀಸ್).