ಇಸ್ಲಾಮಾಬಾದ್‌ನಲ್ಲಿ ಶಾಂತಿ ಸಭೆ, ಹೋರ್ಮುಜ್‌ನಲ್ಲಿ ಸಮರ ಸನ್ನದ್ಧತೆ: ಅಮೆರಿಕ ಮತ್ತು ಇರಾನ್ ನಡುವೆ ನಡೆಯುತ್ತಿದೆಯೇ ಮಗದೊಂದು ರಹಸ್ಯ ಆಟ? 
ವಿದೇಶ

ಇಸ್ಲಾಮಾಬಾದ್‌ನಲ್ಲಿ ಶಾಂತಿ ಸಭೆ, ಹೋರ್ಮುಜ್‌ನಲ್ಲಿ ಸಮರ ಸನ್ನದ್ಧತೆ: ಅಮೆರಿಕ ಮತ್ತು ಇರಾನ್ ನಡುವೆ ನಡೆಯುತ್ತಿದೆಯೇ ಮಗದೊಂದು ರಹಸ್ಯ ಆಟ? US-Iran Conflict

ವಾಷಿಂಗ್ಟನ್: ಪಶ್ಚಿಮ ಏಷ್ಯಾದಲ್ಲಿ ಸಂಘರ್ಷದ ಕಿಚ್ಚು ಆರುವ ಲಕ್ಷಣಗಳು ಕಾಣುತ್ತಿಲ್ಲ. ಒಂದು ಕಡೆ ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಶಾಂತಿ ಮಾತುಕತೆ ನಡೆಯುತ್ತಿದ್ದರೆ, ಇನ್ನೊಂದೆಡೆ ಸಮುದ್ರದ ಮಧ್ಯೆ ಅಮೆರಿಕದ(US-Iran Conflict) ಯುದ್ಧನೌಕೆ ಮತ್ತು ಇರಾನ್ ಪಡೆಗಳ ನಡುವೆ ಭೀಕರ ಸಂಘರ್ಷದ ಸನ್ನಿವೇಶ ಸೃಷ್ಟಿಯಾಗಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೋರ್ಮುಜ್ ಜಲಸಂಧಿಯನ್ನು ಸ್ವಚ್ಛಗೊಳಿಸುತ್ತೇವೆ ಎಂಬ ಹೇಳಿಕೆಯ ಬೆನ್ನಲ್ಲೇ ನಡೆದ ಈ ಘಟನೆ ಜಗತ್ತನ್ನು ಯುದ್ಧದ ಅಂಚಿಗೆ ತಂದು ನಿಲ್ಲಿಸಿದೆ.

ಇರಾನ್ ಸೋಲುತ್ತಿದೆ, ಭಾರಿ ಸೋಲುತ್ತಿದೆ!

ಶನಿವಾರ ಬೆಳಿಗ್ಗೆಯಿಂದಲೇ ಟ್ರಂಪ್ ತಮ್ಮ ಟ್ರೂತ್ ಸೋಶಿಯಲ್ ಖಾತೆಯಲ್ಲಿ ಇರಾನ್ ವಿರುದ್ಧ ವಾಗ್ದಾಳಿ ಆರಂಭಿಸಿದರು. ಇರಾನ್ ಗೆಲ್ಲುತ್ತಿದೆ ಎಂದು ತೋರಿಸುತ್ತಿರುವ ಮಾಧ್ಯಮಗಳು ಫೇಕ್ ನ್ಯೂಸ್ ಹರಡುತ್ತಿವೆ. ವಾಸ್ತವದಲ್ಲಿ ಇರಾನ್ ಭಾರಿ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ. ಅವರ ನೌಕಾಪಡೆ, ವಾಯುಪಡೆ, ರೇಡಾರ್ ವ್ಯವಸ್ಥೆ ಎಲ್ಲವೂ ಧ್ವಂಸಗೊಂಡಿದೆ. ಅವರ ಮಿಸೈಲ್ ಮತ್ತು ಡ್ರೋನ್ ಫ್ಯಾಕ್ಟರಿಗಳು ಅಳಿಸಿಹೋಗಿವೆ ಎಂದು ಬರೆದುಕೊಂಡಿದ್ದಾರೆ.
ಅಷ್ಟೇ ಅಲ್ಲದೆ, ಜಗತ್ತಿನ ಇತರ ದೇಶಗಳಾದ ಚೀನಾ, ಜಪಾನ್, ಫ್ರಾನ್ಸ್ ಮತ್ತು ಜರ್ಮನಿಗಳಿಗೆ ಧೈರ್ಯವಿಲ್ಲದ ಕಾರಣ, ನಾವೇ ಹೋರ್ಮುಜ್ ಜಲಸಂಧಿಯನ್ನು ಕ್ಲಿಯರ್ ಮಾಡುವ ಪ್ರಕ್ರಿಯೆ ಆರಂಭಿಸಿದ್ದೇವೆ ಎಂದು ಘೋಷಿಸಿದ್ದಾರೆ.

ಹೋರ್ಮುಜ್‌ನಲ್ಲಿ ನಡೆದಿದ್ದೇನು? ಅಮೆರಿಕದ ಯುದ್ಧನೌಕೆಯ ಯು-ಟರ್ನ್!

ಟ್ರಂಪ್ ಅವರ ಈ ಪೋಸ್ಟ್ ಬಂದ ಕೆಲವೇ ನಿಮಿಷಗಳಲ್ಲಿ, ಯುಎಇಯ ಫುಜೈರಾ ಬಂದರಿನಿಂದ ಅಮೆರಿಕದ ಬೃಹತ್ ಯುದ್ಧನೌಕೆಯೊಂದು ಹೋರ್ಮುಜ್ ಜಲಸಂಧಿಯತ್ತ ವೇಗವಾಗಿ ನುಗ್ಗಿತು. ಈ ಪ್ರದೇಶವನ್ನು ಇರಾನ್ ಸದ್ಯ ಬಂದ್ ಮಾಡಿದೆ.

ಇರಾನ್‌ನ ಡೆಡ್ಲಿ ವಾರ್ನಿಂಗ್

ಅಮೆರಿಕದ ಯುದ್ಧನೌಕೆ ಬರುತ್ತಿರುವುದನ್ನು ಕಂಡ ಇರಾನ್, ಇಸ್ಲಾಮಾಬಾದ್‌ನಲ್ಲಿರುವ ಪಾಕಿಸ್ತಾನಿ ಮಧ್ಯಸ್ಥಿಕೆಗಾರರಿಗೆ ತುರ್ತು ಸಂದೇಶ ರವಾನಿಸಿತು. ಅಮೆರಿಕದ ನೌಕೆ ಇನ್ನೇನಾದರೂ ಮುಂದೆ ಬಂದರೆ, ಮುಂದಿನ 30 ನಿಮಿಷಗಳಲ್ಲಿ ಅದನ್ನು ಹೊಡೆದು ಉರುಳಿಸುತ್ತೇವೆ ಎಂದು ಇರಾನ್ ಸೇನೆ ಎಚ್ಚರಿಕೆ ನೀಡಿತು. ಈ ಖಡಕ್ ಎಚ್ಚರಿಕೆಯ ನಂತರ, ಅಮೆರಿಕದ ಯುದ್ಧನೌಕೆಯು ತನ್ನ ಪಥವನ್ನು ಬದಲಿಸಿ ಅನಿವಾರ್ಯವಾಗಿ ಹಿಂದಕ್ಕೆ ಮರಳಿತು ಎಂದು ವರದಿಯಾಗಿದೆ.

ಮಿಸೈಲ್ ಮತ್ತು ಮೈನ್ಸ್ ಬಗ್ಗೆ ಟ್ರಂಪ್ ಲೇವಡಿ

ಇರಾನ್ ಹೂತಿರುವ ಸಮುದ್ರದ ಮೈನ್‌ಗಳ ಬಗ್ಗೆ ಟ್ರಂಪ್ ವ್ಯಂಗ್ಯವಾಡಿದ್ದಾರೆ. ಅವರ ಮೈನ್ ಹಾಕುವ 28 ಹಡಗುಗಳು ಸಮುದ್ರದ ತಳ ಸೇರಿವೆ. ಹಡಗುಗಳು ಮೈನ್‌ಗೆ ಡಿಕ್ಕಿ ಹೊಡೆಯುತ್ತವೆ ಎಂಬ ಬೆದರಿಕೆ ಹಾಕುವುದಷ್ಟೇ ಅವರಿಗೆ ಈಗ ಉಳಿದಿರುವ ದಾರಿ ಎಂದು ಟ್ರಂಪ್ ಹೇಳಿದ್ದಾರೆ. ಆದರೆ, ವರದಿಗಳ ಪ್ರಕಾರ ಇರಾನ್ ಹಾಕಿರುವ ಮೈನ್‌ಗಳು ಎಲ್ಲೆಲ್ಲಿವೆ ಎಂದು ಅವರಿಗೇ ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ, ಹೀಗಾಗಿ ಹೋರ್ಮುಜ್ ಜಲಸಂಧಿ ತೆರೆಯುವುದು ವಿಳಂಬವಾಗುತ್ತಿದೆ ಎನ್ನಲಾಗಿದೆ.

ತೈಲ ಮಾರಾಟಗಾರನಾದ ಟ್ರಂಪ್: ನಮ್ಮ ಬಳಿ ಜಗತ್ತಿನ ಬೆಸ್ಟ್ ಆಯಿಲ್ ಇದೆ!

ಯುದ್ಧದ ನಡುವೆಯೂ ಟ್ರಂಪ್ ತಮ್ಮ ಬಿಸಿನೆಸ್‌ಮನ್ ಅವತಾರವನ್ನು ಪ್ರದರ್ಶಿಸಿದ್ದಾರೆ. ಜಗತ್ತಿನ ಅತಿದೊಡ್ಡ ಖಾಲಿ ತೈಲ ಟ್ಯಾಂಕರ್‌ಗಳು ಈಗ ಅಮೆರಿಕದತ್ತ ಬರುತ್ತಿವೆ. ನಾವು ಜಗತ್ತಿನ ಅತ್ಯುತ್ತಮ ಮತ್ತು ಸಿಹಿಯಾದ ತೈಲವನ್ನು ಹೊಂದಿದ್ದೇವೆ. ರಷ್ಯಾ ಮತ್ತು ಅರಬ್ ರಾಷ್ಟ್ರಗಳಿಗಿಂತಲೂ ಹೆಚ್ಚು ತೈಲ ನಿಕ್ಷೇಪ ನಮ್ಮ ಬಳಿಯಿದೆ. ಬೇಗ ಬನ್ನಿ, ಬೇಗ ತುಂಬಿಸಿಕೊಂಡು ಹೋಗಿ ಎಂದು ಆಫರ್ ನೀಡಿದ್ದಾರೆ.
ಸಂಘರ್ಷ ಪೀಡಿತ ಪ್ರದೇಶಗಳ ತೈಲವನ್ನು ತನ್ನ ನಿಯಂತ್ರಣಕ್ಕೆ ಪಡೆದು ಅದರಿಂದ ಹಣ ಮಾಡುವುದು ಅಮೆರಿಕದ ಗುರಿ ಎಂಬ ಟೀಕೆಗಳಿಗೆ ಪುಷ್ಠಿ ನೀಡುವಂತೆ ಟ್ರಂಪ್ ನಡೆದುಕೊಂಡಿದ್ದಾರೆ.

ಶಾಂತಿ ಮಾತುಕತೆಯ ಮೇಲೆ ಕರಿನೆರಳು

ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಎರಡು ವಾರಗಳ ಕದನ ವಿರಾಮ ಜಾರಿಯಲ್ಲಿದ್ದರೂ, ಸಮುದ್ರದಲ್ಲಿ ನಡೆದ ಈ ಬೆಳವಣಿಗೆ ಸಂಧಾನದ ಮೇಜಿನ ಮೇಲೆ ಪರಿಣಾಮ ಬೀರಿದೆ. ಜೆಡಿ ವ್ಯಾನ್ಸ್ ನೇತೃತ್ವದ ಅಮೆರಿಕನ್ ತಂಡ ಮತ್ತು ಇರಾನ್ ನಿಯೋಗದ ನಡುವೆ ಇನ್ನೂ ನೇರ ಮಾತುಕತೆ ನಡೆದಿಲ್ಲ. ಇರಾನ್ ನಾಯಕತ್ವದ ಬಗ್ಗೆ ಟ್ರಂಪ್ ಎಂಬ ಪದ ಬಳಸಿರುವುದು ಕೂಡ ರಾಜತಾಂತ್ರಿಕ ವಲಯದಲ್ಲಿ ಅಚ್ಚರಿ ಮೂಡಿಸಿದೆ.
ಒಟ್ಟಾರೆಯಾಗಿ, ಹೋರ್ಮುಜ್ ಜಲಸಂಧಿಯ ಹತೋಟಿಗಾಗಿ ನಡೆಯುತ್ತಿರುವ ಈ ಜಿದ್ದಾಜಿದ್ದಿ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಭಾರೀ ಏರಿಳಿತಕ್ಕೆ ಕಾರಣವಾಗಬಹುದು. ಅಮೆರಿಕದ ಯುದ್ಧನೌಕೆ ಹಿಂದೆ ಸರಿದಿರುವುದು ತಾತ್ಕಾಲಿಕವೇ ಅಥವಾ ಯುದ್ಧದ ಮುನ್ಸೂಚನೆಯೇ ಎಂಬುದು ಕಾದು ನೋಡಬೇಕಿದೆ,(ಏಜೆನ್ಸೀಸ್).